ಎಲೆಕೋಸನ್ನು ಕ್ಲೀನ್ ಮಾಡುವ ಸರಿಯಾದ ವಿಧಾನ ಯಾವುದು? ನೀವು ತಿಳಿಯಲೇಬೇಕಾದ ಮಾಹಿತಿಯಿದು
ಎಲೆಕೋಸಿನಲ್ಲಿ ಸಣ್ಣ ಕೀಟಗಳು, ಹುಳಗಳು ಕಂಡುಬರುತ್ತವೆ. ಈ ಕೀಟಗಳು ತುಂಬಾ ಚಿಕ್ಕದಾಗಿರುವುದರಿಂದ ಅವು ಸುಲಭವಾಗಿ ಗೋಚರಿಸುವುದಿಲ್ಲ.ಅವುಗಳನ್ನು ಚೆನ್ನಾಗಿ ತೊಳೆದು ಬೇಯಿಸಿದ ನಂತರವೂ ಅವು ಜೀವಂತವಾಗಿರುತ್ತವೆ, ಅವು ಮೆದುಳಿಗೆ ಹಾನಿ ಮಾಡುತ್ತವೆಯಂತೆ. ಹಾಗಾಗಿ ಎಲೆಕೋಸನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸುವುದು ಅತೀ ಅವಶ್ಯಕ. ಎಲೆಕೋಸನ್ನು ಕ್ಲೀನ್ ಮಾಡುವ ಸರಿಯಾದ ವಿಧಾನ ಯಾವುದೆಂಬುದನ್ನು ತಿಳಿಯಿರಿ.

ಎಲೆಕೋಸು (cabbage) ಬಹುತೇಕರ ನೆಚ್ಚಿನ ತರಕಾರಿ. ಪಲ್ಯ, ಮಂಚೂರಿಯನ್, ಸಲಾಡ್‌ಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಇದನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ, ಆದರೆ ಹೆಚ್ಚಿನವರು ಎಲೆಕೋಸನ್ನು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ, ಜೊತೆಗೆ ಇದನ್ನು ಕ್ಲೀನ್ ಮಾಡುವ ಸರಿಯಾದ ವಿಧಾನವೂ ಅನೇಕರಿಗೆ ಗೊತ್ತಿಲ್ಲ. ಎಷ್ಟೇ ಸ್ವಚ್ಛಗೊಳಿಸಿದರೂ ಎಲೆಕೋಸಿನಲ್ಲಿ ಕೊಳಕು, ಕೀಟಗಳು, ಹುಳು, ಬ್ಯಾಕ್ಟೀರಿಯಾ ಮತ್ತು ಕೀಟನಾಶಕಗಳ ಅಂಶ ಹಾಗೆಯೇ ಉಳಿದು ಬಿಡುತ್ತವೆ. ಇದು ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ, ಆಹಾರವು ರುಚಿಕರ ಮತ್ತು ಆರೋಗ್ಯಕರವಾಗಿರಲು ಅದನ್ನು ಸರಿಯಾಗಿ ತೊಳೆಯುವುದು ಬಹಳ ಮುಖ್ಯ. ಹಾಗಿದ್ದರೆ ಎಲೆಕೋಸನ್ನು ತೊಳೆಯುವ ಸರಿಯಾದ ವಿಧಾನ ಯಾವುದೆಂಬುದನ್ನು ನೋಡೋಣ ಬನ್ನಿ.
ಎಲೆಕೋಸನ್ನು ತೊಳೆಯುವ ಸರಿಯಾದ ವಿಧಾನ ಯಾವುದು?
ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ: ಎಲೆಕೋಸು ಕತ್ತರಿಸಿದ ನಂತರ, ಅದನ್ನು ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದನ್ನು ಮಾಡಲು, ಮೊದಲು ಎಲೆಕೋಸಿನ ಮೇಲಿನ ಎರಡರಿಂದ ಮೂರು ಪದರಗಳನ್ನು ತೆಗೆಯಿರಿ. ಏಕೆಂದರೆ ಇವು ಅತ್ಯಂತ ಕೊಳಕಾಗಿರುತ್ತವೆ, ಧೂಳು ಮತ್ತು ಕೀಟನಾಶಕಗಳನ್ನು ಹೊಂದಿರುತ್ತವೆ. ಈ ಎಲೆಗಳನ್ನು ತೆಗೆದುಹಾಕುವುದರಿಂದ ಗಮನಾರ್ಹ ಪ್ರಮಾಣದ ಕೊಳೆಯನ್ನು ತೆಗೆದು ಹಾಕಬಹುದು. ಈಗ ಒಂದು ಪಾತ್ರೆಗೆ ಬಿಸಿ ನೀರು ಮತ್ತು ಉಪ್ಪನ್ನು ಸೇರಿಸಿ, ಅದರಲ್ಲಿ ಎಲೆಕೋಸನ್ನು 15 ರಿಂದ 20 ನಿಮಿಷಗಳ ಕಾಲ ಇಟ್ಟು ಕ್ಲೀನ್ ಮಾಡಿ ನಂತರವೇ ಬೇಯಿಸಿ. ಈ ಪ್ರಕ್ರಿಯೆಯು ಕೀಟಗಳನ್ನು ಕೊಲ್ಲಲು ಸಹಕಾರಿ.
ವಿನೆಗರ್ ಬಳಸಬಹುದು: ಎಲೆಕೋಸನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ನೀವು ವಿನೆಗರ್ ಸಹ ಬಳಸಬಹುದು. ಇದು ನೈಸರ್ಗಿಕ ಸೋಂಕುನಿವಾರಕವಾಗಿದ್ದು, ಇದು ತರಕಾರಿಯಿಂದ ಎಲ್ಲಾ ಕೊಳೆಯನ್ನು ತೆಗೆದುಹಾಕುತ್ತದೆ. ಇದನ್ನು ಮಾಡಲು, ಒಂದು ಪಾತ್ರೆಗೆ ಉಗುರು ಬೆಚ್ಚಗಿನ ನೀರನ್ನು ತುಂಬಿಸಿ. ಮೂರರಿಂದ ನಾಲ್ಕು ಟೀ ಚಮಚ ವಿನೆಗರ್ ಸೇರಿಸಿ ಬಳಿಕ ಅದರಲ್ಲಿ ಎಲೆಕೋಸನ್ನು ಇಟ್ಟು 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬಳಿಕ ಇನ್ನೊಮ್ಮೆ ಸ್ವಚ್ಛಗೊಳಿಸಿ ಎಲೆಕೋಸನ್ನು ಕತ್ತರಿಸಿ. ಇದಲ್ಲದೆ ಅಡಿಗೆ ಸೋಡಾವನ್ನು ಸಹ ಸೇರಿಸಬಹುದು, ಇದು ಕೀಟನಾಶಕಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಬಾತ್‌ರೂಮ್ ಟ್ಯಾಪ್, ಕನ್ನಡಿಯ ಮೇಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಸಲಹೆ
ಇದು ಮಾತ್ರವಲ್ಲದೆ ಎಲೆಕೋಸನ್ನು ಸಂಪೂರ್ಣವಾಗಿ ಕತ್ತರಿಸಿ ಬಳಿಕ ಬಿಸಿನೀರಿಗೆ ವಿನೆಗರ್ ಅಥವಾ ಅಡಿಗೆ ಸೋಡಾವನ್ನು ಸೇರಿಸಿ ಅದರಲ್ಲಿ ಕ್ಲೀನ್ ಮಾಡು. ತೊಳೆದ ನಂತರ, ಎಲೆಕೋಸನ್ನು ಒಂದು ಜರಡಿಯಲ್ಲಿ ಇರಿಸಿ ಅಥವಾ ಹೆಚ್ಚುವರಿ ನೀರನ್ನು ಹೊರಹಾಕಲು ಸ್ವಚ್ಛವಾದ ಬಟ್ಟೆಯ ಮೇಲೆ ಅದನ್ನು ಹರಡಿ. ಈ ರೀತಿ ಎಲೆಕೋಸನ್ನು ಸರಿಯಾಗಿ ತೊಳೆಯುವುದರಿಂದ ಅದರ ರುಚಿ ಸುಧಾರಿಸುವುದಲ್ಲದೆ, ನಿಮ್ಮ ಆರೋಗ್ಯವೂ ಸುರಕ್ಷಿತವಾಗಿರುತ್ತದೆ. ಆದ್ದರಿಂದ, ಮುಂದಿನ ಬಾರಿ ನೀವು ಎಲೆಕೋಸು ಕ್ಲೀನ್ ಮಾಡುವಾಗ ಅದನ್ನು ತೊಳೆಯಲು ಆತುರಪಡಬೇಡಿ, ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




