ಮನೆಗೆಲಸ ಹೆಣ್ಣಿಗೆ (housewife) ಮಾತ್ರ ಎಂಬ ಭಾವನೆ ಕುಟುಂಬ, ಸಮಾಜದಲ್ಲಿ ಅನಾದಿಕಾದಿಂದಲೂ ನೆಲೆ ನಿಂತುಬಿಟ್ಟಿದೆ. ಆದರೆ, ಗಂಡ-ಹೆಂಡತಿ ಇಬ್ಬರೂ ಹೊರಗೆ ದುಡಿದು ಸಂಸಾರ ಸಾಗಿಸಬೇಕಾದಂತಹ ಅನಿವಾರ್ಯತೆ ಇಂದಿನ ದಿನಮಾನಗಳಲ್ಲಿ ಪ್ರಚಲಿತದಲ್ಲಿದೆ. ಅಲ್ಲದೆ, ವಿಭಕ್ತ ಕುಟುಂಬವಿರುವ ಕಾರಣ ಗಂಡ-ಹೆಂಡತಿ (wife husband) ಪರಸ್ಪರ ಮನೆಗೆಲಸಗಳಲ್ಲಿ ನೆರವಾದರೆ ಮಾತ್ರ ದಾಂಪತ್ಯದಲ್ಲಿ ಅನುರಾಗ ಅರಳಲು ಸಾಧ್ಯ. ಇಂದಿನ ದಾಂಪತ್ಯಕ್ಕೆ ನಂಬಿಕೆಯ ಜೊತೆಗೆ ಮನೆಗೆಲಸಗಳನ್ನು (housekeeping) ಪರಸ್ಪರ ಹಂಚಿಕೊಂಡು ಮಾಡುವುದು ಕೂಡ ಅಗತ್ಯ.
ಆಕೆ ನೋಡಿ ಗಂಡನ ಕೈಯಲ್ಲಿ ಬಟ್ಟೆ ಒಣ ಹಾಕಿಸ್ತಾಳೆ, ಅವರ ಮನೆಯಲ್ಲಿ ಗಂಡನೇ ಅಡುಗೆ ಮಾಡೋದಂತೆ, ಕಸ ಎಸೆದು ಬರಲೂ ಗಂಡನೇ ಹೋಗ್ತಾನೆ… ಇಂಥ ಮಾತುಗಳು ಆಗಾಗ ನಿಮ್ಮ ಕಿವಿ ಮೇಲೆ ಬೀಳುತ್ತಿರುತ್ತವೆ. ಇಂಥ ಮಾತುಗಳ ತಾತ್ಪಾರ್ಯವಿಷ್ಟೇ… ಈ ಎಲ್ಲ ಕೆಲಸಗಳನ್ನು ಹೆಣ್ಣೇ ಮಾಡಬೇಕು. ಒಂದು ವೇಳೆ ಗಂಡು ಈ ಕೆಲಸಗಳನ್ನು ಮಾಡಿದರೆ, ಆತನ ಹೆಂಡತಿ ತುಂಬಾ ಘಾಟಿ, ಗಂಡನ ಹತ್ರನೇ ಎಲ್ಲ ಕೆಲಸಗಳನ್ನು ಮಾಡಿಸುತ್ತಾಳೆ, ಗಂಡನನ್ನು ಬುಗುರಿಯಂತೆ ಆಡಿಸುತ್ತಾಳೆ, ಅವನು ಅಮ್ಮಾವ್ರ ಗಂಡ… ಹೀಗೆ ನಾನಾ ಪದಪುಂಜಗಳನ್ನು ಪೋಣಿಸುತ್ತಾರೆ. ನಿಮ್ಮ ಮನೆಯಲ್ಲೇ ಗಮನಿಸಿ ನೋಡಿ, ನಿಮಗೆ ಕೈ ತುಂಬಾ ಕೆಲಸಗಳಿರುವಾಗ ಗಂಡನ ಬಳಿ ಮಗುವಿಗೆ ಊಟ ಮಾಡಿಸಲು ಹೇಳುತ್ತೀರಿ. ಅಲ್ಲೇ ಪಕ್ಕದಲ್ಲಿರುವ ಅತ್ತೆ ಅಥವಾ ಅಮ್ಮ ಆ ಕೂಡಲೇ ‘ಏನಮ್ಮಾ, ಗಂಡಸರಿಗೆ ಅದೆಲ್ಲ ತಿಳಿಯಲ್ಲ. ಅವರ ಹತ್ರ ಅಂಥ ಕೆಲಸಗಳನ್ನೆಲ್ಲ ಹೇಳಬಾರದು. ನೀನೇ ಮಾಡಿಸು, ಹೋಗು’ ಎಂದು ನಿಮಗೇ ಆ ಕೆಲಸ ಹಚ್ಚಿಬಿಡುತ್ತಾರೆ.
ಮನೆಗೆಲಸದಲ್ಲಿ ನೆರವಾಗಲು ಹಿಂಜರಿಕೆ ಏಕೆ?:
ಪತ್ನಿ ಉದ್ಯೋಗಕ್ಕೆ ಹೋಗಿ ಪತಿಯ ಜವಾಬ್ದಾರಿಗಳಿಗೆ ಹೆಗಲು ನೀಡುತ್ತಾಳೆ ಎಂದಾದ ಮೇಲೆ ಮನೆಗೆಲಸದಲ್ಲಿ ಆಕೆಗೆ ಪತಿ ನೆರವು ನೀಡುವುದರಲ್ಲಿ ತಪ್ಪೇನಿದೆ? ಮನೆಗೆಲಸ ಮಾಡಿದರೆ ಬೇರೆಯವರು ಏನೆಂದುಕೊಳ್ಳುತ್ತಾರೋ ಎಂಬ ಭಾವನೆ ಬಹುತೇಕ ಗಂಡಂದಿರಲ್ಲಿರುತ್ತದೆ. ಈ ಕಾರಣಕ್ಕೇ ಹೆಚ್ಚಿನವರು ಪತ್ನಿ ಅದೆಷ್ಟೇ ಒದ್ದಾಟ ನಡೆಸುತ್ತಿದ್ದರೂ ಸುಮ್ಮನೆ ಟಿವಿ ಮುಂದೆಯೋ, ಇಲ್ಲ ಮೊಬೈಲ್ ಹಿಡಿದೋ ತನಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಕುಳಿತಿರುತ್ತಾರೆ. ಆದರೆ, ನಿಮ್ಮ ಈ ವರ್ತನೆ ಪತ್ನಿಯ ಮನಸ್ಸಿನ ಮೇಲೆ ಎಂಥ ಪರಿಣಾಮವನ್ನುಂಟು ಮಾಡಬಲ್ಲದು ಎಂಬುದು ನಿಮಗೆ ಗೊತ್ತಾ? ಆಕೆಗೆ ನಿಮ್ಮ ಮೇಲೆ ಸಿಟ್ಟು ಬರಬಹುದು, ಆಕೆಯ ಬಗ್ಗೆ ನಿಮಗೆ ಕಾಳಜಿಯಿಲ್ಲ ಎಂಬ ಭಾವನೆ ಹುಟ್ಟಬಹುದು. ಇಂಥ ಭಾವನೆಗಳು ದಾಂಪತ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.
ಪತಿಯು ಮನೆಗೆಲಸಗಳಲ್ಲಿ ಪತ್ನಿಗೆ ನೆರವು ನೀಡುವುದರಿಂದ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಇದರಿಂದ ಸಂಬಂಧದಲ್ಲಿ ಏನೆಲ್ಲ ಬದಲಾವಣೆಗಳಾಗುತ್ತವೆ ಗೊತ್ತಾ?