Deepavali Sweets: ದೀಪಾವಳಿಯಂದು ಫಟಾಫಟ್ ಅಂತ ಈ ಸಿಹಿ ಖಾದ್ಯಗಳನ್ನು ತಯಾರಿಸಿ
ದೀಪಾವಳಿ ಹಬ್ಬವು ಕೇವಲ ಹಬ್ಬವಲ್ಲ, ಇದು ಸಂತೋಷ, ಬೆಳಕು, ಸಮೃದ್ಧಿ ಮತ್ತು ಮಾಧುರ್ಯದ ಸಂಕೇತವಾಗಿದೆ. ಈ ಹಬ್ಬದ ಸಂದರ್ಭದಲ್ಲಿ ಪಟಾಕಿ, ದೀಪಗಳ ಜೊತೆಗೆ ಸಿಹಿ ತಿನಿಸುಗಳು ಕೂಡ ಇರಲೇಬೇಕು. ಹೌದಿ ಸಿಹಿಗಳಿಲ್ಲದೆ ದೀಪಾವಳಿ ಅಪೂರ್ಣ ಅಂತಾನೇ ಹೇಳಬಹುದು. ಈ ಸಿಹಿಗಳನ್ನು ಮಾರುಕಟ್ಟೆಯಲ್ಲಿ ಖರೀದಿಸುವ ಬದಲು ಮನೆಯಲ್ಲಿ ಮಾಡಿದರೆ ಸೂಕ್ತ. ಆದರೆ ಕೆಲವರಿಗೆ ಸಿಹಿ ತಿನಿಸುಗಳನ್ನು ತಯಾರಿಸುವುದು ಹೇಗೆ ಎಂಬುದೇ ಗೊತ್ತಿಲ್ಲ. ಅಂತಹವರಿಗಾಗಿ ಇಲ್ಲಿವೆ ಈಸಿ ಸ್ವೀಟ್ ರೆಸಿಪಿಗಳು.

ಸಿಹಿ ತಿನಿಸುಗಳಿಲ್ಲದೆ (sweets) ದೀಪಾವಳಿ ಅಪೂರ್ಣ ಅಂತಾನೇ ಹೇಳಬಹುದು. ಹೌದು ಪಟಾಕಿಗಳು, ದೀಪಗಳಂತೆ ಸಿಹಿ ತಿನಿಸುಗಳು ಕೂಡ ದೀಪಾವಳಿಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಹಬ್ಬದ ಸಮಯದಲ್ಲಿ ಟೈಂ ಇಲ್ಲ ಅನ್ನೋ ಕಾರಣಕ್ಕೆ ಹೆಚ್ಚಿನವರು ಮಾರುಕಟ್ಟೆಗಳಿಂದ ಸಿಹಿ ಖಾದ್ಯಗಳನ್ನು ಖರೀದಿ ಮಾಡುತ್ತಾರೆ. ಆದರೆ ಹೊರಗಡೆ ಸಿಗುವ ಈ ಸಿಹಿ ತಿನಿಸುಗಳು ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ. ಹೀಗಿರುವಾಗ ನಿಮಗಿರುವ ಸ್ವಲ್ಪ ಟೈಮ್‌ನಲ್ಲೂ ಬಲು ರುಚಿಕರವಾದ ಸ್ವೀಟ್‌ಗಳನ್ನು ತಯಾರಿಸಬಹುದು. ಅಡುಗೆ ಗೊತ್ತಿಲ್ಲದ, ಬಿಗಿನರ್ಸ್‌ಗೂ ಕೂಡ ಈ ಸಿಹಿಗಳನ್ನು ಸುಲಭವಾಗಿ ತಯಾರಿಸಬಹುದು. ನಿಮಗೂ ದೀಪಾವಳಿಯ ಈ ಶುಭ ದಿನ ನಿಮ್ಮ ಕೈಯಾರೇ ಏನಾದ್ರೂ ಸ್ವೀಟ್ ರೆಸಿಪಿ ತಯಾರಿಸಬೇಕು ಎಂಬ ಹಂಬಲವಿದ್ದರೆ, ಫಟಾಪಟ್ ಅಂತ ಈ ಕೆಲವೊಂದು ಸ್ವೀಟ್ ಖಾದ್ಯಗಳನ್ನು ತಯಾರಿಸಿ.
ತೆಂಗಿನಕಾಯಿ ಲಡ್ಡು:
ಈ ಸಿಹಿ ತಿಂಡಿ ಮಾಡಲು ಹೆಚ್ಚಿನ ಸಮಯ ಬೇಕಿಲ್ಲ, ಜಸ್ಟ್ 15 ನಿಮಿಷಗಳಲ್ಲಿ ತಯಾರಿಸಬಹುದು. ಇದಕ್ಕಾಗಿ ಎರಡು ಕಪ್ ಒಣ ಕೊಬ್ಬರಿ, ಮುಕ್ಕಾಲು ಕಪ್ ಬೇಯಿಸಿಟ್ಟ ಸಿಹಿ ದಪ್ಪ ಹಾಲು ಮತ್ತು ಅರ್ಧ ಚಮಚ ಏಲಕ್ಕಿ ಪುಡಿ ಬೇಕಾಗುತ್ತದೆ. ಈ ಎರಡು ಕಪ್ ತೆಂಗಿನಕಾಯಿ ತುರಿಯನ್ನು ನಾನ್-ಸ್ಟಿಕ್ ಪ್ಯಾನ್‌ನಲ್ಲಿ ಎರಡು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಡ್ರೈರೋಸ್ಟ್ ಮಾಡಿ, ಅದು ಬಣ್ಣ ತಿರುಗಿಸಲು ಪ್ರಾರಂಭಿಸಿದಾಗ ಅದಕ್ಕೆ ಬೇಯಿಸಿಟ್ಟ ಹಾಲನ್ನು ಸೇರಿಸಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಹಿಟ್ಟಿನ ಹದಕ್ಕೆ ಬರುವವರೆಗೆ ಚೆನ್ನಾಗಿ ಬೆರೆಸಿಕೊಳ್ಳಿ. ಗಟ್ಟಿ ಮಿಶ್ರಣ ತಯಾರಾದ ಬಳಿಕ ಒಲೆಯನ್ನು ಆಫ್ ಮಾಡಿ, ಏಲಕ್ಕಿಯನ್ನು ಸೇರಿಸಿ. ಈಗ ಈ ಮಿಶ್ರಣವನ್ನು ಒಂದು ಬಟ್ಟಲಿಗೆ ಹರಡಿ, ಅದು ಸ್ವಲ್ಪ ತಣ್ಣಗಾದ ಬಳಿಕ ಕೈಗೆ ಸ್ವಲ್ಪ ತುಪ್ಪವನ್ನು ಹಚ್ಚಿ, ಸಣ್ಣ ಸಣ್ಣ ಉಂಡೆಗಳನ್ನು ಮಾಡಿದರೆ ತೆಂಗಿನನಕಾಯಿ ಲಡ್ಡು ಸಿದ್ಧ.
ಗುಲಾಬ್ ಜಾಮೂನ್:
ಹಬ್ಬದ ಸಮಯದಲ್ಲಿ ಗುಲಾಬ್ ಜಾಮೂನ್ ಇಲ್ಲ ಅಂದ್ರೆ ಹೇಗೆ ಹೇಳಿ. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಬಹುದು. ಇದನ್ನು ತಯಾರಿಸಲು, ಮೊದಲು 1 ಕಪ್ ಮೃದುವಾದ ಖೋಯಾವನ್ನು ಒಂದು ಬಟ್ಟಲಿನಲ್ಲಿ ಮ್ಯಾಶ್ ಮಾಡಿ. ನಂತರ, 1 ಕಪ್ (ಅಥವಾ 100 ಗ್ರಾಂ) ತುರಿದ ಪನೀರ್, ರವೆ, 2 ಚಮಚ ಹಿಟ್ಟು, 1 ಚಮಚ ಬೇಕಿಂಗ್ ಪೌಡರ್ ಮತ್ತು 1 ಚಮಚ ಏಲಕ್ಕಿ ಪುಡಿಯನ್ನು ಖೋಯಾಕ್ಕೆ ಸೇರಿಸಿ ಮತ್ತು ಇದಕ್ಕೆ ಸ್ವಲ್ಪ ಹಾಲನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, 30 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. 30 ನಿಮಿಷಗಳ ನಂತರ, ಹಿಟ್ಟಿನಿಂದ ಸಣ್ಣ, ಉಂಡೆಗಳನ್ನು ರೂಪಿಸಿ, ಎಣ್ಣೆಯಲ್ಲಿ ಕರಿಯಿರಿ. ನಂತರ, ಅವುಗಳನ್ನು ಸಕ್ಕರೆ ಪಾಕದಲ್ಲಿ ಅದ್ದಿಟ್ಟರೆ ಗುಲಾಬ್ ಜಾಮೂನ್ ಸಿದ್ಧ.
ಕ್ಯಾರೆಟ್ ಹಲ್ವಾ:
ನೀವು ಸುಲಭವಾಗಿ ಕ್ಯಾರೆಟ್ ಹಲ್ವಾ ಕೂಡ ಮಾಡಬಹುದು. ಇದಕ್ಕೆ 4 ರಿಂದ 5 ಕ್ಯಾರೆಟ್, ಒಂದು ಕಪ್ ಹಾಲು, ಅರ್ಧ ಕಪ್ ಸಕ್ಕರೆ, ಖೋಯಾ, ಸಣ್ಣಗೆ ಹೆಚ್ಚಿದ ಬಾದಾಮಿ, ಒಣದ್ರಾಕ್ಷಿ, ಸಣ್ಣಗೆ ಹೆಚ್ಚಿದ ಗೋಡಂಬಿ, ಸಣ್ಣಗೆ ಹೆಚ್ಚಿದ ಪಿಸ್ತಾ, ಪುಡಿಮಾಡಿದ ಏಲಕ್ಕಿ, ತುಪ್ಪ, ಒಣ ಹಣ್ಣುಗಳು ಬೇಕಾಗುತ್ತದೆ. ಇದನ್ನು ಮಾಡಲು ಕ್ಯಾರೆಟ್ ಅನ್ನು ತೊಳೆದು ಸಿಪ್ಪೆ ತೆಗೆದು ತುರಿದುಕೊಳ್ಳಿ. ಈಗ ಒಂದು ಪ್ಯಾನ್ ಅನ್ನು ಗ್ಯಾಸ್ ಮೇಲೆ ಇರಿಸಿ. ಅದರಲ್ಲಿ ಹಾಲು ಮತ್ತು ತುರಿದ ಕ್ಯಾರೆಟ್ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮಧ್ಯಮ ಉರಿಯಲ್ಲಿ ಬೇಯಿಸಿ. ಬೆರೆಸುತ್ತಲೇ ಇರಿ. ಈ ಮಿಶ್ರಣ ದಪ್ಪವಾದ ಬಳಿಕ ಅದಕ್ಕೆ ಸಕ್ಕರೆ ಮತ್ತು ತುಪ್ಪ ಸೇರಿಸಿ ಮಿಶ್ರಣ ಮಾಡಿ. ಸಕ್ಕರೆ ಕರಗಿದ ನಂತರ, ಅದು ದಪ್ಪವಾಗುವವರೆಗೆ ಬೇಯಿಸಿ. ಎಲ್ಲಾ ನೀರು ಬತ್ತಿದ ನಂತರ, ಖೋಯಾವನ್ನು ಮ್ಯಾಶ್ ಮಾಡಿ ಹಾಕು ಮಿಶ್ರಣ ಮಾಡಿ. ಮೇಲೆ ಬಾದಾಮಿ, ಒಣದ್ರಾಕ್ಷಿ, ಗೋಡಂಬಿ, ಪಿಸ್ತಾ ಮತ್ತು ಏಲಕ್ಕಿ ಸೇರಿಸಿ ಮಧ್ಯಮ ಉರಿಯಲ್ಲಿ ಬೇಯಿಸಿದರೆ ಕ್ಯಾರೆಟ್ ಹಲ್ವಾ ಸಿದ್ಧ.
ಇದನ್ನೂ ಓದಿ: ದೀಪಾವಳಿಯಂದು ಮನೆ ಮುಂದೆ ದೀಪಗಳನ್ನು ಹಚ್ಚಿಡುವುದೇಕೆ? ಇದರ ಹಿಂದಿನ ಮಹತ್ವವೇನು?
ಗೋಧಿ ಹಿಟ್ಟಿನ ಲಡ್ಡು:
ನೀವು ಈ ದೀಪಾವಳಿಗೆ ಅದ್ಭುತವಾದ ರುಚಿ ಮತ್ತು ಪರಿಮಳವನ್ನು ಹೊಂದಿರುವ ಗೋಧಿ ಹಿಟ್ಟಿನ ಲಡ್ಡು ಕೂಡ ತಯಾರಿಸಬಹುದು. ಇದಕ್ಕಾಗಿ, ಗೋಧಿ ಹಿಟ್ಟು, ಶುದ್ಧ ತುಪ್ಪ, ಸಕ್ಕರೆ ಪುಡಿ ಅಥವಾ ಮತ್ತು ಡ್ರೈ ಫ್ರೂಟ್ಸ್ ಬೇಕಾಗುತ್ತವೆ. ಮೊದಲು, ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಮತ್ತು ಗೋಧಿ ಹಿಟ್ಟನ್ನು ಸೇರಿಸಿ. ಕಡಿಮೆ ಉರಿಯಲ್ಲಿ ನಿರಂತರವಾಗಿ ಬೆರೆಸಿ. ಹಿಟ್ಟು ಬಣ್ಣ ಬದಲಾಗಲು ಪ್ರಾರಂಭಿಸಿದಾಗ ಮತ್ತು ತುಪ್ಪ ಮತ್ತು ಹುರಿದ ಹಿಟ್ಟಿನ ಪರಿಮಳ ಬರಲು ಆರಂಭಿಸಿದಾಗ, ಗ್ಯಾಸ್ ಆಫ್ ಮಾಡಿ. ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ. ನಂತರ, ಸಕ್ಕರೆ, ಏಲಕ್ಕಿ ಪುಡಿ ಮತ್ತು ಕತ್ತರಿಸಿದ ಗೋಡಂಬಿ ಮತ್ತು ಬಾದಾಮಿ ಸೇರಿಸಿ ಮಿಶ್ರಣ ಮಾಡಿ. ನಂತರ ಸಣ್ಣ ಸಣ್ಣ ಲಡ್ಡುಗಳನ್ನು ತಯಾರಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:10 pm, Sun, 8 November 26




