ದಿನವೂ ಮಧ್ಯರಾತ್ರಿ ಕುಳಿತು ಕುರುಕುಲು ತಿಂಡಿ ತಿನ್ನುತ್ತೀರಾ?

|

Updated on: Jan 25, 2024 | 6:18 PM

ಹಲವು ಜನ ಮಧ್ಯರಾತ್ರಿಯವರೆಗೆ ಮಲಗುವುದೇ ಇಲ್ಲ. ಹೀಗಾದಾಗ ರಾತ್ರಿ ಹಸಿವಾಗುವುದು ಸಹಜ. ಆಗ ಏನಾದರೂ ಕುರುಕುಲು ತಿಂಡಿ ಅಥವಾ ಸ್ನಾಕ್ಸ್​ ತಿನ್ನಬೇಕು ಎನಿಸುತ್ತದೆ. ಹೀಗಾಗಿ, ಅಡುಗೆಮನೆಯ ಡಬ್ಬಿಗಳನ್ನೆಲ್ಲ ತಡಕಾಡುವವರಿದ್ದಾರೆ, ಇನ್ನು ಕೆಲವರು ರಾತ್ರಿ ಬೈಕ್​ನಲ್ಲಿ ಹೋಗಿ ಸ್ನಾಕ್ಸ್ ತಿಂದು ಬರುವವರೂ ಇದ್ದಾರೆ. ಆದರೆ, ಇದರಿಂದ ನಮ್ಮ ಆರೋಗ್ಯಕ್ಕೆ ಏನಾಗುತ್ತದೆ?

ದಿನವೂ ಮಧ್ಯರಾತ್ರಿ ಕುಳಿತು ಕುರುಕುಲು ತಿಂಡಿ ತಿನ್ನುತ್ತೀರಾ?
ಸ್ನಾಕ್ಸ್
Image Credit source: iStock
Follow us on

ಅನೇಕ ಜನರು ರಾತ್ರಿಯ ಬಳಿಕ ತಿಂಡಿ ತಿನ್ನಲು ಇಷ್ಟಪಡುತ್ತಾರೆ. ತಡರಾತ್ರಿಯಲ್ಲಿ ಚಿಪ್ಸ್, ಐಸ್ ಕ್ರೀಮ್‌, ಚಾಕೋಲೇಟ್, ಸ್ನಾಕ್ಸ್​ ಅಥವಾ ಮ್ಯಾಗಿ ತಿನ್ನುವ ಕಡುಬಯಕೆ ನಿಮಗೂ ಆಗುತ್ತದೆಯೇ? ನೀವು ಕೂಡ ರಾತ್ರಿ ಕುಳಿತು ಈ ರೀತಿಯ ತಿಂಡಿಗಳನ್ನು ತಿನ್ನುತ್ತೀರಾ? ಇದರಿಂದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳು ಆಗುತ್ತವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ತಜ್ಞರ ಪ್ರಕಾರ, ತೂಕ ಇಳಿಸಿಕೊಳ್ಳಲು ಬಯಸುವವರಿಗೆ ತಡರಾತ್ರಿಯ ತಿಂಡಿಗಳು ಹಾನಿಕಾರಕವಾಗಬಹುದು. ಏಕೆಂದರೆ ದಿನದ ಆ ಸಮಯದಲ್ಲಿ ಜಂಕ್ ಫುಡ್‌ಗಳನ್ನು ಮಾತ್ರ ಜನರು ಸೇವಿಸಲು ಇಷ್ಟಪಡುತ್ತಾರೆ. ಮಧ್ಯರಾತ್ರಿ ಯಾರೂ ಹಣ್ಣು, ಡ್ರೈಫ್ರೂಟ್ ತಿನ್ನಲು ಇಷ್ಟಪಡುವುದಿಲ್ಲ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.

ರಾತ್ರಿಯಲ್ಲಿ ಲಘು ಉಪಹಾರವು ಸಾಮಾನ್ಯವಾಗಿ ರಾತ್ರಿಯ ಊಟದ ನಂತರ ನೀವು ಮಲಗುವ ಸಮಯಕ್ಕೆ ಹತ್ತಿರವಾದಾಗ ಸಂಭವಿಸುತ್ತದೆ. ಈ ಕಡುಬಯಕೆಗಳನ್ನು ನಿಯಂತ್ರಿಸುವುದು ಬಹಳ ಕಷ್ಟ. ಹಸಿವು, ರೂಢಿ, ಬೇಸರ, ಒತ್ತಡದ ಕಾರಣದಿಂದ ನಿಮಗೂ ತಡರಾತ್ರಿಯಲ್ಲಿ ಫುಡ್ ತಿನ್ನುವ ಅಭ್ಯಾಸವಾಗಬಹುದು. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

ಇದನ್ನೂ ಓದಿ: ರಾತ್ರಿ ಹಾಲು ಕುಡಿದು ಮಲಗಿದರೆ ಜೀರ್ಣಕ್ರಿಯೆ ಸುಲಭವಾಗುತ್ತಾ?

ಸಂಶೋಧನೆಯ ಪ್ರಕಾರ, ರಾತ್ರಿ ಮಲಗುವಾಗ ಈ ರೀತಿಯ ಜಂಕ್​ಫುಡ್ ತಿನ್ನುವುದರಿಂದ ನಿಮ್ಮ ನಿದ್ರೆಯ ಮೇಲೂ ಪರಿಣಾಮ ಉಂಟಾಗುತ್ತದೆ. ಈ ಆಹಾರಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವಾದ್ದರಿಂದ ನಿಮಗೆ ನಿದ್ರೆಯೂ ಸರಿಯಾಗಿ ಬರುವುದಿಲ್ಲ. ನಿದ್ರೆಯ ಸಮಯದಲ್ಲಿ ಜೀರ್ಣಕ್ರಿಯೆಗೆ ನಿಮ್ಮ ದೇಹ ಹೆಚ್ಚುವರಿ ಶಕ್ತಿಯನ್ನು ಬಳಸುತ್ತದೆ. ಆ ವೇಳೆ ಜೀರ್ಣಕ್ರಿಯೆ ಸರಿಯಾಗಿ ಆಗದೆ ಕೊಬ್ಬು ಸಂಗ್ರಹವಾಗುವ ಸಾಧ್ಯತೆಯೂ ಇರುತ್ತದೆ. ಇದರಿಂದ ತೂಕ ಹೆಚ್ಚಾಗತೊಡಗುತ್ತದೆ.

ಹಾಗೇ, ತಡರಾತ್ರಿಯಲ್ಲಿ ತಿಂಡಿಯನ್ನು ತಿನ್ನುವುದರಿಂದ ಕೆಲವು ಪ್ರಯೋಜನಗಳು ಕೂಡ ಇವೆ. ನಿಮ್ಮ ಸಂಜೆಯ ತಿಂಡಿಗಳ ಗುಣಮಟ್ಟ, ಪ್ರಮಾಣ ಮತ್ತು ಸಮಯವು ನಿಮ್ಮ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಆ ಕೆಲವು ಪ್ರಯೋಜನಗಳೆಂದರೆ,

– ಮಲಗುವ ಮುನ್ನ ಲಘು ಮತ್ತು ಸಮತೋಲಿತ ತಿಂಡಿಯು ರಾತ್ರಿಯಲ್ಲಿ ನೀವು ಹಸಿವಿನಿಂದ ಎಚ್ಚರವಾಗದಂತೆ ತಡೆಯುತ್ತದೆ. ಇದರಿಂದ ಉತ್ತಮವಾಗಿ ನಿದ್ರೆ ಮಾಡಬಹುದು.

– ಮಲಗುವಾಗ ನಟ್ಸ್​ ಅಥವಾ ಸೀಡ್ಸ್​ನಂತಹ ಟ್ರಿಪ್ಟೊಫಾನ್‌ ಸಮೃದ್ಧವಾಗಿರುವ ಆರೋಗ್ಯಕರ ಲಘು ಆಹಾರ ಸೇವನೆಯು ಸಿರೊಟೋನಿನ್ ಮತ್ತು ಮೆಲಟೋನಿನ್‌ನಂತಹ ಸ್ನೂಜ್-ನಿಯಂತ್ರಿಸುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ಇದನ್ನೂ ಓದಿ: Weight Loss: ತೂಕ ಇಳಿಸಬೇಕಾ?; ಕೇಸರಿ ಬಳಸಿ!

– ಹೆಚ್ಚಿನ ಪ್ರೋಟೀನ್ ಆಹಾರಗಳ ಮೇಲೆ ತಡರಾತ್ರಿಯ ತಿಂಡಿಗಳು ರಾತ್ರಿಯಿಡೀ ಸ್ಥಿರವಾದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಾಪಾಡುತ್ತದೆ.

ತಡರಾತ್ರಿಯಲ್ಲಿ ಆಹಾರ ಸೇವನೆಯಿಂದ ಆಗುವ ದುಷ್ಪರಿಣಾಮಗಳು ಇಲ್ಲಿವೆ.

– ತೀವ್ರವಾದ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ತಜ್ಞರ ಪ್ರಕಾರ, ತಡರಾತ್ರಿಯಲ್ಲಿ ಲಘು ಉಪಹಾರವು ಅಜೀರ್ಣ, ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್‌ನಂತಹ ನಿದ್ರೆಯ ಸಮಯದಲ್ಲಿ ತೀವ್ರವಾದ ಹೊಟ್ಟೆಯ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.

– ಕರಿದ, ಚೀಸೀ, ಅಥವಾ ಮಸಾಲೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಅಗತ್ಯವಿದ್ದರೆ, ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ತಿಂಡಿಗಳನ್ನು ಆರಿಸಿಕೊಳ್ಳಿ.

– ರಾತ್ರಿ ನಿಮಗೆ ಹಸಿವಾಗದಿದ್ದರೂ ನೀವು ಕೇವಲ ಬೇಸರ ಮತ್ತು ಅಭ್ಯಾಸಬಲದಿಂದ ತಿನ್ನುತ್ತಿದ್ದರೆ ಅದು ತೂಕ ಹೆಚ್ಚಾಗಲು ಕಾರಣವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ