ಅವು ಬಹುತೇಕ ಎಲ್ಲರ ಮನೆಯಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕಂಡುಬರುತ್ತವೆ. ಅವುಗಳನ್ನು ಸುಮ್ಮನೆ ಬಿಟ್ಟರೆ ನಿಮ್ಮ ದೇಹದಿಂದ ರಕ್ತ ಹೀರುತ್ತವೆ. ಅನೇಕ ರೀತಿಯ ಅಲರ್ಜಿಗಳು ಉಂಟಾಗಬಹುದು. ಹಗಲೆಲ್ಲಾ ಕಣ್ಣಿಗೆ ಕಾಣಿಸಿಕೊಳ್ಳದೆ ರಾತ್ರಿ ಸಮಯದಲ್ಲಿ ಕಾಟ ಕೊಡಲು ಶುರು ಮಾಡುತ್ತವೆ. ಹೌದು, ನಾವು ಹೇಳುತ್ತಿರುವುದು ತಿಗಣೆ (Bed Bugs) ಬಗ್ಗೆ. ಅವು ಚಿಕ್ಕದಾಗಿ ಕಾಣಿಸಬಹುದು ಆದರೆ ಅವುಗಳ ಕಾಟ ತಡಯಲಾಗದು. ಹಾಗಿದ್ದರೆ ಇವುಗಳು ಎಲ್ಲಿ ಅಡಗಿರುತ್ತವೆ? ತಿಗಣೆ ಸಮಸ್ಯೆಗೆ ಪರಿಹಾರವೇನು? ಇಲ್ಲಿದೆ ಮಾಹಿತಿ.
ತಿಗಣೆ ಕೇವಲ 1/4 ಇಂಚು ಉದ್ದ ಬೆಳೆಯುವ ಸಣ್ಣ ಕೀಟಗಳಾಗಿವೆ. ಅವು ಸಮತಟ್ಟಾದ ಹೊಟ್ಟೆಯನ್ನು ಹೊಂದಿರುತ್ತವೆ. ರೆಕ್ಕೆಗಳಿಲ್ಲ. ಕೆಂಪು ಕಂದು ಬಣ್ಣ. ನೀವು ಹಗಲಿನಲ್ಲಿ ಇವುಗಳನ್ನು ನೋಡುವ ಸಾಧ್ಯತೆ ಕಡಿಮೆ, ಏಕೆಂದರೆ ಅವು ರಾತ್ರಿಯಲ್ಲಿ ಮಾತ್ರ ಹೊರಬರುತ್ತವೆ. ಹಗಲು ಹೊತ್ತಿನಲ್ಲಿ ಹಾಸಿಗೆಗಳಲ್ಲಿ ನೆಲೆಯೂರುತ್ತವೆ. ಬ್ಲಾಂಕೆಟ್‌ಗಳು, ಬೆಡ್ ಶೀಟ್‌ಗಳು, ದಿಂಬುಗಳು, ದಿಂಬಿನ ಕವರ್‌ಗಳು ಮತ್ತು ಹೆಡ್‌ಬೋರ್ಡ್‌ಗಳು ಅವುಗಳ ವಾಸಸ್ಥಾನ. ಇದಲ್ಲದೆ, ಮರದ ಬಿರುಕುಗಳು ಮತ್ತು ಗೋಡೆಯ ಬಿರುಕುಗಳಲ್ಲಿ ಗುಂಪುಗಳಾಗಿ ವಾಸಿಸುತ್ತವೆ. ಈ ಕೀಟಗಳು ರಕ್ತವನ್ನು ಹೀರುತ್ತವೆ. ಮನುಷ್ಯರು ರಾತ್ರಿ ನಿದ್ದೆಗೆ ಜಾರಿದಾಗ ಅವು ಆಕ್ಟಿವ್ ಆಗಿ ದಾಳಿ ಶುರುಮಾಡುತ್ತವೆ.
ಹೆಣ್ಣು ತಿಗಣೆ ತನ್ನ ಜೀವಿತಾವಧಿಯಲ್ಲಿ ನೂರಾರು ಮೊಟ್ಟೆಗಳನ್ನು ಇಡಬಹುದು, ಇದು ಸಾಮಾನ್ಯವಾಗಿ 10 ರಿಂದ 12 ತಿಂಗಳುಗಳವರೆಗೆ ಬದುಕುತ್ತದೆ. ಇದರ ಮೊಟ್ಟೆಯು ತುಂಬಾ ಚಿಕ್ಕದಾಗಿದೆ, ಒಂದು ಸಣ್ಣ ಧೂಳಿನ ಚುಕ್ಕೆಯಂತೆ. ಮಾನವನ ಕಣ್ಣಿಗೆ ಕಾಣಿಸುವುದಿಲ್ಲ. ತಿಗಣೆಗಳು ಮಧ್ಯರಾತ್ರಿಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ಸಕ್ರಿಯವಾಗಿರುತ್ತವೆ.
ಇದನ್ನೂ ಓದಿ: ಎಲ್ಲರ ಮನೆಯಲ್ಲಿ ಕಾರುಗಳಿದ್ದರೆ ಈ ನಗರದ ಮನೆ ಮನೆಯಲ್ಲೂ ಇದೆ ವಿಮಾನ; ಕೆಲಸಕ್ಕೆ ವಿಮಾನದಲ್ಲಿ ಹೋಗುವ ನಿವಾಸಿಗಳು!
ಸೂರ್ಯನ ಕಿರಣಗಳು ಕೋಣೆಯಲ್ಲಿ ಬೀಳಬೇಕು. ಇದನ್ನು ಹೋಗಲಾಡಿಸಲು ಹಾಸಿಗೆ ಮತ್ತು ಇತ್ಯಾದಿಗಳನ್ನು ಬಿಸಿಲಿನಲ್ಲಿ ಇರಿಸಿ. ಏಕೆಂದರೆ ತಿಗಣೆಗಳು ಹೆಚ್ಚು ಶಾಖವನ್ನು ಸಹಿಸುವುದಿಲ್ಲ. ಸೂರ್ಯ ಬಿಸಿಗೆ ಬಹುತೇಕ ತಿಗಣೆಗಳು ಸಾಯುತ್ತವೆ.
ತಿಗಣೆಗಳು ಇರುವ ಜಾಗವನ್ನು ವ್ಯಾಕ್ಯೂಮ್ ಕ್ಲೀನರ್ನಿಂದ ಸ್ವಚ್ಛಗೊಳಿಸಿ. ಮಂಚಗಳು, ಸೋಫಾಗಳು, ಕುರ್ಚಿಗಳನ್ನು ವ್ಯಾಕ್ಯೂಮ್ ಕ್ಲೀನರ್ನೊಂದಿಗೆ ಸ್ವಚ್ಛಗೊಳಿಸಿ. ಪೀಠೋಪಕರಣಗಳು ಅಥವಾ ಛಾವಣಿಗಳಲ್ಲಿ ಬಿರುಕುಗಳನ್ನು ಸೀಲ್ ಮಾಡಿ.
ಬ್ಲಾಂಕೆಟ್, ಬೆಡ್ ಕವರ್, ದಿಂಬಿನ ಕವರ್ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು. ಬಿಸಿ ನೀರಿನಿಂದ ತೊಳೆದರೆ ಇನ್ನೂ ಉತ್ತಮ. ವಾರಕ್ಕೊಮ್ಮೆ ಹೊದಿಕೆಗಳನ್ನು ಬದಲಾಯಿಸಿ. 60 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಹೊದಿಕೆಗಳನ್ನು ಸ್ವಚ್ಛಗೊಳಿಸಿ.
ಲ್ಯಾವೆಂಡರ್ ಎಣ್ಣೆ ತಿಗಣೆ ನಾಶಕ್ಕೆ ಸಹಕಾರಿಯಾಗಿದೆ. ಈ ಎಣ್ಣೆಯಲ್ಲಿ ಅದ್ದಿದ ಬಟ್ಟೆಯಿಂದ ಕುರ್ಚಿ ಮತ್ತು ಹಾಸಿಗೆಯನ್ನು ಒರೆಸಿದರೆ ತಿಗಣೆಗಳು ಮಾಯವಾಗುತ್ತವೆ. ಅದೇ ರೀತಿ ತಿಗಣೆ ಸಮಸ್ಯೆ ಹೆಚ್ಚಾಗಿ ಇರುವ ಜಾಗದಲ್ಲಿ ಕೆಲವು ಪುದೀನ ಎಲೆಗಳನ್ನು ಇಡಬಹುದು. ಕಾಳುಮೆಣಸು ಮತ್ತು ಯೂಕಲಿಪ್ಟಸ್ ಎಣ್ಣೆಯು ತಿಗಣೆಗಳನ್ನು ಕೊಲ್ಲುವಲ್ಲಿ ಪರಿಣಾಮಕಾರಿಯಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ