ಜಿಲೇಬಿ ಅಂದ್ರೆ ಸಾಕು, ಬಾಯಲ್ಲಿ ನೀರೂರುತ್ತದೆ, ತಟ್ಟೆ ತುಂಬಾ ಈ ಸಿಹಿ ತಿಂಡಿಯನ್ನು ತಂದಿಟ್ಟರೆ ಸವಿಯುತ್ತಾ ತಿನ್ನುವವರೇ ಜಾಸ್ತಿ. ಅದರಲ್ಲಿ ಗರಿ ಗರಿಯಾಗಿರೋ ಈ ಬಿಸಿ ಬಿಸಿ ಜಿಲೇಬಿ ಕೊಟ್ಟರಂತೂ ಬೇಡ ಅನ್ನೋದಕ್ಕೆ ಮನಸ್ಸೇ ಆಗಲ್ಲ. ನೀವು ಹಳದಿ ಅಥವಾ ಕೇಸರಿ ಬಣ್ಣದ ಆಕರ್ಷಕ ಹಾಗೂ ರುಚಿಕರ ಜಿಲೇಬಿಯನ್ನು ಸವಿದ್ದೀರಬಹುದು. ಆದರೆ ಈ ಸೇಬು ಜಿಲೇಬಿಯನ್ನು ಒಮ್ಮೆಯಾದರೂ ತಿಂದಿರಲು ಸಾಧ್ಯವೇ ಇಲ್ಲ. ವಿಭಿನ್ನ ರುಚಿಯನ್ನು ಹೊಂದಿರುವ ಈ ಸಿಹಿ ತಿನಿಸನ್ನು ಮನೆಯಲ್ಲೇ ಮಾಡಿ ಸವಿಯಬಹುದು.
* ಎರಡು ಸೇಬು
* ಮೂರು ಕಪ್ ಮೈದಾ
* ಎರಡು ಚಮಚ ಸಕ್ಕರೆ
* ಎರಡು ಚಮಚ ಎಣ್ಣೆ
* ಒಂದು ಕಪ್ ನೀರು
* ಒಂದು ಚಮಚ ನಿಂಬೆ ರಸ
* ಏಲಕ್ಕಿ ಪುಡಿ
* ಗೋಡಂಬಿ
* ರೋಸ್ ವಾಟರ್ (ಗುಲಾಬಿ ನೀರು)
* ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ಮತ್ತು ಸಕ್ಕರೆಯನ್ನು ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಆ ಬಳಿಕ ಮತ್ತೊಂದು ಪಾತ್ರೆಯಲ್ಲಿ ಹಿಟ್ಟು, ಎಣ್ಣೆ, ಸಕ್ಕರೆ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಪಕ್ಕದಲ್ಲಿ ಇರಿಸಿಕೊಳ್ಳಿ.
* ತದನಂತರದಲ್ಲಿ ಮತ್ತೊಂದು ಪಾತ್ರೆಯಲ್ಲಿ ಸಕ್ಕರೆ ನೀರಿನ ಪಾಕ ಮಾಡಿಕೊಳ್ಳಿ. ಅದಕ್ಕೆ ನಿಂಬೆ ರಸ, ರೋಸ್ ವಾಟರ್ ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ.
* ಈಗ ಸೇಬನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿಕೊಳ್ಳಿ. ಈ ಹೋಳುಗಳನ್ನು ಮೈದಾ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಿರಿ.
* ಈಗಾಗಲೇ ಕರಿದ ಈ ಸೇಬುಗಳನ್ನು ಸಕ್ಕರೆ ಪಾಕದಲ್ಲಿ ಹಾಕಿ ಸ್ವಲ್ಪ ಸಮಯದವರೆಗೆ ಹಾಗೆ ಇಟ್ಟರೆ ಸೇಬು ಜಿಲೇಬಿ ಸವಿಯಲು ಸಿದ್ಧ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ