
ಭಾರತವು (India) ಪ್ರಜಾಪ್ರಭುತ್ವ (democracy) ರಾಷ್ಟ್ರವಾಗಿದ್ದು, ತಳಮಟ್ಟದಿಂದಲೇ ಆಡಳಿತವನ್ನು ಸುಸಜ್ಜಿತವಾಗಿ ನಡೆಸಿಕೊಂಡು ಹೋಗುವ ಸಲುವಾಗಿ ಪಂಚಾಯತ್ ರಾಜ್ (Panchayati Raj) ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಒಂದು ದೇಶವು ಅಭಿವೃದ್ಧಿಯತ್ತ ಸಾಗಬೇಕಾದರೆ ಹಳ್ಳಿಗಳ ಅಭಿವೃದ್ಧಿಯು ಮುಖ್ಯ ಎಂಬ ಮಾತಿನಂತೆ ಪಂಚಾಯತ್ ರಾಜ್ ವ್ಯವಸ್ಥೆಯು ಗ್ರಾಮಗಳ ಅಭಿವೃದ್ಧಿ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಗ್ರಾಮೀಣ ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಜಾರಿಗೊಳಿಸಲಾದ ಅತ್ಯಂತ ಮಹತ್ವದ ವ್ಯವಸ್ಥೆಯಾಗಿದೆ. ವಿಶೇಷವಾಗಿ ಈ ಪಂಚಾಯತ್ ರಾಜ್ ವ್ಯವಸ್ಥೆಗಳು ಹಳ್ಳಿಗಳು ಮತ್ತು ಗ್ರಾಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಗ್ರಾಮ ಪಂಚಾಯತ್, ಬ್ಲಾಕ್ ಮಟ್ಟದಲ್ಲಿ ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪಂಚಾಯತ್ ಅನ್ನು ಒಳಗೊಂಡ ಪಂಚಾಯತ್ ರಾಜ್ ವ್ಯವಸ್ಥೆ 1993 ರಲ್ಲಿ 73 ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯೊಂದಿಗೆ ಪ್ರಾರಂಭವಾದ ಆಡಳಿತ ವಿಧಾನವಾಗಿದ್ದು, ಈ ವ್ಯವಸ್ಥೆಯನ್ನು ಜಾರಿಗೆ ತಂದ ಸ್ಮರಣಾರ್ಥವಾಗಿ ಪ್ರತಿವರ್ಷ ಏಪ್ರಿಲ್ 24 ರಂದು ಭಾರತದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಆಚರಿಸಲಾಗುತ್ತದೆ.
ಏಪ್ರಿಲ್ 24, 1993 ರಲ್ಲಿ ಸಂವಿಧಾನದ 73 ನೇ ತಿದ್ದುಪಡಿಯ ಮೂಲಕ ಗ್ರಾಮ ಪಂಚಾಯತ್, ಬ್ಲಾಕ್ ಮಟ್ಟದಲ್ಲಿ ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪಂಚಾಯತ್ ಅನ್ನು ಒಳಗೊಂಡ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಾಂಸ್ಥೀಕರಣಗೊಳಿಸುವ ಮೂಲಕ ತಳಮಟ್ಟಕ್ಕೆ ಅಧಿಕಾರದ ವಿಕೇಂದ್ರೀಕರಣ ಮಾಡಲಾಯಿತು. ಈ ವ್ಯವಸ್ಥೆಯನ್ನು ಜಾರಿಗೆ ತಂದ ಸ್ಮರಣಾರ್ಥವಾಗಿ ಆಗಿನ ಭಾರತದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು 2010 ರಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಆಚರಿಸುವುದಾಗಿ ಘೋಷಿಸಿದರು. ಅಂದಿನಿಂದ ಪ್ರತಿವರ್ಷ ಏಪ್ರಿಲ್ 24 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ರಾಷ್ಟ್ರೀಯ ಪಂಚಾಯತ್ ರಾಜ್ ದಿನವು ಹೆಚ್ಚಿನ ಮಹತ್ವವನ್ನು ಹೊಂದಿದೆ. ಪಂಚಾಯತ್ ರಾಜ್ ವ್ಯವಸ್ಥೆಯು ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಯ ಒಂದು ಪ್ರಮುಖ ಭಾಗವಾಗಿದೆ, ಇದು ಸ್ಥಳೀಯ ಮಟ್ಟಕ್ಕೆ ಅಧಿಕಾರ ಮತ್ತು ಸಂಪನ್ಮೂಲಗಳನ್ನು ವಿಕೇಂದ್ರೀಕರಿಸುವ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಸ್ಥಳೀಯ ಜನರ ಭಾಗವಹಿಸುವಿಕೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಹೀಗೆ ಪಂಚಾಯತ್ ರಾಜ್ ವ್ಯವಸ್ಥೆಯ ಮಹತ್ವ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ, ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಮತ್ತು ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವಲ್ಲಿ ಅದರ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಆಚರಿಸಲಾಗುತ್ತದೆ.
ಈ ದಿನ ವಿವಿಧ ಕಾರ್ಯಕ್ರಮಗಳು ಚಟುವಟಿಕೆಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ರ್ಯಾಲಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅಷ್ಟೇ ಅಲ್ಲದೆ ಪ್ರತಿವರ್ಷ ಅರ್ಹ ಪಂಚಾಯತ್‌ಗಳಿಗೆ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಬಲೀಕರಣ ಪ್ರಶಸ್ತಿ, ನಾನಾಜಿ ದೇಶಮುಖ್ ರಾಷ್ಟ್ರೀಯ ಗೌರವ ಗ್ರಾಮಸಭಾ ಪ್ರಶಸ್ತಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ ಪ್ರಶಸ್ತಿ, ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಪ್ರಶಸ್ತಿಯನ್ನು ಕೂಡಾ ನೀಡಲಾಗುತ್ತದೆ.
ಇದನ್ನೂ ಓದಿ: ಬಿಳಿ ಚಾಕೊಲೇಟ್ ನಿಜವಾದ ಚಾಕೊಲೇಟಾ? ಸತ್ಯಾಂಶ ಇಲ್ಲಿದೆ
ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಅಂಗವಾಗಿ ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯ ಕೊಡಮಾಡುವ ರಾಷ್ಟ್ರೀಯ ಪಂಚಾಯತ್ ರಾಜ್ ಪುರಸ್ಕಾರಕ್ಕೆ ಈ ಬಾರಿ ಹಾಸನದ ಬಿರಡಹಳ್ಳಿ ಗ್ರಾಮ ಪಂಚಾಯತ್ ಭಾಜನವಾಗಿದೆ. ಕ್ರಿಯಾಶೀಲ ಆಡಳಿತ, ಉತ್ತಮ ಸೇವೆ, ನವೀನ ತಂತ್ರಜ್ಞಾನಗಳ ಅಳವಡಿಕೆಯನ್ನು ಪರಿಗಣಿಸಿ, ಹವಾಮಾನ ಕ್ರಿಯಾ ವಿಶೇಷ ಪಂಚಾಯತ್ ವಿಭಾಗದ (ಕ್ಲೈಮೆಟ್ ಆಕ್ಷನ್ ಸ್ಪೆಷಲ್ ಪಂಚಾಯತ್ ಅವಾರ್ಡ್) ಪ್ರಶಸ್ತಿಗೆ ಆಯ್ಕೆಯಾಗಿದೆ. ಇದಲ್ಲದೇ ಇದೇ ವಿಭಾಗದ ಪ್ರಶಸ್ತಿಗೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ದವ್ವಾ ಎಸ್ ಗ್ರಾಮ ಪಂಚಾಯತ್, ಬಿಹಾರದ ಸಮಸ್ತಿಪುರ ಜಿಲ್ಲೆಯ ಮೋತಿಪುರ್ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.
ಇನ್ನೂ ಆತ್ಮನಿರ್ಭರ ಪಂಚಾಯತ್ ವಿಭಾಗದ ವಿಶೇಷ ಪ್ರಶಸ್ತಿಗೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮಾಲ್ ಗ್ರಾಮ ಪಂಚಾಯತ್, ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಹತ್ಬದರಾ ಗ್ರಾಮ ಪಂಚಾಯತ್, ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಗೊಲ್ಲಪುಡಿ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ