ಪ್ರತಿಯೊಬ್ಬರಿಗೂ ತಾನು ಸುಂದರವಾಗಿ ಕಾಣಿಸಬೇಕು ಎನ್ನುವ ಹಂಬಲವಿರುತ್ತದೆ. ಸೌಂದರ್ಯವೆನ್ನುವುದು ಕೇವಲ ಮುಖದ ಅಂದ ಮಾತ್ರವಲ್ಲ. ಸೌಂದರ್ಯದ ಭಾಗವಾದ ಕೂದಲ ಆರೈಕೆಯೂ ಅಷ್ಟೇ ಮುಖ್ಯ. ದಿನನಿತ್ಯದ ಓಡಾಟ, ಧೂಳು, ಬೆವರಿನಿಂದ ಕೂದಲು ದುರ್ಬಲಗೊಂಡು ತುಂಡಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಕೂದಲ ರಕ್ಷಣೆ ಮಾಡಿಕೊಳ್ಳುವುದು ಸವಾಲಿನ ಕೆಲಸವೇ ಸರಿ. ವಾತಾವರಣ ತಂಪಾದಂತೆ ಕೂದಲು ಶುಷ್ಕಗೊಂಡು, ಡ್ರೈ ಎನಿಸಲು ಆರಂಭವಾಗುತ್ತದೆ. ಹೀಗಾಗಿ ಕೇಶ ಸೌಂದರ್ಯ ಹೆಚ್ಚಿಸಿಕೊಳ್ಳಲು ಮುಖ್ಯವಾಗಿ ಚಳಿಗಾಲದಲ್ಲಿ ಕೊಂಚ ಶ್ರಮವಹಿಸುವುದು ಅಗತ್ಯ.
ಮಾರುಕಟ್ಟೆಯಲ್ಲಿ ಸಿಗುವ ಶಾಂಪೂ, ಕಂಡೀಶನರ್ಗಳು ನಮ್ಮ ಕೂದಲಿಗೆ ಹಾನಿಯ ಉಂಟುಮಾಡುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ ನೈಸರ್ಗಿಕವಾಗಿ ಕೆಲವು ಅಭ್ಯಾಸಗಳನ್ನು ರೂಢಿಸಿಕೊಂಡರೆ ಕೂದಲು ಉದುರುವುದನ್ನು ತಡೆಯಹುದು. ಸಾಮಾನ್ಯವಾಗಿ ನಾವು ವಿವಿಧ ರೀತಿಯ ಹೇರ್ಸ್ಟೈಲ್ ಮಾಡಿಕೊಳ್ಳಲು ಹೇರ್ ಡ್ರೈಯರ್ನಂತಹ ಉಪಕರಣಗಳನ್ನು ಬಳಸುತ್ತೇವೆ. ಇದರಿಂದ ಕೂದಲಿಗೆ ಅನಗತ್ಯ ಅಥವಾ ಅತಿಯಾದ ಬಿಸಿತಾಗಿ ಕೂದಲು ಡ್ರೈಆಗುತ್ತದೆ. ಇದು ಕೂದಲು ಉದುರಲು ಒಂದು ಮುಖ್ಯ ಕಾರಣ. ನಮ್ಮ ಆಹಾರ ಶೈಲಿಯೂ ಕೂಡ ಕೂದಲ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರೋಟೀನ್ಭರಿತ ಆಹಾರ ಸೇವನೆ ಅವಶ್ಯಕ.
ಕೂದಲ ಆರೈಕೆಯಲ್ಲಿ ಇವುಗಳನ್ನು ತಪ್ಪದೇ ಮಾಡಿ
ಎಣ್ಣೆಯ ಮಸಾಜ್ ಮತ್ತು ಹೇರ್ ಪ್ಯಾಕ್
ಪ್ರತಿ ಬಾರಿ ತೆಲೆಗೆ ಸ್ನಾನ ಮಾಡುವ ಮೊದಲು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಇದು ಕೂದಲಿನ ಸಾಪ್ಟನೆಸ್ ಹೆಚ್ಚಿಸುತ್ತದೆ. ವಾರದಲ್ಲಿ ಎರಡು ಬಾರಿಯಾದರೂ ನಿಮ್ಮ ಕೂದಲಿಗೆ ಸೆಟ್ ಆಗುವ ಹೇರ್ಪ್ಯಾಕ್ ಹಾಕಿಕೊಳ್ಳಿ. ಹೇರ್ ಪ್ಯಾಕ್ನಲ್ಲಿ ಆದಷ್ಟು ಮೊಸರು ಇರುವಂತೆ ನೋಡಿಕೊಳ್ಳಿ. ಏಕೆಂದರೆ ಮೊಸರು ನಿಮ್ಮ ಕೂದಲು ಡ್ರೈ ಆಗುವುದನ್ನು ತಡೆಯುತ್ತದೆ. ಅಲ್ಲದೆ ಮೊಸರನ್ನು ಕೂದಲಿಗೆ ಹಾಕುವುದರಿಂದ ಹೊಟ್ಟಿನ (ಡ್ಯಾಂಡ್ರಪ್) ಸಮಸ್ಯೆ ನಿವಾರಣೆಯಾಗಲಿದೆ.
ಸ್ನಾನಕ್ಕೆ ಬಿಸಿ ನೀರು ಬೇಡ
ನೆನಪಿಡಿ ತಲೆಸ್ನಾನ ಮಾಡುವಾಗ ಬಿಸಿ ನೀರನ್ನು ಬಳಸಬೇಡಿ. ಕೂದಲಿನ ಸೂಕ್ಷ್ಮತೆಗೆ ಬಿಸಿ ನೀರು ಹಾನಿಯುಂಟು ಮಾಡುತ್ತದೆ. ಹೀಗಾಗಿ ಉಗುರು ಬೆಚ್ಚಗಿನ ಅಥಾವ ತಣ್ಣನೆಯ ನೀರಿನಿಂದ ಸ್ನಾನಮಾಡಿ. ಸ್ನಾನದ ಬಳಿಕ ಕೂದಲನ್ನು ತಕ್ಷಣ ಬಾಚಿಕೊಳ್ಳಬೇಡಿ. ಬದಲಾಗಿ ಒದ್ದೆ ಕೂದಲನ್ನು ಗಾಳಿಯಲ್ಲಿ ಒಣಗಿಸಿ ಅಥವಾ ಹತ್ತಿಯ ಟವೆಲ್ನಿಂದ ನೀರು ಆರುವವರೆಗೆ ಕಟ್ಟಿಕೊಳ್ಳಿ. ಅನಿವಾರ್ಯವಿದ್ದರೆ ಹೇರ್ ಡ್ರೈಯರ್ ಬಳಸಿ ಆದರೆ, ಹೇರ್ ಡ್ರೈಯರ್ನಲ್ಲಿ ಹೀಟ್ ಆಗುವ ಪ್ರಮಾಣವನ್ನು ಸೆಟ್ ಮಾಡಿಕೊಳ್ಳಲು ಮರೆಯದಿರಿ.
ಅಗಲ ಹಲ್ಲಿನ ಬಾಚಣಿಗೆ ಬಳಸಿ
ಕೂದಲು ಬಾಚುವಾಗ ಆದಷ್ಟು ಅಗಲವಾದ ಹಲ್ಲಿನ ಬಾಚಣಿಗೆಯನ್ನು ಬಳಸಿ. ಇದು ನಿಮ್ಮ ಕೂದಲು ತುಂಡಾಗುವುದನ್ನು ತಡೆಯುತ್ತದೆ. ಅಲ್ಲದೆ ಸಿಕ್ಕಾಗಿರುವ ಕೂದಲನ್ನು ನಿಧಾನವಾಗಿ ಬಿಡಿಸಬಹುದು. ಇದರಿಂದ ಕೂದಲು ಅರ್ಧದಲ್ಲೇ ತುಂಡಾಗಿ ಬಿಳುವುದು ತಪ್ಪುತ್ತದೆ.
ಲೋಳೆಸರ (ಆಲೋವೇರಾ) ಬಳಕೆಯಿರಲಿ.
ಚಳಿಗಾಲದಲ್ಲಿ ನಾವು ದೇಹವನ್ನು ಬೆಚ್ಚಗಿರಿಸಿಲು ಸೇವಿಸಿದ ಆಹಾರ ನಮ್ಮ ಕೂದಲಿಗೆ ಹೊಂದಿಕೆಯಾಗದಿರಬಹುದು. ಹೀಗಾಗಿ ತಲೆಯ ಆರೋಗ್ಯಕ್ಕೆ ಆದಷ್ಟು ಆಲೋವೆರಾ ಬಳಸಿ. ಇದು ನಿಮ್ಮ ನೆತ್ತಿಯನ್ನು ತಂಪಾಗಿರುಸುತ್ತದೆ. ಪ್ರೆಶ್ ಆಲೋವೆರಾ ಎಲೆಯನ್ನು ಕತ್ತರಿಸಿ ಕೂದಲು ಮತ್ತು ನೆತ್ತಿಯ ಮಧ್ಯ ಉಜ್ಜಿಕೊಂಡು 30 ನಿಮಿಷ ಕಾಲ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ಆಲೋವೆರಾ ಕೂದಲ ಸಮೃದ್ಧ ಬೆಳವಣಿಗೆಗೆ ಸಹಕಾರಿಯಾಗಿದೆ ಮತ್ತು ಕೂದಲು ಮೃದುವಾಗಿರುವಂತೆ ಮಾಡುತ್ತದೆ.