ಚಳಿಗಾಲದ ಬಂತೆಂದರೆ ಸಾಕು ಆರೋಗ್ಯ ಸಂಬಂಧಿ ಸಮಸ್ಯೆಗಳ ಜೊತೆಗೆ ತ್ವಚೆ ಸಂಬಂಧಿ ಸಮಸ್ಯೆಗಳು ಹಲವರನ್ನು ಕಾಡತೊಡಗುತ್ತದೆ. ಶೀತ ವಾತಾವರಣದಲ್ಲಿ ಒಣ ತ್ವಚೆಯ ಸಮಸ್ಯೆ ಸಾಮಾನ್ಯವಾಗಿದೆ. ಶುಷ್ಕತೆಯಿಂದಾಗಿ ಚರ್ಮವು ನಿರ್ಜೀವವಾಗಿ ಕಾಣಲು ಪ್ರಾರಂಭಿಸುತ್ತದೆ. ಹಾಗೂ ಇದು ಇತರ ಚರ್ಮ ಸಂಬಂಧಿ ಸಮಸ್ಯೆಗಳನ್ನು ಸಹ ಉಂಟುಮಾಡುತ್ತದೆ. ಸಾಮಾನ್ಯವಾಗಿ ಜನರು ಚಳಿಗಾಲದಲ್ಲಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ದುಬಾರಿ ಕ್ರೀಂ, ಮಾಯಿಶ್ಚರೈಸರ್ಗಳನ್ನು ಬಳಸುತ್ತಾರೆ. ಆದರೆ ಈ ಎಲ್ಲಾ ಉತ್ಪನ್ನಗಳು ಚರ್ಮವನ್ನು ಹೊರಗಿನಿಂದ ರಕ್ಷಿಸಬಹುದು. ಆದರೆ ಒಳಗಿನಿಂದ ನಿಮ್ಮನ್ನು ಆರೋಗ್ಯಕರವಾಗಿಡಬೇಕೆಂದರೆ ನೀವು ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುವುದು ಅವಶ್ಯಕ. ಏಕೆಂದರೆ ಪೋಷಕಾಂಶಗಳ ಕೊರತೆಯಿಂದಲೂ ಶುಷ್ಕ ತ್ವಚೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವಿಟಮಿನ್ ಎ, ಸಿ, ಡಿ, ಇ ಮತ್ತು ಸತು, ಸೆಲೆನಿಯಮ್ ಇತ್ಯಾದಿ ಜೀವಸತ್ವಗಳು ಮತ್ತು ಪೋಷಕಾಂಶಗಳು ಚರ್ಮಕ್ಕೆ ಬಹಳ ಮುಖ್ಯ. ಆದ್ದರಿಂದ ಈ ಚಳಿಗಾಲದಲ್ಲಿ ಈ ಕೆಲವು ನಿರ್ಧಿಷ್ಟ ಆಹಾರಗಳನ್ನು ಸೇವನೆ ಮಾಡುವ ಮೂಲಕ ಒಣ ತ್ವಚೆಯ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳಬಹುದು.
ಚಳಿಗಾಲದಲ್ಲಿ ತ್ವಚೆಯನ್ನು ತೇವಭರಿತವಾಗಿಡಲು ಸಹಕಾರಿ ಈ ಕೆಲವು ಆಹಾರಗಳು
ಅವಕಾಡೊ: ಪೋಷಕಾಂಶಗಳಿಂದ ಸಮೃದ್ಧವಾಗಿರುವ ಅವಕಾಡೊ ಆರೋಗ್ಯಕ್ಕೆ ಮಾತ್ರವಲ್ಲದೆ ತ್ವಚೆಗೂ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಆರೋಗ್ಯಕರ ಕೊಬ್ಬು ಮತ್ತು ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕ ಅಂಶಗಳಿವೆ. ಇವು ಚಳಿಗಾಲದಲ್ಲಿ ಒಣ ತ್ವಚೆಯ ಸಮಸ್ಯೆಯಿಂದ ಪರಿಹಾರವನ್ನು ನೀಡಲು ಸಹಕಾರಿಯಾಗಿದೆ.
ಮೊಟ್ಟೆಗಳು: ಪ್ರೋಟೀನ್ ಭರಿತ ಮೊಟ್ಟೆಗಳು ಚರ್ಮವನ್ನು ತೇವಭರಿತವಾಗಿಡಲು ಸಹಾಯ ಮಾಡುತ್ತದೆ. ಪ್ರೋಟೀನ್ ಜೊತೆಗೆ ಇದು ಹೆಚ್ಚಿನ ಪ್ರಮಾಣದ ಸಲ್ಫರ್ ಅಂಶವನ್ನು ಸಹ ಹೊಂದಿದೆ. ಇದು ಚಳಿಗಾಲದಲ್ಲಿ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಆದ್ದರಿಂದ ಶುಷ್ಕ ತ್ವಚೆಯ ಸಮಸ್ಯೆಯಿಂದ ಪರಿಹಾರವನ್ನು ಪಡೆಯಲು ನಿಮ್ಮ ಆಹಾರದಲ್ಲಿ ಮೊಟ್ಟೆಯನ್ನು ಸೇರಿಸಿ.
ಟೊಮೆಟೊ: ಚಳಿಗಾಲದಲ್ಲಿ ಟೊಮೆಟೊ ತಿನ್ನುವುದರಿಂದ ದೇಹಕ್ಕೆ ವಿಟಮಿನ್ ಸಿ ಮತ್ತು ಲೈಕೋಪಿನ್ ಅಂಶವು ದೊರೆಯುತ್ತದೆ. ಇದು ಚರ್ಮವನ್ನು ತೇವಭರಿತವಾಗಿಡಲು ಸಹಾಯ ಮಾಡುತ್ತದೆ ಮತ್ತು ವಯಸ್ಸಾಗುವಿಕೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಇದಲ್ಲದೆ ನಿಮ್ಮ ಚರ್ಮದ ಆರೈಕೆಯ ದಿನಚರಿಯಲ್ಲಿ ನೀವು ಟೊಮೆಟೊ ಫೇಸ್ ಪ್ಯಾಕ್ ಕೂಡಾ ಅನ್ವಯಿಸಬಹುದು.
ಇದನ್ನೂ ಓದಿ: ಒಣ ಚರ್ಮ ಮತ್ತು ಚರ್ಮ ರೋಗಗಳು ನಡುವಿನ ವ್ಯತ್ಯಾಸ; ಅನುಸರಿಸಬೇಕಾದ ಸೂಕ್ತ ಕ್ರಮಗಳು
ಕ್ಯಾರೆಟ್: ಕ್ಯಾರೆಟ್ ಕಣ್ಣುಗಳ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮದ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಎ ಸಾಕಷ್ಟು ಪ್ರಮಾಣದಲ್ಲಿ ಕಂಡುರುತ್ತವೆ. ಈ ಚಳಿಗಾಲದಲ್ಲಿ ಪ್ರತಿದಿನ ಕ್ಯಾರೆಟ್ ಸೇವಿಸಿದರೆ ಚರ್ಮವು ತೇವಭರಿತವಾಗಿ ಮತ್ತು ಮೃದುವಾಗಿ ಕಾಣುತ್ತದೆ.
ಹಸಿರು ಎಲೆ ತರಕಾರಿಗಳು: ಈ ಚಳಿಗಾಲದಲ್ಲಿ ಒಣ ತ್ವಚೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಹಸಿರು ಎಲೆತರಕಾರಿಗಳನ್ನು ನಿಯಮಿತವಾಗಿ ಸೇವನೆ ಮಾಡಿ. ಇವುಗಳಲ್ಲಿ ವಿಟಮಿನ್ ಎ, ವಿಟಮಿನ್ ಕೆ, ವಿಟಮಿನ್ ಸಿ ಇತ್ಯಾದಿ ಅನೇಕ ಪೋಷಕಾಂಶಗಳು ಹೇರಳವಾಗಿ ಕಂಡುಬರುತ್ತದೆ. ಅಲ್ಲದೆ ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಮತ್ತು ಕಡಿಮೆ ಕ್ಯಾಲೋರಿ ಅಂಶವಿದೆ. ಇದು ಆರೋಗ್ಯ ಜೊತೆಗೆ ಒಣ ತ್ವಚೆಯ ಸಮಸ್ಯೆಯಿಂದಲೂ ಪರಿಹಾರವನ್ನು ನೀಡಲು ಸಹಕಾರಿಯಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: