ಬೆಳಗಾವಿ: ಸಾಯೋಕೆ ಸಾವಿರ ಕಾರಣ ಅಂತಾರೆ. ಆದ್ರೆ ಹೀಗೂ ಸಾಯಬಹುದು ಅಂತಾ ಬಹುಶಃ ಯಾರೂ ಅಂದುಕೊಂಡಿರಲಿಲ್ಲ ನೋಡಿ. ಪೊಲೀಸರು ಕುಟುಂಬ ಸದಸ್ಯರನ್ನ ಅನ್ಯಾಯವಾಗಿ ಅರೆಸ್ಟ್ ಮಾಡಿದ್ದಾರೆ ಅಂತಾ ವಿಷ ಕುಡಿದು ಪ್ರತಿಭಟಿಸಿದ್ದ ವ್ಯಕ್ತಿ ಈಗ ಸಾವನ್ನಪ್ಪಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಹೊಸಕುರುಗುಂದ ಗ್ರಾಮದ ಸಂಜು ನಾಯ್ಕರ್ ಎಂಬಾತನೇ ಮೃತ ದುರ್ದೈವಿ. ಈತನ ಅಣ್ಣನ ಹೆಂಡತಿಗೆ ಪರಪುರುಷನ ಜತೆ ಅಕ್ರಮ ಸಂಬಂಧವಿತ್ತೆನ್ನಲಾಗಿದೆ. ಆಗ ಸಂಜುನ ಅಣ್ಣ ಮತ್ತು ಕುಟುಂಬ ಸದಸ್ಯರು ಸೇರಿ ಆತನನ್ನು ಕೊಲೆ ಮಾಡಿದ್ದಾರೆನ್ನಲಾಗಿದೆ. ಈ ಆರೋಪದ ಮೇಲೆ ಬೈಲಹೊಂಗಲ ಪೊಲೀಸರು ಸಂಜುನ ಅಣ್ಣ ಮತ್ತು ಕುಟುಂಬದ ಸದಸ್ಯರನ್ನು ಬಂಧಿಸಿದ್ದರು.
ಈ ಸಂಬಂಧ ಸಂಜು ನಾಯ್ಕರ್ ಗುರುವಾರ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಪೊಲೀಸರು ತನ್ನ ಕುಟುಂಬಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಮಾಡಿದ್ದ. ಈ ಸಂದರ್ಭದಲ್ಲಿ ವಿಷ ಕೂಡಾ ಕುಡಿದಿದ್ದ.
ಆಗ ಪೊಲೀಸರು ತಕ್ಷಣವೇ ಈತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇವತ್ತು ಆಸ್ಪತ್ರೆಯಲ್ಲಿ ಸಂಜು ಕೊನೆಯುಸಿರೆಳೆದಿದ್ದಾನೆ. ಸಂಜು ಮೃತನಾದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಯ ಆವರಣದಲ್ಲಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
Published On - 3:13 pm, Fri, 26 June 20