Indian Railways: ಕೇವಲ 45 ಪೈಸೆಗೆ 10 ಲಕ್ಷ ರೂ ಇನ್ಷೂರೆನ್ಸ್; ಇದು ರೈಲು ಪ್ರಯಾಣಿಕರಿಗೆ ಸಿಗೋ ಅವಕಾಶ
Train travel insurance for 45 paise: ಭಾರತದ ರೈಲುಗಳಲ್ಲಿ ಪ್ರಯಾಣಿಸುವಾಗ ಟ್ರಾವಲ್ ಇನ್ಷೂರೆನ್ಸ್ ಪಡೆಯಬಹುದು. ಆನ್ಲೈನಲ್ಲಿ ಟಿಕೆಟ್ ಬುಕ್ ಮಾಡುವಾಗಲೇ ಇನ್ಷೂರೆನ್ಸ್ ಖರೀದಿಸಬಹುದು. ಕೇವಲ 45 ಪೈಸೆಗೆ 10 ಲಕ್ಷ ರೂ ವಿಮಾ ಕವರೇಜ್ ಇರುತ್ತದೆ. ರಿಸರ್ವೇಶನ್ ಟಿಕೆಟ್ಗೆ ಈ ಸೌಲಭ್ಯ ಇರುತ್ತದೆ. ಜನರಲ್ ಕೋಚ್ನಲ್ಲಿ ಪ್ರಯಾಣಿಸುವವರಿಗೆ ಇದು ಲಭ್ಯ ಇರೋದಿಲ್ಲ.

ನವದೆಹಲಿ, ಆಗಸ್ಟ್ 14: ಭಾರತದಲ್ಲಿ ನಿತ್ಯವೂ ಕೋಟಿಗಟ್ಟಲೆ ಜನರು ರೈಲಿನಲ್ಲಿ (Indian Railways) ಪ್ರಯಾಣಿಸುತ್ತಾರೆ. ಇದು ದೇಶದಲ್ಲಿರುವ ಅತ್ಯಂತ ಕಡಿಮೆ ವೆಚ್ಚದ ಸಾಗಣೆ ವ್ಯವಸ್ಥೆ ಎನಿಸಿದೆ. ಇದರ ಟಿಕೆಟ್ ದರ ಬಹಳ ಕಡಿಮೆ. ದಣಿವಾಗದೆ ಆರಾಮವಾಗಿ ಪ್ರಯಾಣಿಸಬಹುದು. ಇದರ ಜೊತೆಗೆ ಭಾರತೀಯ ರೈಲ್ವೇಸ್ ತನ್ನ ಪ್ರಯಾಣಿಕರಿಗೆ ಇತರ ಸೌಲಭ್ಯಗಳನ್ನೂ ಒದಗಿಸುತ್ತದೆ. ಪ್ರಯಾಣಿಕರಿಗೆ ಬಹಳ ಕಡಿಮೆ ದರದಲ್ಲಿ ಟ್ರಾವಲ್ ಇನ್ಷೂರೆನ್ಸ್ ಕೊಡುತ್ತದೆ.
ಕೇವಲ 45 ಪೈಸೆಗೆ 10 ಲಕ್ಷ ರೂ ಇನ್ಷೂರೆನ್ಸ್
ನೀವು ರೈಲು ಪ್ರಯಾಣಕ್ಕೆ ಟಿಕೆಟ್ ಖರೀದಿಸುವಾಗ ಟ್ರಾವಲ್ ಇನ್ಷೂರೆನ್ಸ್ ಅನ್ನೂ ಖರೀದಿಸಬಹುದು. ಟಿಕೆಟ್ ಜೊತೆಗೆ ಹೆಚ್ಚುವರಿಯಾಗಿ 45 ಪೈಸೆಯನ್ನು ತೆರಬೇಕಾಗುತ್ತದೆ. ಇದಕ್ಕೆ 10 ಲಕ್ಷ ರೂ ಕವರೇಜ್ ಇರುತ್ತದೆ.
ರೈಲಿನಲ್ಲಿ ಪ್ರಯಾಣಿಸುವಾಗ ಅಪಘಾತವಾಗಿ ಪ್ರಯಾಣಿಕ ಮೃತಪಟ್ಟರೆ 10 ಲಕ್ಷ ರೂ ಪರಿಹಾರ ಕೊಡಲಾಗುತ್ತದೆ. ಪ್ರಯಾಣದ ವೇಳೆ ಗಾಯ ಅಥವಾ ಊನವಾದರೆ ಅದಕ್ಕೆ ನಿರ್ದಿಷ್ಟ ಪರಿಹಾರವನ್ನೂ ನೀಡಲಾಗುತ್ತದೆ.
ಇದನ್ನೂ ಓದಿ: 25,000 ರೂಗಿಂತ ಹೆಚ್ಚಿನ ಮೊತ್ತದ ಆನ್ಲೈನ್ ಟ್ರಾನ್ಸ್ಫರ್; ಈ ಬ್ಯಾಂಕ್ ವಿಧಿಸುತ್ತೆ ಶುಲ್ಕ
ಆನ್ಲೈನ್ನಲ್ಲಿ ಟಿಕೆಟ್ ಬುಕಿಂಗ್ ಮಾಡಿದವರಿಗೆ…
ಐಆರ್ಸಿಟಿಸಿ ವೆಬ್ಸೈಟ್ ಅಥವಾ ಐಆರ್ಸಿಟಿಸಿ ಆ್ಯಪ್ ಮೂಲಕ ರೈಲು ಟಿಕೆಟ್ಗಳನ್ನು ಬುಕ್ ಮಾಡಿದವರಿಗೆ ಟ್ರಾವಲ್ ಇನ್ಷೂರೆನ್ಸ್ ಖರೀದಿಸುವ ಅವಕಾಶ ಇರುತ್ತದೆ. ರಿಸರ್ವೇಶನ್ ಕೋಚ್ಗಳ ಟಿಕೆಟ್ಗಳಿಗೆ ಈ ಅವಕಾಶ ಇರುತ್ತದೆ.
ರೈಲು ನಿಲ್ದಾಣಗಳಲ್ಲಿರುವ ಕೌಂಟ್ಗಳಲ್ಲಿ ಟಿಕೆಟ್ ಖರೀದಿಸುವವರಿಗೆ ಟ್ರಾವಲ್ ಇನ್ಷೂರೆನ್ಸ್ ಖರೀದಿಸುವ ಅವಕಾಶ ಇರುವುದಿಲ್ಲ. ಜನರಲ್ ಕೋಚ್ಗಳಲ್ಲಿ ಪ್ರಯಾಣಿಸುವವರಿಗೂ ಈ ಇನ್ಷೂರೆನ್ಸ್ ಲಭ್ಯ ಇರುವುದಿಲ್ಲ. ಐದು ವರ್ಷದೊಳಗಿನ ಪ್ರಯಾಣಿಕರಿಗೂ ಲಭ್ಯ ಇರುವುದಿಲ್ಲ.
ನೀವು ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಿದಾಗ, ಇನ್ಷೂರೆನ್ಸ್ ಆಯ್ಕೆ ಮಾಡಬಹುದು. ಆಗ ಪ್ರಯಾಣಿಕರ ನೊಂದಾಯಿತ ಇಮೇಲ್ ಮತ್ತು ಮೊಬೈಲ್ ನಂಬರ್ಗೆ ಇನ್ಷೂರೆನ್ಸ್ ಕಂಪನಿಯಿಂದ ಒಂದು ಲಿಂಕ್ ಇರುವ ಮೆಸೇಜ್ ಬರುತ್ತದೆ. ಆಗ ಪ್ರಯಾಣಿಕರು ಆ ಲಿಂಕ್ ಕ್ಲಿಕ್ ಮಾಡಿ, ಇನ್ಷೂರೆನ್ಸ್ ಪ್ಲಾನ್ಗೆ ನಾಮಿನಿ ಹೆಸರಿಸಬೇಕು. ಪ್ರಯಾಣದ ವೇಳೆ ಆಕಸ್ಮಿಕವಾಗಿ ಸಾವಾದರೆ ನಾಮಿನಿಗೆ ಪರಿಹಾರ ಹಣ ಸಿಗುತ್ತದೆ.
ಇದನ್ನೂ ಓದಿ: ಆರ್ಬಿಐ ಹೊಸ ವ್ಯವಸ್ಥೆ: ಚೆಕ್ ಡೆಪಾಸಿಟ್ ಆಗಲು 2 ದಿನ ಕಾಯಬೇಕಿಲ್ಲ; ಕೆಲವೇ ಗಂಟೆಯಲ್ಲಿ ಹಣ ಬರುತ್ತೆ
ಇನ್ಷೂರೆನ್ಸ್ ಕವರೇಜ್ ಹೇಗಿರುತ್ತೆ?
ನೀವು ಆನ್ಲೈನ್ನಲ್ಲಿ ಟಿಕೆಟ್ ಜೊತೆ ಖರೀದಿಸುವ ಟ್ರಾವಲ್ ಇನ್ಷೂರೆನ್ಸ್ನ ರಕ್ಷಣೆಯು ನೀವು ರೈಲು ಹತ್ತಿದ ಘಳಿಗೆಯಿಂದ ಆರಂಭವಾಗುತ್ತದೆ. ನೀವು ನಿಲ್ದಾಣ ತಲುಪಿ ಹೊರಗೆ ಕಾಲಿಡುವವರೆಗೂ ವಿಮೆ ಅನ್ವಯ ಆಗುತ್ತದೆ.
ಈ ಅವಧಿಯಲ್ಲಿ ರೈಲು ಅಪಘಾತವಾಗಿ ಪ್ರಯಾಣಿಕ ಮೃತಪಟ್ಟರೆ ನಾಮಿನಿಗೆ 10 ಲಕ್ಷ ರೂ ಪರಿಹಾರ ಸಿಗುತ್ತದೆ. ಮೃತ ವ್ಯಕ್ತಿಯ ದೇಹವನ್ನು ಅವರ ಮನೆಗೆ ಸಾಗಿಸಲು 10,000 ರೂವರೆಗೆ ನೀಡಲಾಗುತ್ತದೆ. ಖಾಯಂ ಅಂಗ ಊನವಾದರೆ 7.5 ಲಕ್ಷ ರೂವರೆಗೆ ಪರಿಹಾರ ಸಿಗುತ್ತದೆ. ಇತರ ಗಾಯಗಳಾದರೆ 2 ಲಕ್ಷ ರೂವರೆಗಿನ ವೆಚ್ಚವನ್ನು ಭರಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




