ಇಂದು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ: ಈ ದಿನದ ಇತಿಹಾಸ ಮತ್ತು ಪ್ರಾಮುಖ್ಯತೆಯನ್ನು ತಿಳಿಯಿರಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 07, 2024 | 10:49 AM

International Civil Aviation Day 2024: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ನಾಗರಿಕ ವಿಮಾನಯಾನದ ಪ್ರಾಮುಖ್ಯತೆಯನ್ನು ಹಾಗೂ ಮುಖ್ಯವಾಗಿ ಜಾಗತಿಕ ಸಂಪರ್ಕದಲ್ಲಿ ನಾಗರಿಕ ಮಿಮಾನಯಾನ ವಹಿಸುವ ಪಾತ್ರದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಡಿಸೆಂಬರ್‌ 7 ರಂದು ಅಂತಾರಾಷ್ಟ್ರೀಯ ವಿಮಾನಯಾನ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿದುಕೊಳ್ಳೋಣ.

ಇಂದು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ: ಈ ದಿನದ ಇತಿಹಾಸ ಮತ್ತು ಪ್ರಾಮುಖ್ಯತೆಯನ್ನು ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us on

ವಿಶ್ವದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ವಾಯುಯಾನದ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಲು ಹಾಗೂ ವಿಶೇಷವಾಗಿ ರಾಷ್ಟ್ರಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಮೇಲೆ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನದ ಪ್ರಭಾವದ ಬಗ್ಗೆ ಜಾಗತಿಕವಾಗಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವಸಂಸ್ಥೆ ಮತ್ತು ಹಲವಾರು ಇತರೆ ಅಂತಾರಾಷ್ಟ್ರೀಯ ಸಂಸ್ಥೆಗಳು ಪ್ರತಿವರ್ಷ ಡಿಸೆಂಬರ್‌ 7 ರಂದು ಅಂತರಾಷ್ಟ್ರೀಯ ನಾಗರಿಕ ವಿಮಾನಯಾನ ದಿನವನ್ನು ಆಚರಿಸುತ್ತವೆ. ಈ ದಿನವನ್ನು ಡಿಸೆಂಬರ್‌ 7 ರಂದೇ ಏಕೆ ಆಚರಿಸಲಾಗುತ್ತದೆ? ಈ ವಿಶೇಷ ದಿನಾಚರಣೆಯ ಮಹತ್ವವೇನು ಇವೆಲ್ಲದರ ಮಾಹಿತಿಯನ್ನು ತಿಳಿಯೋಣ.

ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನದ ಇತಿಹಾಸ:

ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನದ ಇತಿಹಾಸವನ್ನು ನೋಡುವುದಾದರೆ, 1944 ರ ಡಿಸೆಂಬರ್‌ 7 ರಂದು ಅಂತರಾಷ್ಟ್ರೀಯ ಸಹಕಾರ ಮತ್ತು ಏಕರೂಪತೆಯನ್ನು ಭದ್ರಪಡಿಸಲು ಇಂಟರ್‌ ನ್ಯಾಷನಲ್‌ ಸಿವಿಲ್‌ ಏವಿಯೇಷನ್‌ ಆರ್ಗನೈಜೇಷನ್‌ ಅನ್ನು ಸ್ಥಾಪಿಸಲಾಯಿತು. ಮತ್ತು 54 ದೇಶಗಳ ಪ್ರತಿನಿಧಿಗಳು ಚಿಕಾಗೋದಲ್ಲಿ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನದ ಸಮಾವೇಶಕ್ಕೆ ಸಹಿ ಹಾಕಿದರು . ಈ ಸಮಾವೇಶವನ್ನು ‘ಚಿಕಾಗೋ ಕನ್ವೆನ್ಷನ್’ ಎಂದೂ ಕರೆಯಲಾಗುತ್ತದೆ. ಇದು ಜಾಗತಿಕ ನಾಗರಿಕ ವಿಮಾನಯಾನ ವ್ಯವಸ್ಥೆಯನ್ನು ಶಾಂತಿಯುತ ಮತ್ತು ಪ್ರಯೋಜನಕಾರಿ ರೀತಿಯಲ್ಲಿ ಅಭಿವೃದ್ಧಿಪಡಿಸಲು ಅನುಮತಿಸಿದ ಪ್ರಮುಖ ಅಂತಾರಾಷ್ಟ್ರೀಯ ಒಪ್ಪಂದವಾಗಿದೆ.

ಈ ಒಪ್ಪಂದಕ್ಕೆ ಸಹಿ ಹಾಕಿದ 50 ನೇ ವಾರ್ಷಿಕೋತ್ಸವದ ನೆನಪಿಗಾಗಿ 1994 ರಲ್ಲಿಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ಅಂತಾರಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನವನ್ನು ಸ್ಥಾಪಿಸಿತು. ನಂತರ 1996 ರಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ವಿಶ್ವದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ವಾಯುಯಾನದ ಪ್ರಾಮುಖ್ಯತೆಯನ್ನು ಗುರುತಿಸಲು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ದಿನವನ್ನು ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ನೋಡಿ

ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನದ ಮಹತ್ವ:

ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನವು ಪ್ರಪಂಚದಾದ್ಯಂತ ಅನೇಕ ದೇಶಗಳನ್ನು ಒಂದುಗೂಡಿಸಲು ಮತ್ತು ಸುರಕ್ಷಿತ, ಪರಿಣಾಮಕಾರಿ ಮತ್ತು ಸಮರ್ಥನೀಯ ಜಾಗತಿಕ ವಾಯುಯಾನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ಒದಗಿಸುತ್ತದೆ. ಈ ದಿನವು ವಾಯುಯಾನದ ಸಾಮಾಜಿಕ ಮತ್ತು ಆರ್ಥಿಕ ಪ್ರಯೋಜನಗಳ ಬಗ್ಗೆ ಮತ್ತು ವಾಯುಯಾನದ ಮಹತ್ವದ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಉದ್ದೇಶವನ್ನು ಹೊಂದಿದೆ.

ಆರ್ಥಿಕ ಪ್ರಯೋಜನಗಳು: ವಿಮಾನಯಾನ ಉದ್ಯಮವು ಆರ್ಥಿಕ ಚಟುವಟಿಕೆಗೆ ಪ್ರಮುಖ ಕೊಡುಗೆ ನೀಡುತ್ತದೆ. ಏರ್‌ಲೈನ್‌ಗಳು, ವಿಮಾನ ನಿಲ್ದಾಣಗಳು ಮತ್ತು ಏರ್ ನ್ಯಾವಿಗೇಷನ್ ಸೇವೆಗಳಂತಹ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತದೆ. ಇದು ಚೆಕ್-ಇನ್, ಬ್ಯಾಗೇಜ್ ನಿರ್ವಹಣೆ, ಚಿಲ್ಲರೆ ವ್ಯಾಪಾರ, ಸರಕು ಮತ್ತು ಕುಕಿಂಗ್‌ ಇತ್ಯಾದಿಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ವಿಮಾನಯಾನವು ಉತ್ಪಾದನೆಯಲ್ಲಿಯೂ ಸಹ ಉದ್ಯೋಗಾವಕಾಶಗಳನ್ನು ಉತ್ತೇಜಿಸುತ್ತದೆ. ಇವೆಲ್ಲವೂ ಒಂದು ದೇಶದ ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆಯನ್ನು ನೀಡುತ್ತದೆ.

ಸಾಮಾಜಿಕ ಪ್ರಯೋಜನಗಳು: ತ್ವರಿತ ಸಾರಿಗೆ ಜಾಲ ಎಂದರೆ ಅದು ವಿಮಾನಯಾನ. ವಿಮಾನಯಾನವು ರಾಷ್ಟ್ರಗಳು ಮತ್ತು ಜನರನ್ನು ಸಂಪರ್ಕಿಸುವ ಮೂಲಕ ಧನಾತ್ಮಕ ಧನಾತ್ಮಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇದು ಜಗತ್ತನ್ನು ಪರಸ್ಪರ ಸಂಪರ್ಕಿಸುವಲ್ಲಿ ಮತ್ತು ವ್ಯಾಪಾರ, ಪ್ರವಾಸೋದ್ಯಮ, ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ