ಸಂಸಾರವೆಂದ ಮೇಲೆ ಒಂದು ಮಾತು ಬರುತ್ತದೆ, ಒಂದು ಮಾತು ಹೋಗುತ್ತದೆ. ಅದನ್ನೇ ದೊಡ್ಡದು ಮಾಡುತ್ತಿದ್ದರೆ ಇಂದು ಸಂಗಾತಿಗಳಿಬ್ಬರೂ ಜೊತೆಯಾಗಿ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಸಂಗಾತಿಗಳಿಬ್ಬರ ನಡುವೆ ಪ್ರೀತಿ ಹಾಗೂ ನಂಬಿಕೆಯೇ ಸಂಬಂಧದ ತಳಹದಿಯಾದರೆ, ಕೋಪಿಸಿಕೊಳ್ಳುವುದು ಪ್ರೀತಿಯನ್ನು ವ್ಯಕ್ತಪಡಿಸುವ ಇನ್ನೊಂದು ರೀತಿಯಾಗಿದೆ. ಕೆಲವರು ಎಷ್ಟೇ ಹೊಂದಾಣಿಕೆ ಮಾಡಿಕೊಂಡರೂ ವೈವಾಹಿಕ ಜೀವನದಲ್ಲಿ ಖುಷಿಯೇ ಇರುವುದಿಲ್ಲ. ಅಂತಹವರು ಈ ಕೆಲವು ವಿಷಯಗಳ ಬಗ್ಗೆ ಹೆಚ್ಚು ಗಮನ ಕೊಡುವುದು ಒಳಿತು.
- ಸಂಗಾತಿಯ ಜೊತೆಗಿನ ಮಾತುಕತೆ ಕೆಲವೊಮ್ಮೆ ಕಿರಿಕಿರಿ ಅನಿಸಬಹುದು. ಆದರೆ ಈ ವೇಳೆ ಕೋಪದಿಂದ ಪ್ರತಿಕ್ರಿಯಿಸದೇ ಶಾಂತವಾಗಿಯೇ ಮರು ಉತ್ತರ ನೀಡುವುದು ಒಳ್ಳೆಯ ಅಭ್ಯಾಸ. ಇದರಿಂದ ಇಬ್ಬರ ನಡುವಿನ ಸಂಬಂಧವು ಗಟ್ಟಿಯಾಗಿರುತ್ತದೆ. ಮಾತು ಮಾತಿಗೂ ಸಿಟ್ಟುಮಾಡಿಕೊಂಡರೆ ಎದುರುಗಿರುವ ವ್ಯಕ್ತಿಯು ಅತಿರೇಕವಾಗಿ ವರ್ತಿಸುವ ಸಾಧ್ಯತೆಯಿರುತ್ತದೆ. ಹೀಗಾಗಿ ಆದಷ್ಟು ಮನಸ್ಸನ್ನು ಶಾಂತವಾಗಿರಿಸುವುದು ಒಳ್ಳೆಯದು.
- ಎದುರಿಗಿರುವ ವ್ಯಕ್ತಿಯ ಮಾತನ್ನು ಆಲಿಸುವುದು ಕೂಡ ಒಂದು ಕಲೆ. ಹೀಗಾಗಿ ಸಂಗಾತಿಗಳಿಬ್ಬರಲ್ಲಿ ಒಬ್ಬರು ಮಾತನಾಡಿದಾಗ ಇನ್ನೊಬ್ಬರು ಆಲಿಸುವುದನ್ನು ಕಲಿತುಕೊಳ್ಳಬೇಕು. ಇದು ಸಂಸಾರದಲ್ಲಿ ಜಗಳವಾಗುವುದನ್ನು ತಪ್ಪಿಸುತ್ತದೆ. ಅದಲ್ಲದೇ, ತಪ್ಪಾಗಿ ಅರ್ಥೈಸಿಕೊಳ್ಳುವುದು ತಪ್ಪುತ್ತದೆ. ಇದರಿಂದ ಸಂಸಾರದಲ್ಲಿ ಸದಾ ಪ್ರೀತಿ ನೆಲೆಸಲು ಸಾಧ್ಯ.
- ವೈವಾಹಿಕ ಜೀವನದಲ್ಲಿ ಸಂಗಾತಿಗಳಿಬ್ಬರ ನಡುವೆ ಸಿಹಿಯಾದ ಮಾತುಕತೆಯಿರಲೇಬೇಕು. ಆಗಿದ್ದರೆ ಮಾತ್ರ ಪ್ರೀತಿ ಹೆಚ್ಚಾಗಿ ಸಂಬಂಧವು ಗಟ್ಟಿಯಾಗುವುದು. ಮನಸ್ಸಿಗೆ ಹಿತವೆನಿಸುವ ಸಿಹಿ ಸಿಹಿಯಾದ ಮಾತುಗಳನ್ನೆ ಆಡುವುದನ್ನು ಕಲಿತರೆ ಸಂಗಾತಿಗಳಿಬ್ಬರೂ ಖುಷಿಯಿಂದಿರಬಹುದು.
- ಸಂಬಂಧವು ಗಟ್ಟಿಯಾಗಿರಬೇಕಾದರೆ ನಂಬಿಕೆಯೆನ್ನುವುದು ಗಟ್ಟಿಯಾಗಿರಬೇಕು. ಹೀಗಾಗಿ ಪತಿ ಪತ್ನಿಯರಿಬ್ಬರೂ ಮಾತನಾಡುವಾಗ ನಂಬಿಕೆಯನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಅದಲ್ಲದೇ, ಸಂಗಾತಿ ಜೊತೆಗೆ ತುಂಬಾ ನಯ ವಿನಯದಿಂದ ಗೌರವದಿಂದ ಇರುವುದು ಕೂಡ ಸಂಗಾತಿಗೆ ನಿಮ್ಮ ಮೇಲಿನ ನಂಬಿಕೆಯನ್ನು ಹೆಚ್ಚಿಸುತ್ತದೆ.
- ಜೀವನವು ಸುಲಲಿತವಾಗಿ ಸಾಗಬೇಕಾದರೆ ಆರ್ಥಿಕ ಸ್ಥಿತಿಯು ಚೆನ್ನಾಗಿರಬೇಕು. ಎಷ್ಟೋ ಸಂಸಾರಗಳಲ್ಲಿ ಇದೇ ವಿಚಾರವಾಗಿ ಮನಸ್ತಾಪಗಳಾಗುತ್ತದೆ. ಹಣದ ವಿಚಾರವಾಗಿ ಸಂಗಾತಿಗಳಿಬ್ಬರೂ ಪರಸ್ಪರ ಮಾತನಾಡಿಕೊಳ್ಳಬೇಕು. ಇಬ್ಬರೂ ಉದ್ಯೋಗದಲ್ಲಿದ್ದರೆ ಆರ್ಥಿಕವಾಗಿ ಕೆಲವು ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು ಒಳ್ಳೆಯದು. ಇದರಿಂದ ಒಬ್ಬರ ಮೇಲಿರುವ ಭಾರವು ಕಡಿಮೆಯಾಗಿ ದಾಂಪತ್ಯ ಜೀವನವು ಸಂತೋಷದಿಂದ ಕೂಡಿರಲು ಸಾಧ್ಯ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ