ಮಲೆನಾಡು ಹಚ್ಚ ಹಸಿರಿನ ಪ್ರಕೃತಿಯ ಸೌಂದರ್ಯಕ್ಕೆ ಎಷ್ಟು ಪ್ರಸಿದ್ಧಿ ಪಡೆದುಕೊಂಡಿದೆಯೋ, ಅಲ್ಲಿನ ಆಹಾರವು ವಿಭಿನ್ನ ಹಾಗೂ ರುಚಿಕರವಾಗಿರುತ್ತದೆ. ಉತ್ತರ ಕರ್ನಾಟಕದ ಭಾಗದಲ್ಲಿ ಜೋಳದ ರೊಟ್ಟಿ ಖಾರ ಚಟ್ನಿ ಫೇಮಸ್ ಆದ್ರೆ ಈ ಮಲೆನಾಡು ಭಾಗಗಳಲ್ಲಿ ಅಕ್ಕಿ ರೊಟ್ಟಿ ಸಿಕ್ಕಾಪಟ್ಟೆ ಫೇಮಸ್. ಮಲೆನಾಡಿನ ಕೃಷಿಕರ ಮನೆಯಲ್ಲಿ ನಿತ್ಯದ ಬೆಳಗ್ಗಿನ ತಿಂಡಿಗಳಲ್ಲಿ ಅಕ್ಕಿ ರೊಟ್ಟಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಆದರೆ ಈ ಪಶ್ಚಿಮ ಘಟ್ಟದ ಜೈನರು ತಯಾರಿಸುವ ವಿಶಿಷ್ಟ ಅಕ್ಕಿರೊಟ್ಟಿಯೂ ಘಮ ಹಾಗೂ ರುಚಿಯಲ್ಲಿ ಸ್ವಲ್ಪ ಭಿನ್ನವಾಗಿರುತ್ತದೆ.
ಮಲೆನಾಡಿನ ಪಶ್ಚಿಮ ಘಟ್ಟದ ಸಾಗರ ತಾಲ್ಲೂಕಿನ ಅರಲಗೋಡಿನಿಂದ ಕೋಗಾರ್ ವರೆಗಿನ ಜೈನರ ಮನೆಗಳಲ್ಲಿ ತಯಾರಿಸುವ ಈ ಅಕ್ಕಿ ರೊಟ್ಟಿಗಳು ರುಚಿಯ ವಿಚಾರದಲ್ಲಿ ಉಳಿದ ಅಡುಗೆಯನ್ನು ಮೀರಿಸುತ್ತದೆ ಈ ಭಾಗದಲ್ಲಿ ಬಹುತೇಕರು ರೊಟ್ಟಿ ಮಾಡುವ ವಿಧಾನವೂ ಬೇರೆಯೇ ಆಗಿದ್ದು, ಅಕ್ಕಿಯನ್ನು ಬೀಸುಕಲ್ಲಿನಲ್ಲಿ ಒಣ ಹಿಟ್ಟು ಮಾಡಿ ರೊಟ್ಟಿ ಮಾಡುತ್ತಾರೆ. ಆದರೆ ಈ ಪ್ರದೇಶದ ಜೈನರು ಮಾತ್ರ ಅಕ್ಕಿ ನೆನಸಿ ರುಬ್ಬುವ ಕಲ್ಲಿನಲ್ಲಿ ನೆನೆಸಿದ ಅಕ್ಕಿಯನ್ನು ರುಬ್ಬಿ ಆ ಹಸಿ ಹಿಟ್ಟಿನಿಂದ ರೊಟ್ಟಿ ತಟ್ಟುತ್ತಾರೆ. ಕಟ್ಟಿಗೆಯ ಒಲೆಯ ಮೇಲಿನ ಹೆಂಚಿನಲ್ಲಿ ಬೇಯಿಸಿ ನಂತರ ಕಟ್ಟಿಗೆಯ ಕೆಂಪು ಕೆಂಡದಲ್ಲಿ ಹದವಾಗಿ ಸುಡುತ್ತಾರೆ. ಈ ರೊಟ್ಟಿಯ ಜೊತೆಗೆ ನೆಂಚಿಕೊಳ್ಳಲು ತೆಂಗಿನಕಾಯಿ ಹಾಗೂ ಹಸಿಮೆಣಸಿನ ಚಟ್ನಿ ಇರುತ್ತದೆ. ಇದರ ರುಚಿಯನ್ನು ಸವಿದವನೇ ಬಲ್ಲ. ಸುರಿಯುವ ವಿಪರೀತ ಮಳೆಗೆ, ದಟ್ಟವಾದ ಕಾಡುಗಳ ನಡುವೆ ಇಲ್ಲಿನ ಜೈನರು ಈ ವಿಧಾನದ ಮೂಲಕ ಅಕ್ಕಿ ರೊಟ್ಟಿ ತಯಾರಿಸುವುದು ಇವರ ಸಾಂಪ್ರದಾಯಿಕ ಶೈಲಿಯ ಆಹಾರ ತಯಾರಿ ಕ್ರಮವೆನ್ನಬಹುದು.
ಇದನ್ನೂ ಓದಿ: ಬೆಳ್ಳಿ ಸಾಮಗ್ರಿಗಳು ಕಪ್ಪಾಗಿದ್ದರೆ ಐದೇ ನಿಮಿಷದಲ್ಲಿ ಫಳ ಫಳ ಹೊಳೆಯುವಂತೆ ಮಾಡುವುದೇಗೆ?
ಮಲೆನಾಡಿನ ಪಶ್ಚಿಮ ಘಟ್ಟದ ಸಾಗರ ತಾಲ್ಲೂಕಿನ ಅರಲಗೋಡಿನಿಂದ ಕೋಗಾರ್ ವರೆಗಿನ ಪ್ರದೇಶದ ಜೈನ ಅನುಯಾಯಿಗಳು ಸೂರ್ಯಾಸ್ತದ ಒಳಗೆ ತಮ್ಮ ರಾತ್ರಿ ಊಟವನ್ನು ಮಾಡಿ ಮುಗಿಸುತ್ತಾರೆ. ರಾತ್ರಿಯ ವೇಳೆ ಕತ್ತಲಲ್ಲಿ ಕಣ್ಣಿಗೆ ಕಾಣದ ಕ್ರಿಮಿ ಕೀಟಗಳನ್ನು ಹಿಂಸಿಸಬಾರದೆಂಬ ಅಹಿಂಸಾ ತತ್ವವನ್ನು ಇವತ್ತಿಗೂ ಪಾಲಿಸುತ್ತಿದ್ದಾರೆ. ಅದಲ್ಲದೇ, ಸಾಂಪ್ರದಾಯಿಕ ಸುಲಭ ವಿಧಾನವಾದ ಅಕ್ಕಿಹಿಟ್ಟನ್ನು ಬಳಸದೇ ಇರಲು ಜೈನರ ಅಹಿಂಸಾ ತತ್ವವೇ ಕಾರಣವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:23 am, Thu, 6 June 24