ರೈತರಿಗೆ ಅನ್ಯಾಯ ಆಗೋಕೆ ಬಿಡಲ್ಲ; ಭಾರತವನ್ನು ತಡೆಯೋ ಶಕ್ತಿ ಯಾರಿಗೂ ಇಲ್ಲ: ಪ್ರಧಾನಿ ಮೋದಿ
Narendra Modi speech during Independence day celebrations: ಆರ್ಥಿಕ ಸ್ವಾರ್ಥ ಹೆಚ್ಚುತ್ತಿದೆ. ಬೇರೆ ದೇಶದ ಬಗ್ಗೆ ಚಿಂತೆ ಪಡುವ ಬದಲು ನಮ್ಮ ಗುರಿಯತ್ತ ಸಾಗೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಕೆಂಪುಕೋಟೆಯಲ್ಲಿ 79ನೇ ಸ್ವಾತಂತ್ರ್ಯ ದಿನೋತ್ಸವ ಭಾಷಣ ಮಾಡಿದ ಪ್ರಧಾನಿಗಳು, ಅಮೆರಿಕವನ್ನು ಪರೋಕ್ಷವಾಗಿ ಕುಟುಕಿದ್ದಾರೆ. ಕಡಿಮೆ ಬೆಲೆ, ಉತ್ತಮ ಗುಣಮಟ್ಟದೊಂದಿಗೆ ಭಾರತದ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯನ್ನು ಆಕ್ರಮಿಸಲಿ ಎಂದು ಕರೆ ನೀಡಿದ್ದಾರೆ ಮೋದಿ.

ನವದೆಹಲಿ, ಆಗಸ್ಟ್ 15: ಭಾರತದ ಅಮೆರಿಕದಿಂದ ಮನಬಂದಂತೆ ಸುಂಕ ಹೇರಲಾಗುತ್ತಿರುವ ನಡುವೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸ್ವಾತಂತ್ರ್ಯೋತ್ಸವ (India Independence Day) ಸಂದರ್ಭದಲ್ಲಿ ಖಡಕ್ ಸಂದೇಶವೊಂದನ್ನು ರವಾನಿಸಿದ್ದಾರೆ. ಭಾರತದ ಓಟವನ್ನು ತಡೆದು ನಿಲ್ಲಿಸಲು ಸಾಧ್ಯವಿಲ್ಲ. ಗುಣಮಟ್ಟದ ಉತ್ಪನ್ನಗಳ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ನಿಲ್ಲಬಲ್ಲೆ ಎಂದು ಭಾರತ ತನ್ನ ಸಾಮರ್ಥ್ಯ ತೋರುವ ಸಂದರ್ಭ ಬಂದಿದೆ ಎಂದು ಹೇಳಿದ್ದಾರೆ.
ಭಾರತದ 79ನೇ ಸ್ವಾತಂತ್ರ್ಯ ದಿನೋತ್ಸವದ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ನರೇಂದ್ರ ಮೋದಿ, ಅಮೆರಿಕದ ಟ್ಯಾರಿಫ್ಗಳಿಗೆ ಹೆದರುವ ಸಂಭವ ಇಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ‘ರೈತರ ಹಿತಾಸಕ್ತಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ದೇಶಕ್ಕೆ ಹಿನ್ನಡೆ ತರುವ ಯಾವುದೇ ನಿರ್ಧಾರವನ್ನೂ ತೆಗೆದುಕೊಳ್ಳುವುದಿಲ್ಲ’ ಎಂದು ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆ ಪ್ರಧಾನಿಗಳು.
ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ನಿಂತು ಸುದರ್ಶನ ಚಕ್ರ ಮಿಷನ್ ಘೋಷಿಸಿದ ಮೋದಿ, ಹಾಗೆಂದರೇನು?
ಆರ್ಥಿಕ ಸ್ವಾರ್ಥ ಹೆಚ್ಚುತ್ತಿದೆ: ನರೇಂದ್ರ ಮೋದಿ
‘ಆರ್ಥಿಕ ಸ್ವಾರ್ಥತೆ ಹೆಚ್ಚುತ್ತಿದೆ. ಬೇರೆ ದೇಶದ ಬಗ್ಗೆ ಚಿಂತೆ ಪಡಬಾರದು. ನಮ್ಮ ಗುರಿಗಳತ್ತ ನಾವು ಮುನ್ನುಗ್ಗುವ ಸಮಯ ಇದು’ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
‘ದಾಮ್ ಕಮ್, ದಮ್ ಜ್ಯಾದಾ (ಕಡಿಮೆ ಬೆಲೆ, ಅಧಿಕ ಗುಣಮಟ್ಟ) ಎಂಬುದು ನಮ್ಮ ಮಂತ್ರವಾಗಿರಬೇಕು’ ಎಂದು ದೇಶದ ಮುಂದಿನ ಗುರಿಯನ್ನು ತೆರೆದಿಟ್ಟಿದ್ದಾರೆ.
‘ಇತಿಹಾಸ ರಚಿಸಲು ಇದು ಸರಿಯಾದ ಸಮಯ. ಜಾಗತಿಕ ಮಾರುಕಟ್ಟೆಯನ್ನು ನಾವು ಆಳಬೇಕು. ನಮ್ಮಲ್ಲಿ ಉತ್ಪಾದನಾ ವೆಚ್ಚ ಕಡಿಮೆ ಇದೆ. ಉತ್ತಮ ಗುಣಮಟ್ಟದ ಉತ್ಪನ್ನಗಳೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಸಮಯ ಬಂದಿದೆ’ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಶೀಘ್ರ ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್ಗಳು ಸಿದ್ಧ: ಮೋದಿ ಘೋಷಣೆ
‘ದೇಶದ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ಭಾರತದ ಕನಸು ಕಂಡಿದ್ದರು. ಹಾಗೆಯೇ, ಈಗ ಸಮರ್ಥ ಭಾರತ ನಿರ್ಮಿಸುವ ಸಂಕಲ್ಪ ತೊಡಬೇಕಿದೆ. ಬೇರೆಯವರನ್ನು ಹೀಗಳೆಯಲು ನಮ್ಮ ಶಕ್ತಿ ವ್ಯರ್ಥ ಮಾಡಬಾರದು. ನಮ್ಮನ್ನು ಬಲಪಡಿಸಿಕೊಳ್ಳುವುದು ಧ್ಯೇಯವಾಗಿರಬೇಕು’ ಎಂದು ಪ್ರಧಾನಿಗಳು ಕರೆ ನೀಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








