ನಾವು ಆರೋಗ್ಯವಾಗಿರಲು ಆಹಾರ ಮತ್ತು ನಮ್ಮ ಜೀವನಶೈಲಿಯ ಜೊತೆಗೆ ಶುಚಿತ್ವವೂ ಬಹಳ ಮುಖ್ಯವಾಗಿರುತ್ತದೆ. ರೋಗಾಣುಗಳು ನಮ್ಮಿಂದ ದೂರವಿರಬೇಕು ಎಂದರೆ ಆಗಾಗ ಕೈ ತೊಳೆಯಬೇಕು. ಬಹುಪಾಲ ರೋಗ ಬರುವುದು ಬರುವುದು ನಮ್ಮ ಕೈಗಳ ಮೂಲಕ. ಹಾಗಾಗಿ ಅದನ್ನು ಶುಚಿಯಾಗಿ ಇಟ್ಟುಕೊಂಡರೆ ಪದೇ ಪದೇ ಕಾಡುವ ಆರೋಗ್ಯ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು. ಹಾಗಾಗಿ ನಾವು ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿರಲು ಆಗಾಗ ಕೈ ತೊಳೆಯುವು ಬಹಳ ಮುಖ್ಯ ಎಂಬುದನ್ನು ನೆನಪಿಸುವ ಸಲುವಾಗಿ ಜಾಗತಿಕವಾಗಿ ಅಕ್ಟೋಬರ್ 15 ರಂದು ಕೈ ತೊಳೆಯುವ ದಿನವನ್ನು ಆಚರಿಸಲಾಗುತ್ತದೆ.
ಕೈ ತೊಳೆಯುವುದು ಅಷ್ಟು ಮುಖ್ಯವೇ? ಎಂಬ ಪ್ರಶ್ನೆ ಬರಬಹುದು. ಹೌದು. ನಾವು ಆರೋಗ್ಯವಾಗಿರಲು ಕೈ ತೊಳೆಯುವುದು ಬಹಳ ಮುಖ್ಯ. ಬರಿ ಕೈತೊಳೆದರೆ ಸಾಕಾಗುವುದಿಲ್ಲ, ಕೈಗಳನ್ನು ಸರಿಯಾಗಿ ತೊಳೆಯುವುದು ಕೂಡ ಬಹಳ ಮುಖ್ಯವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸಾಬೂನಿನಿಂದ ಕೈ ತೊಳೆಯುವಾಗ ಕನಿಷ್ಠ 40 ರಿಂದ 60 ಸೆಕೆಂಡುಗಳ ಕಾಲ ಕೈಗಳನ್ನು ಸಾಬೂನಿನಿಂದ ಉಜ್ಜುವುದು ಅವಶ್ಯಕ. ಅದೇ ರೀತಿ ನೀವು ಸ್ಯಾನಿಟೈಸರ್ನ್ನು ಬಳಸಿದ ಮೇಲೆ ನಿಮ್ಮ ಕೈಗಳನ್ನು ಕನಿಷ್ಠ 20 ರಿಂದ 30 ಸೆಕೆಂಡುಗಳ ಕಾಲ ಉಜ್ಜಿಕೊಳ್ಳಬೇಕು. ಸಾಬೂನು ಮತ್ತು ನೀರಿನಿಂದ ಕೈಗಳನ್ನು ತೊಳೆದ ಬಳಿಕ ನಿಮ್ಮ ಕೈಗಳನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿಕೊಂಡರೆ ಕಾಯಿಲೆ ಹರಡುವುದನ್ನು ತಡೆಯಬಹುದಾಗಿದೆ.
ಜಾಗತಿಕ ಕೈ ತೊಳೆಯುವ ದಿನದ ಅಭಿಯಾನವನ್ನು ಗ್ಲೋಬಲ್ ಹ್ಯಾಂಡ್ ವಾಶಿಂಗ್ ಪಾರ್ಟ್ನರ್ಶಿಪ್ ಎಂಬ ಸಂಸ್ಥೆಯು ಮೊದಲ ಬಾರಿಗೆ 2008 ರಲ್ಲಿ ಪ್ರಾರಂಭಿಸಿತು. ಸ್ವೀಡನ್ನ ಸ್ಟಾಕ್ ಹೋಮ್ನಲ್ಲಿ ಮೊದಲ ಜಾಗತಿಕ ಕೈ ತೊಳೆಯುವ ದಿನವನ್ನು ಆಚರಿಸಲಾಯಿತು. ಜೊತೆಗೆ, ಮೊದಲ ಜಾಗತಿಕ ಕೈ ತೊಳೆಯುವ ದಿನದಂದು 73 ದೇಶಗಳ 120 ಮಿಲಿಯನ್ ಮಕ್ಕಳು ಸಾಬೂನು ಮತ್ತು ನೀರಿನಿಂದ ತಮ್ಮ ಕೈಗಳನ್ನು ತೊಳೆಯುವ ಮೂಲಕ ಈ ಆಚರಣೆಗೆ ಅದ್ದೂರಿ ಚಾಲನೆಯನ್ನು ನೀಡಿದರು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಅಕ್ಟೋಬರ್ 15 ರಂದು ಆಚರಿಸುತ್ತಾ ಬರಲಾಗುತ್ತಿದೆ.
ಈ ದಿನದ ಮುಖ್ಯ ಉದ್ದೇಶವೆಂದರೆ ಜನರಿಗೆ ತಮ್ಮ ಕೈಗಳ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದು. ಜಾಗತಿಕ ಕೈ ತೊಳೆಯುವ ದಿನ ಪ್ರತಿಯೊಬ್ಬರೂ ಸ್ವಚ್ಛವಾಗಿ ಕೈ ತೊಳೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಉತ್ತೇಜಿಸುತ್ತದೆ. ಅಲ್ಲದೆ ಸರಿಯಾಗಿ ಕೈ ತೊಳೆಯುವ ಅಭ್ಯಾಸವು ಅತಿಸಾರದಂತಹ ಕಾಯಿಲೆಯನ್ನು 24 ರಿಂದ 40% ರಷ್ಟು, ಮಕ್ಕಳಲ್ಲಿ ಜಠರಗರುಳಿನ ಕಾಯಿಲೆಯನ್ನು 29 ರಿಂದ 57% ರಷ್ಟು ಮತ್ತು ಶೀತ, ಜ್ವರ ಮುಂತಾದ ವೈರಲ್ ಕಾಯಿಲೆಗಳನ್ನು 16 ರಿಂದ 20% ರಷ್ಟು ಕಡಿಮೆ ಮಾಡುತ್ತದೆ ಎಂದು ವರದಿಗಳು ಹೇಳಿವೆ. ಅದಕ್ಕಾಗಿಯೇ ನೀವು ಶೌಚಾಲಯಕ್ಕೆ ಹೋಗಿ ಬಂದ ನಂತರ, ಅಡುಗೆ ಮಾಡುವ ಮೊದಲು, ಊಟಕ್ಕೆ ಮೊದಲು ಮತ್ತು ಸೀನು ಅಥವಾ ಕೆಮ್ಮಿದ ನಂತರ ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳುವುದು ಬಹಳ ಅವಶ್ಯಕ.
ಇದನ್ನೂ ಓದಿ; ವಿಪತ್ತು ಸಂಭವಿಸುವ ಮುನ್ನ ಹಾಗೂ ನಂತರದಲ್ಲಿ ಈ ಕೆಲಸ ಮಾಡಿ ಜೀವ ಉಳಿಸಿ
ಈ ಜಾಗತಿಕ ಕೈ ತೊಳೆಯುವ ದಿನದಂದು, ನಮ್ಮ ಕೈಗಳನ್ನು ಸರಿಯಾಗಿ ತೊಳೆಯುವುದು ಹೇಗೆ ಎಂಬುದನ್ನು ನಾವು ಕಲಿಯುವುದು ಮತ್ತು ವಿಶೇಷವಾಗಿ ನಮ್ಮ ಮಕ್ಕಳಿಗೆ ಕಲಿಸುವುದು ಮುಖ್ಯವಾಗಿದೆ. ಕೊಳಕು ಕೈಗಳು ಅನೇಕ ರೋಗಕಾರಕ ವೈರಸ್‌ಗಳಿಗೆ ಆಹ್ವಾನ ನೀಡಬಹುದು. ಹಾಗಾಗಿ, ಯಾವಾಗ ಮತ್ತು ಹೇಗೆ ಕೈ ತೊಳೆಯಬೇಕು ಎಂಬುದನ್ನು ತಿಳಿದುಕೊಳ್ಳುವುದು ಕೂಡ ಅತ್ಯಗತ್ಯ. ಈ ವಿಶೇಷ ದಿನವನ್ನು ಸರಿಯಾಗಿ ಬಳಸಿಕೊಂಡು ನಿಮ್ಮ ಮನೆಯಲ್ಲಿರುವ ಮಕ್ಕಳಿಗೆ ಯಾವ ರೀತಿ ಕೈ ತೊಳೆಯಬೇಕು ಎಂಬುದನ್ನು ಕಲಿಸಿಕೊಡಿ. ನಿಮ್ಮ ಕುಟುಂಬ ಆರೋಗ್ಯವಾಗಿರುವಂತೆ ನೋಡಿಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ