ಬಾಳೆಹಣ್ಣು ತಿನ್ನುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳ ಬಗ್ಗೆ ನೀವು ಕೇಳಿರಬಹುದು. ಆರೋಗ್ಯಕ್ಕೆ ಮಾತ್ರವಲ್ಲದೆ ಬಾಳೆಹಣ್ಣು ಮತ್ತು ಅದರ ಸಿಪ್ಪೆಯು ತ್ವಚೆಯ ಆರೈಕೆಯಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರ ಸಿಪ್ಪೆಯು ಚರ್ಮವನ್ನು ಪೋಷಿಸುವ ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ. ಇದು ಚರ್ಮವನ್ನು ಮೃದುವಾಗಿಡಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನ ಸಿಪ್ಪೆಯಲ್ಲಿ ಅಮೈನೋ ಆಮ್ಲಗಳು ಮತ್ತು ವಿಟಮಿನ್ ಎ, ಬಿ, ಸಿ ಮತ್ತು ಇ ಸಮೃದ್ಧವಾಗಿದೆ. ಇದು ಒಣ ಮತ್ತು ಚರ್ಮದ ತುರಿಕೆ ಮುಂತಾದ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ. ಮಾತ್ರವಲ್ಲದೆ ಬಾಳೆಹಣ್ಣಿನ ಸಿಪ್ಪೆಯು ಒಡೆದ ಪಾದಗಳ ಸಮಸ್ಯೆಗಳ ವಿರುದ್ಧವೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
ಸಾಮಾನ್ಯವಾಗಿ ಮುಖದ ಆರೈಕೆಯ ಬಗ್ಗೆ ಕಾಳಜಿ ವಹಿಸುವಷ್ಟು, ಪಾದಗಳ ಆರೈಕೆಗೆ ಗಮನ ನೀಡುವುದಿಲ್ಲ. ಇದರಿಂದ ಪಾದಗಳು ಒಡೆಯುವುದು, ಪಾದಗಳು ಒಣಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಜೊತೆಗೆ ಕಳಪೆ ಮಟ್ಟದ ಜೀವನಶೈಲಿ, ವಿಟಮಿನ್ ಇ, ಕಬ್ಬಿಣಾಂಶ ಅಥವಾ ಕ್ಯಾಲ್ಸಿಯಂ ಕೊರತೆಯಿಂದಾಗಿ ಹಿಮ್ಮಡಿಗಳು ಬಿರುಕು ಬಿಡುತ್ತದೆ. ಈ ಸಮಸ್ಯೆಯು ಹೆಚ್ಚಾದಂತೆ ಪಾದಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತವೆ. ಹಾಗೂ ಕೆಲಮೊಮ್ಮೆ ಪಾದಗಳು ತೀವ್ರವಾಗಿ ಒಡೆದಾಗ ರಕ್ತಸ್ರಾವವು ಕಾಣಿಸಿಕೊಳ್ಳುತ್ತದೆ. ಈ ಒಂದು ಸಮಸ್ಯೆಗೆ ಬಾಳೆಹಣ್ಣಿನ ಸಿಪ್ಪೆಯು ಪರಿಣಾಮಕಾರಿ ಮನೆಮದ್ದಾಗಿ ಕಾರ್ಯನಿರ್ವಹಿಸುತ್ತದೆ. ಬಾಳೆಹಣ್ಣು ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು, ಅದು ಪಾದಗಳನ್ನು ತೇವವಾಗಿಡುತ್ತದೆ ಮತ್ತು ಚರ್ಮ ಒಣಗುವುದನ್ನು ತಡೆಯುತ್ತದೆ.
ಇದನ್ನೂ ಓದಿ: 40 ರ ಹರೆಯದ ನಂತರ ಆರೋಗ್ಯಕರವಾಗಿರಬೇಕೆಂದರೆ ಈ ದಿನಚರಿಯನ್ನು ಅನುಸರಿಸಿ
ಬಾಳೆಹಣ್ಣು ಮತ್ತು ಅರಶಿನ ಮಾಸ್ಕ್ :
ಬಾಳೆಹಣ್ಣಿನ ಉರಿಯೂತ ವಿರೋಧಿ ಗುಣಲಕ್ಷಣಗಳು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರ ಸಿಪ್ಪೆಯಲ್ಲಿ ಕಂಡುಬರುವ ಕಿಣ್ವಗಳು ಮತ್ತು ಆಮ್ಲಗಳು ಚರ್ಮದ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ಇದರಲ್ಲಿ ಬಳಸಲಾಗುವ ಅರಶಿನವು ಗಾಯಗಳನ್ನು ತ್ವರಿತವಾಗಿ ವಾಸಿಮಾಡಲು ಸಹಾಯ ಮಾಡುತ್ತದೆ. ಮೊದಲಿಗೆ ಬಾಳೆಹಣ್ಣಿನ ಸಿಪ್ಪೆಯನ್ನು ಮಿಕ್ಸಿ ಜಾರ್ ನಲ್ಲಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಹಸಿ ಅರಶಿನ ಕೊಂಬನ್ನು ತುರಿದು ಅದನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಬಾಳೆಹಣ್ಣಿನ ಸಿಪ್ಪೆಯ ಪೇಸ್ಟ್ ಮತ್ತು ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಮಾಸ್ಕ್ ತಯಾರಿಸಿ. ನಂತರ ಪಾದಗಳನ್ನು ಚೆನ್ನಾಗಿ ತೊಳೆದು ಈ ಮಿಶ್ರಣವನ್ನು ಪಾದಗಳಿಗೆ ಹಚ್ಚಿ 20 ನಿಮಿಷಗಳ ಕಾಲ ಹಾಗೇನೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಪಾದಗಳನ್ನು ತೊಳೆಯಿರಿ.
ಇಲ್ಲದಿದ್ದರೆ ಬಾಳೆಹಣ್ಣಿನ ಸಿಪ್ಪೆ ತೆಗೆದುಕೊಂಡು ಪಾದಗಳಿಗೆ ಉಜ್ಜಿಕೊಳ್ಳಿ. ವಿಶೇಷವಾಗಿ ಪಾದದಲ್ಲಿ ಬಿರುಕು ಬಿಟ್ಟ ಜಾಗದಲ್ಲಿ 5 ನಿಮಿಷಗಳ ಕಾಲ ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಪಾದಗಳನ್ನು ತೊಳೆಯಿರಿ. ಈ ಮನೆಮದ್ದು ನಿಮ್ಮ ಒಡೆದ ಹಿಮ್ಮಡಿಯ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: