Chanakya Niti: ಜೀವನದಲ್ಲಿ ನೆಮ್ಮದಿ ಬೇಕೆಂದ್ರೆ ಈ ರೀತಿಯ ಜನರಿಂದ ಆದಷ್ಟು ದೂರವಿರಿ
ಕೆಲಸ, ಕುಟುಂಬದ ಜವಾಬ್ದಾರಿ ಮಾತ್ರವಲ್ಲ, ಕೆಲವೊಮ್ಮೆ ನಮ್ಮ ಸಹವಾಸದಲ್ಲಿರುವ ಜನರ ಕಾರಣದಿಂದಲೂ ನೆಮ್ಮದಿ ಕಳೆದುಹೋಗುತ್ತದೆ. ಹೌದು ಕೆಲವೊಂದು ನಕಾರಾತ್ಮಕ ಜನರಿಂದಾಗಿ ಜೀವನದಲ್ಲಿನ ಶಾಂತಿ, ನೆಮ್ಮದಿಯೇ ಮಾಯವಾಗುತ್ತದೆ. ಅಂತಹ ಜನರಿಂದ ಸಾಧ್ಯವಾದಷ್ಟು ದೂರವಿದ್ದರೆ ಒಳ್ಳೆಯದು ಎಂದು ಆಚಾರ್ಯ ಚಾಣಕ್ಯರು ಸಲಹೆಯನ್ನು ನೀಡಿದ್ದಾರೆ. ಹಾಗಿದ್ರೆ ನೆಮ್ಮದಿಯ, ಸಂತೋಷದ ಜೀವನ ನಡೆಸಲು ಎಂತಹ ಜನರಿಂದ ನಾವು ದೂರವಿರಬೇಕು ಎಂಬುದನ್ನು ನೋಡೋಣ ಬನ್ನಿ.

ಸಹವಾಸದಿಂದ ಸನ್ಯಾಸಿ ಕೆಟ್ಟ ಎಂಬ ಮಾತಿನಂತೆ ದುರ್ಜನರ ಸಹವಾಸದಿಂದ ನಮ್ಮ ಸಂಪೂರ್ಣ ಜೀವನವೇ (life) ಹಾಳಾಗುತ್ತದೆ. ಅದೇ ರೀತಿ ಒಂದಷ್ಟು ನಕಾರಾತ್ಮಕ ಜನರ ಸಹವಾಸದಿಂದ ನೆಮ್ಮದಿಯೇ ಕಳೆದುಹೋಗುತ್ತದೆ. ಹೌದು ನಮ್ಮ ಸುತ್ತಮುತ್ತಲಿರುವ ಜನರು ಸಹ ನಮ್ಮ ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತಾರೆ. ಹಾಗಾಗಿ ನಕಾರಾತ್ಮಕ ಜನರ ಸಹವಾಸದಿಂದ ಆದಷ್ಟು ದೂರವಿರಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅವರ ಪ್ರಕಾರ, ನಕಾರಾತ್ಮಕ ಚಿಂತನೆಯ ಜನರು ನಮ್ಮ ಜೀವನಕ್ಕೂ ನಕಾರಾತ್ಮಕತೆಯನ್ನು ತರುತ್ತಾರೆ. ಇದರಿಂದಾಗಿ ಜೀವನದ ಶಾಂತಿಯೇ ಹಾಳಾಗಿಬಿಡುತ್ತಾರೆ. ನಿಮಗೂ ಜೀವನದಲ್ಲಿ ನೆಮ್ಮದಿ ಬೇಕೆಂದ್ರೆ ಸಾಧ್ಯವಾದಷ್ಟು ಈ ಕೆಲವೊಂದಿಷ್ಟು ಜನರ ಸಹವಾಸದಿಂದ ದೂರವಿರಿ.
ಯಾವಾಗಲೂ ಅಳುವ ಮತ್ತು ದೂರು ನೀಡುವ ಜನರಿಂದ ದೂರವಿರಿ:
ಯಾವಾಗಲೂ ಅಳುತ್ತಲೇ ಇರುವ ಮತ್ತು ಪ್ರತಿಯೊಂದು ವಿಚಾರಗಳ ಬಗ್ಗೆ ನಿಮ್ಮ ಬಳಿ ದೂರು ನೀಡುವ ಜನರಿಂದ ನೀವು ದೂರವಿದ್ದರೆಯೇ ಒಳ್ಳೆಯದು. ಆಚಾರ್ಯ ಚಾಣಕ್ಯರ ಪ್ರಕಾರ, ಅಂತಹ ನಕಾರಾತ್ಮಕ ಜನರ ಸುತ್ತ ನೀವಿದ್ದರೆ, ಸ್ವತಃ ನಿಮ್ಮ ಸಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ನೀವು ಹಗಲಿರುಳು ಅವರ ಸಮಸ್ಯೆಗಳು ಮತ್ತು ದೂರುಗಳನ್ನು ಕೇಳಿದಾಗ, ನಿಮ್ಮ ಸ್ವಂತ ಮನಸ್ಸು ಚಂಚಲವಾಗುತ್ತದೆ. ಜೊತೆಗೆ ಅವರ ಸಾಲು ಸಾಲು ದೂರುಗಳಿಂದ ಮಾನಸಿಕ ಒತ್ತಡ ಜಾಸ್ತಿಯಾಗಿ, ಜೀವನದಲ್ಲಿನ ನೆಮ್ಮದಿಯೇ ಕಳೆದು ಹೋಗುತ್ತದೆ. ಇಂತಹ ದುಃಖಿತ ಹಾಗೂ ಚಾಡಿಕೋರ ಜನರಿಂದ ದೂರವಿದ್ದರೆ ಮಾತ್ರ ನೀವು ನೆಮ್ಮದಿಯ ಜೀವನವನ್ನು ನಡೆಸಬಹುದು.
ಅಸೂಯೆ ಪಡುವ ಜನರಿಂದ ದೂರವಿದ್ದಷ್ಟು ಒಳ್ಳೆಯದು:
ಚಾಣಕ್ಯ ನೀತಿಯ ಪ್ರಕಾರ, ನಿಮ್ಮ ಯಶಸ್ಸು, ಸಂತೋಷ ಮತ್ತು ನಿಮಗೇನಾದ್ರೂ ಒಳ್ಳೆಯದಾದ್ರೆ ಅದರ ಬಗ್ಗೆ ಅಸೂಯೆ ಪಡುವ ಒಂದಷ್ಟು ಜನರಿರುತ್ತಾರೆ. ಚಾಣಕ್ಯರ ಪ್ರಕಾರ, ಅಂತಹ ಜನರು ನಿಮ್ಮ ಮುಂದೆ ನಿಮ್ಮೊಂದಿಗೆ ಸಿಹಿಯಾಗಿ ಮಾತನಾಡಿದರೂ, ಬೆನ್ನ ಹಿಂದೆ ನಿಮ್ಮ ಬಗ್ಗೆ ಸಿಕ್ಕಾಪಟ್ಟೆ ಅಸೂಯೆಯ ಭಾವನೆಯನ್ನು ಬೆಳೆಸಿಕೊಂಡಿರುತ್ತಾರೆ. ತಮ್ಮ ಅಸೂಯೆಯ ಕಾರಣದಿಂದಾಗಿ ನಿಮಗೆ ತೊಂದರೆಯನ್ನು ಸಹ ಉಂಟು ಮಾಡಬಹುದು. ಇದರಿಂದ ನಿಮ್ಮ ಜೀವನದ ನೆಮ್ಮದಿಯೇ ಹಾಳಾಗುತ್ತದೆ. ಹಾಗಾಗಿ ಅಸೂಯೆ ಪಡುವ ಜನರಿಂದ ದೂರವಿರಿ.
ಸುಳ್ಳು ಮಾತನಾಡುವ ದೂರವಿರಬೇಕು:
ಸಣ್ಣ ಸಣ್ಣ ವಿಚಾರಗಳಿಗೂ ಸುಳ್ಳು ಹೇಲುವ ಜನರು ಕೊನೆಯಲ್ಲಿ ನಮಗೆ ದ್ರೋಹ ಬಗೆಯುವ ಸಾಧ್ಯತೆ ಇರುತ್ತದೆ. ಸುಳ್ಳು ಮಾತನಾಡುವ ಜನರು ಏನೇನೋ ಸುಳ್ಳುಗಳನ್ನು ಹೇಳಿ ನಮ್ಮ ಜೀವನವನ್ನು ಹಾಳು ಮಾಡುವ ಸಾಧ್ಯತೆಯೂ ಇರುತ್ತವೆ. ಇಂತಹ ಜನರು ಹೇಳುವ ಒಂದು ಸಣ್ಣ ಸುಳ್ಳು ಸಹ ಜೀವನದ ನೆಮ್ಮದಿಯನ್ನು ಹಾಳು ಮಾಡಿಬಿಡುತ್ತದೆ. ಆದ್ದರಿಂದ ಸುಳ್ಳು ಮಾತುಗಳನ್ನಾಡುವ ಜನರ ಸಹವಾಸದಲ್ಲಿರುವುದು ಒಳ್ಳೆಯದಲ್ಲ ಎಂದು ಆಚಾರ್ಯ ಚಾಣಕ್ಯರು ಸಲಹೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ಚಾಣಕ್ಯರ ಪ್ರಕಾರ ಹುಡುಗಿಯರಿಗೆ ಈ ರೀತಿಯ ಹುಡುಗ್ರು ಇಷ್ಟವಾಗೋದಂತೆ
ಮೂರ್ಖ ಮತ್ತು ಹಠಮಾರಿ ಜನರ ಸಹವಾಸ ಒಳ್ಳೆಯದಲ್ಲ:
ಚಾಣಕ್ಯ ನೀತಿಯ ಪ್ರಕಾರ, ಮೂರ್ಖ ವ್ಯಕ್ತಿಗೆ ಬುದ್ಧಿವಂತಿಕೆ ಮತ್ತು ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸ ಗೊತ್ತಿರುವುದಿಲ್ಲ. ಅವರು ತಮ್ಮ ಮೂರ್ಖತನದಿಂದ ಅವರ ಜೊತೆಯಲ್ಲಿರುವವರ ನೆಮ್ಮದಿಯನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ. ಅಲ್ಲದೆ ಈ ಹಠಮಾರಿ ಸ್ವಭಾವದ ಜನರು ಸಹ ತಮ್ಮ ಜೊತೆಯಲ್ಲಿರುವವರ ನೆಮ್ಮದಿಯನ್ನು ಹಾಳು ಮಾಡುತ್ತಾರೆ. ಹೌದು ತಮ್ಮ ಹಠಮಾರಿ ಸ್ವಭಾವದಿಂದ ಇತರರ ಮಾನಸಿಕ ಶಾಂತಿಯನ್ನು ಹಾಳು ಮಾಡುತ್ತಾರೆ. ನಿಮ್ಮ ಸುತ್ತಮುತ್ತಲೂ ಈ ಸ್ವಭಾವದ ಜನರಿದ್ದರೆ, ಅವರಿಂದ ದೂರವಿರುವುದೇ ಒಳ್ಳೆಯದೆಂದು ಚಾಣಕ್ಯರು ಸಲಹೆಯನ್ನು ನೀಡಿದ್ದಾರೆ.
ಸಣ್ಣ ವಿಷಯಕ್ಕೂ ಕೋಪಗೊಳ್ಳುವ ಜನರಿಂದ ದೂರವಿರಿ:
ಆಚಾರ್ಯ ಚಾಣಕ್ಯರ ಪ್ರಕಾರ, ಕ್ಷುಲ್ಲಕ ವಿಷಯಗಳಿಗೆ ಕೋಪಗೊಳ್ಳುವ ವ್ಯಕ್ತಿಯು ತನಗೆ ಮಾತ್ರವಲ್ಲದೆ ತನ್ನವರಿಗೂ ಹಾನಿ ಮಾಡುತ್ತಾನೆ. ತನ್ನ ಕಡು ಕೋಪದಿಂದ ಚುಚ್ಚು ಮಾತುಗಳನ್ನಾಡಿ ಇತರರಿಗೆ ನೋವನ್ನು ಉಂಟು ಮಾಡುತ್ತಾರೆ. ಇಂತಹ ಕೋಪಿಷ್ಟ ಜನರ ಜೊತೆಯಲ್ಲಿದ್ದರೆ ನಮ್ಮ ನೆಮ್ಮದಿಯೂ ಸಂಪೂರ್ಣವಾಗಿ ಹಾಳಾಗಿಬಿಡುತ್ತದೆ. ಹಾಗಾಗಿ ಇಂತಹ ಜನರ ಸಹವಾಸದಿಂದ ಸಾಧ್ಯವಾದಷ್ಟು ದೂರವಿರಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:54 pm, Wed, 7 October 26




