Naraka Chaturdashi 2026: ನರಕ ಚತುರ್ದಶಿಯಂದು ಅಭ್ಯಂಗ ಸ್ನಾನವನ್ನು ಏಕೆ ಮಾಡಲಾಗುತ್ತದೆ? ಅದರ ಪ್ರಯೋಜನಗಳೇನು?
ಪ್ರತಿವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ನರಕ ಚತುರ್ದಶಿ ದಿನವನ್ನು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ನರಕ ಚತುರ್ದಶಿಯಂದು ಸೂರ್ಯೋದಯಕ್ಕೆ ಮೊದಲು ಅಭ್ಯಂಗ ಸ್ನಾನ ಮಾಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಈ ಎಣ್ಣೆ ಸ್ನಾನದ ವೈಜ್ಞಾನಿಕ ಮಹತ್ವವೇನು, ಇದರಿಂದ ಲಭಿಸುವ ಪ್ರಯೋಜನಗಳೇನು ಗೊತ್ತಾ? ಅಭ್ಯಂಗ ಸ್ನಾನದ ಪ್ರಯೋಜನಗಳ ಕುರಿತ ಪೂರ್ಣ ವಿವರ ಇಲ್ಲಿದೆ.

ಪ್ರತಿವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ನರಕ ಚತುರ್ದಶಿ (Naraka Chaturdashi) ದಿನವನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಈ ದಿನ ವಿಶೇಷ ಮಹತ್ವವನ್ನು ಹೊಂದಿದ್ದು, ಈ ಶುಭ ದಿನ ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ. ಈ ದಿನದಂದು, ದೀಪಗಳನ್ನು ಬೆಳಗಿಸುವುದು, ಪೂಜೆ ಮಾಡುವುದರ ಜೊತೆಗೆ, ಮುಂಜಾನೆ ಅಭ್ಯಂಗ ಸ್ನಾನ ಮಾಡುವ ಸಂಪ್ರದಾಯವೂ ಇದೆ. ಈ ದಿನ ಸೂರ್ಯೋದಯಕ್ಕೂ ಮೊದಲೇ ಎದ್ದು ಅಭ್ಯಂಗ ಸ್ನಾನ ಮಾಡಿದರೆ ಪವಿತ್ರ ಗಂಗಾ ಸ್ನಾನ ಮಾಡಿದಷ್ಟೇ ಪುಣ್ಯ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಅಷ್ಟೇ ಅಲ್ಲದೇ ಅಭ್ಯಂಗ ಸ್ನಾನವು ಮನುಷ್ಯನಲ್ಲಿರುವ ಅಹಂಕಾರ, ಕೋಪ, ನಕರಾತ್ಮಕ ಆಲೋಚನೆಗಳನ್ನು ಶುದ್ಧೀಕರಣ ಮಾಡಿ ಹೊಸ ಭರವಸೆಯೊಂದಿಗೆ ದೇಹ ಮತ್ತು ಮನಸ್ಸಿನ ಶುದ್ಧತೆಯನ್ನು ಸೂಚಿಸುತ್ತದೆ. ಈ ಎಣ್ಣೆ ಸ್ನಾನದ ವೈಜ್ಞಾನಿಕ ಮಹತ್ವವೇನು ಎಂಬುದನ್ನು ತಿಳಿಯೋಣ ಬನ್ನಿ.
ನರಕ ಚತುರ್ದಶಿಯಂದು ಅಭ್ಯಂಗ ಸ್ನಾನವನ್ನು ಏಕೆ ಮಾಡಲಾಗುತ್ತದೆ?
ಧಾರ್ಮಿಕ ನಂಬಿಕೆಯ ಪ್ರಕಾರ, ನರಕ ಚತುರ್ದಶಿಯಂದು ಸೂರ್ಯೋದಯಕ್ಕೆ ಮೊದಲು ಅಭ್ಯಂಗ ಸ್ನಾನ ಮಾಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ನರಕ ಚತುರ್ದಶಿ ಹಬ್ಬ ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯದ ಸಂಕೇತವಾದ್ದರಿಂದ ಈ ದಿನ ಮುಂಜಾನೇ ಬೇಗ ಎದ್ದು ಎಣ್ಣೆ ಸ್ನಾನ ಮಾಡಿದರೆ ಪವಿತ್ರ ಗಂಗಾ ಸ್ನಾನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ. ಇದಲ್ಲದೆ ಅಭ್ಯಂಗ ಸ್ನಾನ ಮನುಷ್ಯನ ಅಹಂಕಾರ, ಕೋಪ, ನಕಾರಾತ್ಮಕ ಆಲೋಚನೆಗಳನ್ನು ಶುದ್ಧೀಕರಣ ಮಾಡಿ ಹೊಸ ಭರವಸೆಯೊಂದಿಗೆ ದೇಹ ಮತ್ತು ಮನಸ್ಸಿನ ಶುದ್ಧತೆಯನ್ನು ಸೂಚಿಸುತ್ತದೆ. ಅಲ್ಲದೆ ಕಾರ್ತಿಕ ಕೃಷ್ಣ ಚತುರ್ದಶಿಯಂದು, ಲಕ್ಷ್ಮಿ ದೇವಿಯು ಎಣ್ಣೆಯಲ್ಲಿ ಮತ್ತು ಗಂಗೆ ನೀರಿನಲ್ಲಿ ವಾಸಿಸುತ್ತಾಳೆ ಎಂದು ನಂಬಲಾಗಿದೆ. ಆದ್ದರಿಂದ, ಈ ದಿನ ಎಣ್ಣೆಯಿಂದ ಸ್ನಾನ ಮಾಡುವುದು ಶುಭ ಮತ್ತು ಪುಣ್ಯವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಜನ ದೇಹ ಮತ್ತು ಮನಸ್ಸನ್ನು ಶುದ್ಧೀಕರಣಗೊಳಿಸಲು ಈ ದಿನ ಮುಂಜಾನೆ ಬೇಗ ಎದ್ದು ಶುಭ ಮುಹೂರ್ತದಲ್ಲಿ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಸಂಪೂರ್ಣ ದೇಹಕ್ಕೆ ಹಚ್ಚಿ ಬಿಸಿ ನೀರಿನಿಂದ ಸ್ನಾನ ಮಾಡುತ್ತಾರೆ.
ಎಣ್ಣೆ ಸ್ನಾನಕ್ಕೂ ನರಕಾಸುರನ ವಧೆಗೂ ಏನು ಸಂಬಂಧ?
ನರಕ ಚತುರ್ದಶಿಯ ಸಂಪ್ರದಾಯವು ಶ್ರೀಕೃಷ್ಣನ ಪೌರಾಣಿಕ ಕಥೆ ಮತ್ತು ನರಕಾಸುರನ ವಧೆಯೊಂದಿಗೆ ಸಂಬಂಧ ಹೊಂದಿದೆ. ಪೌರಾಣಿಕ ನಂಬಿಕೆ, ಕಥೆ ಪ್ರಕಾರ, ಬ್ರಹ್ಮನಿಂದ ವರ ಪಡೆದು ನನಗ್ಯಾರು ತೊಂದರೆ ಕೊಡಲು ಸಾಧ್ಯವೇ ಇಲ್ಲವೆಂದು ಮದದಿಂದ ಮೆರೆಯುತ್ತಿದ್ದ ನರಕಾಸುರ ದೇವತೆಗಳಿಗೆ ತೊಂದರೆ ಕೊಡುತ್ತಿದ್ದನು. ಅಷ್ಟೇ ಅಲ್ಲದೆ 16,100 ಗೋಪಿಕಾ ಸ್ತ್ರೀಯರನ್ನು ಬಂಧನದಲ್ಲಿಟ್ಟು ಅವರಿಗೆ ಅತೀವ ಕಿರುಕುಳ ಕೊಡುತ್ತಿದ್ದನು. ಇವನ ಅಟ್ಟಹಾಸ ಮಿತಿ ಮೀರಿದ ಸಂದರ್ಭದಲ್ಲಿ ಗೋಪಿಕಾ ಸ್ತ್ರೀಯರೆಲ್ಲರೂ ಶ್ರೀಕೃಷ್ಣನನ್ನು ಪ್ರಾರ್ಥಿಸಿದಾಗ ಹಾಗೂ ರಕ್ಷಣೆಗಾಗಿ ದೇವತೆಗಳು ಕೃಷ್ಣನ ಮೊರೆ ಹೋದಾಗ, ಶ್ರೀ ಕೃಷ್ಣನು ಮಹಿಳೆಯ ಕೈಯಲ್ಲಿ ಸಾಯುವಂತೆ ಶಾಪಗ್ರಸ್ತನಾದ ನರಕಾಸುರನನ್ನು ಸತ್ಯಭಾಮೆಯ ಮುಖಾಂತರ ಅಶ್ವಯುಜ ಮಾಸದ ಕೃಷ್ಣಪಕ್ಷದಂದು ಸಂಹಾರ ಮಾಡಿದನು. ಈ ಸಮಯದಲ್ಲಿ ತನ್ನ ಮೇಲೆ ಚೆಲ್ಲಿದ ನರಕಾ ಸುರನ ರಕ್ತವನ್ನು ತೊಡೆದು ಹಾಕಲು ಶ್ರೀಕೃಷ್ಣ ಎಣ್ಣೆ ಸ್ನಾನವನ್ನು ಮಾಡುತ್ತಾನೆ. ಇದೇ ಕಾರಣಕ್ಕೆ ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯದ ಸಂಕೇತವಾಗಿ ನರಕ ಚತುರ್ದಶಿಯ ದಿನ ಎಣ್ಣೆ ಸ್ನಾನ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿದೆ.
ಅಭ್ಯಂಗ ಸ್ನಾನ ಮಾಡುವ ಸರಿಯಾದ ವಿಧಾನ:
- ಅಭ್ಯಂಗ ಸ್ನಾನಕ್ಕೆ ಎಳ್ಳು ಎಣ್ಣೆ, ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಬಳಸಬಹುದು.
- ದೇಹಕ್ಕೆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಹಚ್ಚಿಕೊಳ್ಳಿ. ಕೈಗಳು, ಕಾಲುಗಳು, ಕುತ್ತಿಗೆ, ಭುಜಗಳು ಮತ್ತು ದೇಹದ ಇತರ ಭಾಗಗಳಿಗೆ ಎಣ್ಣೆಯನ್ನು ನಿಧಾನವಾಗಿ ಹಚ್ಚಿ. ಚೆನ್ನಾಗಿ ಮಸಾಜ್ ಮಾಡಿ.
- ಎಣ್ಣೆ ಹಚ್ಚಿದ ನಂತರ, ಚರ್ಮಕ್ಕೆ ಎಣ್ಣೆಯನ್ನು ಹೀರಿಕೊಳ್ಳಲು ಸಮಯ ಸಿಗುವಂತೆ ಸುಮಾರು 10 ರಿಂದ 15 ನಿಮಿಷಗಳ ಕಾಲ ಕಾಯಿರಿ.
- ಇದಾದ ನಂತರ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಎಣ್ಣೆಯನ್ನು ತೆಗೆದುಹಾಕಲು ನೀವು ಸೌಮ್ಯವಾದ ಸೋಪ್ ಅಥವಾ ಸ್ಕ್ರಬ್ ಅನ್ನು ಬಳಸಬಹುದು.
ಇದನ್ನೂ ಓದಿ: ಪಟಾಕಿ ಸಿಡಿಸುವಾಗ ಈ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಿ
ಅಭ್ಯಂಗ ಸ್ನಾನದ ಪ್ರಯೋಜನಗಳು:
ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ:
ಎಣ್ಣೆ ಮಸಾಜ್ ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ. ಚರ್ಮವನ್ನು ಮೃದುವಾಗಿರಿಸುತ್ತದೆ ಎಣ್ಣೆ ಮಸಾಜ್ ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಮತ್ತು ಶುಷ್ಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಚರ್ಮವು ಮೃದುವಾಗಿರುತ್ತದೆ.
ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ:
ಅಭ್ಯಂಗ ಸ್ನಾನ ಮಾಡುವುದು ಕೂದಲಿಗೂ ಪ್ರಯೋಜನಕಾರಿ. ಎಣ್ಣೆ ಹಚ್ಚಿ ಮಸಾಜ್ ಮಾಡುವ ಕಾರಣ ಇದು ನೆತ್ತಿಯ ಆರೋಗ್ಯವನ್ನು ಸುಧಾರಿಸಲು, ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡಲು ಸಹಕಾರಿ. ಜೊತೆಗೆ ಇದು ತಲೆಹೊಟ್ಟು, ಕೂದಲಿನ ಶುಷ್ಕತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
ಒತ್ತಡ ಕಡಿಮೆ ಮಾಡಲು ಸಹಕಾರಿ:
ಎಣ್ಣೆ ಮಸಾಜ್ ದೇಹವನ್ನು ವಿಶ್ರಾಂತಿ ಮಾಡುತ್ತದೆ, ಇದು ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ:
ಹಿತವಾದ ಎಣ್ಣೆ ಮಸಾಜ್ ದೇಹವು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ ಮತ್ತು ಇದು ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ:
ಚಳಿಗಾಲದ ಆರಂಭದಲ್ಲಿ ಚರ್ಮವು ಒಣಗುತ್ತದೆ ಮತ್ತು ಎಣ್ಣೆ ಮಸಾಜ್ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ದೇಹವು ವಿಶ್ರಾಂತಿ ಪಡೆಯುತ್ತದೆ:
ಹಗುರವಾದ ಎಣ್ಣೆ ಮಸಾಜ್ ದೇಹವನ್ನು ವಿಶ್ರಾಂತಿ ನೀಡುತ್ತದೆ. ಇದು ಇಡೀ ದಿನದ ಆಯಾಸ ಮತ್ತು ಒತ್ತಡವನ್ನು ಕಡಿಮೆ ಮಾಡಿ ವಿಶ್ರಾಂತಿ ಪಡೆಯಲು ಸಹಕಾರಿಯಾಗಿದೆ.
ಮೂಳೆಗಳಿಗೆ ಪ್ರಯೋಜನಕಾರಿ:
ಎಣ್ಣೆ ಸ್ನಾನ ಮೂಳೆಗಳ ಆರೋಗ್ಯಕ್ಕೆ ಪ್ರಯೋಜನಕಾರಿ. ಅವು ಉರಿಯೂತ ನಿವಾರಕವಾಗಿದ್ದು, ಕೀಲುಗಳಿಗೆ ಪರಿಹಾರ ಒದಗಿಸುತ್ತವೆ. ಅಲ್ಲದೆ ಎಣ್ಣೆ ಮಸಾಜ್ ರಕ್ತದ ಹರಿವನ್ನು ಸುಧಾರಿಸಲು ಸಹಕಾರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:15 pm, Sat, 7 November 26




