ನಾಡಿನ ಸಂಸ್ಕೃತಿಯ ಅನಾವರಣ. ಎಲ್ಲೆಡೆ ದೇಶಭಕ್ತಿಯ ಸಂಭ್ರಮ. ಧ್ವಜಾರೋಹಣದ ಸಡಗರ. ಇಂದು ದೇಶದ 78ನೇ ಸ್ವಾತಂತ್ರೋತ್ಸವವನ್ನು (Independence Day) ಭಾರತದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ವಿಮೋಚನೆ ಪಡೆಯಲು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣತೆತ್ತ, ಬಲಿದಾನ ಮಾಡಿದ ಎಲ್ಲಾ ವೀರರನ್ನು ನೆನೆದು, ಅವರಿಗೆ ನಮನ ಸಲ್ಲಿಸಲು ಪ್ರತಿ ವರ್ಷ ಕೂಡ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ರಾಷ್ಟ್ರದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಎಂದು ಗುರುತಿಸಲಾಗಿದೆ.
1857ರಿಂದ ಅಧಿಕೃತ ಆರಂಭವಾಗಿದ್ದ ಸ್ವಾತಂತ್ರ್ಯ ಹೋರಾಟದ ಕಿಚ್ಚು 90 ವರ್ಷಗಳ ನಿರಂತರ ಹೋರಾಟದ ಫಲವೇ 1947ರ ಆಗಸ್ಟ್ 15ರಂದು ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿತು. ಆ ಮೂಲಕ 200 ವರ್ಷಗಳ ಬ್ರಿಟಿಷರ ಆಡಳಿತ ಅಂತ್ಯವಾಯಿತು. ಸ್ವಾತಂತ್ರ್ಯಕ್ಕಾಗಿ 1857 ರಿಂದ 1947 ರವರೆಗೂ ನಿರಂತರ ಹೋರಾಟ ಮಾಡಲಾಗಿದೆ. ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಅವಿರತ ಸಾಧನೆಯನ್ನು ಇಂದು ನಾವು ಸ್ಮರಿಸಲಾಗುತ್ತದೆ.
ಇದನ್ನೂ ಓದಿ: Indian Independence 2024: ತ್ರಿವರ್ಣ ಧ್ವಜದ ಮಧ್ಯೆ ಇರುವ ಅಶೋಕ ಚಕ್ರದ ಬಗೆಗಿನ ಕುತೂಹಲಕಾರಿ ಸಂಗತಿಗಳಿವು
ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್ ಮತ್ತು ಇತರೆ ಅನೇಕರ ನೇತೃತ್ವದಲ್ಲಿ ನಡೆದ ಹೋರಾಟಗಳು ಅಹಿಂಸಾತ್ಮಕ ಮತ್ತು ಕ್ರಾಂತಿಕಾರಿಯಾಗಿದ್ದವು. 1947ರ ಆಗಸ್ಟ್ 15ರಂದು, ಜವಾಹರಲಾಲ್ ನೆಹರೂ ಮೊದಲ ಪ್ರಧಾನಿಯಾಗುವುದರೊಂದಿಗೆ ಭಾರತವು ಅಂತಿಮವಾಗಿ ಸ್ವಾತಂತ್ರ್ಯವನ್ನು ಗಳಿಸಿತು. ಅವರ ಪ್ರಸಿದ್ಧ ಭಾಷಣವಾದ ‘ಟ್ರಿಸ್ಟ್ ವಿತ್ ಡೆಸ್ಟಿನಿ’ ಭಾರತಕ್ಕೆ ಹೊಸ ಯುಗದ ಆರಂಭವಾಗಿತ್ತು.
ಸ್ವಾತಂತ್ರ್ಯ ದಿನವು ಪ್ರತಿಯೊಬ್ಬ ಭಾರತೀಯರಿಗೆ ಹೆಮ್ಮೆಯ ದಿನವಾಗಿದೆ. ಇದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಸಂಖ್ಯಾತ ಮಹನೀಯರ ತ್ಯಾಗ, ಬಲಿದಾನವನ್ನು ಸ್ಮರಿಸಿಕೊಳ್ಳುವ ದಿನ. ಈ ದಿನವನ್ನು ಪ್ರಜಾಪ್ರಭುತ್ವದ ದಿನವೆಂದು ಕೂಡ ಕರೆಯುತ್ತಾರೆ. ದೆಹಲಿಯ ಕೆಂಪುಕೋಟೆ ಸೇರಿದಂತೆ ಭಾರತದಲ್ಲಿ ತಿರಂಗ ರಾರಾಜಿಸುತ್ತದೆ.
ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ವಿಷಯವು ‘ವಿಕ್ಷಿತ್ ಭಾರತ,’ ಅಥವಾ ‘ಅಭಿವೃದ್ಧಿ ಹೊಂದಿದ ಭಾರತ’ ಆಗಿದೆ. ಇದು ಸ್ವಾತಂತ್ರ್ಯದ ಶತಮಾನೋತ್ಸವದ 2047 ರ ವೇಳೆಗೆ ರಾಷ್ಟ್ರವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತಿಸುವ ಭಾರತ ಸರ್ಕಾರದ ದೃಷ್ಟಿಕೋನ ಹೊಂದಿದೆ. ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಆಚರಿಸುವಾಗ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ಪ್ರತಿಯೊಬ್ಬ ನಾಗರಿಕನ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಾಮುಖ್ಯತೆಯನ್ನು ಇದು ಸಾರಿಹೇಳುತ್ತದೆ.
ಸ್ವಾತಂತ್ರ್ಯ ದಿನದ ವಿಶೇಷ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ