
ರೆಡ್ ಪಾಂಡಾಗಳು (International Red Panda) ಸ್ವಭಾವತಃ ನಾಚಿಕೆಯ ಪ್ರಾಣಿಗಳು. ಅವು ಪ್ರಕೃತಿಯೊಂದಿಗೆ ಏಕಾಂಗಿಯಾಗಿರಲು ಬಯಸುತ್ತವೆ. ಇವುಗಳು ಹೆಚ್ಚಾಗಿ ಶೀತ ಪ್ರದೇಶದಲ್ಲಿ ವಾಸಿಸಲು ಇಷ್ಟಪಡುತ್ತವೆ. ಆದರೆ ಇಂದು ಅರಣ್ಯನಾಶ, ಅಕ್ರಮ ಬೇಟೆ, ವ್ಯಾಪಾರದ ಕಾರಣದಿಂದಾಗಿ ಇಂದು ಇವುಗಳ ಸಂತತಿ ಅಳಿವಿನಂಚಿಗೆ ತಲುಪಿವೆ. ಪ್ರಸ್ತುತ 10,000 ಕ್ಕಿಂತಲೂ ಕಡಿಮೆ ರೆಡ್ ಪಾಂಡಾಗಳು ಇವೆ ಎಂದು ಹೇಳಲಾಗುತ್ತದೆ. ಹಾಗಾಗಿ ಅಳಿವಿನಂಚಿನಲ್ಲಿರುವ ಈ ಪ್ರಭೇದಗಳನ್ನು ರಕ್ಷಿಸಬೇಕು, ಇವುಗಳ ರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಸೆಪ್ಟೆಂಬರ್ ಮೂರನೇ ಶನಿವಾರದಂದು ಅಂತಾರಾಷ್ಟ್ರೀಯ ರೆಡ್ ಪಾಂಡಾ (International Red Panda Day) ದಿನವನ್ನು ಆಚರಿಸಲಾಗುತ್ತದೆ.
ಪ್ರತಿವರ್ಷ ಸೆಪ್ಟೆಂಬರ್ ಮೂರನೇ ಶನಿವಾರದಂದು ಅಂತಾರಾಷ್ಟ್ರೀಯ ರೆಡ್ ಪಾಂಡಾ ದಿನವನ್ನು ಆಚರಿಸಲಾಗುತ್ತದೆ. ಈ ಉಪಕ್ರಮವನ್ನು ಆರಂಭದಲ್ಲಿ 2010 ರಲ್ಲಿ ನೇಪಾಳದ ಲಾಭರಹಿತ ಸಂಸ್ಥೆಯಾದ ರೆಡ್ ಪಾಂಡಾ ನೆಟ್‌ವರ್ಕ್ ಪ್ರಾರಂಭಿಸಿತು. ಪ್ರತಿ ವರ್ಷ ಒಂದು ದಿನ ಈ ಅಳಿವಿನಂಚಿನಲ್ಲಿರುವ ಪ್ರಭೇದದ ಮೇಲೆ ಪ್ರಪಂಚದ ಗಮನವನ್ನು ಕೇಂದ್ರೀಕರಿಸುವುದು ಮತ್ತು ಹೆಚ್ಚು ಮುಖ್ಯವಾಗಿ, ಅವುಗಳನ್ನು ಉಳಿವಿಗಾಗಿ ಜಾಗೃತಿಯನ್ನು ಇದರ ಗುರಿಯಾಗಿತ್ತು. ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್ 3 ನೇ ಶನಿವಾರದಂದು ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಪರಿಸರ ಸಮತೋಲನದಿಂದ ಕೃಷಿಯವರೆಗೆ ಬಿದಿರಿನ ಉಪಯೋಗ ಹಲವು
ಅರಣ್ಯ ನಾಶ, ಬೇಟೆಯಾಡುವಿಕೆ ಮತ್ತು ಅಕ್ರಮ ಸಾಕುಪ್ರಾಣಿ ವ್ಯಾಪಾರದ ಕಾರಣದಿಂದಾಗಿ ಕೆಂಪು ಪಾಂಡಾಗಳು ಅಳಿವಿನಂಚಿಗೆ ತಲುಪಿವೆ. ಅವುಗಳ ಸಂತತಿ ಗಮನಾರ್ಹವಾಗಿ ಕಡಿಮೆಯಾಗಿದೆ. ಹಾಗಾಗಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ. ಈ ದಿನದಂದು ಜಾಗೃತಿ ಅಭಿಯಾನಗಳು ನಿಧಿ ಸಂಗ್ರಹ, ಅರಣ್ಯ ಮತ್ತು ಪರಿಸರ ಸಂರಕ್ಷಣೆಯ ಬಗೆಗಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ