ದಾಂಪತ್ಯ ಜೀವನದಲ್ಲಿ ಪದೇ ಪದೇ ಜಗಳಗಳಾಗುತ್ತಿದೆಯೇ, ಈ ಕಾರಣಗಳಿರಬಹುದು, ನಿಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಿ
ಯಾವ ಸಂಬಂಧದಲ್ಲಿ ಜಗಳಗಳು ಇರಲ್ಲ ಹೇಳಿ, ಸಣ್ಣ ಪುಟ್ಟ ವಿಷಯಗಳಿಂದ ಶುರುವಾದ ಮಾತುಕತೆಯು ಎರಡು ಮನಸ್ಸುಗಳನ್ನು ಛಿದ್ರ ಛಿದ್ರವಾಗಿಸುತ್ತದೆ. ಹೀಗಾಗಿ ಯಾವುದೇ ಬಂಧವಿರಲಿ, ಪ್ರೀತಿಯ ಜೊತೆಗೆ ನಂಬಿಕೆ ಕೂಡ ಮುಖ್ಯ. ಇಬ್ಬರೂ ವ್ಯಕ್ತಿಗಳು ಪರಸ್ಪರ ಅರಿತು ಕೊಂಡು ಸಾಗುವುದು ಮುಖ್ಯವಾಗುತ್ತದೆ. ಆದರೆ ಗಂಡ ಹೆಂಡತಿಯ ನಡುವಿನ ಜಗಳಕ್ಕೆ ಇಂತಹದ್ದೇ ಕಾರಣಗಳು ಬೇಕಾಗಿಲ್ಲ. ಈ ಸಣ್ಣ ಪುಟ್ಟ ವಿಷಯಗಳು ಕಾರಣವಾಗಬಹುದು. ಹೀಗಾಗಿ ದಂಪತಿಗಳಿಬ್ಬರೂ ಈ ವಿಷಯಗಳನ್ನು ಸರಿಯಾಗಿ ನಿಭಾಯಿಸಿಕೊಂಡು ಹೋದರೆ ಸಂಸಾರವು ಸುಖಕರವಾಗಿರುತ್ತದೆ.
ಸಾಂದರ್ಭಿಕ ಚಿತ್ರ
Follow us on
ದಾಂಪತ್ಯವು ಪ್ರತಿಯೊಬ್ಬರ ಜೀವನದ ಅಮೂಲ್ಯ ಘಟ್ಟ. ಎರಡು ವಿಭಿನ್ನ ಗುಣಗಳನ್ನು ಹೊಂದಿರುವ ವ್ಯಕ್ತಿಗಳು ಎಲ್ಲಾ ಸನ್ನಿವೇಶಗಳಲ್ಲಿ ಹೊಂದಿಕೊಂಡು ಹೋದರೆ ಸಂಸಾರವು ಆನಂದ ಸಾಗರವಾಗಿರುತ್ತದೆ. ಈ ದಾಂಪತ್ಯ ಜೀವನದಲ್ಲಿ ಪ್ರೀತಿಯೊಂದಿದ್ದರೆ ಸಾಕಾಗಲ್ಲ. ಸಣ್ಣ ಪುಟ್ಟ ಜಗಳಗಳು, ಕೋಪ, ಮುನಿಸು ಸಂಗಾತಿಯ ಮೇಲಿನ ಪ್ರೀತಿಯನ್ನು ಇನ್ನಷ್ಟು ಹೆಚ್ಚು ಮಾಡಿಸುತ್ತದೆ. ಆದರೆ ಸಂಸಾರದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಜಗಳವಾಗಿ ಕೊನೆಗೆ ಡೈವೋರ್ಸ್ ಹಂತಕ್ಕೂ ತಲುಪಬಹುದು. ಹೀಗಾಗಿ ಮನಸ್ತಾಪಗಳಾದಾಗ ಇಬ್ಬರಲ್ಲಿ ಒಬ್ಬರು ಸುಮ್ಮನಿದ್ದು ಬಿಟ್ಟರೆ ಸಂಸಾರವು ಸರಾಗವಾಗಿ ಸಾಗಬಹುದು.
ಸಮಯ ನೀಡದೇ ಇರುವುದು : ದಾಂಪತ್ಯ ಜೀವನದಲ್ಲಿ ಒಬ್ಬರು ಇನ್ನೊಬ್ಬರಿಗೆ ಸಮಯ ನೀಡುವುದು ಬಹಳ ಮುಖ್ಯವಾಗುತ್ತದೆದೆ. ಪತ್ನಿಯಾದವಳು ಪತಿ ತನ್ನ ಜೊತೆಗೆ ಸಮಯ ಕಳೆಯಬೇಕು ಎಂದು ಬಯಸುವುದು ಸಹಜ. ರಜಾ ದಿನಗಳಲ್ಲಿ ಸ್ನೇಹಿತರೊಂದಿಗೆ ಗಂಡಸರು ಹೆಚ್ಚು ಸಮಯ ಕಳೆಯುತ್ತಾರೆ. ಸ್ನೇಹಿತರ ಜೊತೆಗೆ ಹರಟೆ ಹೊಡೆದು ತಡರಾತ್ರಿ ಮನೆಗೆ ಬರುವುದು ಇದು ದಾಂಪತ್ಯ ಜೀವನದಲ್ಲಿ ಕಲಹಕ್ಕೆ ಕಾರಣವಾಗಬಹುದು.
ಕುಟುಂಬದೊಂದಿಗೆ ಹೊಂದಾಣಿಕೆ ಕೊರತೆ : ಮದುವೆಯಾದ ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಹಿರಿಯರ ಮನಸ್ಥಿತಿಗೆ ತಕ್ಕಂತೆ ಇರುವುದಕ್ಕೆ ಸಾಧ್ಯವಾಗದೇ ಹೊಂದಾಣಿಕೆಯು ಕಷ್ಟವಾಗುತ್ತದೆ. ಹೀಗಾಗಿ ಪತ್ನಿಗೆ ಸಂಬಂಧಿಕರು ಅಥವಾ ಅತ್ತೆ ಮಾವಂದಿರ ಜೊತೆ ಇರುವುದಕ್ಕೆ ಇಷ್ಟವಿರುವುದಿಲ್ಲ. ಈ ಎಲ್ಲಾ ಕಾರಣದಿಂದಾಗಿ ಬೇರೆಯಾಗುವ ನಿರ್ಧಾರವನ್ನು ತನ್ನ ಪತಿಯ ಮುಂದೆ ವ್ಯಕ್ತಪಡಿಸಿದಾಗ ಅದರಿಂದ ಜಗಳಗಳು ಶುರುವಾಗುತ್ತದೆ. ಹೀಗಾಗಿ ಕೆಲವು ಕುಟುಂಬದಲ್ಲಿ ಅತ್ತೆ ಮಾವಂದಿರ ವಿಚಾರವಾಗಿ ಜಗಳ ಆಗುವುದೇ ಹೆಚ್ಚು.
ಹಣದ ವಿಚಾರ : ದಂಪತಿಗಳಿಬ್ಬರು ಹಣವು ಮುಖ್ಯ ಎಂದು ಭಾವಿಸಿದರೆ ಅದೇ ಜಗಳಕ್ಕೆ ಮುನ್ನುಡಿಯಾಗಬಹುದು. ತಮ್ಮ ಖರ್ಚು ವೆಚ್ಚಗಳ ಬಗ್ಗೆ ಒಬ್ಬರಿಗೊಬ್ಬರು ಹೇಳಿಕೊಂಡರೆ ಆರ್ಥಿಕ ಜೀವನವನ್ನು ಇಬ್ಬರೂ ಚೆನ್ನಾಗಿಯೇ ನಿಭಾಯಿಸಿಕೊಂಡು ಹೋಗಬಹುದು. ಆದರೆ ಇಬ್ಬರಲ್ಲಿ ಒಬ್ಬರು ಬೇಕಾಬಿಟ್ಟಿ ಖರ್ಚು ಮಾಡುವುದು ಸಂಗಾತಿಗೆ ಇಷ್ಟವಾಗದೇ ಇರಬಹುದು. ಹೀಗಾಗಿ ನಿಮ್ಮ ಖರ್ಚು ಹಾಗೂ ಹಣಕಾಸಿನ ಬಗ್ಗೆ ಲೆಕ್ಕವನ್ನು ನೀಡುವುದು ಒಳ್ಳೆಯದು.
ಇಬ್ಬರ ಸಂಪ್ರದಾಯದಲ್ಲಿ ಭಿನ್ನತೆ : ಗುರು ಹಿರಿಯರು ನಿಶ್ಚಯಿಸಿ ಮಾಡಿದ ಮದುವೆಗಳಿಗಿಂತ ಲವ್ ಮ್ಯಾರೇಜ್ ಗಳಲ್ಲಿ ಇಂತಹ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿದೆ. ಇಬ್ಬರೂ ವ್ಯಕ್ತಿಗಳು ಬೇರೆ ಬೇರೆ ಸಂಪ್ರದಾಯದವರಾಗಿದ್ದರೆ, ಪತ್ನಿಗೆ ಪತಿಯ ಸಂಪ್ರದಾಯವನ್ನು ಪಾಲಿಸುವುದು ಕಷ್ಟವಾಗಬಹುದು. ಒಬ್ಬರು ಇನ್ನೊಬ್ಬರ ಆಚಾರ ವಿಚಾರ ಸಂಪ್ರದಾಯಗಳನ್ನು ಒಪ್ಪಿಕೊಂಡು ಹೋಗುವ ವಿಶಾಲವಾದ ಮನಸ್ಸು ಇರಬೇಕು. ಅಂತಹ ಮನಸ್ಥಿತಿಯು ಇಲ್ಲದೆ ಹೋದಲ್ಲಿ ಜಗಳವೂ ಸರ್ವೇ ಸಾಮಾನ್ಯವಾಗಿರುತ್ತದೆ.
ಜವಾಬ್ದಾರಿಗಳ ಹಂಚಿಕೆಯಲ್ಲಿ ಕೊರತೆ: ದಾಂಪತ್ಯ ಜೀವನದಲ್ಲಿ ಜವಾಬ್ದಾರಿಗಳ ಹಂಚಿಕೆಯು ಸಮಾನವಾಗಿರಬೇಕು. ಒಬ್ಬರು ಮಾತ್ರ ಮನೆ ಸೇರಿದಂತೆ ಎಲ್ಲಾ ಜವಾಬ್ದಾರಿಗಳನ್ನು ವಹಿಸಿಕೊಂಡರೆ ಒತ್ತಡಕ್ಕೊಳಗಾಗಬೇಕಾಗುತ್ತದೆ. ಇಬ್ಬರೂ ಕುಟುಂಬದ ಜವಾಬ್ದಾರಿಯಲ್ಲಿ ಪಾಲುದಾರರಾದರೆ ಸಂಸಾರದಲ್ಲಿಲ ಜಗಳಗಳಾಗುವುದನ್ನು ತಪ್ಪಿಸಬಹುದು.
ಹಳೆಯ ವಿಚಾರಗಳು : ಸತಿ ಪತಿಗಳಿಬ್ಬರೂ ಹಳೆಯ ವಿಚಾರಗಳು ಹಾಗೂ ತಪ್ಪುಗಳನ್ನೆ ಮತ್ತೆ ಮತ್ತೆ ಹೇಳುತ್ತಿದ್ದರೆ ಇದರಿಂದ ಜಗಳಗಳು ಆಗುವ ಸಾಧ್ಯತೆಯೇ ಹೆಚ್ಚು. ಕೆಲವೊಬ್ಬರು ಹಳೆಯ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ವಿಚಾರಗಳನ್ನೆ ಸಂಸಾರದಲ್ಲಿ ತರುವುದಿದೆ. ಹೀಗಾಗಿ ಹಳೆಯ ವಿಚಾರಗಳನ್ನು ಅಲ್ಲಿಗೆ ಬಿಟ್ಟು ಮುಂದೆ ಸಾಗಿದರೆ ಸಂಸಾರವೂ ಸುಖಕರವಾಗಿರುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ