ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ದಿನಗಣನೆ ಶುರುವಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಬ್ಬದ ಖುಷಿಯ ಆಚರಣೆಯ ಜೊತೆಗೆ ಪ್ರವಾಸದ ಆನಂದವನ್ನೂ ಪಡೆಯಲು ಸಾಕಷ್ಟು ಜನ ಬಯಸುತ್ತಾರೆ. ಹೌದು ಹೆಚ್ಚಿನ ಜನರು ಈ ಹಬ್ಬದ ಸೀಸನ್‌ನಲ್ಲಿರುವ ಲಾಂಗ್ ವೀಕೆಂಡ್ ರಜೆಯನ್ನು ಮನೆಯಲ್ಲಿಯೇ ಕಳೆಯಲು ಇಷ್ಟಪಡುತ್ತಾರೆ. ಇನ್ನೂ ಪ್ರವಾಸ ಪ್ರೇಮಿಗಳು ಈ ರಜಾ ದಿನದಲ್ಲಿ ಎಲ್ಲಾದ್ರೂ ಟ್ರಿಪ್ ಹೋದ್ರೆ ಚೆನ್ನಾಗಿರುತ್ತದೆ ಎಂದು ಬಯಸುತ್ತಾರೆ. ನೀವು ಕೂಡಾ ದೀಪಾವಳಿ ಹಬ್ಬದ ರಜೆಯಲ್ಲಿ ಪ್ರವಾಸ ಹೋಗುವ ಪ್ಲಾನ್ ಮಾಡಿಕೊಂಡಿದ್ದರೆ, ದೀಪಗಳ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುವ ಭಾರತದ ಈ ಕೆಲವು ಸ್ಥಳಗಳಿಗೆ ಭೇಟಿ ನೀಡಿ ಮತ್ತು ನಿಮ್ಮ ಪ್ರವಾಸವನ್ನು ಹಾಗೂ ಈ ಬಾರಿಯ ದೀಪಾವಳಿ ಹಬ್ಬವನ್ನು ಇನ್ನಷ್ಟು ವಿಶೇಷವಾಗಿ ಆಚರಿಸಿ.
ಉತ್ತರ ಪ್ರದೇಶದ ವಾರಣಾಸಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಗಂಗಾ ನದಿಯಿಂದ ಕಾಶಿ ವಿಶ್ವನಾಥ ದೇವಸ್ಥಾನದ ವರೆಗೆ ಇಲ್ಲಿ ಹಲವು ಆಧ್ಯಾತ್ಮಿಕ ಕ್ಷೇತ್ರಗಳಿದ್ದು, ಈ ಪುಣ್ಯ ಕ್ಷೇತ್ರಗಳ ದರ್ಶನಕ್ಕೆಂದೇ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಅದರಲ್ಲೂ ಇಲ್ಲಿ ದೀಪಾವಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೀಪಾವಳಿ ಸಂದರ್ಭದಲ್ಲಿ ವಾರಣಾಸಿಯ ಇಡೀ ನಗರವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಈ ದೀಪಾಲಂಕಾರವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಅಷ್ಟೇ ಅಲ್ಲದೆ, ಪವಿತ್ರ ಗಂಗಾ ನದಿಯ ತಟದಲ್ಲಿ ಗಂಗಾರತಿ ಮತ್ತು ವಿವಿಧ ಧಾರ್ಮಿಕ ಆಚರಣೆಗಳನ್ನು ಕಣ್ತುಂಬಿಕೊಳ್ಳಬಹುದು. ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಅನೇಕ ಪ್ರವಾಸಿಗರು ದೀಪಾವಳಿ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ನೀವು ಕೂಡಾ ದೀಪಾವಳಿ ರಜೆಗೆ ಪ್ರವಾಸ ಯೋಜಿಸುತ್ತಿದ್ದರೆ ಇಲ್ಲಿಗೆ ಭೇಟಿ ನೀಡಬಹುದು.
ದೀಪಾವಳಿ ಹಬ್ಬದ ರಜೆಯನ್ನು ಇನ್ನಷ್ಟು ವಿಶೇಷವಾಗಿಸಲು ನೀವು ಜೈಪುರಕ್ಕೆ ಭೇಟಿ ನೀಡಬಹುದು. ರಾಜಸ್ಥಾನದ ರಾಜಧಾನಿಯಾಗಿರುವ ಜೈಪುರದಲ್ಲಿಯೂ ಬೆಳಕಿನ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆಕರ್ಷಕ ಸರೋವರಗಳು, ಭವ್ಯವಾದ ಅರಮನೆಗಳು, ಕೋಟೆಗಳು ಮತ್ತು ಉದ್ಯಾನವನಗಳಿಗೆ ಪ್ರಸಿದ್ಧವಾದ ಈ ನಗರವನ್ನು ಬೆಳಕಿನ ಹಬ್ಬದಲ್ಲಿ ಮದುವನಗಿತ್ತಿಯಂತೆ ಸಿಂಗರಿಸಲಾಗುತ್ತದೆ. ಈ ಆಕರ್ಷಕ ದೀಪಾಲಂಕಾರಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ನೀವು ಏನಾದ್ರೂ ಈ ಬಾರಿಯ ದೀಪಾವಳಿ ಹಬ್ಬದ ರಜೆಯಲ್ಲಿ ಪ್ರವಾಸ ಹೋಗುವ ಯೋಜನೆಯಲ್ಲಿದ್ದರೆ ಖಂಡಿತವಾಗಿಯೂ ಈ ಅದ್ಭುತ ಸ್ಥಳಕ್ಕೆ ತಪ್ಪದೆ ಭೇಟಿ ನೀಡಿ.
ನೀವು ಈ ಬಾರಿಯ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲು ಬಯಸಿದೆ ಪಂಜಾಬ್‌ನ ಅಮೃತಸರಕ್ಕೆ ಭೇಟಿ ನೀಡಿ. ಇಲ್ಲಿ ಬೆಳಕಿನ ಹಬ್ಬವನ್ನು ಬಂಡಿ ಛೋರ್ ದಿವಾಸ್ ಎಂದು ಆಚರಿಸಲಾಗುತ್ತದೆ. 6 ನೇ ಸಿಖ್ ಗುರು, ಗುರು ಹರಗೋಬಿಂದ್ ಸಾಹಿಬ್ ಅವರು ಜೈಲಿನಿಂದ ಹಿಂದಿರುಗಿದ ದಿನದ ನೆನಪಿಗಾಗಿ ಈ ಹಬ್ಬವನ್ನು ಇಲ್ಲಿ ದೀಪಾವಳಿಯ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಮತ್ತು ಈ ಸಮಯದಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್ ಅನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಈ ಸುಂದರ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಬೆಳಕಿನ ಹಬ್ಬದ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿ.
ಪ್ರಭು ಶ್ರೀರಾಮನ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿಯೂ ದೀಪಾವಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 14 ವರ್ಷಗಳ ವನವಾಸದ ನಂತರ ಸೀತಾ ರಾಮ ಮತ್ತು ಲಕ್ಷ್ಮಣ ಅಯೋಧ್ಯೆಗೆ ಹಿಂದಿರುಗಿದ ದಿನವೆಂದು ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಇಲ್ಲಿ ಅನೇಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಬಾರಿಯ ಹಬ್ಬದ ರಜೆಯಲ್ಲಿ ಪ್ರವಾಸ ಹೋಗಬೇಕೆಂದು ಯೋಜನೆಯನ್ನು ರೂಪಿಸಿದ್ದರೆ ಕುಟುಂಬ ಸಮೇತರಾಗಿ ನೀವು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡುವುದರ ಜೊತೆ ಜೊತೆಗೆ ಇಲ್ಲಿ ಬಹಳ ವಿಶೇಷ ರೀತಿಯಲ್ಲಿ ಬೆಳಕಿನ ಹಬ್ಬವನ್ನು ಕೂಡಾ ಆಚರಿಸಿಕೊಳ್ಳಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Sun, 20 October 24