ಇಂದು ಮನುಷ್ಯನ ಜೀವನವು ಸಂಪೂರ್ಣ ಪ್ಲಾಸ್ಟಿಕ್ ಮಯವಾಗಿದೆ. ದಿನನಿತ್ಯವು ಒಂದಲ್ಲ ಒಂದು ರೀತಿಯಲ್ಲಿ ಪ್ಲಾಸ್ಟಿಕ್ ವಸ್ತುವಿನ ಬಳಕೆ ಮಾಡುತ್ತಿರುತ್ತೇವೆ..ನಾವು ಬಳಕೆ ಮಾಡಿ ಎಸೆಯುವ ಪ್ಲಾಸ್ಟಿಕ್ ಗಳು ಭೂಮಿಯಲ್ಲಿ ಕೊಳೆಯಲು ನೂರಾರು ವರ್ಷಗಳೇ ಬೇಕು. ಹೀಗಾಗಿ ಮಾಲಿನ್ಯದ ಪ್ರಮುಖ ಮೂಲವೇ ಇದಾಗಿರುವ ಕಾರಣ, ಪ್ರಾಣಿಗಳಿಗೂ ತೊಂದರೆಯೇ ಹೆಚ್ಚು. ಈ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಈಗಾಗಲೇ ಪೇಪರ್ ಬ್ಯಾಗ್ಗಳು, ಮರಬಳಕೆ ಮಾಡಬಹುದಾದ ಹತ್ತಿ ಚೀಲಗಳಂತಹ ಪರ್ಯಾಯ ವಸ್ತುಗಳು ಲಭ್ಯವಿದೆ. ಈ ಚೀಲಗಳನ್ನು ಮತ್ತೆ ಮತ್ತೆ ಮರುಬಳಕೆ ಮಾಡಬಹುದಾಗಿದೆ. ಈ ಅಭ್ಯಾಸವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ, ಪರಿಸರವನ್ನು ಮಾಲಿನ್ಯದಿಂದ ಮುಕ್ತ ಗೊಳಿಸಬಹುದು. ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ಅಡ್ಡಪರಿಣಾಮಗಳು ಹಾಗೂ ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 3 ರಂದು ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನವನ್ನಾಗಿ ಆಚರಿಸಲಾಗುತ್ತಿದೆ.
‘ಬ್ಯಾಗ್ ಫ್ರೀ ವರ್ಲ್ಡ್’ ಅಭಿಯಾನದಿಂದ ಈ ದಿನವನ್ನು ಆಚರಿಸಲಾಯಿತು. ಹೌದು, 2008 ರ ಜುಲೈ 3ರಂದು ‘ಝೀರೋ ವೇಸ್ಟ್ ಯುರೋಪ್’ ಆಂದೋಲನದ ಸದಸ್ಯರಾದ ರೆಝೆರೊ ಅವರು ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನದ ಆಚರಣೆಗೆ ಚಾಲನೆ ನೀಡಿದರು. ಈ ಆಂದೋಲನಕ್ಕೆ ವಿವಿಧ ದೇಶಗಳು ಬೆಂಬಲ ನೀಡುವ ಮೂಲಕ ಕೈ ಜೋಡಿಸಿದರು. ಈ ಅಭಿಯಾನದ ಮುಖ್ಯ ಉದ್ದೇಶವೇ ಏಕ ಬಳಕೆಯ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಡಿಮೆ ಮಾಡುವುದಾಗಿತ್ತು. ಪ್ರತಿ ವರ್ಷವು ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ; ಗಂಡ ಹೆಂಡತಿ ನಡುವೆ ಜಗಳ ತಂದಿಟ್ಟು ಖುಷಿ ಪಡುವವರು ಈ ವ್ಯಕ್ತಿಗಳೇ, ಇವರಿಂದ ದೂರವಿರಿ
ಪ್ಲಾಸ್ಟಿಕ್ ಚೀಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪರ್ಯಾಯವಾಗಿ ಪರಿಸರ ಸ್ನೇಹಿ ಚೀಲಗಳನ್ನು ಉಪಯೋಗಿಸಲು ಪ್ರೋತ್ಸಾಹಿಸಲಾಗುತ್ತದೆ. ಅದಲ್ಲದೇ, ಪರಿಸರ, ವನ್ಯಜೀವಿಗಳು ಮತ್ತು ಮಾನವರ ಆರೋಗ್ಯದ ಮೇಲೆ ಪ್ಲಾಸ್ಟಿಕ್ ಚೀಲಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ದಿನದಂದು ಜಾಗತಿಕ ಮಟ್ಟದಲ್ಲಿ ಜಾಗೃತಿ ಅಭಿಯಾನಗಳು, ಜಾಥಗಳು ಹಾಗೂ ಇನ್ನಿತ್ತರ ಕಾರ್ಯಕ್ರಮಗಳು ನಡೆಯುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ