ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದ್ದ ಕಾಲಘಟ್ಟದಲ್ಲಿ ಸಾಕಷ್ಟು ನೋವು ಅವಮಾನಗಳನ್ನು ಎದುರಿಸಿ ಜಾತಿ ವ್ಯವಸ್ಥೆಯ ಭೂತವನ್ನು ಬಡಿದೋಡಿಸಿದವರೇ ಈ ಭೀಮ ರಾವ್. ಸಮಾಜಕ್ಕೆ ಅಂಟಿದ ಮೇಲು-ಕೀಳಿನ ತಾರತಮ್ಯವನ್ನು ಕತ್ತಿಯನ್ನು ಹಿಡಿದು ಯುದ್ಧ ಮಾಡುವುದರಿಂದ ಹೋಗಲಾಡಿಸಲು ಸಾಧ್ಯವೇ ಇಲ್ಲ. ಶಿಕ್ಷಣದಿಂದ ಮಾತ್ರ ಸಾಧ್ಯ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟ ಧೀಮಂತ ವ್ಯಕ್ತಿ. ಸಮಾನತೆಯ ಮಂತ್ರವನ್ನು ಸಾರಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ಸುಧಾರಕ, ಶಿಕ್ಷಣ ತಜ್ಞ, ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಕಾನೂನು ತಜ್ಞರಾಗಿ ಚಿರಪರಿಚಿತರಾದವರು. ಭಾರತೀಯ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ದೇಶಕ್ಕೆ ನೀಡಿದ ಕೊಡುಗೆಗಳು ಅಗಾಧವಾದದ್ದು.
ಡಾ. ಬಿ ಆರ್ ಅಂಬೇಡ್ಕರ್ ಅವರು ಏಪ್ರಿಲ್ 14, 1891 ರಂದು ಜನಿಸಿದರು. ಸಮಾಜಕ್ಕೆ ನೀಡಿದ ಕೊಡುಗೆಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿ, ಭೀಮ ಜಯಂತಿ ಅಥವಾ ಸಮಾನತೆ ದಿನ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. 2015 ರಿಂದ ಈ ದಿನವನ್ನು ಭಾರತದಾದ್ಯಂತ ಸಾರ್ವಜನಿಕ ರಜಾದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ತಿನ್ನುವ ಮೊದಲು ನೆನೆಸಿಡಬೇಕಾದ 5 ಆಹಾರಗಳಿವು
ಸ್ವಾತಂತ್ರ ಬಂದು ಅದೆಷ್ಟೋ ವರ್ಷಗಳು ಉರುಳಿದರೂ ಇಂದಿಗೂ ಕೂಡ ಜಾತಿ ಆಧಾರಿತ ತಾರತಮ್ಯಗಳು ಅಂತ್ಯಗೊಂಡಿಲ್ಲ. ಆದರೆ ಅಂದು ಇದ್ದ ಜಾತಿ ತಾರತಮ್ಯವು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದು. ಇದಕ್ಕೆ ಮೂಲ ಕಾರಣರೇ ಡಾ. ಬಿ ಆರ್ ಅಂಬೇಡ್ಕರ್. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಹಕ್ಕುಗಳನ್ನು ಒದಗಿಸುವ ಸಂವಿಧಾನವನ್ನು ಅವರು ರಚಿಸಿಕೊಟ್ಟ ಧೀಮಂತ ವ್ಯಕ್ತಿಯನ್ನು ನೆನಪಿಸಿಕೊಳ್ಳಲೇ ಬೇಕು. ಹೀಗಾಗಿ ದೇಶದ ಜನರಿಗೆ ಇವರು ನೀಡಿದ ಕೊಡುಗೆಗಳನ್ನು ಸ್ಮರಿಸುವ ಕೆಲಸವನ್ನು ಜನ್ಮ ದಿನದಂದು ಮಾಡಲಾಗುತ್ತದೆ. ದೇಶದ ಹಲವೆಡೆ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವುದಲ್ಲದೇ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ