ಆಯುರ್ವೇದದ ಈ ನಿಯಮಗಳನ್ನು ಪಾಲಿಸುವ ಮೂಲಕ ಆರೋಗ್ಯವಂತರಾಗಿ ಬಾಳಿ
ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಡಲು ಪ್ರತಿಯೊಬ್ಬರೂ ಬಯಸುತ್ತಾರೆ. ಇಂದಿನ ಬ್ಯುಸಿ ಹಾಗೂ ಜಡ ಜೀವನಶೈಲಿಯ ಕಾರಣದಿಂದ ಅನೇಕರಿಗೆ ಆರೋಗ್ಯದ ಕಡೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಆದರೆ ಆಯುರ್ವೇದದ ಕೆಲವು ಸರಳ ನಿಯಮಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನೀವು ಆರೋಗ್ಯವಂತರಾಗಿ ಬಾಳಬಹುದು. ಉತ್ತಮ ಮತ್ತು ಆರೋಗ್ಯಕರ ಜೀವನ ನಡೆಸಲು ಆಯುರ್ವೇದದ ಯಾವೆಲ್ಲಾ ನಿಮಯಗಳನ್ನು ಪಾಲಿಸಬೇಕು ಎಂಬುದನ್ನು ನೋಡೋಣ ಬನ್ನಿ.

ಆರೋಗ್ಯಕರ ಜೀವನ (healthy life) ನಡೆಸಬೇಕು ಎಂಬ ಹಂಬಲ ಪ್ರತಿಯೊಬ್ಬರಿಗೂ ಇದೆ. ಆದರೆ ಇಂದಿನ ಬ್ಯುಸಿ ಜೀವನದಲ್ಲಿ ಇದನ್ನು ಸಾಧಿಸುವುದು ಕಷ್ಟಸಾಧ್ಯ ಎಂದು ಹಲವರು ಭಾವಿಸುತ್ತಾರೆ. ಇದೇನು ಕಷ್ಟವಲ್ಲ, ದೈನಂದಿನ ಜೀವನದಲ್ಲಿ ಕೆಲವೊಂದು ಆಯುರ್ವೇದ ಸಲಹೆಗಳನ್ನು ಅನುಸರಿಸುವ ಮೂಲಕ ಆರೋಗ್ಯಕರ ಜೀವನವನ್ನು ನಡೆಸಬಹುದು. ಆಯುರ್ವೇದದ ಪ್ರಕಾರ, ಉತ್ತಮ ಆರೋಗ್ಯವನ್ನು ಸಾಧಿಸುವುದು ಕಷ್ಟಕರವೇನಲ್ಲ, ಸಮತೋಲಿತ ದೈನಂದಿನ ದಿನಚರಿಯಿಂದಲೂ ಅದನ್ನು ಸಾಧಿಸಬಹುದು. ಸಂತೋಷದ ಮತ್ತು ಆರೋಗ್ಯಕರ ಜೀವನ ನಡೆಸಲು ಬೇಕಾದ ಅಗತ್ಯ ಸಲಹೆ ಇಲ್ಲಿದೆ ನೋಡಿ
ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ:
ಆಯುರ್ವೇದದಲ್ಲಿ, ಬೆಳಿಗ್ಗೆ ಬೇಗನೆ ಏಳುವುದು ತುಂಬಾನೇ ಒಳ್ಳೆಯ ಅಭ್ಯಾಸ ಎಂದು ಪರಿಗಣಿಸಲಾಗಿದೆ. ಸೂರ್ಯೋದಯಕ್ಕೆ ಮುಂಚಿನ ಸಮಯವನ್ನು ಬ್ರಹ್ಮ ಮುಹೂರ್ತ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ, ವಾತಾವರಣವು ಶಾಂತವಾಗಿರುತ್ತದೆ ಮತ್ತು ದಿನದ ಆರಂಭಕ್ಕೆ ಮನಸ್ಸು ಸಿದ್ಧವಾಗಲು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಆದ್ದರಿಂದ ಈ ಸಮಯದಲ್ಲಿ ಎಚ್ಚರಗೊಳ್ಳಬೇಕು. ಮುಖ್ಯವಾಗಿ ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುವ ಬದಲು, ಸ್ವಲ್ಪ ಸಮಯ ಶಾಂತವಾಗಿ ಕುಳಿತುಕೊಳ್ಳಬೇಕು. ತಾಜಾ ಗಾಳಿಯಲ್ಲಿ ವಾಕಿಂಗ್ ಮಾಡ್ಬೇಕು ಅಥವಾ ಸ್ವಲ್ಪ ಯೋಗ ಮತ್ತು ಪ್ರಾಣಾಯಾಮ ಅಭ್ಯಾಸ ಮಾಡಬೇಕು.
ಹಸಿವಾದಾಗ ಮಾತ್ರ ಊಟ ಮಾಡಿ:
ಆಯುರ್ವೇದದಲ್ಲಿ, ಉತ್ತಮ ಜೀರ್ಣಕ್ರಿಯೆ ಆರೋಗ್ಯದ ಪ್ರಮುಖ ಅಡಿಪಾಯವೆಂದು ಪರಿಗಣಿಸಲಾಗುತ್ತದೆ. ಮೊದಲು ತಿಂದ ಊಟವು ಜೀರ್ಣವಾದ ನಂತರ ಮತ್ತು ನೈಸರ್ಗಿಕ ಹಸಿವು ಅನುಭವಿಸಿದ ನಂತರವೇ ಮುಂದಿನ ಊಟವನ್ನು ಸೇವಿಸಬೇಕು. ಇದರರ್ಥ ದೀರ್ಘಕಾಲದವರೆಗೆ ಹಸಿವಿನಿಂದ ಇರುವುದು ಅಥವಾ ಊಟವನ್ನು ಬಿಟ್ಟುಬಿಡಬೇಕು ಎಂದಲ್ಲ. ಬದಲಾಗಿ, ನಿಮ್ಮ ದೇಹದ ಸಂಕೇತಗಳನ್ನು ಆಲಿಸಿ, ಹಸಿದಾಗ ಊಟ ಮಾಡಿ. ಹಸಿವಾಗದೆ ಆಗಾಗ್ಗೆ ತಿನ್ನುವುದನ್ನು ಅಥವಾ ತಡರಾತ್ರಿಯಲ್ಲಿ ಭಾರವಾದ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಜೊತೆಗೆ ಊಟವನ್ನು ಆತುರದಿಂದ ಮಾಡಬೇಡಿ, ನಿಧಾನವಾಗಿ ಅಗಿದು ತಿನ್ನಿರಿ.
ಋತುಮಾನಕ್ಕೆ ಅನುಗುಣವಾಗಿ ಆಹಾರ ಪದ್ಧತಿಯನ್ನು ಬದಲಾಯಿಸಿ:
ಆಯುರ್ವೇದವು ಋತುಮಾನಕ್ಕೆ ಅನುಗುಣವಾಗಿ ಆಹಾರ ಪದ್ಧತಿ ಮತ್ತು ದಿನಚರಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದೆ. ಬದಲಾಗುತ್ತಿರುವ ಋತುಗಳೊಂದಿಗೆ ದೇಹದ ಅಗತ್ಯತೆಗಳು ಬದಲಾಗುತ್ತವೆ ಹಾಗಾಗಿ ಬೇಸಿಗೆಯಲ್ಲಿ, ಹಗುರ ಮತ್ತು ನೀರಿನಂಶವಿರುವ ಆಹಾರಗಳನ್ನು ಸೇವಿಸುವುದು ಉತ್ತಮ. ಚಳಿಗಾಲದಲ್ಲಿ, ನಿಮ್ಮ ದೇಹದ ಅಗತ್ಯತೆಗಳು ಮತ್ತು ಹಸಿವಿಗೆ ಅನುಗುಣವಾಗಿ ಬೆಚ್ಚಗಿನ, ತಾಜಾ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಮಳೆಗಾಲದಲ್ಲಿ, ಆಹಾರದ ಶುಚಿತ್ವ ಮತ್ತು ತಾಜಾತನಕ್ಕೆ ವಿಶೇಷ ಗಮನ ನೀಡಬೇಕು. ಮುಖ್ಯವಾಗಿ ಸ್ಥಳೀಯ ಮತ್ತು ಕಾಲೋಚಿತ ಆಹಾರಗಳಿಗೆ ಆದ್ಯತೆ ನೀಡಬೇಕು.
ಇದನ್ನೂ ಓದಿ: ನರಕ ಚತುರ್ದಶಿಯಂದು ಅಭ್ಯಂಗ ಸ್ನಾನವನ್ನು ಏಕೆ ಮಾಡಲಾಗುತ್ತದೆ? ಅದರ ಪ್ರಯೋಜನಗಳೇನು?
ಪ್ರತಿದಿನ ದೇಹಕ್ಕೆ ಸ್ವಲ್ಪ ಸಮಯ ನೀಡಿ:
ಆಯುರ್ವೇದದಲ್ಲಿ, ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಮಾಡುವುದು ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ಇದಕ್ಕಾಗಿ ಜಿಮ್ನಲ್ಲಿ ಗಂಟೆಗಟ್ಟಲೆ ಸಮಯ ಕಳೆಯಬೇಕೆಂದಿಲ್ಲ. ಪ್ರತಿನಿತ್ಯ ವಾಕಿಂಗ್, ಯೋಗ, ಸೂರ್ಯ ನಮಸ್ಕಾರ ಅಥವಾ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಲಘು ವ್ಯಾಯಾಮ ಮಾಡುವ ಮೂಲಕವೂ ದೇಹವನ್ನು ಚಟುವಟಿಕೆಯಿಂದ ಇಡಬಹುದು. ಬಹಳ ಮುಖ್ಯವಾದ ವಿಷಯವೆಂದರೆ ದೇಹವು ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿರಲು ಬಿಡಬಾರದು. ಕೆಲಸದ ನಿಮಿತ್ತ ನಿರಂತರವಾಗಿ ಕುಳಿತುಕೊಳ್ಳುವವರು ನಡುವೆ ಸಣ್ಣ ವಿರಾಮಗಳನ್ನು ತೆಗೆದುಕೊಂಡು ಸ್ವಲ್ಪ ಅತ್ತಿಂದಿತ ನಡೆಯಬೇಕು.
ಉತ್ತಮ ನಿದ್ರೆ ಪಡೆಯುವತ್ತ ಗಮನ ನೀಡಿ:
ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ವ್ಯಾಯಾಮದಷ್ಟೇ ನಿದ್ರೆಯೂ ಅತ್ಯಗತ್ಯ. ಆಯುರ್ವೇದವು ನಿದ್ರೆಯನ್ನು ಜೀವನದ ಮೂರು ಮೂಲಭೂತ ಸ್ತಂಭಗಳಲ್ಲಿ ಒಂದು ಎಂದು ಪರಿಗಣಿಸುತ್ತದೆ. ತಡವಾಗಿ ಎದ್ದೇಳುವುದು, ತಡವಾಗಿ ಮಲಗುವುದು ಇದೆಲ್ಲ ಒಳ್ಳೆಯ ಅಭ್ಯಾಸವಲ್ಲ. ಆದ್ದರಿಂದ, ಬೇಗ ಎದ್ದು, ಬೇಗ ಮಲಗುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಮಲಗುವ ಮುನ್ನ ಮೊಬೈಲ್ ಫೋನ್ಗಳನ್ನು ನೋಡುವುದನ್ನು ತಪ್ಪಿಸಬೇಕು. ಮುಖ್ಯವಾಗಿ ಪ್ರತಿಯೊಬ್ಬರೂ 7 ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ರೆಯನ್ನು ಪಡೆಯಬೇಕು. ಒಳ್ಳೆಯ ನಿದ್ರೆ ದೇಹವು ವಿಶ್ರಾಂತಿ ಪಡೆಯಲು ಮತ್ತು ಮರುದಿನಕ್ಕೆ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




