ಮಗು ಮನಸಿನ ಹಿರಿಯರನ್ನು ಕಾಳಜಿಯಿಂದ ನೋಡಿಕೊಳ್ಳುವುದು ಹೇಗೆ ? ಇಲ್ಲಿದೆ ಸಲಹೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 01, 2024 | 9:44 AM

International Day Of Older Persons 2024 : ವೃದ್ಧಾಪ್ಯ ಸಮೀಪಿಸುತ್ತಿದ್ದಂತೆ ಮನಸ್ಸು ಹಾಗೂ ದೇಹವು ಮತ್ತೊಮ್ಮೆ ಮಗುವಾಗುತ್ತದೆ. ಈ ವೇಳೆಯಲ್ಲಿ ವಿಶೇಷ ಪ್ರೀತಿ, ಕಾಳಜಿ ಹಾಗೂ ಆರೈಕೆಯು ಅಗತ್ಯವಿರುತ್ತದೆ. ಆದರೆ ಇಂದು ವಯಸ್ಸಾದ ತಂದೆ ತಾಯಿಯರನ್ನು ಆಶ್ರಮಕ್ಕೆ ಕಳುಹಿಸಿ ತಮ್ಮ ಜವಾಬ್ದಾರಿಯು ಮುಗಿತು ಎಂದು ಕೈತೊಳೆದುಕೊಳ್ಳುವ ಮಕ್ಕಳೇ ಹೆಚ್ಚಾಗಿದ್ದಾರೆ. ಹಿರಿಯರನ್ನು ಗೌರವಿಸುವುದರ ಜೊತೆಗೆ ಸರಿಯಾದ ಪ್ರೀತಿ ಮತ್ತು ಕಾಳಜಿಯನ್ನು ತೋರುವ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪ್ರತಿವರ್ಷ ಅಕ್ಟೋಬರ್ 1 ರಂದು ವಿಶ್ವ ಹಿರಿಯರ ದಿವನ್ನು ಆಚರಿಲಾಗುತ್ತದೆ.

ಮಗು ಮನಸಿನ ಹಿರಿಯರನ್ನು ಕಾಳಜಿಯಿಂದ ನೋಡಿಕೊಳ್ಳುವುದು ಹೇಗೆ ? ಇಲ್ಲಿದೆ ಸಲಹೆ
ಸಾಂದರ್ಭಿಕ ಚಿತ್ರ
Follow us on

ಒಂದು ಕುಟುಂಬದ ಆಧಾರ ಸ್ತಂಭವೇ ಹಿರಿ ಜೀವಗಳು. ಅವರುಗಳು ತಮ್ಮ ಜೀವನ ಪಾಠಗಳನ್ನು ಹೇಳುತ್ತಾ ಸಂಸ್ಕಾರಯುತವಾಗಿ ಬೆಳೆಯುತ್ತೇವೆ. ಆದರೆ ಹಿರಿ ಜೀವಗಳಿಗೆ ವಯಸ್ಸಾಗುತ್ತಿದ್ದಂತೆ ಅವರನ್ನು ನಿರ್ಲಕ್ಷ್ಯ ಮಾಡುವುದೇ ಹೆಚ್ಚು. ನೋಡಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಕಾರಣ ಅಥವಾ ಹೊರೆಯಾಗುತ್ತಾರೆ ಎನ್ನುವ ಸಲುವಾಗಿ ವೃದ್ಧಾಶ್ರಮಗಳಲ್ಲಿ ಬಿಟ್ಟು ಬರುವವರೇ ಹೆಚ್ಚು. ಆದರೆ ನಾವು ಅವರನ್ನು ಎಂದಿಗೂ ನಿರ್ಲಕ್ಷಿಬಾರದು. ವಯಸ್ಸಾದ ಸಮಯದಲ್ಲಿ ಅವರಿಗೆ ಸರಿಯಾದ ಪ್ರೀತಿ ಆರೈಕೆ ನೀಡಿ ನೋಡಿಕೊಳ್ಳಬೇಕು. ವೃದ್ಧಾಪ್ಯದಲ್ಲಿ ಅವರಿಗೆ ಪ್ರೀತಿ ಮತ್ತು ಕಾಳಜಿಯನ್ನು ತೋರಬೇಕೆಂದು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಅಕ್ಟೋಬರ್ 1 ರಂದು ವಿಶ್ವದಾದ್ಯಂತ ಹಿರಿಯರ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಹಿರಿಯರ ದಿನದ ಇತಿಹಾಸ

ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 14 ಡಿಸೆಂಬರ್ ರಂದು ಅಕ್ಟೋಬರ್ 1990 ರಂದು ಹಿರಿಯರ ದಿನವನ್ನು ಆಚರಿಸಬೇಕು ಎಂದು ನಿರ್ಧರಿಸಿತು. ಅಕ್ಟೋಬರ್ 1 ರಂದು ಅಂತಾರಾಷ್ಟ್ರೀಯ ಹಿರಿಯರ ದಿನವನ್ನು ಆಚರಿಸುವುದಾಗಿ ಘೋಷಿಸಿತು. 1991, ಅಕ್ಟೋಬರ್ 1 ರಂದು ಮೊದಲ ಬಾರಿಗೆ ವಿಶ್ವ ಹಿರಿಯರ ದಿನವನ್ನು ಆಚರಿಸಲಾಯಿತು. ವೃದ್ಧರ ಮೇಲಿನ ದೌರ್ಜನ್ಯ ಮತ್ತು ಅನ್ಯಾಯವನ್ನು ತಡೆಯಲು ಹಾಗೂ ಸಮಾಜದಲ್ಲಿ ಅವರಿಗೆ ಸರಿಯಾದ ಸ್ಥಾನಮಾನ ಮತ್ತು ಗೌರವ ಸಿಗಬೇಕು ಎನ್ನುವ ಗುರಿಯನ್ನು ಹೊಂದಿತ್ತು. ಅಂದಿನಿಂದ ಪ್ರತಿ ವರ್ಷ ಅಕ್ಟೋಬರ್ 1 ರಂದು ವಿಶ್ವ ಹಿರಿಯರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ಫ್ರಿಡ್ಜ್ ದೀರ್ಘಕಾಲದವರೆಗೆ ಬಾಳಿಕೆ ಬರಬೇಕೇ? ಹಾಗಾದ್ರೆ ಈ ತಪ್ಪುಗಳನ್ನು ಮಾಡಲೇಬೇಡಿ

ವಿಶ್ವ ಹಿರಿಯರ ದಿನದ ಮಹತ್ವ ಹಾಗೂ ಆಚರಣೆ

ಹಿರಿಯ ವ್ಯಕ್ತಿಗಳು ಕುಟುಂಬದ ಆಧಾರಸ್ತಂಭಗಳಾಗಿದ್ದು, ವಯಸ್ಸಾದ ಸಮಯದಲ್ಲಿ ಅವರ ಆರೈಕೆ ಮಾಡುವುದು ಕರ್ತವ್ಯವಾಗಿದೆ. ಹಿರಿಯರಿಗೆ ನಿಂದಿಸದೆ ಅವರನ್ನು ಗೌರವಭಾವದಿಂದ ನೋಡಿಕೊಳ್ಳಬೇಕೆನ್ನುವ ಬಗ್ಗೆ ತಿಳಿಸಲು ಈ ದಿನವು ಮಹತ್ವದ್ದಾಗಿದೆ. ವಿಶ್ವ ಹಿರಿಯರ ದಿನದಂದು ಅನೇಕ ಸಂಘ ಸಂಸ್ಥೆಗಳು ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಅಭಿಯಾನಗಳನ್ನು ನಡೆಸುತ್ತವೆ. ಹಾಗೂ ಹಿರಿಜೀವಗಳ ಮುಖದಲ್ಲಿ ನಗು ತರಲು ಹಾಗೂ ಸಂತೋಷವಾಗಿರಿಸಲು ವೃದ್ಧಾಶ್ರಮಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಹಿರಿಜೀವಗಳನ್ನು ನೋಡಿಕೊಳ್ಳಲು ಇಲ್ಲಿದೆ ಸಲಹೆಗಳು

* ಮನೆಯಲ್ಲಿ ವಯಸ್ಸಾಗಿರುವ ವ್ಯಕ್ತಿಗಳಿದ್ದಲ್ಲಿ ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವುದು ಬಹಳ ಮುಖ್ಯ. ಹಿರಿ ಜೀವಗಳ ಜೊತೆಗೆ ಸಮಯ ಕಳೆಯುವುದರಿಂದ ಅವರ ಸಮಸ್ಯೆಗಳನ್ನು ಅರಿತುಕೊಂಡು ಬಗೆಹರಿಸಲು ಸಾಧ್ಯ.

* ಹಿರಿ ಜೀವಗಳು ಹುಷಾರು ತಪ್ಪುವುದು ಸಹಜ. ಈ ವೇಳೆಯಲ್ಲಿ ದಾದಿಯರು ನೋಡಿಕೊಳ್ಳುವುದಕ್ಕಿಂತ ಮನೆಯವರೇ ಕಾಳಜಿ ವಹಿಸಿದರೆ ಬೇಗನೇ ಚೇತರಿಸಿಕೊಳ್ಳುತ್ತಾರೆ.

* ವಯಸ್ಸಾದವರನ್ನು ಫಿಟ್ ಹಾಗೂ ಆರೋಗ್ಯವಾಗಿರಲು ವೈದ್ಯರ ಬಳಿ ಕರೆದುಕೊಂಡು ಹೋಗುವುದು ಅವಶ್ಯಕ. ಏನಾದರೂ ಆರೋಗ್ಯ ಸಮಸ್ಯೆಗಳಿದ್ದರೆ ಸರಿಯಾದ ಚಿಕಿತ್ಸೆ ನೀಡಿ ಗುಣ ಮುಖರಾಗುವಂತೆ ನೋಡಿಕೊಳ್ಳಿ.

* ವಯಸ್ಸಾದ ಕಾಲದಲ್ಲಿ ಚಿಕ್ಕ ವಾಕಿಂಗ್, ಯೋಗದಂತಹ ದೈಹಿಕ ಚಟುವಟಿಕೆಗಳನ್ನು ಮಾಡಲು ಹೆಚ್ಚು ಪ್ರೋತ್ಸಾಹಿಸಿ. ಸಾಧ್ಯವಾದರೆ ಮನೆಯ ಸದಸ್ಯರು ಅವರೊಂದಿಗೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

* ಹಿರಿಯರು ತಮ್ಮ ವಯಸ್ಸಿನ ವ್ಯಕ್ತಿಗಳೊಂದಿಗೆ ಅಥವಾ ಸಣ್ಣ ಮಕ್ಕಳೊಂದಿಗೆ ಬೆರೆಯಲು ಇಷ್ಟ ಪಡುತ್ತಾರೆ. ಹೀಗಾಗಿ ಹೊರಗಡೆ ಜನರೊಂದಿಗೆ ಬೆರೆಯುವಂತೆ ಹಿರಿಯರಿಗೆ ಸಲಹೆ ನೀಡುವುದು. ಇಲ್ಲದಿದ್ದರೆ ಮೊಮ್ಮಕ್ಕಳ ಜೊತೆಗೆ ಸಮಯ ಕಳೆಯಲು ಅನುವು ಮಾಡಿಕೊಡುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ