Winter Skin Care: ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಸನ್​ಸ್ಕ್ರೀನ್ ಬಳಸಲು ಮರೆಯದಿರಿ

| Updated By: Pavitra Bhat Jigalemane

Updated on: Jan 14, 2022 | 7:45 AM

ಚರ್ಮದ ಮೇಲೆ ಬಿದ್ದ ಸೂರ್ಯನ ಯುವಿ ಕಿರಣಗಳಿಂದ ಚರ್ಮ ಸುಕ್ಕಗಟ್ಟಿದಂತಾಗಿ ವಯಸ್ಸಾದಂತೆ ಕಾಣಬಹುದು. ಹೀಗಾಗಿ ನಿಮಗೆ  ವಯಸ್ಸಾದಂತೆ ಕಾಣುವುದನ್ನು ತಪ್ಪಿಸಲು, ಚರ್ಮ ಡ್ರೈ ಆಗುವುದನ್ನು ತಪ್ಪಿಸಲು ಸನ್​ಸ್ಕ್ರೀನ್ ಉತ್ತಮ ಆಯ್ಕೆಯಾಗಿದೆ. 

Winter Skin Care: ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಸನ್​ಸ್ಕ್ರೀನ್ ಬಳಸಲು ಮರೆಯದಿರಿ
ಸಾಂಕೇತಿಕ ಚಿತ್ರ
Follow us on

ಚರ್ಮದ ಕಾಂತಿಯನ್ನು ಉಳಿಸಿಕೊಳ್ಳಲು ಬಿಸಿಲಿನಿಂದ ರಕ್ಷಣೆ ಪಡೆಯಲು ಸ್ಕಾರ್ಪ್​ಗಳನ್ನು ಬಳಸುತ್ತೇವೆ. ಆದರೆ ನೀವು ಹೊರಹೋಗುವ ಮುನ್ನ ಸನ್​ಸ್ಕ್ರೀನ್​ ಬಳಸುವುದು ಉತ್ತಮ ಅಭ್ಯಾಸವಾಗಿದೆ. ಸನ್​ಸ್ಕ್ರೀನ್ ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಲು ಉತ್ತಮ ವಾಹಕ ಎಂದು ಸಾಬೀತಾಗಿದೆ. ಹೀಗಾಗಿ ಮನೆಯಿಂದ ಹೊರಹೋಗುವ ಮುನ್ನ ಸನ್​ಸ್ಕ್ರೀನ್  ಅನ್ನು ಮರೆಯದೇ ಬಳಸಿ. ಇದು ಸೂರ್ಯನ ಕಿರಣಗಳಿಂದ ಚರ್ಮದ ಮೇಲೆ ಉಂಟಾಗುವ ಹಾನಿಯನ್ನು ತಪ್ಪಿಸಿ ಅಂಗಾಂಶಗಳನ್ನು ರಕ್ಷಿಸುತ್ತದೆ. ಬಿಸಿಲು, ಉರಿಯೂತ, ಕಪ್ಪುಕಲೆ, ಶುಷ್ಕತೆ, ಹೈಪರ್​ಪಿಗ್ಮೆಂಟೇಶನ್​ನಂತಹ ಸಮಸ್ಯಗಳಿಂದ ಚರ್ಮದ ಮೇಲೆ ಪದರ ರಚಿಸಿ ಸನ್​ಸ್ಕ್ರೀನ್ ರಕ್ಷಿಸುತ್ತದೆ.  SPF 30 ಅಥವಾ ಅದಕ್ಕಿಂತ ಹೆಚ್ಚಿನ ಗುಣಮಟ್ಟದ ಸನ್​ಸ್ಕ್ರೀನ್ ಬಳಸುವಂತೆ ತಜ್ಞರು ಸಲಹೆ ನೀಡುತ್ತಾರೆ. ಮನೆಯಿಂದ ಹೊರಗೆ ಬಿಸಿಲೆಗೆ ಹೋಗುವ 30 ನಿಮಿಷಗಳ ಮೊದಲು ಸನ್​ಸ್ಕ್ರೀನ್ ಹಚ್ಚಿಕೊಳ್ಳಿ. ಇದು ನಿಮ್ಮ ತ್ವಚೆಗೆ ಹೊಂದಿಕೊಂಡು ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ನೀಡುತ್ತದೆ.

ಸರಿಯಾದ ಸನ್​ಸ್ಕ್ರೀನ್ ಆಯ್ಕೆಯಿರಲಿ
ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ಸನ್​ಸ್ಕ್ರೀನ್​ ದೊರೆಯುತ್ತದೆ. ಆದರೆ ಅದರಲ್ಲಿ ರಾಸಾಯನಿಕಗಳ ಮಿಶ್ರಣವಿರಬಹುದು ಎಚ್ಚರಿಕೆಯಿರಲಿ. ಹೀಗಾಗಿ ಆಕ್ಸಿನೋಕ್ಸೆಟ್​ ಮತ್ತು ಆಕ್ಸಿನೊಝೇನ್​ ಅಂಶಗಳಿರುವ ಸನ್​ಸ್ಕ್ರೀನ್ ಅನ್ನೇ ಖರೀದಿಸಿ. ಜತೆಗೆ ಎಸ್​ಪಿಎಫ್​ 30ಕ್ಕಿಂತ ಹೆಚ್ಚಾಗಿರುವ ಸನ್​ಸ್ಕ್ರೀನ್​ಗಳನ್ನೇ ಪರ್ಚೇಸ್​ ಮಾಡಿರಿ.

ಎಲ್ಲಾ ಸಮಯದಲ್ಲೂ ಬಳಸಬಹುದು
ಸನ್​ಸ್ಕ್ರೀನ್ ಅನ್ನು ಕೇವಲ  ಬಿಸಿಲಿನಿಂದ ಚರ್ಮವನ್ನು ರಕ್ಷಣೆಮಾಡಿಕೊಳ್ಳಲು ಮಾತ್ರವೇ ಬಳಸಬೇಕೆಂದಿಲ್ಲ. ಪ್ರತಿನಿತ್ಯ ಹೊರಗೆ ಹೋಗುವ ವೇಳೆ ಹಚ್ಚಿದರೆ ಸೂರ್ಯನ ಕಿರಣಗಳಿಂದ ಚರ್ಮದ ಮೇಲಾಗುವ ಹಾನಿಯನ್ನು ತಪ್ಪಿಸಬಹುದು. ಇದರ ಜತೆಗೆ ತ್ವಚೆಗೆ ಸಂಬಂಧಿಸಿದ  ಕೆಲವು ಸಮಸ್ಯೆಗಳನ್ನೂ ಸನ್​ಸ್ಕ್ರೀನ್ ನಿವಾರಿಸುತ್ತದೆ.

ಹಾಗಾದರೆ ಯಾವೆಲ್ಲ ಕಾರಣಗಳಿಗೋಸ್ಕರ ಸನ್​ಸ್ಕ್ರೀನ್ ಅನ್ನು ಬಳಸಲೇಬೇಕು? 

ಚಳಿಗಾಲದ ಬಿಸಿಲೂ ಕೂಡ ಬೇಸಿಗೆಯ ಬಿಸಿಲಿನಷ್ಟೇ ನಿಮ್ಮ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಅಲ್ಲದೆ ಚಳಿಗಾಲದಲ್ಲಿ ಡ್ರೈ ಸ್ಕಿನ್​ ಇರುವುದರಿಂದ ಸೂರ್ಯನ ಬಿಸಿಲಿಗೆ ಮುಖವನ್ನು ತೆರೆದಾಗ ಚರ್ಮ ಸುಡುವ ಸಾಧ್ಯತೆಗಳೇ ಹೆಚ್ಚಿರುತ್ತದೆ. ಆದ್ದರಿಂದ ಸನ್​ಸ್ಕ್ರೀನ್ ಬಳಕೆ ಉತ್ತಮ ಎನ್ನುತ್ತಾರೆ ವೈದ್ಯರು.

ಚಳಿಗಾಲದಲ್ಲಿನ ಶುಷ್ಕತೆಯಿಂದ ನಿಮ್ಮ ಚರ್ಮ ಡ್ರೈ ಆಗಿರುತ್ತದೆ. ಇದರಿಂದ ನಿಮ್ಮ ಚರ್ಮದ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಒಣ ತ್ವಚೆ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಸನ್​ಸ್ಕ್ರೀನ್ ಬಳಸಿದಾಗ ಚರ್ಮದ ಪದರದ ಮೇಲೆ ರಕ್ಷಣಾ ಕವಚವನ್ನು ನಿರ್ಮಿಸಿ ಹಾನಿಯನ್ನು ತಪ್ಪಿಸುತ್ತದೆ.

ಚಳಿಗಾಲದಲ್ಲಿ ಚರ್ಮದ ಮರು ಉತ್ಪಾದನೆ ನಿಧಾನವಾಗಿರುತ್ತದೆ. ಹೀಗಾಗಿ ಬಿಸಿಲಿನಿಂದ ಒಂದು ಬಾರಿ ಚರ್ಮ ಹಾಳಾದರೆ ಮತ್ತೆ ಸರಿಹೋಗಲು ಸಮಯಗಳೇ ಬೇಕಾಗಬಹುದು. ಸನ್​ಸ್ಕ್ರೀನ್ ಬಳಸಿದರೆ ಚರ್ಮದ ಮೇಲಾಗುವ ಹಾನಿಯನ್ನು ತಪ್ಪಿಸಬಹುದು.

ಸೂರ್ಯನ ಕಿರಣಗಳಿಗೆ ಮುಖವನ್ನು ಒಡ್ಡಿಕೊಂಡಾಗ ಚರ್ಮದ ಮೇಲೆ ಬಿದ್ದ ಯುವಿ ಕಿರಣಗಳಿಂದ ಚರ್ಮ ಸುಕ್ಕಗಟ್ಟಿದಂತಾಗಿ ವಯಸ್ಸಾದಂತೆ ಕಾಣಬಹುದು. ಹೀಗಾಗಿ ನಿಮಗೆ  ವಯಸ್ಸಾದಂತೆ ಕಾಣುವುದನ್ನು ತಪ್ಪಿಸಲು, ಚರ್ಮ ಡ್ರೈ ಆಗುವುದನ್ನು ತಪ್ಪಿಸಲು ಸನ್​ಸ್ಕ್ರೀನ್ ಉತ್ತಮ ಆಯ್ಕೆಯಾಗಿದೆ.