Independence Day
ಸ್ವಾತಂತ್ರ್ಯ ದಿನಾಚರಣೆ: ಎಷ್ಟೋ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ಭಾರತವು ಆಗಸ್ಟ್ 15, 1947ರಲ್ಲಿ ಸ್ವಾತಂತ್ರವನ್ನು ಕಂಡಿತು. ಪ್ರಮುಖ ಸಮಾರಂಭವು ಕೆಂಪುಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ ಆರಂಭದೊಂದಿಗೆ ಪ್ರಾರಂಭವಾಗುತ್ತದೆ. ಬಳಿಕ ಪ್ರಧಾನಿ ಭಾಷಣ ಮಾಡುತ್ತಾರೆ. ಬೇರೆ ಬೇರೆ ರಾಜ್ಯಗಳಲ್ಲೂ ಮುಖ್ಯಮಂತ್ರಿ ಧ್ವಜಾರೋಹಣ ನೆರವೇರಿಸುತ್ತಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜರುಗುತ್ತವೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕಾಗಿ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ. ಜೂನ್ 3, 1947 ರಂದು ಅಂದಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್‌ಬ್ಯಾಟನ್, ಬ್ರಿಟಿಷ್ ಭಾರತ ಸಾಮ್ರಾಜ್ಯವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಭಜಿಸುವುದಾಗಿ ಘೋಷಿಸಿದ್ದರು. ಇದರ ನಂತರ ಭಾರತದ ಸ್ವಾತ್ರಂತ್ರ್ಯ ಕಾಯಿದೆ 1947 ರ ಅನ್ವಯ ಆಗಸ್ಟ್ 15, 1947 ರಂದು ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲಾಯಿತು. ಅಂದು ಮಧ್ಯರಾತ್ರಿ ಜವಾಹರ್‌ಲಾಲ್ ನೆಹರು ಅವರು ದೇಶದ ಪ್ರಥಮ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಭಾರತದ ಅನೇಕ ಪ್ರದೇಶಗಳಲ್ಲಿ ಸ್ವಾತಂತ್ರ್ಯದಿನದಂದು ಗಾಳಿಪಟವನ್ನು ಹಾರಿಸುವ ಪದ್ದತಿ ಜಾರಿಯಲ್ಲಿದೆ. ಸಂಜೆಯ ವೇಳೆ ಗಾಳಿಪಟಗಳು ಮೇಲೇರುತ್ತಿದ್ದಂತೆ ಮಕ್ಕಳ ಹರ್ಷೋಲ್ಲಾಸ ಎಲ್ಲೆಲ್ಲೂ ಮೊಳಗುತ್ತವೆ