
ಮನುಷ್ಯನು ಸಂಘಜೀವಿ. ಜೀವನ ಪರ್ಯಂತ ಒಂಟಿಯಾಗಿ ಬದುಕುವುದು ಕಷ್ಟ. ತನ್ನ ನೋವು ನಲಿವುಗಳನ್ನು ಇನ್ನೊಬ್ಬ ವ್ಯಕ್ತಿಯ ಜೊತೆಗೆ ಹಂಚಿಕೊಳ್ಳಬೇಕಾಗುತ್ತದೆ. ಹೀಗಾಗಿ ಬಾಲ್ಯದಲ್ಲಿ ತಂದೆ ತಾಯಿಯ ಜೊತೆಗೆ ಇರುವ ವ್ಯಕ್ತಿಯು, ವಯಸ್ಸಿಗೆ ಬಂದಂತೆ ಮದುವೆಯ ಬಂಧಕ್ಕೆ ಒಳಗಾಗಿ ತನ್ನದೇ ಆದ ಬದುಕನ್ನು ಕಟ್ಟಿಕೊಳ್ಳುತ್ತಾನೆ. ಆದರೆ ಮದುವೆಯ ಬಳಿಕ ಪತಿ ಪತ್ನಿಗಳ ನಡುವೆ ಪ್ರೀತಿಯ ಜೊತೆ ಜೊತೆಗೆ ಸಣ್ಣ ಪುಟ್ಟ ಮಾತುಕತೆಗಳು, ಜಗಳಗಳು ಬರುತ್ತವೆ. ಕೆಲವೊಮ್ಮೆ ವ್ಯಕ್ತಿಯು ಈ ಸಂಬಂಧವೇ ಬೇಡ ಎನ್ನುವ ರೀತಿಯಲ್ಲಿ ವರ್ತಿಸುವ ಹಂತಕ್ಕೆ ಬರಬಹುದು. ಈ ವೇಳೆಯಲ್ಲಿ ಸಂಗಾತಿಯಾದವರು ತನ್ನ ಪಾರ್ಟ್ನರ್ ಜೊತೆ ಹೊಂದಿಕೊಂಡು ಸಮಸ್ಯೆಗಳನ್ನು ಅರಿತುಕೊಂಡು ಸಾಗುವುದು ಬಹಳ ಮುಖ್ಯವಾಗಿರುತ್ತದೆ.
* ಸಂವಹನದ ಕೊರತೆ : ದಾಂಪತ್ಯ ಜೀವನದಲ್ಲಿ ಸತಿ ಪತಿಯರ ನಡುವಿನ ಮಾತುಕತೆಯು ಕಡಿಮೆಯಾಗುವುದು ಕಂಡು ಬಂದರೆ ಸಂಬಂಧವು ಹದಗೆಡುತ್ತಿದೆ ಎನ್ನುವುದರ ಸೂಚಕ. ಇಲ್ಲಿ ಸಂಗಾತಿಯು ತನ್ನ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳದೇ ಏಕಾಂಗಿಯಾಗಿರಲು ಬಯಸಿದರೆ, ಮಾತನಾಡಲು ಇಷ್ಟ ಪಡದೇ ಹೋದರೆ, ಸಂಬಂಧದ ವಿಚಾರದಲ್ಲಿ ಅತೃಪ್ತನಾಗಿದ್ದಾನೆ ಎಂದು ಸ್ಪಷ್ಟವಾಗುತ್ತದೆ.
* ಭಾವನಾತ್ಮಕ ಅಂತರ ಕಾಯ್ದುಕೊಳ್ಳುವುದು: ಭಾವನಾತ್ಮಕ ಅನ್ಯೋನ್ಯತೆಯೆನ್ನುವುದು ಸಂಬಂಧದ ತಳಹದಿಯಾಗಿದೆ. ಆದರೆ ನಿಮ್ಮ ಸಂಗಾತಿಯು ಭಾವನಾತ್ಮಕವಾಗಿ ದೂರವಾಗುತ್ತಿದ್ದಾರೆ. ಭಾವನಾತ್ಮಕವಾಗಿ ಮಾತನಾಡಲು ನಿರಾಸ್ತಕಿ ತೋರಿಸುತ್ತಿದ್ದಾರೆ ಎಂದರೆ ನಿಮ್ಮ ಜೊತೆಗಿನ ಸಂಬಂಧದಲ್ಲಿ ಖುಷಿಯಾಗಿಲ್ಲ ಎಂದರ್ಥ.
* ದೈನಂದಿನ ದಿನಚರಿಗಳಲ್ಲಿ ಬದಲಾವಣೆಗಳು: ದೈನಂದಿನ ದಿನಚರಿಗಳಲ್ಲಿ ತೀವ್ರ ಬದಲಾವಣೆಗಳು,ಆಸಕ್ತಿಗಳು ಹಾಗೂ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದರೆ, ಸಂಬಂಧದಲ್ಲಿನ ಅಸಮಾಧಾನವು ಈ ಮೂಲಕ ತೋರ್ಪಡಿಸಲಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.
* ಮಾತುಮಾತಿಗೂ ಸಿಡುಕುತನ, ಕೋಪ : ಸಂಗಾತಿಯ ಜೊತೆಗೆ ನೀವು ಮಾತನಾಡಲು ಹೋದ ಕೂಡಲೇ ಸಿಡಿಮಿಡಿ ಗೊಳ್ಳುತ್ತಿದ್ದರೆ, ಕಿರಿಕಿರಿ ಭಾವವನ್ನು ಅನುಭವಿಸುತ್ತಿದ್ದಾರೆ ಎಂದರೆ ನಿಮ್ಮ ಮೇಲೆ ಯಾವುದೇ ಆಸಕ್ತಿಯಿಲ್ಲ ಹಾಗೂ ಸಂಬಂಧದಲ್ಲಿ ಸಂತೋಷವಾಗಿಲ್ಲ ಎನ್ನುವುದನ್ನು ಹೇಳುವ ಚಿಹ್ನೆಗಳಿವು.
* ಭವಿಷ್ಯದ ಬಗ್ಗೆ ನಿರಾಸಕ್ತಿ : ಸಂಸಾರದಲ್ಲಿ ಗಂಡ ಹೆಂಡಿಯರಿಬ್ಬರೂ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಯೋಚಿಸಿ ಹಾಗೂ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯ ಸಂಬಂಧದ ಲಕ್ಷಣವಾಗಿದೆ. ಆದರೆ ನಿಮ್ಮ ಸಂಗಾತಿಯು ಹಣಕಾಸಿನ ಹೂಡಿಕೆಗಳು ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಲು ಆಸಕ್ತಿಯನ್ನು ತೋರಿಸುತ್ತಿಲ್ಲ ಎಂದಾದರೆ ಸಂಬಂಧದಲ್ಲಿ ತೃಪ್ತರಾಗಿಲ್ಲ ಎನ್ನುವುದು ಖಚಿತ.
ಇದನ್ನೂ ಓದಿ:ಪ್ರೀತಿಪಾತ್ರರ ಜತೆಗಿನ ಸಂಬಂಧ ಕಳೆದುಕೊಳ್ಳುವ ಆತಂಕ ಇದೆಯೇ? ತಪ್ಪು ಯೋಚನೆಗೆ ಇರಲಿ ಒಂದು ಪೂರ್ಣವಿರಾಮ
* ಸಂಬಂಧವನ್ನು ಸರಿ ಮಾಡುವುದು ನಿಮ್ಮ ಜವಾಬ್ದಾರಿಯಾಗಿರುವ ಕಾರಣ ಸಂಗಾತಿಯ ನಡವಳಿಕೆ ಏನೇ ಆಗಿದ್ದರೂ ನೀವು ಶಾಂತವಾಗಿರಬೇಕು. ಸಂಗಾತಿ ಎದುರಿಸುತ್ತಿರುವ ಸಮಸ್ಯೆಗಳನ್ನು ಒಪ್ಪಿಕೊಳ್ಳುವ ಅಭ್ಯಾಸವನ್ನು ಮೊದಲು ರೂಢಿಸಿಕೊಳ್ಳಿ.
* ಸಂಗಾತಿಯ ವರ್ತನೆಯಿಂದ ನೀವು ಅವರನ್ನು ದೂಷಿಸುತ್ತಿದ್ದರೆ ಅದನ್ನು ಮೊದಲು ನಿಲ್ಲಿಸಿ ಹಾಗೂ ವಿಮರ್ಶಾತ್ಮಕವಾಗಿ ಯೋಚಿಸುವುದನ್ನು ಮಾಡಬೇಡಿ.
* ಸಂಗಾತಿಯೊಂದಿಗೆ ತಾಳ್ಮೆಯಿಂದಿರಿ, ಅವರು ಹೇಳುವುದನ್ನು ಕೇಳಿ. ಅವರ ಈ ವರ್ತನೆಯ ಹಿಂದಿನ ಕಾರಣವನ್ನು ತಿಳಿದುಕೊಳ್ಳಲು ಪ್ರಯತ್ನ ಪಡಿ.
* ನಿಮ್ಮ ಮೃದುವಾದ ವರ್ತನೆಯಿಂದ ನಿಮ್ಮ ಮೇಲೆ ಸಂಗಾತಿಗೆ ನಂಬಿಕೆ ಬರುವಂತೆ ಮಾಡಿ, ಮುಕ್ತವಾಗಿ ಮಾತನಾಡಲು ಅವಕಾಶ ಮಾಡಿಕೊಡಿ. ಸಮಯವಿದ್ದರೆ ಹೊರಗೆ ಹೋಗಿ ಇಬ್ಬರೂ ಸಮಯ ಕಳೆಯಲು ಪ್ರಯತ್ನಿಸಿ.
* ಇಬ್ಬರೂ ಜೊತೆಗಿರುವಾಗ ಮುಕ್ತ ಸಂಭಾಷಣೆಯನ್ನು ಪ್ರಾರಂಭಿಸಿ, ತಪ್ಪಿದ್ದರೆ ಅದನ್ನು ಸರಿಪಡಿಸಿಕೊಂಡು, ಇಬ್ಬರ ಅಗತ್ಯಗಳನ್ನು ಸರಿಹೊಂದಿಸುವ ಹಾಗೆ ರಾಜಿಯನ್ನು ಮಾಡಿಕೊಳ್ಳಿ.
* ಸಂಬಂಧಗಳು ತೀರಾ ಹದಗೆಟ್ಟಿದೆ, ಒಬ್ಬರಿಂದ ಸರಿಮಾಡಲು ಸಾಧ್ಯವಿಲ್ಲ ಎಂದಾದ್ದಲ್ಲಿ ಸ್ನೇಹಿತರು ಮತ್ತು ಪ್ರೀತಿಪಾತ್ರರಿಂದಲೂ ಸಹಾಯವನ್ನು ಪಡೆಯಬಹುದು.
* ವೃತ್ತಿಪರರ ಸಹಾಯವನ್ನು ಪಡೆದುಕೊಳ್ಳಬಹುದು. ಹೀಗಾಗಿ ದಂಪತಿಗಳು ಸಮಾಲೋಚನೆಗೆ ತೆರಳಿ ಮುಕ್ತ ಸಮಾಲೋಚನೆಯ ಮೂಲಕ ಸಂಬಂಧವನ್ನು ಸರಿಪಡಿಸಿಕೊಳ್ಳಿ.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ