ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಆಹಾರ ಸೇವನೆ ಮತ್ತು ಕಳಪೆಮಟ್ಟದ ಜೀವನಶೈಲಿಯ ಕಾರಣದಿಂದಾಗಿ ಅನೇಕರು ಹಲವಾರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಅಂತಹ ಸಮಸ್ಯೆಯಲ್ಲಿ ಮೂತ್ರಪಿಂಡದ ಕಲ್ಲಿನ (Kidney Stone) ಸಮಸ್ಯೆಯೂ ಒಂದು. ಕಳಪೆ ಮಟ್ಟದ ಆಹಾರ ಸೇವನೆಯ ಜೊತೆ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸದಿರುವ ಕಾರಣ ಯುವಕರಿಂದ ಹಿಡಿದು ವಯಸ್ಸಾದವರವರೆಗೆ ಹಲವಾರು ಜನರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಇದರಿಂದ ವಿಪರೀತ ಹೊಟ್ಟೆ ನೋವನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಹಾಗೂ ಮೂತ್ರಪಿಂಡದ ಕಲ್ಲಿನ ಸಮಸ್ಯೆ ನಿಮ್ಮನ್ನು ಭಾದಿಸಬಾರದೆಂದರೆ ಕೆಲವೊಂದು ಆಹಾರಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಬಹಳ ಮುಖ್ಯ.
ಅತಿಯಾದ ಉಪ್ಪಿನ ಸೇವನೆ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಅತಿಯಾದ ಉಪ್ಪಿನ ಸೇವನೆಯಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಹೇಗೆ ಕಾಣಿಸಿಕೊಳ್ಳುತ್ತದೆಯೋ, ಅದೇ ರೀತಿ ಅಧಿಕ ಉಪ್ಪಿನ ಸೇವನೆ ಕಿಡ್ನಿ ಸ್ಟೋನ್ ಸಮಸ್ಯೆಗೂ ಕಾರಣವಾಗುತ್ತದೆ. ಹೆಚ್ಚು ಉಪ್ಪನ್ನು ತಿನ್ನುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚುತ್ತದೆ. ಅದು ಕಲ್ಲು ರೂಪದಲ್ಲಿ ಸಂಗ್ರಹವಾಗುತ್ತದೆ. ಅದಕ್ಕಾಗಿಯೇ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಬೇಕು. ಅಲ್ಲದೆ ಚಿಪ್ಸ್ ಹಾಗೂ ಇನ್ನಿತರ ಸಂಸ್ಕರಿಸಿದ ಆಹಾರದ ಸೇವನೆಯನ್ನು ಕಡಿಮೆ ಮಾಡಬೇಕು.
ಆರೋಗ್ಯಕರವೆಂದು ಪರಿಗಣಿಸಲಾದ ಪ್ರೋಟೀನ್ ಭರಿತ ಆಹಾರಗಳ ಅತಿಯಾದ ಸೇವನೆಯು ಮೂತ್ರಪಿಂಡದಲ್ಲಿ ಕಲ್ಲನ್ನು ಉಂಟುಮಾಡುವ ಸಾಧ್ಯತೆ ಇದೆ. ಆದ್ದರಿಂದ ನೀವು ಹಾಲು, ಮಾಂಸ, ಮೀನು, ಮೊಟ್ಟೆಯನ್ನು ಮಿತವಾಗಿ ಸೇವಿಸುವುದು ಉತ್ತಮ.
ಸೋಡಾ, ಎನರ್ಜಿ ಡ್ರಿಂಕ್ಸ್ ಗಳಂತಹ ಕಾರ್ಬೋನೇಟೆಡ್ ಪಾನೀಯಗಳಿಂದ ಆದಷ್ಟು ದೂರವಿರಿ. ಏಕೆಂದರೆ ಇದರಲ್ಲಿರುವ ಫಾಸ್ಪರಿಕ್ ಆಮ್ಲವು ಮೂತ್ರಪಿಂಡದ ಕಲ್ಲಿನ ಅಪಾಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಟೊಮೆಟೋ ಸೇವನೆ ಮಾರಕವಾಗಬಹುದು ಎಚ್ಚರ
ಚಹಾ ಅಥವಾ ಕಾಫಿಯ ಅತಿಯಾದ ಸೇವನೆಯು ನಿಮ್ಮ ಮೂತ್ರದಲ್ಲಿ ಕ್ಯಾಲ್ಸಿಯಂ ಮತ್ತು ಕಿಡ್ನಿ ಸ್ಟೋನ್ಗೆ ಕಾರಣವಾಗುವ ಇತರ ಪದಾರ್ಥಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗಾಗಿ ಕೆಫೀನ್ ಸೇವನೆಯನ್ನು ಮಿತ ಪ್ರಮಾಣದಲ್ಲಿ ಸೇವಿಸುವ ಮೂಲಕ ಈ ಸಮಸ್ಯೆ ಭಾದಿಸದಂತೆ ತಡೆಯಬಹುದು.
ಆಕ್ಸಲೇಟ್ ಅಂಶ ಟೊಮೆಟೊ ಮತ್ತು ಕ್ಯಾಪ್ಸಿಕಂ ಬೀಜಗಳಲ್ಲಿ ಕಂಡುಬರುತ್ತದೆ. ಇದು ಕಿಡ್ನಿ ಸ್ಟೋನ್ ಉಂಟಾಗಲು ಕಾರಣವಾಗುತ್ತದೆ. ಅದಕ್ಕಾಗಿಯೇ ಕ್ಯಾಪ್ಸಿಕಂನ್ನು ಅಡುಗೆಯಲ್ಲಿ ಮಿತ ಪ್ರಮಾಣದಲ್ಲಿ ಬಳಕೆ ಮಾಡಿ ಹಾಗೂ ಟೊಮೆಟೊಗಳನ್ನು ಬಳಸುವಾಗ ಅದರ ಬೀಜವನ್ನು ತೆಗೆಯಿರಿ.
ಪಾಲಕ್ ಸೊಪ್ಪು ಬಹಳಷ್ಟು ಆಕ್ಸಾಲಿಕ್ ಆಮ್ಲವನ್ನು ಹೊಂದಿರುತ್ತವೆ. 100 ಗ್ರಾಂ ಪಾಲಕ್ ನಲ್ಲಿ 1 ಗ್ರಾಂ ಆಕ್ಸಾಲಿಕ್ ಆಮ್ಲವಿದೆ. ಆಕ್ಸಾಲಿಕ್ ಆಮ್ಲವು ಆಕ್ಸಲೇಟ್ ಆಗಿ ಪರಿವರ್ತನೆಗೊಳ್ಳುತ್ತವೆ. ಇದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ಪಾಲಕ್ ಸೇವನೆಯನ್ನು ಮಿತ ಪ್ರಮಾಣದಲ್ಲಿ ಸೇವಿಸಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: