ಕರ್ನಾಟಕ ಸಾಂಪ್ರದಾಯಿಕ ತಿನಿಸುಗಳಲ್ಲಿ ಒಂದಾಗಿರುವ ಹಾಲುಬಾಯಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಸಿಹಿ ತಿನ್ನಬೇಕೇನಿಸಿದರೆ ಮನೆಯಲ್ಲಿ ಸುಲಭವಾಗಿ ಅಕ್ಕಿ ಹಾಲುಬಾಯಿ ಮಾಡಿ ಸವಿಯಬಹುದು. ಮಲೆನಾಡು ಮತ್ತು ಕರಾವಳಿಯ ಭಾಗಗಳಲ್ಲಿ ಇದನ್ನು ಅಕ್ಕಿ ಮಣ್ಣಿ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಮನೆಯಲ್ಲಿ ಈ ಕೆಲವೇ ಕೆಲವು ಸಾಮಗ್ರಿಗಳಿದ್ದರೆ ಅಕ್ಕಿ ಹಾಲುಬಾಯಿ ಮಾಡಲು ಹೆಚ್ಚೇನು ಸಮಯ ಬೇಕಾಗಿಲ್ಲ, ಈ ಸಿಂಪಲ್ ರೆಸಿಪಿ ಮಾಡುವ ವಿಧಾನ ಇಲ್ಲಿದೆ.
* ಅಕ್ಕಿ- 1 ಕಪ್
* ತುಪ್ಪ- 3 ಚಮಚ
* ಬೆಲ್ಲ- ಒಂದು ಕಪ್
* ತೆಂಗಿನ ಹಾಲು
* ಏಲಕ್ಕಿ ಪುಡಿ
* ರುಚಿಗೆ ತಕ್ಕಷ್ಟು ಉಪ್ಪು
* ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೆನೆಸಿಡಿ. ಆ ಬಳಿಕ ಮಿಕ್ಸಿ ಜಾರಿಗೆ ಅಕ್ಕಿ, ಉಪ್ಪು ಹಾಗೂ ತೆಳುವಾದ ತೆಂಗಿನ ಹಾಲನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ಒಂದು ಬಾಣಲೆಗೆ ತುಪ್ಪ ಸವರಿಕೊಂಡು ಒಲೆಯ ಮೇಲಿಟ್ಟು, ಅದಕ್ಕೆ ರುಬ್ಬಿದ ಹಿಟ್ಟು ಹಾಕಿಕೊಳ್ಳಿ.
* ತದನಂತರ ದಪ್ಪ ತೆಂಗಿನ ಹಾಲು ಹಾಗೂ ಅಗತ್ಯವಿರುವಷ್ಟು ಬೆಲ್ಲ, ಏಲಕ್ಕಿ ಪುಡಿಯನ್ನು ಸೇರಿಸಿ ಸಣ್ಣಗೆ ಉರಿಯಲ್ಲಿ ಬೇಯಿಸಿಕೊಳ್ಳಿ. ಈ ಮಿಶ್ರಣವು ಗಂಟು ಗಂಟಾಗದಂತೆ ಆಗಾಗ ಕೈಯಾಡಿಸುತ್ತ ಇರಿ.
* ಸ್ವಲ್ಪ ಸಮಯದ ನಂತರ ಹಿಟ್ಟು ದಪ್ಪಗಾಗುತ್ತದೆ, ಇದಕ್ಕೆ ಒಂದೆರಡು ಚಮಚ ತುಪ್ಪ ಹಾಕಿ ಮತ್ತೆ ಚೆನ್ನಾಗಿ ಕಲಸಿಕೊಳ್ಳಿ.
* ಈ ಹಿಟ್ಟು ಗಟ್ಟಿಯಾಗುತ್ತಿದ್ದಂತೆ ಒಂದು ದೊಡ್ಡದಾದ ಪ್ಲೇಟಿನ ಮೇಲೆ ಬಾಳೆಎಲೆ ಇಟ್ಟು ತುಪ್ಪ ಸವರಿಕೊಳ್ಳಿ. ಇದಕ್ಕೆ ಈ ಮಿಶ್ರಣವನ್ನು ಹಾಕಿ ಹರಡಿಕೊಳ್ಳಿ.
* ತಣ್ಣಗಾದ ಬಳಿಕ ಬೇಕಾದ ಆಕಾರದಲ್ಲಿ ಕತ್ತರಿಸಿದರೆ ಅಕ್ಕಿ ಹಾಲುಬಾಯಿ ಸವಿಯಲು ಸಿದ್ಧ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ