ಈ ವರ್ಷದಲ್ಲಿ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಇದೇ ತಿಂಗಳು ನವೆಂಬರ್ 19ರಂದು ಸಂಭವಿಸಲಿದೆ. ಇದು ಭಾಗಶಃ ಚಂದ್ರಗ್ರಹಣವಾಗಿದ್ದು ಸುಮಾರು ಮೂರು ಗಂಟೆಗಳ ಕಾಲ ಇರುತ್ತದೆ. ಇದು ಶತಮಾನದ ದೀರ್ಘವಾದ ಭಾಗಶಃ ಚಂದ್ರಗ್ರಹಣವಾಗಿದೆ. ಈಶಾನ್ಯ ಭಾರತದ ಕೆಲವು ಭಾಗಗಳಿಂದ ಗ್ರಹಣ ಗೋಚರಿಸಲಿದೆ. ಇದು ಪಶ್ಚಿಮ ಆಫ್ರಿಕಾ, ಪಶ್ಚಿಮ ಯುರೋಪ್, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ, ಅಟ್ಲಾಂಟಿಕ್ ಸಾಗರ ಮತ್ತು ಫೆಸಿಫಿಕ್ ಮಹಾಸಾಗದಿಂದಲೂ ಗೋಚರಿಸುತ್ತದೆ.
ದಿನಾಂಕ
ನವೆಂಬರ್ 19ನೇ ತಾರೀಕಿನಂದು ಆಂಧ್ರಪ್ರದೇಶ ಮತ್ತು ಅಸ್ಸಾಂನ ಕೆಲವು ಭಾಗಗಳಿಂದ ಚಂದ್ರಗ್ರಹಣದ ಭಾಗಶಃ ಅಂತ್ಯವು ಗೋಚರಿಸುತ್ತದೆ. ಭಾರತದಲ್ಲಿ ಗ್ರಹಣ ಕಾಲ ಮಧ್ಯಾಹ್ನ 12:48ಕ್ಕೆ ಪ್ರಾರಂಭವಾಗಲಿದ್ದು, ಸಂಜೆ 4:17 ಕ್ಕೆ ಕೊನೆಗೊಳ್ಳುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಗುರುವಾರ ತಿಳಿಸಿದೆ.
ಎಲ್ಲಿ ವೀಕ್ಷಿಸಬಹುದು?
ತಮ್ಮ ಮನೆಗಳಿಂದ ಆಕಾಶದ ಈ ಘಟನೆಯನ್ನು ನೋಡಲು ಸಾಧ್ಯವಾಗದವರು ಅದನ್ನು ನಾಸಾದ ಲೈವ್ ಸ್ಟ್ರೀಮ್ನಲ್ಲಿ ವೀಕ್ಷಿಸಬಹುದು. ಚಂದ್ರ ಗ್ರಹಣವು ಹುಣ್ಣಿಮೆಯ ದಿನದಂದು ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಸಂಭವಿಸುತ್ತದೆ. ಭೂಮಿಯ ನೆರಳಿನ ಅಡಿಯಲ್ಲಿ ಬಂದಾಗ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತದೆ.
ಜ್ಯೋತಿಷ್ಯದಲ್ಲಿ ಚಂದ್ರಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ ಚಂದ್ರಗ್ರಹಣ ಸಮಯದಲ್ಲಿ ಅನೇಕ ಕೆಲಸಗಳನ್ನು ಮಾಡದಂತೆ ಸೂಚಿಸುತ್ತಾರೆ. ಈ ದಿನದಂದು ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮಗಳು ಬೀರಬಹುದು. ಹಾಗಾಗಿ ಈ ದಿನದಂದು ತಾಳ್ಮೆ ಮತ್ತು ಶಾಂತಿಯಿಂದಿರುವುದು ಉತ್ತಮ ಜೊತೆಗೆ ದೇವರ ಧ್ಯಾನದಲ್ಲಿ ತೊಡಗಿಕೊಳ್ಳುವಂತೆ ಸೂಚಿಸಲಾಗುತ್ತದೆ.
2021 ನವೆಂಬರ್ 19 ಶುಕ್ರವಾರ ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಚಂದ್ರ ಗ್ರಹಣ ವರ್ಷಕ್ಕೆ ಗರಿಷ್ಠ ಮೂರು ಬಾರಿ ಮಾತ್ರ ಸಂಭವಿಸಬಹುದು. 2021ರ ಮೊದಲ ಚಂದ್ರಗ್ರಹಣ ಮೇ 26ರಂದು ಸಂಭವಿಸಿತ್ತು. ಅದು ಸೂಪರ್ ಮೂನ್ ಮತ್ತು ಕೆಂಪು ರಕ್ತಚಂದ್ರವಾಗಿತ್ತು. ನವೆಂಬರ್ 19 ರಂದು ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸುತ್ತಿದೆ.
ಇದನ್ನೂ ಓದಿ:
Lunar Eclipse 2021: ಇಂದು ಚಂದ್ರಗ್ರಹಣ; ರಕ್ತಚಂದ್ರನನ್ನು ನೋಡಲು ಕಾತುರರಾಗಿರಿ
Lunar Eclipse 2021: ಮೇ 26ರ ಸೂಪರ್ ಬ್ಲಡ್ ಮೂನ್- ಪೂರ್ಣ ಚಂದ್ರಗ್ರಹಣದ ಬಗ್ಗೆ ನಿಮಗೆ ಗೊತ್ತಿರಬೇಕಾದ ಮಾಹಿತಿಗಳಿವು