AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RSS ಭಾರತ ದೇಶದ ತಾಲಿಬಾನ್: ವಿವಾದದ ಕಿಡಿಹೊತ್ತಿಸಿದ ಕೈ ಹಿರಿಯ ನಾಯಕ ಬಿಕೆ ಹರಿಪ್ರಸಾದ್

ಸ್ವಾತಂತ್ರ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಆರ್‌ಎಸ್‌ಎಸ್ ಅನ್ನು ಶ್ಲಾಘಿಸಿದ್ದಾರೆ. 103 ನಿಮಿಷ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಇತ್ತ ಮೋದಿ ಭಾಷಣವನ್ನು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರು ಟೀಕಿಸುವ ಭರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್​ ಎಸ್​ಎಸ್​) ಭಾರತದ ತಾಲಿಬಾನ್ ಎಂದಿದ್ದಾರೆ.

RSS ಭಾರತ ದೇಶದ ತಾಲಿಬಾನ್: ವಿವಾದದ ಕಿಡಿಹೊತ್ತಿಸಿದ ಕೈ ಹಿರಿಯ ನಾಯಕ ಬಿಕೆ ಹರಿಪ್ರಸಾದ್
RSS-Bk Hariprasad
ರಮೇಶ್ ಬಿ. ಜವಳಗೇರಾ
|

Updated on: Aug 17, 2025 | 3:47 PM

Share

ಬೆಂಗಳೂರು, (ಆಗಸ್ಟ್ 17): ಆರ್‌ಎಸ್‌ಎಸ್‌ ಭಾರತದ ತಾಲಿಬಾನ್‌  (RSS Indian Taliban) ಇದ್ದಂತೆ ಎಂದು ಕರ್ನಾಟಕ ಕಾಂಗ್ರೆಸ್ ವಿಧಾನ ಪರಿಷತ್‌ ಸದಸ್ಯ ಬಿಕೆ ಹರಿಪ್ರಸಾದ್‌ (BK Hariprasad) ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್‌ಎಸ್‌ಎಸ್ ಹೊಗಳಿದ್ದಕ್ಕಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶನಿವಾರ ಹರಿ ಪ್ರಸಾದ್, ಆರ್‌ಎಸ್‌ಎಸ್ ನವರು ದೇಶದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನಾನು ಆರ್‌ಎಸ್‌ಎಸ್ ಅನ್ನು ತಾಲಿಬಾನ್‌ಗೆ ಹೋಲಿಸುತ್ತೇನೆ. ಅವರು ಭಾರತೀಯ ತಾಲಿಬಾನ್‌ಗಳು ಮತ್ತು ಪ್ರಧಾನಿ ಅವರನ್ನು ಕೆಂಪು ಕೋಟೆಯಿಂದ ಶ್ಲಾಘಿಸುತ್ತಿದ್ದಾರೆ” ಎಂದು ಜರಿದಿದ್ದಾರೆ.

ಸ್ವಾತಂತ್ರ ಹೋರಾಟದಲ್ಲಿ ಸಂಘ ಪರಿವಾರದವರು ಪಾಲ್ಗೊಂಡಿದ್ದಾರೆಯೇ ಎಂದು ಪ್ರಶ್ನಿಸಿದ ಹರಿಪ್ರಸಾದ್, ಆರ್​​ ಎಸ್​ಎಸ್​ ನೊಂದಣಿ ಆಗಿರುವ ಸಂಘಟನೆ ಅಲ್ಲ. ಇಡೀ ದೇಶದಲ್ಲಿ ದೊಡ್ಡ ಸಂಘಟನೆ ಎಂದು ಬಿಂಬಿಸಿಕೊಳ್ಳುತ್ತಾರೆ. ಆದ್ರೆ, ಅವರಿಗೆ ಹಣ ಎಲ್ಲಿಂದ ಬರುತ್ತೆ. ಇತಿಹಾಸವನ್ನು ತಿರುಚುವುದರಲ್ಲಿ ಆರ್​ ಎಸ್​​ಎಸ್​ ಹಾಗೂ ಬಿಜೆಪಿಯವರು ಪ್ರವೀಣರು. ಕಳೆದ 52 ವರ್ಷಗಳಿಂದ ಆರ್​ ಎಸ್​ಎಸ್ ಕಚೇರಿ ಮೇಲೆ ತ್ರಿವರ್ಣಧ್ವಜ ಹಾರಿಸಿಲ್ಲ ಏಕೆ? ದೇಶಕ್ಕಾಗಿ ಪ್ರಾಣ ತೆತ್ತವರ ಹೆಸರನ್ನು ಹೇಳುವುದನ್ನು ಬಿಟ್ಟು ಓಲೈಕೆಗಾಗಿ ಮೋದಿಯವರು ಆರ್​ ಎಸ್​ಎಸ್​ ಅನ್ನು ಹೊಗಳಿದ್ದು ಸರಿಯಲ್ಲಿ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಬಿಹಾರದಲ್ಲಿ ಇಂದಿನಿಂದ ರಾಹುಲ್​​ ಗಾಂಧಿ ನೇತೃತ್ವದಲ್ಲಿ ‘ಮತದಾರರ ಅಧಿಕಾರ ಯಾತ್ರೆ’

ಮುಹಮ್ಮದ್ ಅಲಿ ಜಿನ್ನಾ, ಕಾಂಗ್ರೆಸ್ ಮತ್ತು ಆಗಿನ ವೈಸ್‌ರಾಯ್ ಲಾರ್ಡ್ ಮೌಂಟ್‌ಬ್ಯಾಟನ್ ಅವರು ದೇಶ ವಿಭಜನೆಗೆ ಕಾರಣ ಎಂದು ಎನ್‌ಸಿಇಆರ್‌ಟಿ ಪಠ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್ ಇತಿಹಾಸವನ್ನು ತಿರುಚುವ ಮಾಸ್ಟರ್ಸ್ ಎಂದು ತಿರುಗೇಟು ನೀಡಿದರು.

ವಿಭಜನೆಗಾಗಿ ಬಂಗಾಳದಲ್ಲಿ ಮೊದಲ ನಿರ್ಣಯವನ್ನು ಮಂಡಿಸಿದವರು ಫಜ್ಲುಲ್ ಹಕ್ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿ. ಜಿನ್ನಾ ಮತ್ತು ಸಾವರ್ಕರ್ ಎರಡೂ ಧರ್ಮಗಳಿಗೆ ಪ್ರತ್ಯೇಕ ರಾಜ್ಯ ಬೇಕು ಎಂದು ಅಭಿಪ್ರಾಯಪಟ್ಟರು. ಅವರು ಅದಕ್ಕೆ ಕಾಂಗ್ರೆಸ್ ಅನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ ವಾಗ್ದಾಳಿ

79ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸ್ವಾತಂತ್ರ್ಯೋತ್ಸವದ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಆರ್ ಎಸ್ ಎಸ್ ಅನ್ನು ಹಾಡಿ ಹೊಗಳಿರುವುದು ಸ್ವಾತಂತ್ರ್ಯ ಹೋರಾಟ, ರಾಷ್ಟ್ರಧ‍್ವಜ ಮತ್ತು ಸಂವಿಧಾನದ ನಿಜ ಆಶಯಗಳಿಗೆ ಮಾಡಿರುವ ಅವಮಾನವಾಗಿದೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ತಿರುಗೇಟು

ಆರ್‌ಎಸ್‌ಎಸ್‌ನ್ನು ತಾಲಿಬಾನ್‌ಗೆ ಹೋಲಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಹಾಗೂ ಸಿಎಂ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಒಂದು ಕಾಲದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ದೇಶಕ್ಕೆ ತುರ್ತು ಪರಿಸ್ಥಿತಿಯನ್ನು ಹೇರಿದ ಕಾಂಗ್ರೆಸ್ಸಿನಿಂದ ಪಾಠ ಕಲಿಯಬೇಕಾಗಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘವು ದೇಶಕ್ಕಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದೆ. ಕಾಂಗ್ರೆಸ್ ಪ್ರತಿಯೊಂದು ರಾಷ್ಟ್ರೀಯತಾವಾದಿ ಸಂಘಟನೆಯನ್ನು ನಿಂದಿಸುತ್ತದೆ. ನಿಂದಿಸುವುದು ಕಾಂಗ್ರೆಸ್‌ನ ಚಾಳಿ. ಪಿಎಫ್‌ಐ ಮತ್ತು ಸೆಮಿಯಂತಹ ನಿಷೇಧಿತ ಮೂಲಭೂತವಾದಿ ಸಂಘಟನೆಗಳನ್ನು ಪ್ರೀತಿಸುತ್ತದೆ . ಅವರಿಗೆ 1963ರ ಘಟನೆ ನೆನಪಿಲ್ಲವೇ ಎಂದು ತಿರುಗೇಟು ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.