AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೊಬೈಲ್ ಬಿಡಿ-ಪುಸ್ತಕ ಹಿಡಿ’: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಕರೆ

79ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಗೌರವ ವಂದನೆ ಸ್ವೀಕರಿಸಿ, ಧ್ವಜಾರೋಹಣ ನೆರವೇರಿಸಿದ ನಂತರ ಕರ್ನಾಟಕದ ಜನತೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ದೇಶ ನಿರ್ಮಾಣದಲ್ಲಿ ಉತ್ಪಾದಕ ವರ್ಗ ಹಾಗೂ ದೇಶ ರಕ್ಷಣೆಯಲ್ಲಿ ಸೈನಿಕ ವರ್ಗದ ಕೊಡುಗೆಯನ್ನು ಶ್ಲಾಘಿಸಿದರು. ಅಷ್ಟೇ ಅಲ್ಲದೆ, ಮಕ್ಕಳ ಸಮಸ್ಯೆಗಳು, ಗ್ಯಾರಂಟಿ ಯೋಜನೆಗಳು, ಪಹಲ್ಗಾಂ ದಾಳಿ ವಿಚಾರ ಪ್ರಸ್ತಾಪಿಸಿದರು. ಸಿದ್ದರಾಮಯ್ಯ ಭಾಷಣದ ವಿವರ ಇಲ್ಲಿದೆ.

‘ಮೊಬೈಲ್ ಬಿಡಿ-ಪುಸ್ತಕ ಹಿಡಿ’: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಕರೆ
ಗೌರವ ವಂದನೆ ಸ್ವೀಕರಿಸಿದ ಸಿದ್ದರಾಮಯ್ಯ
Ganapathi Sharma
|

Updated on: Aug 15, 2025 | 10:09 AM

Share

ಬೆಂಗಳೂರು, ಆಗಸ್ಟ್ 15: ಹೊಸ ತಲೆಮಾರಿನ ಮಕ್ಕಳಲ್ಲಿ ಬದಲಾವಣೆ ತರುವುದಕ್ಕಾಗಿ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ ಮತ್ತು ಓದು ಕರ್ನಾಟಕ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದರು. 79ನೇ ಸ್ವಾತಂತ್ರ್ಯೋತ್ಸವ (Independence Day) ಪ್ರಯುಕ್ತ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವೆಲ್ಲರೂ ಗಮನಿಸಿರುವ ಹಾಗೆ ನಮ್ಮ ಹೊಸ ತಲೆಮಾರು ಮೊಬೈಲ್ ಫೋನು, ಇಂಟರ್ನೆಟ್ಟು ಮುಂತಾದವುಗಳ ಭರಾಟೆಯಲ್ಲಿ ವಿಪರೀತ ತಲ್ಲಣಗಳನ್ನು ಎದುರಿಸುತ್ತಿದೆ. ಖಿನ್ನತೆ, ಆತಂಕ, ವಿನಾಕಾರಣ ಸಿಟ್ಟು, ದ್ವೇಷ ಮುಂತಾದ ಭಾವನೆಗಳಲ್ಲಿ ಸಿಲುಕಿ ಸಂಕಷ್ಟ ಪಡುತ್ತಿದೆ. ಈ ಸಾಮಾಜಿಕ ಸಮಸ್ಯೆಯನ್ನು ಹೋಗಲಾಡಿಸಲು ನಾವೆಲ್ಲರೂ ಸೇರಿ ಹೊಸ ದಾರಿಗಳನ್ನು ಹುಡುಕಿಕೊಳ್ಳಬೇಕಾಗಿದೆ. ಇದಕ್ಕಾಗಿ ನಾವು ‘ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಎಂಬ ಹೊಸ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ನಾವು ಕೇವಲ ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ. ಜನರ ಜೀವನವನ್ನು ಬದಲಾಯಿಸುವಂತಹ ಆಲೋಚನೆಗಳು, ಆವಿಷ್ಕಾರಗಳು ಮತ್ತು ಹೊಸತನಗಳನ್ನು ಸೃಷ್ಟಿಸುತ್ತಿದ್ದೇವೆ. ನಮ್ಮ ಈ ಆಲೋಚನೆಗಳು ಗಡಿಯಾಚೆಗೂ ತಲುಪಿವೆ ಎಂದು ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಜಾತಿ ಗಣತಿಯ ಅಗತ್ಯ ಒತ್ತಿಹೇಳಿದ ಸಿದ್ದರಾಮಯ್ಯ

ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನಮ್ಮ ಸರ್ಕಾರವು ಪ್ರೊ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ. ಆ ಸಮಿತಿಯು ವರದಿಯನ್ನು ನೀಡಿದ ಕೂಡಲೇ ಅದನ್ನು ಅನುಷ್ಠಾನ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಸಿಎಂ ಹೇಳಿದರು. ಅಲ್ಲದೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಅಗತ್ಯವನ್ನು ಒತ್ತಿಹೇಳಿದರು.

ನಕ್ಸಲ್ ನಿಗ್ರಹ ಕಾರ್ಯಾಚರಣೆಯ ಬಗ್ಗೆ ಉಲ್ಲೇಖಿಸಿದ ಅವರು, ರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವೆಂದು ಘೋಷಿಸಿದ್ದೇವೆ. ಹಾಗೆಯೇ ನಾವೆಲ್ಲರೂ ನಮ್ಮ ಹೆಮ್ಮೆಯ ರಾಜ್ಯವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಘೋಷಿಸಬೇಕಾಗಿದೆ. ಈ ಹೋರಾಟದಲ್ಲಿ ಪ್ರತಿ ಪ್ರಜೆಯೂ ಯೋಧರಂತೆ ಕೆಲಸ ಮಾಡಬೇಕಾಗಿದೆ. ಸರ್ಕಾರವು ಈಗಾಗಲೇ ಈ ವಿಚಾರದಲ್ಲಿ ಸಕಲ ಆಯಾಮಗಳಲ್ಲಿ ಕೆಲಸ ಮಾಡುತ್ತಿದೆ ಎಂದರು.

ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕಿಡಿ

ಒಕ್ಕೂಟ ಸರ್ಕಾರವು ತೆರಿಗೆ ಮುಂತಾದ ಸಂಪನ್ಮೂಲಗಳನ್ನು ಹಂಚುವಾಗ ನಿಷ್ಪಕ್ಷಪಾತದ ಧೋರಣೆ ಅನುಸರಿಸುತ್ತಿಲ್ಲ. ಐಟಿ, ಇ.ಡಿ, ಸಿಬಿಐ ಮತ್ತು ಕೆಲವು ಸಾಂವಿಧಾನಿಕ ಸಂಸ್ಥೆಗಳು ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ನೈಜ ಮೌಲ್ಯಗಳ ಉಳಿವಿಗಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆಕ್ರೋಶವು ವಿವಿಧ ವೇದಿಕೆಗಳಿಂದ ವ್ಯಕ್ತವಾಗುತ್ತಿದೆ. ಈ ಕುರಿತು ಜವಾಬ್ದಾರಿಯುಳ್ಳ ನಾಗರಿಕರೆಲ್ಲ ಧ್ವನಿಯೆತ್ತಬೇಕಾಗಿದೆ ಎಂದು ಸಿದ್ದರಾಮಯ್ಯ ಕರೆ ನೀಡಿದರು. ಅಲ್ಲದೆ, ಕೇಂದ್ರದಿಂದ ಸಾಕಷ್ಟು ಪ್ರಮಾಣದಲ್ಲಿ ಯೂರಿಯಾ ಹಂಚಿಕೆ ಆಗುತ್ತಿಲ್ಲ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಜಮ್ಮಿ ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿಯಲ್ಲಿ ಮಡಿದವರು, ಪಾಕ್ ವಿರುದ್ಧ ಹೋರಾಡಿ ಮಡಿದವರಿಗೂ ಸಿದ್ದರಾಮಯ್ಯ ಗೌರವ ಅರ್ಪಿಸಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕರ್ನಾಟಕವು ಈಗ ತಲಾದಾಯದ ವಿಚಾರದಲ್ಲಿ ಮೊದಲ ಸ್ಥಾನದಲ್ಲಿದೆ. ತಲಾದಾಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಶೇ 101 ರಷ್ಟು ಪ್ರಗತಿಯನ್ನು ಸಾಧಿಸಿದ ರಾಜ್ಯ ನಮ್ಮ ಕರ್ನಾಟಕವಾಗಿದೆ. 2013-14 ರಲ್ಲಿ ಸ್ಥಿರ ದರಗಳಲ್ಲಿ 1,01,858 ರೂಪಾಯಿಗಳಷ್ಟಿದ್ದ ತಲಾದಾಯವು 2024-25 ರ ವೇಳೆಗೆ 2,04,605 ರೂಪಾಯಿಗಳಿಗೆ ತಲುಪಿದೆ ಎಂದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಪಾತ್ರ: ಇತಿಹಾಸದ ಮೆಲುಕು ಹಾಕಿದ ಸಿಎಂ

ಬ್ರಿಟಿಷ್ ಸಾಮ್ರಾಜ್ಯಶಾಹಿ ಆಳ್ವಿಕೆಯನ್ನು ಕಿತ್ತೆಸೆದು ಧೈರ್ಯ, ತ್ಯಾಗ, ಸ್ವರಾಜ್ಯದ ಸಂಕೇತ ಮತ್ತು ಸಮಸ್ತ ಶಕ್ತಿಯಾದ ತ್ರಿವರ್ಣ ಧ್ವಜವನ್ನು ಸಂಭ್ರಮದಿಂದ ಹಾರಿಸಲಾಯಿತು. ದೇಶವನ್ನು ದಾಸ್ಯದಿಂದ ಬಿಡುಗಡೆಗೊಳಿಸಲು ನಡೆದ ದೀರ್ಘಕಾಲದ ಹೋರಾಟದಲ್ಲಿ ಭಾಗವಹಿಸಿದ್ದ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭ ಭಾಯಿ ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾದ್, ಜವಾಹರ್ ಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಮುಂತಾದ ಎಲ್ಲಾ ಅಮರ ವೀರರನ್ನು ಧನ್ಯತಾಭಾವದಿಂದ ಸ್ಮರಿಸೋಣ. ಅವರಿಗೆ ನಮಿಸೋಣ. ಹಾಗೆಯೇ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿತ್ತು ಎಂಬುದು ಗಮನಾರ್ಹ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ದೋಂಡಿಯಾ ವಾಘ, ಹಲಗಲಿಯ ವೀರ ಬೇಡರು, ಮೈಲಾರ ಮಹಾದೇವಪ್ಪ, ಬೂದಿ ಬಸಪ್ಪ ನಾಯಕ ಮುಂತಾದವರು ಹಾಗೂ ಶ್ರೀರಂಗಪಟ್ಟಣ, ಸುರಪುರ, ಕಿತ್ತೂರು, ಈಸೂರು, ವಿಧುರಾಶ್ವತ್ಥ, ಶಿವಪುರ, ಅಂಕೋಲ ಮುಂತಾದ ಸ್ಥಳಗಳು ಬ್ರಿಟೀಷರನ್ನು ನಡುಗಿಸಿದ್ದವು. ಲಕ್ಷಾಂತರ ಜನರು ಸಕ್ರಿಯವಾಗಿ ಭಾಗವಹಿಸಿದ್ದರಲ್ಲದೆ ಸಾವಿರಾರು ಜನರು ಜೀವ ತ್ಯಾಗ ಮಾಡಿದ್ದಾರೆ. ಅವರೆಲ್ಲರನ್ನೂ ಕೃತಜ್ಞತಾ ಪೂರ್ವಕವಾಗಿ ಗೌರವಿಸೋಣ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ವಿಜಯಪುರದಲ್ಲಿದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಠ; ಆಂಗ್ಲರಿಗೆ ಸಿಂಹ ಸ್ವಪ್ನರಾಗಿದ್ದ ಅಂದಿನ ಪೀಠಾಧಿಪತಿ

ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಯೇ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾಮರಸ್ಯದಿಂದ ಕೂಡಿದ ಸಮೃದ್ಧ ಕರ್ನಾಟಕವನ್ನು ನಿರ್ಮಾಣ ಮಾಡುವುದರ ಮೂಲಕ ಸಶಕ್ತ ಭಾರತವನ್ನು ಕಟ್ಟೋಣ. ಸ್ವಾತಂತ್ರ್ಯ, ಸಂವಿಧಾನ ಹಾಗೂ ನೈಜ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವಕ್ಕಿಂತ ಮಿಗಿಲು ಎಂದು ಭಾವಿಸೋಣ. ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ್ಯ ಹಾಗೂ ನ್ಯಾಯಗಳನ್ನು ನಿರಂತರವಾಗಿ ರಕ್ಷಿಸಿಕೊಳ್ಳುವ ಪ್ರತಿಜ್ಞೆ ಮಾಡಿ ಈ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣಗೊಳಿಸೋಣ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ