ಒತ್ತಡದ ಮುಕ್ತ ಬದುಕು ನಿಮ್ಮದಾಗಲು ದೈನಂದಿನ ಜೀವನದಲ್ಲಿ ಈ ಸರಳ ಸೂತ್ರಗಳನ್ನು ಪಾಲಿಸಿ
ಕೆಲಸ, ಕುಟುಂಬದ ಜವಾಬ್ದಾರಿ ಇವೆಲ್ಲದರ ಜಂಜಾಟದಿಂದಾಗಿ ಇಂದು ಬಹುತೇಕ ಮಂದಿ ಒತ್ತಡದ ಕೂಪಕ್ಕೆ ಬಿದ್ದಿದ್ದಾರೆ. ಅತಿಯಾದ ಒತ್ತಡವು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತದೆ. ಆರೋಗ್ಯವಂತರಾಗಿ ಜೀವನ ನಡೆಸಲು ಒತ್ತಡದಿಂದ ಹೊರ ಬರುವುದು ತುಂಬಾನೇ ಮುಖ್ಯ. ನಿಮಗೂ ಸಹ ಇದೇ ರೀತಿ ಅತಿಯಾದ ಒತ್ತಡದ ಕಾಡುತ್ತಿದ್ದರೆ, ಅದರಿಂದ ಹೊರಬರಲು ಈ ಕೆಲವೊಂದು ಸರಳ ಕ್ರಮಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿ.

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒತ್ತಡವನ್ನು (stress) ಅನುಭವಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇದೊಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಕೆಲಸದ ಬ್ಯುಸಿ, ಕುಟುಂಬ ನಿರ್ವಹಣೆ, ಬಿಡುವಿಲ್ಲದ ಜೀವನಶೈಲಿ ಇವೆಲ್ಲದ ಕಾರಣದಿಂದ ಅನೇಕರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಒತ್ತಡ ಮಾನಸಿಕ ಯೋಗಕ್ಷೇಮವನ್ನು ಹಾಳು ಮಾಡುವುದಲ್ಲದೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಸಹ ಉಂಟು ಮಾಡುತ್ತದೆ. ಹಾಗಾಗಿ ಒತ್ತಡವನ್ನು ನಿರ್ವಹಿಸುವುದು ತುಂಬಾನೇ ಮುಖ್ಯ. ನೀವು ಸಹ ಆತಂಕ ಮತ್ತು ಒತ್ತಡದಿಂದ ಬಳಲುತ್ತಿದ್ದೀರಾ? ಹಾಗಿದ್ರೆ ದೈನಂದಿನ ಜೀವನದಲ್ಲಿ ಈ ಕೆಲವೊಂದು ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಒತ್ತಡದಿಂದ ಮುಕ್ತರಾಗಿ, ನೆಮ್ಮದಿಯ ಜೀವನವನ್ನು ನಡೆಸಿ.
ಸಾಕಷ್ಟು ನಿದ್ರೆ ಪಡೆಯಿರಿ:
ನಿದ್ರೆಯ ಕೊರತೆಯು ಒತ್ತಡ ಮತ್ತು ಆತಂಕವನ್ನು ಹೆಚ್ಚಿಸುತ್ತದೆ. ಒತ್ತಡದಿಂದ ಮುಕ್ತಿ ಪಡೆಯಲು ಸಾಕಷ್ಟು ನಿದ್ರೆ ಪಡೆಯುವುದು ಬಹಳ ಮುಖ್ಯ. ಒಬ್ಬ ವ್ಯಕ್ತಿ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಉತ್ತಮ ನಿದ್ರೆ ಪಡೆಯದಿದ್ದರೆ, ದಿನವಿಡೀ ದಣಿದ ಅನುಭವವಾಗುತ್ತದೆ. ಇದರಿಂದ ಕೆಲಸದ ಕಡೆಗೂ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಇದು ಒತ್ತಡವನ್ನು ಸಹ ಹೆಚ್ಚಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಉತ್ತಮ ನಿದ್ರೆ ಪಡೆಯುವುದು ಅತೀ ಅವಶ್ಯಕ.
ಪ್ರತಿದಿನ ವ್ಯಾಯಾಮ ಮಾಡಿ:
ದೈಹಿಕ ಚಟುವಟಿಕೆ ದೇಹಕ್ಕೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ವಾಕಿಂಗ್, ಜಾಗಿಂಗ್ ಇತ್ಯಾದಿ ವ್ಯಾಯಾಮಗಳು ದೇಹದಲ್ಲಿ ಎಂಡಾರ್ಫಿನ್ ಮತ್ತು ಡೊಪಮೈನ್‌ಗಳಂತಹ ಸಂತೋಷದ ಹಾರ್ಮೋನುಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ಮನಸ್ಥಿತಿಯನ್ನು ಸುಧಾರಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ ನೀವು ನಿಮ್ಮಿಷ್ಟದ ಹಾಡಿಗೆ ಡ್ಯಾನ್ಸ್ ಕೂಡ ಮಾಡಬಹುದು. ಈ ವಿಧಾನ ಸಹ ಸ್ಟ್ರೆಸ್ ಕಡಿಮೆ ಮಾಡಲು ತುಂಬಾನೇ ಸಹಕಾರಿ.
ಆರೋಗ್ಯಕರ ಆಹಾರವನ್ನು ಸೇವಿಸಿ:
ಜಂಕ್ ಫುಡ್ ಮತ್ತು ಹೆಚ್ಚಿನ ಸಕ್ಕರೆ ಅಂಶವಿರುವ ಆಹಾರವು ಮನಸ್ಥಿತಿಯಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು. ಇಂತಹ ಆಹಾರಗಳ ಬದಲು, ಹಸಿರು ತರಕಾರಿಗಳು, ಹಣ್ಣುಗಳು, ಬೀಜಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು (ಮೀನು, ಅಗಸೆಬೀಜ) ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ನಿಮ್ಮ ಕೆಫೀನ್ ಸೇವನೆಯನ್ನು ಕಡಿಮೆ ಮಾಡಿ ಮತ್ತು ಮದ್ಯಪಾನವನ್ನು ತಪ್ಪಿಸಿ.
ಒತ್ತಡ ಕಡಿಮೆ ಮಾಡಲು ನಿತ್ಯ ಧ್ಯಾನ ಮಾಡಿ:
ಧ್ಯಾನವು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಉತ್ತಮ ಮಾರ್ಗವಾಗಿದೆ. ಪ್ರತಿದಿನ 10-15 ನಿಮಿಷಗಳ ಕಾಲ ಧ್ಯಾನ ಮಾಡಿ. ಧ್ಯಾನ ಮಾಡುವುದರಿಂದ ಮಾಡುವುದರಿಂದ ನಕಾರಾತ್ಮಕ ಆಲೋಚನೆಗಳು ನಿವಾರಣೆಯಾಗುತ್ತವೆ ಮತ್ತು ಮನಸ್ಸು ಶಾಂತವಾಗುತ್ತದೆ.
ನಿಮ್ಮವರೊಂದಿಗೆ ಸಮಯ ಕಳೆಯಿರಿ:
ಒಂಟಿತನವು ಒತ್ತಡ ಮತ್ತು ಆತಂಕವನ್ನು ಹೆಚ್ಚಿಸುತ್ತದೆ. ಹಾಗಾಗಿ ಒತ್ತಡದ ಸಮಯದಲ್ಲಿ ಎಲ್ಲರಿಂದ ದೂರವಿದ್ದು, ಒಬ್ಬಂಟಿಯಾಗಿ ಕುಳಿತು ಸಮಯ ಕಳೆಯುವ ಬದಲು ನಿಮ್ಮವರೊಂದಿಗಿದ್ದು, ಅವರೊಂದಿಗೆ ಒಳ್ಳೆಯ ಸಮಯ ಕಳೆಯಿರಿ. ಉತ್ತಮ ಸಾಮಾಜಿಕ ಸಂವಹನವು ನಿಮಗೆ ಕಷ್ಟದ ಸಮಯ ಮಾತ್ರವಲ್ಲ, ಒತ್ತಡವನ್ನು ನಿರ್ವಹಿಸಲು ಸಹ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಜೀವನದಲ್ಲಿ ನೆಮ್ಮದಿ ಬೇಕೆಂದ್ರೆ ಈ ರೀತಿಯ ಜನರಿಂದ ಆದಷ್ಟು ದೂರವಿರಿ
ನಿಮ್ಮ ಕಾರ್ಯಗಳಿಗೆ ಆದ್ಯತೆ ನೀಡಿ:
ಸೋಮಾರಿತನವನ್ನು ಬಿಟ್ಟು ಮಾಡಬೇಕಾದ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಿ. ಸೋಮಾರಿತನದಿಂದ ಕೆಲಸವನ್ನು ಮುಂದೂಡಿದರೆ, ಆ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲಾಗದೆ ಒತ್ತಡ ಸಾಕಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಯಾವ ಕೆಲಸ ಮೊದಲು ಮಾಡಬೇಕು ಮತ್ತು ಯಾವುದನ್ನು ನಂತರ ಮಾಡಬೇಕು ಎಂಬುದನ್ನು ನಿರ್ಧರಿಸಿ. ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಿ.
ಸಕಾರಾತ್ಮಕ ಅಂಶಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ:
ನಿಮ್ಮ ನೆಚ್ಚಿನ ಹವ್ಯಾಸಗಳಾದ ಚಿತ್ರಕಲೆ, ತೋಟಗಾರಿಕೆ, ಸಂಗೀತ ಕೇಳುವುದು ಅಥವಾ ಓದುವುದಕ್ಕೆ ಸಮಯ ಮೀಸಲಿಡಿ. ಇದು ದಿನದ ನಿಮ್ಮ ಮಾನಸಿಕ ಆಯಾಸವನ್ನು ನಿವಾರಿಸುತ್ತದೆ ಮತ್ತು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




