National Farmers Day 2024: ರಾಷ್ಟ್ರೀಯ ರೈತರ ದಿನವನ್ನು ಆಚರಿಸುವುದು ಏಕೆ? ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 23, 2024 | 10:14 AM

ರೈತ ದೇಶದ ಬೆನ್ನೆಲುಬು. ಆತ ಬೆವರು ಸುರಿಸಿ ದುಡಿದರೆ ಮಾತ್ರ ನಾವು ನೆಮ್ಮದಿಯಿಂದ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯ. ಇಂತಹ ಪ್ರತಿಯೊಬ್ಬರ ರೈತನನ್ನು ಗೌರವಿಸುವ ಸಲುವಾಗಿ ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್‌ 23 ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆ ಯಾವಾಗ ಜಾರಿಗೆ ಬಂದಿತು, ಈ ವಿಶೇಷ ದಿನದ ಮಹತ್ವವೇನು ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

National Farmers Day 2024: ರಾಷ್ಟ್ರೀಯ ರೈತರ ದಿನವನ್ನು ಆಚರಿಸುವುದು ಏಕೆ? ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us on

ರೈತರು ತಾವು ಹಸಿದಿದ್ದರೂ ಕಷ್ಟಪಟ್ಟು ಬೆವರು ಸುರಿಸಿ ದುಡಿದು ಇತರರು ನೆಮ್ಮದಿಯಿಂದ ಹೊಟ್ಟೆ ತುಂಬಿಸಿಕೊಳ್ಳುವಂತೆ ನೋಡುತ್ತಾರೆ. ಅವರು ಬೆವರು ಸುರಿಸಿ ದುಡಿದರೆ ಮಾತ್ರ ದೇಶ ಸುಭೀಕ್ಷವಾಗಿರುತ್ತದೆ. ಜೊತೆಗೆ ದೇಶದ ಆರ್ಥಿಕತೆಯಲ್ಲಿಯೂ ರೈತರ ಕೊಡುಗೆ ಅಪಾರ. ಇದೇ ಕಾರಣಕ್ಕೆ ರೈತರನ್ನು ದೇಶದ ಬೆನ್ನೆಲುಬು ಅಂತ ಕರೆಯೋದು. ಅದರಲ್ಲೂ ಭಾರತವನ್ನು ಪ್ರಾಚೀನ ಕಾಲದಿಂದಲೂ ಕೃಷಿ ಪ್ರಧಾನ ದೇಶವೆಂದು ಪರಿಗಣಿಸಲಾಗಿದೆ. ಅಂದಾಜಿನ ಪ್ರಕಾರ, ಭಾರತದ ಸುಮಾರು 60% ಶೇಕಡಾ ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಇಂತಹ ಪ್ರತಿಯೊಬ್ಬರ ರೈತನನ್ನು ಗೌರವಿಸುವ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಅವರ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್‌ 23 ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆ ಯಾವಾಗ ಜಾರಿಗೆ ಬಂದಿತು, ಈ ವಿಶೇಷ ದಿನದ ಮಹತ್ವವೇನು ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಷ್ಟ್ರೀಯ ರೈತರ ದಿನವನ್ನು ಡಿಸೆಂಬರ್ 23 ರಂದು ಮಾತ್ರ ಏಕೆ ಆಚರಿಸಲಾಗುತ್ತದೆ?

ರಾಷ್ಟ್ರೀಯ ರೈತರ ದಿನದ ಇತಿಹಾಸವನ್ನು ನೋಡುವುದಾದರೆ, ದೇಶದ ಐದನೇ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಅವರ ಜನ್ಮ ದಿನದ ಸವಿ ನೆನಪಿಗಾಗಿ ಪ್ರತಿವರ್ಷ ಡಿಸೆಂಬರ್‌ 23 ರಂದು ಭಾರತದಲ್ಲಿ ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ಅವರು 1979 ರಿಂದ 1980 ರ ವರೆಗೆ ದೇಶದ ಪ್ರಧಾನಿಯಾಗಿದ್ದರು. ತಾವು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಇವರು ರೈತರ ಶ್ರೇಯೋಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಹಮ್ಮಿಕೊಂಡಿದ್ದರು. ರೈತರ ಸಬಲೀಕರಣಕ್ಕಾಗಿ ಹಲವು ಕಾನೂನು, ಕೃಷಿ ಸುಧಾರಣೆಗಳು, ನೀತಿಗಳನ್ನು ರೂಪಿಸಿದ್ದರು. ಅನ್ನದಾತನ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಅವರ ಗೌರವಾರ್ಥವಾಗಿ 2001 ರಲ್ಲಿ ಭಾರತ ಸರ್ಕಾವು ಡಿಸೆಂಬರ್‌ 23 ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್‌ 23 ರಂದು ದೇಶದಲ್ಲಿ ರಾಷ್ಟ್ರೀಯ ರೈತರ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಗಣಿತ ಕ್ಷೇತ್ರಕ್ಕೆ ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನರು ನೀಡಿದ ಕೊಡುಗೆಗಳೇನು? ಇಲ್ಲಿದೆ ಮಾಹಿತಿ

ರಾಷ್ಟ್ರೀಯ ರೈತರ ದಿನದ ಮಹತ್ವ:

ದೇಶದ ಆರ್ಥಿಕತೆಗೆ ರೈತರ ಕೊಡುಗೆ ಮಹತ್ತರವಾದದ್ದು. ರೈತರ ಈ ಸೇವೆ, ಪರಿಶ್ರಮ ಮತ್ತು ಕೊಡುಗೆಗಳನ್ನು ಗೌರವಿಸುವ ಸಲುವಾಗಿ ರೈತರ ದಿನವನ್ನು ಆಚರಣೆ ಮಾಡಲಾಗುತ್ತದೆ. ಜೊತೆಗೆ ಅನಿರೀಕ್ಷಿತ ಹವಾಮಾನ ಪರಿಸ್ಥಿತಿಗಳು, ಮಾರುಕಟ್ಟೆ ಬೆಲೆಗಳ ಏರಿಳಿತ ಮತ್ತು ಆಧುನಿಕ ತಂತ್ರಜ್ಞಾನಕ್ಕೆ ಅಸಮರ್ಪಕ ಪ್ರವೇಶದಂತಹ ರೈತರು ಎದುರಿಸುತ್ತಿರುವ ವಿವಿಧ ಸವಾಲುಗಳ ಬಗ್ಗೆ ಅರಿವು ಮೂಡಿಸುವುದು ಕೂಡಾ ಈ ದಿನದ ಆಚರಣೆಯ ಉದ್ದೇಶವಾಗಿದೆ. ಅಷ್ಟೇ ಅಲ್ಲದೆ ಈ ವಿಶೇಷ ದಿನದಂದು ಸರ್ಕಾರಿ ಸಂಸ್ಥೆಗಳು, ಕೃಷಿ ಸಂಸ್ಥೆಗಳು ಮತ್ತು ತಜ್ಞರು ಬೆಳೆ ಇಳುವರಿಗಳನ್ನು ಹೆಚ್ಚಿಸಲು ಮತ್ತು ಕೃಷಿ ಆವಿಷ್ಕಾರಗಳ ಬಗ್ಗೆ ತಿಳುವಳಿಕೆ ಮೂಡಿಸಲು ರೈತರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಕೂಡಾ ನಡೆಸುತ್ತಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ