National Javelin Day 2024 : ನೀರಜ್ ಚೋಪ್ರಾ ಚಿನ್ನ ಗೆದ್ದ ದಿನವನ್ನು ರಾಷ್ಟ್ರೀಯ ಜಾವೆಲಿನ್ ದಿನವಾಗಿ ಆಚರಣೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 07, 2024 | 11:40 AM

ಭಾರತದ ನೀರಜ್‌ ಚೋಪ್ರಾ ಅವರು ಪ್ಯಾರಿಸ್ ಒಲಿಂಪಿಕ್ಸ್ ಜಾವೆಲಿನ್ ಥ್ರೋ ಫೈನಲ್‌ಗೆ ಅರ್ಹತೆ ಪಡೆದಿದ್ದು, ನಾಳೆ ಫೈನಲ್ ಪಂದ್ಯ ನಡೆಯಲಿದೆ. ಹೌದು, 2020 ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದ ನೀರಜ್ ಚೋಪ್ರಾ ಅವರ ಸಾಧನೆಯನ್ನು ಗೌರವಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 7 ರಾಷ್ಟ್ರೀಯ ಜಾವೆಲಿನ್ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ನೀರಜ್ ಚೋಪ್ರಾ ಯಾರು? ಕ್ರೀಡಾ ಕ್ಷೇತ್ರದಲ್ಲಿ ಅವರ ಸಾಧನೆಯೇನು? ಎನ್ನುವುದರ ಸಂಪೂರ್ಣ ಮಾಹಿತಿಯೂ ಇಲ್ಲಿದೆ.

National Javelin Day 2024 : ನೀರಜ್ ಚೋಪ್ರಾ ಚಿನ್ನ ಗೆದ್ದ ದಿನವನ್ನು ರಾಷ್ಟ್ರೀಯ ಜಾವೆಲಿನ್ ದಿನವಾಗಿ ಆಚರಣೆ
ನೀರಜ್‌ ಚೋಪ್ರಾ
Follow us on

ನೀರಜ್ ಚೋಪ್ರಾ ಭಾರತೀಯರಿಗೆ ಇದೀಗ ಚಿರಪರಿಚಿತವಾದ ಹೆಸರಾಗಿದೆ. ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಶತಮಾನದಲ್ಲೇ ಯಾವ ಭಾರತೀಯ ಮಾಡದಸಾಧನೆಯನ್ನು ಮಾಡಿದ ಧೀರ ಈ ನೀರಜ್​. 2020 ರಲ್ಲಿ ಟೋಕಿಯೋ ಒಲಿಂಪಿಕ್ಸ್​​​ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದುಕೊಟ್ಟು ಚತುರ. ಇದೀಗ ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ ಗೇಮ್ಸ್ ನಲ್ಲಿ ಪುರುಷರ ಜಾವೆಲಿನ್ ಎಸೆತದಲ್ಲಿ ಫೈನಲ್ ಗೆ ಪ್ರವೇಶಿಸಿದ್ದು, ಭಾರತೀಯಕ್ಕೆ ಈ ಬಾರಿ ಚಿನ್ನದ ಪದಕವು ಸಿಗುವುದು ಖಚಿತವಾಗಿದೆ.

ನೀರಜ್ ಚೋಪ್ರಾ ಸಾಧನೆ ಸ್ಮರಿಸಲು ರಾಷ್ಟ್ರೀಯ ಜಾವೆಲಿನ್ ದಿನ

23 ವರ್ಷದ ನೀರಜ್ ಚೋಪ್ರಾ ಅವರು 2020 ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ತನ್ನ ಮೊದಲ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕವನ್ನು ತಂದು ಕೊಟ್ಟರು. ಆಗಸ್ಟ್ 7 ರಂದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ವಿಜೇತ ನೀರಜ್ ಚೋಪ್ರಾ ಅವರ ಸಾಧನೆಯನ್ನು ಸ್ಮರಿಸಲು ಸಲುವಾಗಿ ಭಾರತ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ)ವು ಈ ರಾಷ್ಟ್ರೀಯ ಜಾವೆಲಿನ್ ದಿನವನ್ನು ಆಚರಿಸಲು ನಿರ್ಧರಿಸಿತು. ಅಂದಿನಿಂದ ಪ್ರತಿ ವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಜಾವೆಲಿನ್ ದಿನವನ್ನು ಆಚರಿಸಲಾಗುತ್ತದೆ.

ತೂಕ ಇಳಿಸಿಕೊಳ್ಳಲು ಮೈದಾನದಲ್ಲಿ ಹರಸಾಹಸ ಪಟ್ಟಿದ್ದ ಪೋರ

ಅಪ್ಪಟ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ನೀರಜ್ ಚೋಪ್ರಾ ಯಾರ ಊಹೆ ಮಾಡದ ಮಟ್ಟಿಗೆ ಇಂದು ಬೆಳೆದು ನಿಂತಿದ್ದಾರೆ. ಆದರೆ ಸಣ್ಣ ವಯಸ್ಸಿನಲ್ಲೋ ಇವರನ್ನು ನೋಡಿ ಗೇಲಿ ಮಾಡುತ್ತಿದ್ದವರೇ ಹೆಚ್ಚು, ತೂಕ ಹೆಚ್ಚಿರುವುದೇ ಇದಕ್ಕೆ ಕಾರಣವಾಗಿತ್ತು. ತನ್ನ 11ನೇ ವಯಸ್ಸಿನಲ್ಲಿ 85 ಕೆಜಿ ತೂಕವಿದ್ದ ನೀರಜ್ ಅವರು 12ನೇ ವಯಸ್ಸಿಗೆ ಬರುವಷ್ಟರಲ್ಲಿ 90 ಕೆಜಿ ತೂಕವನ್ನು ಹೊಂದಿದ್ದರು. ಆ ಸಮಯದಲ್ಲಿ ಇವರನ್ನು ನೋಡಿ ಆಡಿಕೊಂಡು ನಗುವವರೇ ಹೆಚ್ಚಿದ್ದರು. ಅದನ್ನೆಲ್ಲವನ್ನು ಮೀರಿ ನಿಂತು ಇಂದು ನೀರಜ್ ಕ್ರೀಡಾ ಕ್ಷೇತ್ರದಲ್ಲಿ ಸ್ಟಾರ್ ಆಟಗಾರನಾಗಿ ತನ್ನ ಛಾಪು ಮೂಡಿಸಿದ್ದಾರೆ. ಅಂದು ತೂಕ ಇಳಿಸಿಕೊಳ್ಳಲೆಂದು ಸ್ಟೇಡಿಯಂನಲ್ಲಿ ಓಡುತ್ತಿದ್ದ ಜಾವೆಲಿನ್​ ಥ್ರೋ ಪಟು ಜಯಚೌದರಿ ಕಣ್ಣಿಗೆ ಬಿದ್ದದ್ದು ಬದುಕಿನ ದಾರಿಯನ್ನೆ ಬದಲಾಯಿಸಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ: ಜಾವೆಲಿನ್​ನಲ್ಲಿ ಫೈನಲ್‌ ಪ್ರವೇಶಿಸಿದ ಭಾರತದ ಚಿನ್ನ ಹುಡುಗ ನೀರಜ್ ಚೋಪ್ರಾ

ರೈತನ ಮಗ ಜಾವೆಲಿನ್ ಥ್ರೋನಲ್ಲಿ ಇಂದು ಚಿನ್ನದ ಹುಡುಗ

ಹರಿಯಾಣದ ಖಾಂದ್ರಾ ಗ್ರಾಮದ ರೈತನ ಮಗನಾಗಿ ಹುಟ್ಟಿದ ನೀರಜ್ ಚೋಪ್ರಾ ಚಂಡೀಗಡ ಡಿಎವಿ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ತದನಂತರದಲ್ಲಿ ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿ ಕಾರ್ಯ ನಿರ್ವಹಿಸುವ ಅವಕಾಶವೊಂದು ಸಿಕ್ಕಿತು. ಹೀಗೆ ಭಾರತ ಮಾತೆಯ ಸೇವೆ ಮಾಡಿದ ನೀರಜ್ ಕ್ರೀಡಾ ಲೋಕದಲ್ಲಿ ಗುರುತಿಸಿಕೊಂಡದ್ದೇ ಅಚ್ಚರಿ.

2016ರ ಐಎಎಎಫ್​ ಅಂಡರ್​​-20 ಚಾಂಪಿಯನ್​ಶಿಪ್​​ನಲ್ಲಿ ಚಿನ್ನ ಗೆದ್ದ ಬಳಿಕವೇ ಈ ನೀರಜ್ ಎಲ್ಲರಿಗೂ ಪರಿಚಯವಾದದ್ದು. ಆ ಬಳಿಕ ಏಷ್ಯನ್ ಅಥ್ಲೆಟಕ್ಸ್​ ಚಾಂಪಿಯನ್ಸ್, ಕಾಮನ್​ವೆಲ್ತ್ ಗೇಮ್ಸ್​, ಏಷ್ಯನ್ ಗೇಮ್ಸ್​ ಹೀಗೆ ಕ್ರೀಡಾಕೂಟದಲ್ಲಿ ಚಿನ್ನದ ಬೇಟೆ ಆಡಿಯೇ ಬಿಟ್ಟರು. ಆಮೇಲೆ ನಡೆದದ್ದು ಕನಸು ಎನ್ನುವಂತೆ ಇಂದು ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ನಾಲ್ಕು ವರ್ಷಗಳ ಹಿಂದೆ 2020 ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 23 ವರ್ಷದ ನೀರಜ್ ಚೋಪ್ರಾ ಅವರು ಭಾರತಕ್ಕೆ ತನ್ನ ಮೊದಲ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕವನ್ನು ಗೆದ್ದು ಕೊಟ್ಟರು. 2020 ರಲ್ಲಿ ಟೋಕಿಯೊದಲ್ಲಿ 87.58 ಮೀಟರ್ ಜಾವೆಲಿನ್ ಎಸೆತದೊಂದಿಗೆ ಮೊದಲ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡ ಈ ಚತುರ ಆಟಗಾರ ನಂತರದ ವರ್ಷಗಳಲ್ಲಿ ಎರಡು ಬಾರಿ ಚಿನ್ನವನ್ನು ಗೆದ್ದುಕೊಂಡರು.

ನೀರಜ್ ಚೋಪ್ರಾರವರು ಜುಲೈ 2022 ರಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡರು. 2023 ರಲ್ಲಿ ವರ್ಷ ವಿಶ್ವ ಅಥ್ಲೆಟಿಕ್ಸ್ ಮತ್ತು ಏಷ್ಯನ್ ಗೇಮ್ಸ್‌ಗಳಲ್ಲಿ ಚಿನ್ನದ ಪದಕ ಜಯಿಸಿದ್ದರು. ಹೀಗೆ ಚಿನ್ನದ ಪದಕವನ್ನೇ ತನ್ನದಾಗಿಸಿದ್ದ ಇವರ ಸಾಧನೆಯೂ ನಿಜಕ್ಕೂ ಎಲ್ಲರಿಗೂ ಮಾದರಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:36 am, Wed, 7 August 24