
ಹೆಚ್ಚಿನ ಮನೆಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಟೀ ಮಾಡೇ ಮಾಡ್ತಾರೆ. ಮತ್ತು ಚಹಾ ಮಾಡಿದ ಬಳಿಕ ಬಳಸಿದ ಚಹಾ ಪುಡಿಯನ್ನು (tea leaves) ಕಸದ ಬುಟ್ಟಿಗೆ ಎಸೆಯುವ ತಪ್ಪನ್ನು ಸಹ ಮಾಡುತ್ತಾರೆ. ಹೀಗೆ ಎಸೆಯುವ ಬದಲು ಬಳಸಿದ ಚಹಾ ಪುಡಿಯನ್ನು ಹಲವು ರೀತಿಯಲ್ಲಿ ಮರು ಬಳಕೆ ಮಾಡಬಹುದು. ಚಹಾ ಎಲೆಗಳು ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ಹೊಂದಿದ್ದು, ಬಳಸಿದ ಟೀ ಪುಡಿಯನ್ನು ಹೇಗೆಲ್ಲಾ ಮರು ಬಳಕೆ ಮಾಡಬಹುದು, ಅವುಗಳಿಂದ ಏನೆಲ್ಲಾ ಉಪಯೋಗಗಳಿವೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.
ಬಳಸಿದ ಚಹಾ ಪುಡಿಯನ್ನು ಈ ರೀತಿ ಮರುಬಳಕೆ ಮಾಡಿ:
ಗಿಡಗಳಿಗೆ ಗೊಬ್ಬರ: ಬಳಸಿದ ಚಹಾ ಪುಡಿ ಸಸ್ಯಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಅವು ಮಣ್ಣಿಗೆ ಸಾವಯವ ಪದಾರ್ಥ ಮತ್ತು ಸ್ವಲ್ಪ ಆಮ್ಲೀಯ ಅಂಶವನ್ನು ಒದಗಿಸುತ್ತವೆ, ಇದು ಹೂಬಿಡುವ ಸಸ್ಯಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಬಳಸಿದ ಚಹಾ ಪುಡಿಯನ್ನು ಯಾವುದೇ ಹಾಲು ಅಥವಾ ಸಕ್ಕರೆ ಕಣಗಳು ಉಳಿಯದಂತೆ ನೀರಿನಿಂದ ತೊಳೆದು ಒಣಗಿಸಿ ನೇರವಾಗಿ ಮಣ್ಣಿನಲ್ಲಿ ಮಿಶ್ರಣ ಮಾಡಿ ಅಥವಾ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಗಿಡಗಳ ಬುಡಕ್ಕೆ ಹಾಕಿ.
ಪಾತ್ರೆಗಳನ್ನು ಸ್ವಚ್ಛಗೊಳಿಸಬಹುದು: ನಾನ್-ಸ್ಟಿಕ್ ಪಾತ್ರೆಗಳು ಸರಿಯಾಗಿ ಕ್ಲೀನ್ ಆಗದಿದ್ದರೆ, ಬಳಸಿದ ಚಹಾ ಪುಡಿಯನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಸ್ವಲ್ಪ ವಿನೆಗರ್ ಸೇರಿಸಿ ಈ ದ್ರಾವಣವನ್ನು ನಾನ್‌ಸ್ಟಿಕ್ ಪಾತ್ರೆಗೆ ಸೇರಿಸಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ಆ ಪಾತ್ರೆಯನ್ನು ಡಿಶ್‌ವಾಶ್ ಲಿಕ್ವಿಡ್‌ನಿಂದ ಸ್ವಚ್ಛಗೊಳಿಸಿ. ಇದು ಯಾವುದೇ ಹಾನಿಯಾಗದಂತೆ ನಾನ್‌ಸ್ಟಿಕ್ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತವೆ ಮತ್ತು ವಾಸನೆಯನ್ನು ತೆಗೆದುಹಾಕುತ್ತದೆ.
ಫ್ರಿಡ್ಜ್ ವಾಸನೆಯನ್ನು ತೆಗೆದುಹಾಕುತ್ತದೆ: ರೆಫ್ರಿಜರೇಟರ್‌ನಿಂದ ಬರುವ ಕೆಟ್ಟ ವಾಸನೆಯನ್ನು ತೆಗೆದುಹಾಕಲು ಚಹಾ ಪುಡಿ ಸಹಕಾರಿ. ಇದಕ್ಕಾಗಿ ನೀವು ಬಳಸಿದ ಚಹಾ ಪುಡಿಯನ್ನು ಚೆನ್ನಾಗಿ ತೊಳೆದು ಹತ್ತಿ ಬಟ್ಟೆಯಲ್ಲಿ ಸುತ್ತಿ ಫ್ರಿಡ್ಜ್‌ನ ಒಂದು ಮೂಲೆಯಲ್ಲಿ ಇಟ್ಟು ಬಿಡಿ. ಇದು ಫ್ರಿಡ್ಜ್‌ನಿಂದ ಬರುವ ದುರ್ವಾಸನೆಯನ್ನು ಪರಿಣಾಮಕಾರಿಯಾಗಿ ತೊಡೆದು ಹಾಕುತ್ತದೆ.
ಇದನ್ನೂ ಓದಿ: ಎಲೆಕೋಸನ್ನು ಕ್ಲೀನ್ ಮಾಡುವ ಸರಿಯಾದ ವಿಧಾನ ಯಾವುದು? ನೀವು ತಿಳಿಯಲೇಬೇಕಾದ ಮಾಹಿತಿಯಿದು
ಚರ್ಮಕ್ಕೆ ಪ್ರಯೋಜನಕಾರಿ: ಬಳಸಿದ ಚಹಾ ಪುಡಿ ನಿಮ್ಮ ಚರ್ಮಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ನೀವು ಅವುಗಳನ್ನು ಬಳಸಿ ಎಕ್ಸ್‌ಫೋಲಿಯೇಟಿಂಗ್ ಸ್ಕ್ರಬ್ ತಯಾರಿಸಬಹುದು. ಜೊತೆಗೆ ಬಳಸಿದ ಚಹಾ ಎಲೆಗಳನ್ನು ಪುಡಿಮಾಡಿ ಜೇನುತುಪ್ಪ, ಮೊಸರು ಅಥವಾ ನಿಂಬೆ ಸೇರಿಸಿ ಫೇಸ್ ಪ್ಯಾಕ್ ಕೂಡ ತಯಾರಿಸಬಹುದು. ಇದಲ್ಲದೆ ಬಳಸಿದ ಚಹಾ ಪುಡಿಯನ್ನು ಬಿಸಿ ನೀರಿನಲ್ಲಿ ನೆನೆಸಿ ಅದರಲ್ಲಿ ನಿಮ್ಮ ಪಾದಗಳನ್ನು ಇಡುವುದರಿಂದ ಪಾದದ ಬಿರುಕುಗಳು ಕಡಿಮೆಯಾಗುತ್ತವೆ, ಸ್ನಾಯುಗಳು ಸಡಿಲಗೊಳ್ಳುತ್ತವೆ ಮತ್ತು ನೋವು ಕಡಿಮೆಯಾಗುತ್ತದೆ.
ನೈಸರ್ಗಿಕ ಕಂಡೀಷನರ್: ಚಹಾ ಎಲೆಗಳು ಕೂದಲಿಗೆ ಪ್ರಯೋಜನಕಾರಿ. ಚಹಾ ಎಲೆಗಳು ಹೊಳಪನ್ನು ಹೆಚ್ಚಿಸುವುದಲ್ಲದೆ ಕಂಡಿಷನರ್ ಆಗಿಯೂ ಕಾರ್ಯನಿರ್ವಹಿಸುತ್ತವೆ. ಚಹಾ ತಯಾರಿಸಿದ ನಂತರ, ಉಳಿದ ಚಹಾ ಪುಡಿಯನ್ನು ಎಸೆಯುವ ಬದಲು ಅದನ್ನು ಶುದ್ಧ ನೀರಿನಿಂದ ತೊಳೆಯಿರಿ ಮತ್ತು ಜರಡಿ ಮೂಲಕ ಸೋಸಿ. ನಂತರ ಒಂದು ಪಾತ್ರೆಯಲ್ಲಿ ನೀರನ್ನು ಸೇರಿಸಿ ಅದಕ್ಕೆ ಚಹಾಪುಡಿ ಹಾಕಿ ಮತ್ತೆ ಕುದಿಸಿ. ಈ ನೀರಿನಿಂದ ನಿಮ್ಮ ಕೂದಲನ್ನು ನಿಯಮಿತವಾಗಿ ತೊಳೆಯಿರಿ. ಇದು ನಿಮ್ಮ ಕೂದಲಿಗೆ ಹೊಳಪನ್ನು ನೀಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ