ಪ್ರತಿದಿನ ಬೆಳಗ್ಗೆ 10 ನಿಮಿಷಗಳ ಕಾಲ ಓಂಕಾರ ಪಠಿಸುವುದು ಎಷ್ಟು ಪ್ರಯೋಜನಕಾರಿ ಗೊತ್ತೇ?
ಇಂದಿನ ಈ ಡಿಜಿಟಲ್ ಯುಗದಲ್ಲಿ ಅನೇಕರ ದಿನ ಆರಂಭವಾಗುವುದೇ ಮೊಬೈಲ್ ಫೋನ್‌ನೊಂದಿಗೆ. ಹೀಗೆ ಮೊಬೈಲ್ ನೋಡ್ತಾ, ಗಂಟೆಗಟ್ಟಲೆ ಸೋಷಿಯಲ್ ಮೀಡಿಯಾದಲ್ಲಿ ಸಮಯ ಕಳೆದರೆ ಒತ್ತಡ ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಮೊಬೈಲ್ ನೋಡುವ ಬದಲು ಬೆಳಗ್ಗೆ ಎದ್ದ ಬಳಿಕ 10 ನಿಮಿಷಗಳ ಕಾಲ ಓಂಕಾರ ಧ್ಯಾನ ಮಾಡುವ ಧನಾತ್ಮಕ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಈ ಸರಳ ಅಭ್ಯಾಸ ದಿನವನ್ನು ಸಕಾರಾತ್ಮಕ ರೀತಿಯಲ್ಲಿ ಪ್ರಾರಂಭಿಸಲು ಸಹಾಯ ಮಾಡುವುದು ಮಾತ್ರವಲ್ಲ, ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತವೆ.

ಮುಖ್ಯಾಂಶಗಳು
- ಪ್ರತಿನಿತ್ಯ ಬೆಳಗ್ಗೆ 10 ನಿಮಿಷಗಳ ಕಾಲ ಓಂಕಾರ ಪಠಿಸುವುದು ಆರೋಗ್ಯಕ್ಕೆ ಒಳ್ಳೆಯದು
- ಓಂಕಾರ ಧ್ಯಾನವು ಒತ್ತಡ ಮತ್ತು ಆತಂಕವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ
- ಓಂಕಾರ ಧ್ಯಾನವು ಉತ್ತಮ ನಿದ್ರೆಯನ್ನು ಪಡೆಯಲು ಸಹಕಾರಿಯಾಗಿದೆ
ಇಂದಿನ ಒತ್ತಡದ ಜೀವನದಲ್ಲಿ, ನಾವು ಬೆಳಗ್ಗೆ (Morning ) ಎದ್ದ ತಕ್ಷಣವೇ ಕೆಲಸ ಮತ್ತು ಇತರ ಜವಾಬ್ದಾರಿಗಳ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೇವೆ ಜೊತೆಗೆ ಬೆಳಗೆದ್ದ ತಕ್ಷಣವೇ ಇಂಟರ್‌ನೆಟ್ ಆನ್ ಮಾಡಿ ಮೊಬೈಲ್ ನೋಡುತ್ತಾ ಕುಳಿತು ಬಿಡುತ್ತೇವೆ. ಇವೆಲ್ಲವೂ ಒತ್ತಡವನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ಹೀಗಿರುವಾಗ ಏನೇನೋ ಆಲೋಚನೆ ಮಾಡುತ್ತಾ ಕೂರುವ ಬದಲು ಅಥವಾ ಮೊಬೈಲ್ ನೋಡ್ತಾ ಟೈಂ ವೇಸ್ಟ್ ಮಾಡುವ ಬದಲು ಪ್ರತಿನಿತ್ಯ ಬೆಳಗ್ಗೆ 10 ನಿಮಿಷಗಳ ಕಾಲ ಧ್ಯಾನ ಮಾಡಿ ಮತ್ತು ಧ್ಯಾನದ ಸಮಯದಲ್ಲಿ ಓಂ ಮಂತ್ರವನ್ನು ಪಠಿಸಿ. ಓಂ ಮಂತ್ರವು ನಿಮ್ಮ ದಿನವನ್ನು ಸಕಾರಾತ್ಮಕ ರೀತಿಯಲ್ಲಿ ಪ್ರಾರಂಭಿಸಲು ಸಹಾಯ ಮಾಡುವುದು ಮಾತ್ರವಲ್ಲ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ಸಖತ್ ಪ್ರಯೋಜನಕಾರಿಯಾಗಿದೆ. ಹಾಗಿದ್ದರೆ ಶಾಂತ ಸ್ಥಳದಲ್ಲಿ ಕುಳಿತು ಓಂಕಾರ ಧ್ಯಾನ ಮಾಡುವ ಸರಳ ಅಭ್ಯಾಸದಿಂದ ದೇಹ ಮತ್ತು ಮನಸ್ಸಿಗೆ ಎಷ್ಟೆಲ್ಲಾ ಪ್ರಯೋಜನಗಳ ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.
ಒತ್ತಡ ಮತ್ತು ಆತಂಕದಿಂದ ಪರಿಹಾರ ದೊರೆಯುತ್ತದೆ:
ಪ್ರಸ್ತುತ ಕಾಲಘಟ್ಟದಲ್ಲಿ ಒತ್ತಡವು ಅನೇಕ ಜನರನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ನೀವು ಕೂಡ ಒತ್ತಡ ಮತ್ತು ಆತಂಕದ ಸಮಸ್ಯೆಯಿಂದ ಬಳಲುತ್ತಿದ್ದರೆ, ಪ್ರತಿನಿತ್ಯ ಬೆಳಗೆದ್ದು 10 ನಿಮಿಷಗಳ ಕಾಲ ಧ್ಯಾನ ಮಾಡುತ್ತಾ ಓಂ ಮಂತ್ರವನ್ನು ಪಠಿಸಿ. ಹೀಗೆ ನೀವು ಬೆಳಿಗ್ಗೆ ಶಾಂತವಾಗಿ ಕುಳಿತು ಓಂ ಎಂದು ಜಪಿಸಿದಾಗ, ಅದು ಉತ್ಪಾದಿಸುವ ಶಬ್ದ ತರಂಗಗಳು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತವೆ. ಓಂ ಎಂದು ಜಪಿಸುವುದರಿಂದ ದೇಹದಲ್ಲಿನ ಒತ್ತಡದ ಹಾರ್ಮೋನ್ ಎಂದು ಕರೆಯಲ್ಪಡುವ ಕಾರ್ಟಿಸೋಲ್ ಮಟ್ಟ ತ್ವರಿತವಾಗಿ ಕಡಿಮೆಯಾಗುತ್ತದೆ. ಅಲ್ಲದೆ ಈ ಶಬ್ದವು ನಮ್ಮ ಮೆದುಳಿನ ನರಮಂಡಲವನ್ನು ಸಮತೋಲನಗೊಳಿಸುತ್ತದೆ, ಕೋಪ, ಆತಂಕದಂತಹ ಹಠಾತ್ ಪ್ರಕೋಪಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸುತ್ತದೆ. ಇದಲ್ಲದೆ ಪ್ರತಿದಿನ ಕೆಲವು ನಿಮಿಷಗಳ ಓಂಕಾರ ಧ್ಯಾನ ಮತ್ತು ಉಸಿರಾಟದ ವ್ಯಾಯಾಮವು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ಶ್ವಾಸಕೋಶವನ್ನು ಆರೋಗ್ಯಕರವಾಗಿಡಲು ಸಹಕಾರಿ:
ಓಂ ಮಂತ್ರವನ್ನು ಸರಿಯಾಗಿ ಜಪಿಸುವಾಗ, ನಾವು ಆಳವಾದ ಉಸಿರನ್ನು ತೆಗೆದುಕೊಂಡು ನಂತರ ನಿಧಾನವಾಗಿ ಉಸಿರನ್ನು ಬಿಡಬೇಕು. ಈ ಪ್ರಕ್ರಿಯೆಯು ಅತ್ಯುತ್ತಮ ಉಸಿರಾಟದ ವ್ಯಾಯಾಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಮ್ಮ ಶ್ವಾಸಕೋಶದ ಆಮ್ಲಜನಕ ಹೀರಿಕೊಳ್ಳುವ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಮುಂಜಾನೆ ತಾಜಾ ಗಾಳಿಯಲ್ಲಿ ಓಂಕಾರ ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ದೇಹದಿಂದ ವಿಷಕಾರಿ ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಹಾಕಲು ಸಹಾಯವಾಗುತ್ತದ ಮತ್ತು ಇದು ಶ್ವಾಸಕೋಶವನ್ನು ಬಲಪಡಿಸುತ್ತದೆ, ಉಸಿರಾಟದ ಕಾಯಿಲೆಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಏಕಾಗ್ರತೆ ಮತ್ತು ನೆನಪಿನ ಶಕ್ತಿಯಲ್ಲಿ ಗಮನಾರ್ಹ ಹೆಚ್ಚಳ:
ಬೆಳಿಗ್ಗೆ ಓಂಕಾರ ಧ್ಯಾನ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಶಾಂತ ಸ್ಥಳದಲ್ಲಿ ಕುಳಿತು ಓಂ ಮಂತ್ರವನ್ನು ಪಠಿಸುವುದರಿಂದ ಮೆದುಳಿನ ನರಕೋಶಗಳನ್ನು ಸಕ್ರಿಯಗೊಳ್ಳುತ್ತವೆ, ಗಮನ ಮತ್ತು ಸ್ಮರಣೆಯನ್ನು ಸುಧಾರಿಸುತ್ತದೆ. ಓಂ ಎಂದು ಪಠಿಸುವಾಗ ಬರುವ ಶಬ್ದವು ಮೆದುಳಿನ ಎರಡೂ ಭಾಗಗಳನ್ನು ಸಮನ್ವಯಗೊಳಿಸುತ್ತದೆ, ಸೃಜನಶೀಲ ಚಿಂತನೆ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯ ಸಾಮರ್ಥ್ಯವನ್ನು ಬೆಳೆಸುತ್ತದೆ.
ರಾತ್ರಿ ಉತ್ತಮ ನಿದ್ರೆಯನ್ನು ಪಡೆಯಲು ಸಹಕಾರಿಯಾಗಿದೆ:
ಎಷ್ಟೇ ಪ್ರಯತ್ನಪಟ್ಟರೂ ಕೆಲವು ಜನರಿಗೆ ರಾತ್ರಿ ನಿದ್ರೆಯೇ ಬರುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಮಲಗುವ ಮುನ್ನ ಕೆಲವು ನಿಮಿಷಗಳ ಕಾಲ ನಿಧಾನವಾಗಿ ಉಸಿರಾಡುತ್ತಾ ಓಂ ಮಂತ್ರವನ್ನು ಪಠಿಸಬೇಕು. ಇದು ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಓಂಕಾರ ಧ್ಯಾನದ ನಿಯಮಿತ ಅಭ್ಯಾಸವು ನಿದ್ರೆಯ ಚಕ್ರಗಳನ್ನು ಸುಧಾರಿಸುತ್ತದೆ.
ಇದನ್ನೂ ಓದಿ: ವೇಗ ಅಥವಾ ನಿಧಾನ; ನಡಿಗೆಯ ಶೈಲಿಯಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವದ ರಹಸ್ಯ
ಓಂ ಮಂತ್ರವನ್ನು ಪಠಿಸುವುದು ಹೇಗೆ?
ಬೆಳಗಿನ ಜಾವವನ್ನು ಆಧ್ಯಾತ್ಮಿಕ ಅಭ್ಯಾಸ ಮತ್ತು ಧ್ಯಾನಕ್ಕೆ ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗಿದೆ. ನೀವು ಪ್ರತಿದಿನ ಬೆಳಿಗ್ಗೆ ಎದ್ದು ಕೇವಲ 10 ರಿಂದ 15 ನಿಮಿಷಗಳ ಕಾಲ ಸಂಪೂರ್ಣ ಭಕ್ತಿಯಿಂದ ಓಂ ಮಂತ್ರವನ್ನು ಜಪಿಸಿದರೆ, ಅದು ನಿಮ್ಮ ಇಡೀ ದೇಹವನ್ನು ಒಳಗಿನಿಂದ ಪುನರ್‌ಚೇತನಗೊಳಿಸುತ್ತದೆ. ಇದಕ್ಕಾಗಿ ಬೆಳಿಗ್ಗೆ, ಶಾಂತ ಸ್ಥಳದಲ್ಲಿ ಆರಾಮವಾಗಿ ಕುಳಿತುಕೊಳ್ಳಿ. ನೀವು ಪದ್ಮಾಸನ, ಅರ್ಧ ಪದ್ಮಾಸನ, ಸುಖಾಸನ ಅಥವಾ ವಜ್ರಾಸನದಲ್ಲಿ ಕುಳಿತು ಓಂ ಮಂತ್ರವನ್ನು ಜಪಿಸಬಹುದು. ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಸಾಮಾನ್ಯವಾಗಿ ಉಸಿರಾಡಿ. ನಂತರ, ನಿಧಾನವಾಗಿ ಉಸಿರನ್ನು ಬಿಡಿ ಮತ್ತು ಓಂ ಎಂದು ಜಪಿಸಿ. ಆರಂಭದಲ್ಲಿ, ನೀವು 5 ರಿಂದ 10 ನಿಮಿಷಗಳ ಕಾಲ ಬಿಡಬಹುದು. ನೀವು ಅದನ್ನು 5, 7, 10, ಅಥವಾ 21 ಬಾರಿ ಜಪಿಸಬಹುದು. ಓಂ ಮಂತ್ರವನ್ನು ಜೋರಾಗಿ ಅಥವಾ ಮೃದುವಾಗಿ ಜಪಿಸಬಹುದು. ನೀವು ಜಪಮಾಲೆಯೊಂದಿಗೆ ಓಂ ಅನ್ನು ಸಹ ಜಪಿಸಬಹುದು. ಈ ಸಮಯದಲ್ಲಿ, ನೀವು ನಿಮ್ಮ ಉಸಿರಾಟ ಮತ್ತು ಧ್ವನಿಯ ಮೇಲೆ ಮಾತ್ರ ಗಮನಹರಿಸಲು ಪ್ರಯತ್ನಿಸಿ. ಆರಂಭದಲ್ಲಿ ಇದು ಕಷ್ಟಸಾಧ್ಯವಾದರೂ, ಕ್ರಮೇಣ ಈ ಅಭ್ಯಾಸವು ಸುಲಭವಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




