ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆ ಭಾಷಣದಲ್ಲಿ ಆರ್‌ಎಸ್‌ಎಸ್ ಉಲ್ಲೇಖ; ಸಂಘದ ಪರ-ವಿರೋಧ ಚರ್ಚೆಯ ಮತ್ತೊಂದು ಮಗ್ಗುಲು
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್‌ಎಸ್‌ಎಸ್ ಬಗ್ಗೆ ಉಲ್ಲೇಖಿಸಿದ್ದರಿಂದ ಇದೀಗ ಸ್ವಾತಂತ್ರ್ಯ ಹೋರಾಟದಲ್ಲಿ ಸಂಘದ ಪಾತ್ರ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಂಘವು ಪಾಲ್ಗೊಂಡಿತ್ತೇ, ಇಲ್ಲವೇ? ಈ ಸಂಬಂಧದ ಒಟ್ಟಾರೆ ಬೆಳವಣಿಗೆಯ ಬಗ್ಗೆ ಪ್ರಶ್ನೋತ್ತರ ರೂಪದಲ್ಲಿ ಇಲ್ಲಿ ಮಾಹಿತಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನೆರವೇರಿಸಿದ ನಂತರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (Rashtriya Swayamsevak Sangh – RSS) ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಸಂಘ ಅಥವಾ ಆರ್‌ಎಸ್‌ಎಸ್ ಎಂದಷ್ಟೇ ಸಂಕ್ಷಿಪ್ತವಾಗಿ ಕರೆಸಿಕೊಳ್ಳುವ ಈ ಸಂಘಟನೆಯನ್ನು ನರೇಂದ್ರ ಮೋದಿ ‘ವಿಶ್ವದ ಅತಿದೊಡ್ಡ ಸರ್ಕಾರೇತರ ಸಂಸ್ಥೆ’ ಎಂದು ಹೊಗಳಿ, ಸಂಘದ ನೂರು ವರ್ಷಗಳ ಪಯಣದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆ ಭಾಷಣದ ಬಗ್ಗೆ ಹಲವು ವಿಶ್ಲೇಷಣೆಗಳು ಚಾಲ್ತಿಗೆ ಬಂದಿವೆ. ರಾಜಕೀಯ ಅಧಿಕಾರದ ಕೇಂದ್ರ ಸ್ಥಾನದಲ್ಲಿರುವ ವ್ಯಕ್ತಿಯ ಭಾಷಣವು ಹೀಗೆ ವಿಶ್ಲೇಷಣೆಗೆ ಒಳಪಡುವುದು ಸಹಜ. ಆದರೆ ಈ ಬಾರಿ ಮಾತ್ರ ಮತ್ತೊಮ್ಮೆ ಆರ್‌ಎಸ್‌ಎಸ್‌ನ ಕಾರ್ಯವೈಖರಿ ಬಗ್ಗೆ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಈ ಸಂಘಟನೆಯು ಪಾಲ್ಗೊಂಡಿತ್ತೆ? ಇಲ್ಲವೇ? ಎನ್ನುವ ಸಂಗತಿಗಳು ಹೆಚ್ಚು ಚರ್ಚೆಗೆ ಒಳಪಡುತ್ತಿವೆ. ಈ ಹಿನ್ನೆಲೆಯಲ್ಲಿ ಒಟ್ಟಾರೆ ಬೆಳವಣಿಗೆಯನ್ನು ಪ್ರಶ್ನೋತ್ತರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್‌ಎಸ್‌ಎಸ್ ಬಗ್ಗೆ ಹೇಳಿದ್ದೇನು?
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ಸ್ಯೋತ್ಸವ ಪ್ರಯುಕ್ತ ಈ ಬಾರಿ ಮಾಡಿದ ಭಾಷಣದ ಅವಧಿ 103 ನಿಮಿಷ. ಇಷ್ಟು ಸುದೀರ್ಘ ಅವಧಿಯ ಭಾಷಣ ಮಾಡಿದ ಮೊದಲ ಪ್ರಧಾನಿ ಎನ್ನುವ ದಾಖಲೆಯನ್ನೂ ಮೋದಿ ಅವರು ಈ ಮೂಲಕ ನಿರ್ಮಿಸಿದರು. ಇದೇ ಮೊದಲ ಬಾರಿಗೆ ಆರ್‌ಎಸ್‌ಎಸ್ ಬಗ್ಗೆಯೂ ಕೆಂಪುಕೋಟೆ ಭಾಷಣದಲ್ಲಿ ಪ್ರಸ್ತಾಪಿಸಿದರು. ‘ಸಂಘ’ದ ಬಗ್ಗೆ ಮೋದಿ ಹೇಳಿದ ಅತಿಮುಖ್ಯ ವಿಷಯಗಳಿವು;
- 100 ವರ್ಷಗಳ ಹಿಂದೆ ಜನ್ಮ ತಳೆದ ಸಂಘಟನೆ ಆರ್‌ಎಸ್‌ಎಸ್. 100 ವರ್ಷಗಳ ಅದರ ದೇಶಸೇವೆಯು ವೈಭವ ಮತ್ತು ಹೆಮ್ಮೆಯ ಪುಟಗಳನ್ನು ಬರೆದಿದೆ.
- ಸೇವೆ, ಬದ್ಧ, ಸಂಘಟನೆ ಮತ್ತು ಸಾಟಿಯಿಲ್ಲದ ಶಿಸ್ತಿಗೆ ಆರ್‌ಎಸ್‌ಎಸ್ ಮನೆಮಾತಾಗಿದೆ.
- ವಿಶ್ವದ ಅತಿದೊಡ್ಡ ಸರ್ಕಾರೇತರ ಸಂಸ್ಥೆಯಾಗಿರುವ ಆರ್‌ಎಸ್‌ಎಸ್‌ನ 100 ವರ್ಷಗಳ ಬದ್ಧ ಮತ್ತು ವೈಭವದ ಹಾದಿಯ ಬಗ್ಗೆ ದೇಶವು ಹೆಮ್ಮೆ ಪಡುತ್ತದೆ. ಅದು ನಮಗೆ ಸದಾ ಸ್ಫೂರ್ತಿಯಾಗಿರುತ್ತದೆ.
- ವ್ಯಕ್ತಿ ನಿರ್ಮಾಣ ಮತ್ತು ರಾಷ್ಟ್ರನಿರ್ಮಾಣದ ಮೂಲಕ ಮಾತೃಭೂಮಿಯ ಅಭ್ಯುದಯಕ್ಕೆ ಸಂಘದ ಸ್ವಯಂಸೇವಕರು ಶ್ರಮಿಸುತ್ತಿದ್ದಾರೆ. ಅವರ ಕೊಡುಗೆಯನ್ನು ನಾನು ಸ್ಮರಿಸುತ್ತೇನೆ.
ಕೆಂಪುಕೋಟೆ ಭಾಷಣದಲ್ಲಿ ಆರ್‌ಎಸ್‌ಎಸ್ ಕುರಿತ ಪ್ರಸ್ತಾವಕ್ಕೆ ಬಂದಿರುವ ಆಕ್ಷೇಪಗಳೇನು?
ಕೆಂಪುಕೋಟೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆರ್‌ಎಸ್‌ಎಸ್ ಹೊಗಳಿರುವುದನ್ನು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ನಾಯಕರು ಆಕ್ಷೇಪಿಸಿದ್ದಾರೆ. ಈ ವಿಚಾರದಲ್ಲಿ ಕೇಳಿ ಬಂದಿರುವ ಟೀಕೆಗಳು ಹೀಗಿವೆ;
- ಮೋದಿ ಅವರಿಗೆ ಇದೇ ವರ್ಷ ಸೆಪ್ಟೆಂಬರ್‌ಗೆ 75 ವರ್ಷ ತುಂಬುತ್ತದೆ. 75 ವರ್ಷಗಳ ನಂತರ ಸಕ್ರಿಯ ರಾಜಕಾರಣದಿಂದ ನಿವೃತ್ತರಾಗಬೇಕು ಎನ್ನುವ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಹಲವು ಕಾಂಗ್ರೆಸ್ ನಾಯಕರು, ಇದೀಗ ಮೋದಿ ಅವರು ಆರ್‌ಎಸ್‌ಎಸ್ ಓಲೈಕೆಗೆ ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
- ಅಸಹಕಾರ ಚಳವಳಿ (Civil Disobedience Movement), ಬ್ರಿಟಿಷರೇ ಭಾರತ ಬಿಟ್ಟು ತೊಲಗಿ (Quit India Movement) ಚಳವಳಿಗಳಲ್ಲಿ ಆರ್‌ಎಸ್‌ಎಸ್ ಸಕ್ರಿಯವಾಗಿ ಪಾಲ್ಗೊಂಡಿರಲಿಲ್ಲ. ಇದನ್ನು ಮರೆತು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಆರ್‌ಎಸ್‌ಎಸ್‌ಗೆ ಪ್ರಧಾನಿ ಮೆಚ್ಚುಗೆ ತೋರಿಸಿದ್ದಾರೆ ಎನ್ನುವುದು ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರ ಟೀಕೆಯಲ್ಲಿರುವ ಮುಖ್ಯ ಅಂಶಗಳಾಗಿವೆ.
ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಸಕ್ರಿಯ ಪಾತ್ರ ನಿರ್ವಹಿಸಿತ್ತೇ?
ಸಂಘ ಪರಿವಾರದ ಹಿರಿಯರನ್ನು ಈ ಕುರಿತು ಪ್ರಶ್ನಿಸಿದರೆ, ‘ಹೌದು, ಸಂಘ ಪರಿವಾರದ ಹಲವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು’ ಎಂದು ದಾಖಲೆಗಳ ಸಹಿತ ವಿವರಿಸುತ್ತಾರೆ. ಸಂಘ ಪರಿವಾರದ ಹಿರಿಯ ನಾಯಕರಾದ ರಾಮ್ ಮಾಧವ್ ಅವರು ‘ಆರ್‌ಎಸ್‌ಎಸ್ ಮತ್ತು ಸ್ವಾತಂತ್ರ್ಯ ಚಳವಳಿ’ (RSS and Freedom Movement) ಎನ್ನುವ ಸುದೀರ್ಘ ಲೇಖನವನ್ನು ‘ಮಲಯಾಳ ಮನೋರಮಾ’ ದಿನಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಈ ಲೇಖನ ಮತ್ತು ಇತರ ಕೆಲವು ಲಭ್ಯ ಮಾಹಿತಿಯ ಪ್ರಕಾರ ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ವಹಿಸಿದ್ದ ಪಾತ್ರದ ಮುಖ್ಯ ಅಂಶಗಳಿವು;
- ಆರ್‌ಎಸ್‌ಎಸ್ ಸ್ಥಾಪಿಸಿದ ಡಾ ಕೇಶವ ಬಲಿರಾಮ ಹೆಡಗೆವಾರ್ ಅವರು ಸ್ವತಃ ಹಲವು ಕ್ರಾಂತಿಕಾರಿಗಳ ಒಡನಾಟ ಇಟ್ಟುಕೊಂಡಿದ್ದರು. 12ನೇ ಜುಲೈ 1922 ರಂದು ನಾಗಪುರದ ಅಜ್ನಿ ಕಾರಾಗೃಹದಿಂದ ಹೆಡಗೆವಾರ್ ಅವರನ್ನು ಬಿಡುಗಡೆ ಮಾಡಿದಾಗ ನಡೆದ ಕಾರ್ಯಕ್ರಮದಲ್ಲಿ ಮೋತಿಲಾಲ್ ನೆಹರು ಹಾಗೂ ಹಕೀಮ್ ಅಜ್ಮಲ್ ಖಾನ್ ಮಾತನಾಡಿದ್ದರು.
- ಸಂಘವನ್ನು ಸ್ಥಾಪಿಸಿದ ಡಾ ಹೆಡಗೆವಾರ್ ಅವರ ಮುಖ್ಯ ಗುರಿ ಸ್ವರಾಜ್ಯವೇ ಆಗಿತ್ತು. ‘ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ತನು-ಮನ-ಧನದಿಂದ ಪ್ರಯತ್ನಿಸುತ್ತೇನೆ’ ಎನ್ನುವ ಪ್ರತಿಜ್ಞೆಯನ್ನು ಸ್ವಯಂಸೇವಕರಿಗೆ ಬೋಧಿಸಲಾಗುತ್ತಿತ್ತು.
- ಸ್ಯಾಂಡರ್ಸ್ ಹತ್ಯೆಯ ನಂತರ ರಾಜಗುರು ಅವರಿಗೆ ತಲೆಮರೆಸಿಕೊಳ್ಳಲು ಸ್ಥಳ ಒದಗಿಸಿಕೊಟ್ಟವರು ಸರಕಾರ್ಯವಾಹರಾದ ಭಯ್ಯಾಜಿ ದಾಣಿ.
- 1930, ಜನವರಿ 26 ರಂದು ಸ್ವಾತಂತ್ರ್ಯ ದಿನ ಆಚರಿಸುವಂತೆ ಎಲ್ಲ ಶಾಖೆಗಳಿಗೂ ಡಾ ಹೆಡಗೆವಾರ್ ಸೂಚನಾ ಪತ್ರ ಕಳಿಸಿಕೊಟ್ಟಿದ್ದರು. ಅಂದು ಸಂಜೆ 6 ಗಂಟೆಗೆ ಶಾಖೆಗಳಲ್ಲಿ ರಾಷ್ಟ್ರಧ್ವಜ ವಂದನೆ ನಡೆಸಿ, ‘ಸ್ವಾತಂತ್ರ್ಯದ ಕಲ್ಪನೆ ಮತ್ತು ಅವಶ್ಯಕತೆ’ ಕುರಿತು ಬೌದ್ಧಿಕ್ (ಉಪನ್ಯಾಸ) ನಡೆಸಲಾಯಿತು.
- ಡಿಸೆಂಬರ್ 15, 1932 ರಲ್ಲಿ ಮಧ್ಯಭಾರತ ಸರ್ಕಾರವು ಸರ್ಕಾರಿ ನೌಕರರು ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ನಿಷೇಧ ಹೇರಿತ್ತು. ಈ ನಿಷೇಧವನ್ನು ಕಾಂಗ್ರೆಸ್ ವಿರೋಧಿಸಿತ್ತು. ತೆರವುಗೊಳಿಸಲು ನೆರವಾಗಿತ್ತು.
- 1942 ರ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭೂಗತರಾಗಿ ಕೆಲಸ ಮಾಡಲು ನಿರ್ಧರಿಸಿದ ನಾಯಕರಿಗೆ ಆರ್‌ಎಸ್‌ಎಸ್ ಸ್ವಯಂಸೇವಕರು ಆಶ್ರಯ ನೀಡಿದ್ದರು. ಕ್ರಾಂತಿಕಾರಿಗಳು, ಮಂದಗಾಮಿಗಳು ಎಂದು ಲೆಕ್ಕಿಸದೇ ಎಲ್ಲ ದೇಶಭಕ್ತರಿಗೂ, ಹೋರಾಟಗಾರರಿಗೂ ಸಂಘದ ಕಾರ್ಯಕರ್ತರ ಮನೆಗಳಲ್ಲಿ ಆಶ್ರಯ ಸಿಗುತ್ತಿತ್ತು.
- ಸ್ವಾತಂತ್ರ್ಯ ಪ್ರಾಪ್ತಿಯಾದ ನಂತರವೂ ಕಾಶ್ಮೀರ, ಹೈದರಾಬಾದ್, ಜುನಾಗಢ, ಗೋವಾ ಪ್ರಾಂತ್ಯಗಳ ವಿಲೀನಕ್ಕೆ ಒತ್ತಾಯಿಸಿ ನಡೆದ ಹೋರಾಟಗಳಲ್ಲಿಯೂ ಆರ್‌ಎಸ್‌ಎಸ್ ಕಾರ್ಯಕರ್ತರು ಸಕ್ರಿಯರಾಗಿ ಪಾಲ್ಗೊಂಡಿದ್ದರು.
ಜಂಗಲ್ ಸತ್ಯಾಗ್ರಹ ಎಂದರೇನು? ಸಂಘ ಪರಿವಾರದ ವಲಯದಲ್ಲಿ ಇದಕ್ಕೇಕೆ ಅಷ್ಟು ಮಹತ್ವ?
ಚೌರಿಚೌರಾ ಘಟನೆಯಾದ ಎಂಟು ವರ್ಷಗಳ ನಂತರ, ಅಂದರೆ ಏಪ್ರಿಲ್ 6, 1930 ರಂದು ಮಹಾತ್ಮಾ ಗಾಂಧಿ ಅವರು ಉಪ್ಪಿನ ಸತ್ಯಾಗ್ರಹ ಆರಂಭಿಸಿದರು. ಸಂಘವು ಉಪ್ಪಿನ ಸತ್ಯಾಗ್ರಹದ ಬದಲು ಅರಣ್ಯ ಕಾನೂನು ಭಂಗಕ್ಕಾಗಿ ಸತ್ಯಾಗ್ರಹ ನಡೆಸಲು ನಿರ್ಧರಿಸಿತು. ಡಾ ಹೆಡಗೆವಾರ್ ಅವರು 11 ಸ್ವಯಂಸೇವಕರೊಂದಿಗೆ ಸತ್ಯಾಗ್ರಹದಲ್ಲಿ ಸ್ವತಃ ಪಾಲ್ಗೊಂಡರು. ಈ ಸತ್ಯಾಗ್ರಹದ ನಂತರ ಹೆಡಗೆವಾರ್ ಅವರಿಗೆ 11 ತಿಂಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. ಉಳಿದ 11 ಜನರಿಗೆ 4 ತಿಂಗಳ ಸೆರೆವಾಸ ವಿಧಿಸಲಾಯಿತು. ಸತ್ಯಾಗ್ರಹದ ಸಂದರ್ಭದಲ್ಲಿ ಪೊಲೀಸರ ಹಿಂಸೆಗೆ ಒಳಗಾಗುವ ಸತ್ಯಾಗ್ರಹಿಗಳ ಸುರಕ್ಷತೆಗಾಗಿ 100 ಸ್ವಯಂಸೇವಕರ ತಂಡವನ್ನು ರಚಿಸಲಾಗಿತ್ತು. ಸಂಘ ಪರಿವಾರದ ಹಿರಿಯರು ಈ ಸತ್ಯಾಗ್ರಹದ ಉದಾಹರಣೆಯನ್ನು ನೀಡುವ ಮೂಲಕ ಸಂಘವು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿತ್ತು ಎಂದು ಹಿರಿಯ ಸ್ವಯಂ ಸೇವಕರು ನೆನಪಿಸಿಕೊಳ್ಳುತ್ತಾರೆ.
ಕರ್ನಾಟಕದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ನಿರ್ದಿಷ್ಟ ಉದಾಹರಣೆಗಳು ಇವೆಯೇ?
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಈ ಕುರಿತು ನಿರ್ದಿಷ್ಟ ಉದಾಹರಣೆ ಸಿಗುತ್ತದೆ. ಇಂಥ ಹಲವು ಉದಾಹರಣೆಗಳು ದೇಶದ ಇತರೆಡೆಯೂ ಸಹಜವಾಗಿ ಇದ್ದೇ ಇರುತ್ತದೆ.
ಆರ್‌ಎಸ್‌ಎಸ್ ಪಾಪಣ್ಣ (1923-2005) ಎಂದೇ ದೊಡ್ಡಬಳ್ಳಾಪುರದಲ್ಲಿ ಹೆಸರುವಾಸಿಯಾಗಿದ್ದ ಡಿ.ಪಾಪಣ್ಣನವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದವರು. 1946ರಲ್ಲಿ ದೊಡ್ಡಬಳ್ಳಾಪುರದಲ್ಲಿ ಮೊದಲ ಬಾರಿಗೆ ಆರ್‌ಎಸ್‌ಎಸ್ ಶಾಖೆ ಆರಂಭಿಸಿದವರು ಇವರೇ. ಪಾಪಣ್ಣನವರ ಮೇಲಿದ್ದ ಪ್ರೀತಿಯಿಂದಲೇ ಸಂಘದ ಹಿರಿಯ ಅಧಿಕಾರಿಗಳಾಗಿದ್ದ ಹೊ.ವೆ.ಶೇಷಾದ್ರಿ, ಜಗನ್ನಾಥರಾವ್ ಜೋಶಿ ಅವರಂಥವರೂ ದೊಡ್ಡಬಳ್ಳಾಪುರಕ್ಕೆ ಬಂದಿದ್ದರು ಎಂದು ಹಳಬರು ನೆನಪಿಸಿಕೊಳ್ಳುತ್ತಾರೆ. 1975ರಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾದಾಗ, ಅದನ್ನು ವಿರೋಧಿಸಿ ನಡೆದ ಹೋರಾಟಗಳಲ್ಲೂ ಪಾಪಣ್ಣನವರು ಮುಂಚೂಣಿಯಲ್ಲಿದ್ದರು. ಸಾಮಾಜಿಕ ಚಟುವಟಿಕೆಗಳಿಗೇ ಹೆಚ್ಚು ಸಮಯ ಕೊಡುತ್ತಿದ್ದ ಕಾರಣ ಆರ್ಥಿಕವಾಗಿ ಇವರು ತೀವ್ರ ಸಂಕಷ್ಟ ಎದುರಿಸಬೇಕಾಯಿತು.

ದೊಡ್ಡಬಳ್ಳಾಪುರದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲಿಗೆ ಹೋಗಿದ್ದ ಆರ್‌ಎಸ್‌ಎಸ್ ಕಾರ್ಯಕರ್ತರಾದ ಡಿ.ವಿ.ಶ್ರೀನಿವಾಸ ಶರ್ಮಾ ಮತ್ತು ಪಾಪಣ್ಣ
ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದ ಮತ್ತೋರ್ವ ಹೋರಾಟಗಾರ ಡಿ.ವಿ.ಶ್ರೀನಿವಾಸಶರ್ಮಾ ಸಹ ದೊಡ್ಡಬಳ್ಳಾಪುರದಲ್ಲಿ ಆರ್‌ಎಸ್‌ಎಸ್ ಆರಂಭಿಸಿದ ಹಿರಿಯರು. ಸಾಮಾಜಿಕ ಚಟುವಟಿಕೆಗಳಿಗೇ ಹೆಚ್ಚು ಗಮನಕೊಟ್ಟ ಕಾರಣ ಇವರ ಕುಟುಂಬವೂ ಆರ್ಥಿಕ ಸಂಕಷ್ಟ ಅನುಭವಿಸಬೇಕಾಯಿತು. ಇಂದಿಗೂ ಈ ಇಬ್ಬರ ವಂಶಸ್ಥರು ದೊಡ್ಡಬಳ್ಳಾಪುರದಲ್ಲಿದ್ದಾರೆ. ಈ ಕಥನಗಳು ಅಧಿಕೃತವಾಗಿ ‘ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ – ದೊಡ್ಡಬಳ್ಳಾಪುರ’ ಪುಸ್ತಕದಲ್ಲಿಯೂ ದಾಖಲಾಗಿದೆ.

ಆರ್‌ಎಸ್‌ಎಸ್ ಸಂಸ್ಥಾಪಕರಾದ ಡಾ ಕೇಶವ ಬಲಿರಾಂ ಹೆಡಗೇವಾರ್ ಅವರ ನೆನಪಿನಲ್ಲಿ ಭಾರತ ಸರ್ಕಾರ ಹೊರತಂದಿರುವ ಅಂಚೆಚೀಟಿ
ಆರ್‌ಎಸ್‌ಎಸ್ ಮತ್ತು ಸ್ವಾತಂತ್ರ್ಯ ಹೋರಾಟ: ಏಕಿಷ್ಟು ಗೊಂದಲ?
ಆರ್‌ಎಸ್‌ಎಸ್ ಕಾರ್ಯನಿರ್ವಹಣೆಯ ಶೈಲಿಯು ಸಂಘ ಪರಿವಾರದ ಹೊರಗಿನವರಿಗೆ ಅರ್ಥವಾಗುವುದು ತುಸು ಕಷ್ಟ. ಸಂಘ ಪರಿವಾರದ ಕಾರ್ಯಕರ್ತರಿಗೆ ಅವರ ವೈಯಕ್ತಿಕ ಜೀವನದ ಕುರಿತಂತೆ ಸಂಘವು ಪ್ರತ್ಯಕ್ಷ, ಪರೋಕ್ಷವಾಗಿ ನಿಯಂತ್ರಣ ಹೇರುವುದಿಲ್ಲ. ಹೀಗೆ ಮಾಡಿ, ಹೀಗೆ ಬಿಡಿ ಎಂದು ನಿರ್ದೇಶನವನ್ನೂ ಕೊಡುವುದಿಲ್ಲ. ‘ರಾಷ್ಟ್ರದ ಹಿತದೃಷ್ಟಿಯಿಂದ ಏನೆಲ್ಲಾ ಮಾಡಬಹುದೋ ಮಾಡಿ’ ಎನ್ನುವ ಸ್ಥೂಲ ಚೌಕಟ್ಟು, ನಂಬಿಕೆ, ಶಿಸ್ತು ಮತ್ತು ಅನುಶಾಸನದ ಆಧಾರದಲ್ಲಿ ಇಡೀ ವ್ಯವಸ್ಥೆ ನಡೆಯುತ್ತಿರುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಒಂದು ಸಂಘಟನೆಯಾಗಿ ಪಾಲ್ಗೊಂಡಿತ್ತು ಅಥವಾ ಇಲ್ಲ ಎನ್ನುವುದು ಕಪ್ಪು ಅಥವಾ ಬಿಳುಪಿನಷ್ಟು ನಿಖರವಾಗಿ ಉತ್ತರಿಸಲು ಸಾಧ್ಯವಿಲ್ಲದ ಪ್ರಶ್ನೆ. ಈ ಕುರಿತು ಹಲವು ವಾಗ್ವಾದಗಳಿವೆ. ಆದರೆ ಆರ್‌ಎಸ್‌ಎಸ್‌ನ ಅಂದಿನ ಕಾರ್ಯಕರ್ತರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು, ಹಲವು ಕ್ರಾಂತಿಕಾರಿಗಳಿಗೆ ಆಶ್ರಯ ಕೊಟ್ಟಿದ್ದರು, ಸ್ವತಃ ಬ್ರಿಟಿಷರ ಲಾಠಿ ಪೆಟ್ಟು ತಿಂದಿದ್ದರು ಎನ್ನಲು ಮಾತ್ರ ನಿರಾಕರಿಸಲು ಸಾಧ್ಯವಿಲ್ಲದಷ್ಟು ಸಾಕ್ಷ್ಯಗಳು ಸಿಗುತ್ತವೆ.
ಬರಹ: ಡಿ.ಎಂ.ಘನಶ್ಯಾಮ
Published On - 10:15 am, Tue, 19 August 25




