ವಾಕಿಂಗ್ ಅಥವಾ ನಡಿಗೆಯು (Walking) ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ತೂಕ ಇಳಿಕೆಗೂ ಇದು ಬಹಳ ಸಹಕಾರಿಯಾಗಿದೆ. ದೇಹವನ್ನು ಆರೋಗ್ಯಕರವಾಗಿಡಲು ಪ್ರತಿದಿನ ಪೌಷ್ಠಿಕಾಂಶಯುಕ್ತ ಆಹಾರ ಎಷ್ಟು ಅಗತ್ಯವೋ ಅದೇ ರೀತಿ ದೇಹದ ಅಂಗಾಂಗಗಳನ್ನು ಆರೋಗ್ಯಕರವಾಗಿಡಲು ವ್ಯಾಯಾಮ ಮತ್ತು ನಡಿಗೆಯು ಅಷ್ಟೇ ಮುಖ್ಯ. ನಡಿಗೆಯಿಂದ ದೇಹವು ಕ್ರಿಯಾಶೀಲವಾಗಿರುತ್ತದೆ ಮತ್ತು ಆರೋಗ್ಯವೂ ಉತ್ತಮವಾಗಿರುತ್ತದೆ. ಪ್ರತಿನಿತ್ಯ ಸಂಜೆ, ಬೆಳಗ್ಗೆ ವಾಕಿಂಗ್ ಮಾಡಿದರೆ ನಮಗೆ ಬೇರೆ ವ್ಯಾಯಾಮದ ಅಗತ್ಯವಿಲ್ಲ. ಹಾಗಾದರೆ ಆರೋಗ್ಯವಾಗಿರಲು ಹಾಗೂ ತೂಕವನ್ನು ಇಳಿಸಿಕೊಳ್ಳಲು ದಿನದಲ್ಲಿ ಎಷ್ಟು ಗಂಟೆಗಳ ಕಾಲ ನಡೆಯಬೇಕು ಎಂಬುದನ್ನು ತಿಳಿಯೋಣ.
ತೂಕವನ್ನು ಇಳಿಸಿಕೊಳ್ಳಲು ದಿನಕ್ಕೆ ಸುಮಾರು 10,000 ಹೆಜ್ಜೆಗಳನ್ನು ನಡೆಯಬೇಕು. ಅಂದರೆ 6 ರಿಂದ 7 ಕಿಲೋಮೀಟರ್ ನಡೆಯಬೇಕು. ಮೇಯೊ ಕ್ಲಿನಿಕ್ ಪ್ರಕಾರ, ಪ್ರತಿದಿನ 30 ನಿಮಿಷಗಳ ಕಾಲ ನಡಿಗೆಯ ಅಗತ್ಯವಿದೆ. ನಮ್ಮ ದೈನಂದಿನ ದಿನಚರಿಯಲ್ಲಿ 30 ನಿಮಿಷಗಳ ವೇಗದ ನಡಿಗೆಯನ್ನು ಸೇರಿಸಿದರೆ ದಿನಕ್ಕೆ ಸುಮಾರು 150 ಕ್ಯಾಲೋರಿಗಳನ್ನು ಸುಡಬಹುದು. ನೀವು ಹೆಚ್ಚು ನಡೆದಷ್ಟು ಮತ್ತು ವೇಗವಾಗಿ ನಡೆದಷ್ಟು, ಹೆಚ್ಚು ಕ್ಯಾಲೋರಿಗಳನ್ನು ಸುಡಬಹುದು.
ಕ್ಯಾಲೋರಿಗಳನ್ನು ಸುಡಲು ಸಹಕಾರಿ: ನಡಿಗೆಯು ಹೆಚ್ಚುವರಿ ಕ್ಯಾಲೋರಿಗಳನ್ನು ಸುಡಲು ಸಹಕಾರಿಯಾಗಿದೆ. ಇದರಿಂದ ನೀವು ಸುಲಭವಾಗಿ ತೂಕವನ್ನು ಕೂಡ ಇಳಿಸಿಕೊಳ್ಳಬಹುದು. ದಿನಕ್ಕೆ ಅರ್ಧ ಗಂಟೆಯಾದರೂ ನಡೆಯುವುದರಿಂದ ಕ್ಯಾಲೋರಿಗಳನ್ನು ಸುಡಬಹುದು ಮತ್ತು ವೇಗವಾಗಿ ತೂಕವನ್ನು ಕಳೆದುಕೊಳ್ಳಬಹುದು.
ಮನಸ್ಥಿತಿಯನ್ನು ಸುಧಾರಿಸುತ್ತದೆ: ನಡಿಗೆಯಂತಹ ದೈಹಿಕ ಚುವಟಟಿಕೆಯು ನಿಮ್ಮ ಮೂಡ್ ಅಥವಾ ಮನಸ್ಥಿತಿಯನ್ನು ಸುಧಾರಿಸುತ್ತದೆ. ಮತ್ತು ಕೋಪ, ಒತ್ತಡ, ಖಿನ್ನತೆ ಮತ್ತು ಆತಂಕದ ಭಾವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಡಿಗೆಯು ಸುಲಭವಾಗಿ ಮಾಡಬಹುದಾದ ವ್ಯಾಯಾಮವಾಗಿದ್ದು, ಇದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
ಕೀಲು ನೋವನ್ನು ನಿವಾರಿಸುತ್ತದೆ: ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪ್ರಕಾರ, ವಾಕಿಂಗ್ ಸಂಧಿವಾತ ಸಂಬಂಧಿ ನೋವನ್ನು ಕಡಿಮೆ ಮಾಡುತ್ತದೆ ಮತ್ತು ವಾರದಲ್ಲಿ ಐದರಿಂದ ಆರು ಮೈಲಿಗಳಷ್ಟು ನಡೆಯುವುದರಿಂದ ಸಂಧಿವಾತ ಮತ್ತು ಕೀಲು ನೋವು ಸಮಸ್ಯೆ ಬಾಧಿಸುವುದನ್ನು ತಡೆಯಬಹುದು.
ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ: ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ತೀವ್ರ ಮಟ್ಟದಲ್ಲಿ ಹೆಚ್ಚುತ್ತಿದೆ. ಇಂತಹ ಗಂಭೀರ ಕಾಯಿಗಳು ಬಾಧಿರದೆಂದರೆ ಪ್ರತಿದಿನ 30 ನಿಮಿಷಗಳ ಕಾಲ ವಾಕಿಂಗ್ ಅವಶ್ಯಕ. ವಾಕಿಂಗ್ ದೇಹದ ರಕ್ತ ಪರಿಚಲನೆನ್ನು ಹೆಚ್ಚಿಸುತ್ತದೆ ಮತ್ತು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡುತ್ತದೆ. ಅಲ್ಲದೆ ನಡಿಗೆಯು ನಮ್ಮ ಹೃದಯವು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮೌನ ನಡಿಗೆ ಎಂದರೇನು? ಅದು ನಿಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನ?
ಶ್ವಾಸಕೋಶವನ್ನು ಆರೋಗ್ಯಕರವಾಗಿಡಲು ಸಹಕಾರಿ: ಪ್ರತಿನಿತ್ಯ ನಡೆಯುವುದರಿಂದ ದೇಹವು ಸಾಕಷ್ಟು ಪ್ರಮಾಣದ ಆಮ್ಲಜನಕವನ್ನು ಪಡೆಯುತ್ತದೆ. ವಾಕಿಂಗ್ ದೇಹದಲ್ಲಿ ಆಮ್ಲಜನಕದ ಹರಿವನ್ನು ಸುಧಾರಿಸುತ್ತದೆ, ಇದು ಶ್ವಾಸಕೋಶವನ್ನು ಆರೋಗ್ಯಕ ಮತ್ತು ಬಲವಾಗಿರಿಸುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: