ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿಯಾಗಿದ್ದು, ಆದರೆ ಅವುಗಳ ಸಂತತಿ ಯೂ ಅಳಿವಿನಂಚಿನಲ್ಲಿ ಸಾಗುತ್ತಿದೆ. ಮಾನವನು ತನ್ನ ಸ್ವಾರ್ಥಕ್ಕಾಗಿ ಕಾಡುಗಳನ್ನು ನಾಶ ಮಾಡುತ್ತಿದ್ದು, ಅದುವೇ ಈ ಹುಲಿಗಳ ಸಂಖ್ಯೆಯೂ ಇಳಿಮುಖವಾಗಲು ಕಾರಣವಾಗುತ್ತಿದೆ. ಕಳೆದ 2010ರಿಂದ ಹುಲಿಯನ್ನು ಅಳಿವಿನಂಚಿನಲ್ಲಿರುವ ಪ್ರಾಣಿಯೆಂದೇ ಗುರುತಿಸಲಾಗಿದೆ. ಈ ಜಗತ್ತಿನ ಕೇವಲ ಹದಿಮೂರು ರಾಷ್ಟ್ರಗಳಲ್ಲಿ ಮಾತ್ರ ಹುಲಿಗಳು ಕಾಣಲು ಸಿಗುತ್ತಿದ್ದು, 3,200 ಹುಲಿಗಳು ಮಾತ್ರ ಇವೆ ಎನ್ನಲಾಗಿದೆ. ಹೀಗಾಗಿ ಈ ರಾಷ್ಟ್ರೀಯ ಪ್ರಾಣಿಯ ರಕ್ಷಣೆ ಮತ್ತು ಅದರ ಕುರಿತಾಗಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29ರಂದು ಅಂತಾರಾಷ್ಟ್ರೀಯ ಹುಲಿ ದಿನ ಆಚರಿಸಲಾಗುತ್ತದೆ.
2010 ರಲ್ಲಿ ಸೇಂಟ್ ಪೀಟರ್ಸ್ ಬರ್ಗ್ ಹುಲಿ ಶೃಂಗಸಭೆಯ ಸಮಯದಲ್ಲಿ ಸ್ಥಾಪಿಸಲಾಯಿತು. ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆದ ಈ ಶೃಂಗಸಭೆಯನ್ನು ಗ್ಲೋಬಲ್ ಟೈಗರ್ ಇನಿಶಿಯೇಟಿವ್ ಆಯೋಜಿಸಿತ್ತು. ಹುಲಿ ಸಂರಕ್ಷಣೆ ಮತ್ತು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಜುಲೈ 29 ಅನ್ನು ಅಂತಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ವಿಶ್ವ ಪ್ರಕೃತಿ ಸಂರಕ್ಷಣಾ ದಿನ; ಮನುಷ್ಯನ ದುರಾಸೆಗೆ ಬರಿದಾಗದಿರಲಿ ಪ್ರಕೃತಿ
ಮಾನವನ ವಿಪರೀತ ಚಟುವಟಿಕೆಗಳು ಸಸ್ಯ ಸಂಪತ್ತು ಹಾಗೂ ಪ್ರಾಣಿ ಸಂಪತ್ತುಗಳ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ. ಕಾಡುಗಳ ನಾಶದಿಂದಾಗಿ ಶೇಕಡಾ 97% ರಷ್ಟು ಹುಲಿಗಳು ಕಣ್ಮರೆಯಾಗಿವೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಹುಲಿಗಳ ಸಂರಕ್ಷಣೆಗಾಗಿ ಜಾಗೃತಿ ಕಾರ್ಯಗಳನ್ನು ರೂಪಿಸುವುದು ಮತ್ತು ಹುಲಿಗಳ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಉಳಿಸಲು ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್, ಇಂಟರ್ ನ್ಯಾಷನಲ್ ಫಂಡ್ ಫಾರ್ ಅನಿಮಲ್ ವೆಲ್ಫೇರ್ ಸೇರಿದಂತೆ ಅನೇಕ ಅಂತರಾಷ್ಟ್ರೀಯ ಸಂಸ್ಥೆಗಳು ವಿಶ್ವ ಹುಲಿ ದಿನವನ್ನು ಆಚರಿಸುತ್ತಿದ್ದೂ, ಜಾಗೃತಿ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು ಹಾಗೂ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತವೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ