Akshaya Tritiya 2025: ಅಕ್ಷಯ ತೃತೀಯ ದಿನದಂದು ಈ ವಸ್ತುಗಳನ್ನು ಖರೀದಿಸಲು ಮರೆಯದಿರಿ
ಅಕ್ಷಯ ತೃತೀಯ: ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಅಕ್ಷಯ ತೃತೀಯವೂ ಒಂದು. ಈ ಹಬ್ಬದ ದಿನದಂದು ಶುಭದ ಸಂಕೇತವಾಗಿ ಚಿನ್ನ, ಬೆಳ್ಲಿ ಖರೀದಿಸುವ ವಾಡಿಕೆ ಇದೆ. ಈ ಶುಭ ದಿನ ಚಿನ್ನ ಖರೀದಿ ಮಾಡುವುದರಿಂದ ಸಮೃದ್ಧಿ ಹಾಗೂ ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆಯಿಂದ ಹೆಚ್ಚಿನ ಜನರು ಚಿನ್ನ ಖರೀದಿ ಮಾಡುತ್ತಾರೆ. ಚಿನ್ನ ಮಾತ್ರವಲ್ಲ ಅಕ್ಷಯ ತೃತೀಯ ಹಬ್ಬದಂದು ಪುಸ್ತಕ, ಬಟ್ಟೆ ಸೇರಿದಂತೆ ಈ ಕೆಲವೊಂದಷ್ಟು ವಸ್ತುಗಳನ್ನು ಖದೀರಿ ಮಾಡುವುದು ಕೂಡಾ ಶುಭದ ಸಂಕೇತವಾಗಿದೆ. ಈ ಶುಭ ದಿನದಂದು ಈ ವಸ್ತುಗಳನ್ನು ಮನೆಗೆ ತರುವುದರಿಂದ ಅದೃಷ್ಟ ಎಂದು ಕೂಡ ನಂಬಲಾಗಿದೆ.

ಹಿಂದೂಗಳ (Hindu) ಪವಿತ್ರ ಹಬ್ಬಗಳಲ್ಲಿ ಒಂದಾದ ಅಕ್ಷಯ ತೃತೀಯ (Akshaya Tritiya) ಹಬ್ಬಕ್ಕೆ ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಚಿನ್ನ (Gold) ಖರೀದಿಸಿದರೆ ಮನೆ ಮತ್ತು ಕುಟುಂಬದಲ್ಲಿ ಸಮೃದ್ಧಿ ನೆಲೆಸುತ್ತದೆ ಹಾಗೂ ದಾನ ಮಾಡಿದರೆ ಶುಭವೆಂಬ, ಲಕ್ಷ್ಮೀ ದೇವಿಯ ಆಶೀರ್ವಾದ ಯಾವಾಗಲೂ ನಿಮ್ಮ ಕುಟುಂಬದ ಮೇಲೆ ಇರುತ್ತದೆ ಎಂಬ ನಂಬಿಕೆ ಕೂಡಾ ಇದೆ. ಹೀಗಾಗಿ ಈ ದಿನ ಹೆಚ್ಚಿನವರು ಈ ಶುಭ ದಿನದಂದು ಚಿನ್ನವನ್ನು ಖರೀದಿ ಮಾಡುತ್ತಾರೆ. ಚಿನ್ನ ಮಾತ್ರವಲ್ಲದೆ ಅಕ್ಷಯ ತೃತೀಯ ಹಬ್ಬದ ದಿನ ಈ ಕೆಲವೊಂದಿಷ್ಟು ಖರೀದಿಸುವುದು ಕೂಡಾ ಶುಭದ ಸಂಕೇತವಂತೆ. ಹಾಗಿದ್ರೆ ಅಕ್ಷಯ ತೃತೀಯ ಹಬ್ಬದ ದಿನ ಯಾವ ವಸ್ತುಗಳನ್ನು ಖರೀದಿಸಿದರೆ ಒಳ್ಳೆಯದು ಎಂಬ ಮಾಹಿತಿ ಇಲ್ಲಿದೆ ನೋಡಿ
ಅಕ್ಷಯ ತೃತೀಯ ದಿನದಂದು ಈ ವಸ್ತುಗಳನ್ನು ಖರೀದಿಸಲು ಮರೆಯದಿರಿ:
ಅಕ್ಷಯ ತೃತೀಯದಂದು ಚಿನ್ನ:
ಅಕ್ಷಯ ತೃತೀಯ ಹಬ್ಬದ ದಿನ ಚಿನ್ನ ಖರೀದಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ದಿನ ಹೆಚ್ಚಿನವರು ಚಿನ್ನದ ನಾಣ್ಯ, ಸಣ್ಣ ಆಭರಣಗಳು ಸೇರಿದಂತೆ ಶುಭ ಮತ್ತು ಸಮೃದ್ಧಿಯ ಸಂಕೇತವಾಗಿ ಚಿನ್ನವನ್ನು ಖರೀದಿಸುತ್ತಾರೆ.
ವಾಹನ ಖರೀದಿ:
ನೀವು ಹೊಸ ವಾಹನ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಅಕ್ಷಯ ತೃತೀಯಕ್ಕಿಂತ ಉತ್ತಮವಾದ ದಿನ ಇನ್ನೊಂದಿಲ್ಲ. ಈ ದಿನದಂದು ಶುಭ ಸಮಯದಲ್ಲಿ ವಾಹನಗಳನ್ನು ಖರೀದಿಸುವುದರಿಂದ ಭವಿಷ್ಯದಲ್ಲಿ ಸಂತೋಷ ಮತ್ತು ಯಶಸ್ಸು ದೊರೆಯುತ್ತದೆ ಎಂಬ ನಂಬಿಕೆಯೂ ಇದೆ. ವಾಹನ ಖರೀದಿಸುವ ಯೋಜನೆಯಲ್ಲಿದ್ದರೆ, ಈ ದಿನ ತುಂಬಾ ಸೂಕ್ತ ಅಂತಾನೇ ಹೇಳಬಹುದು.
ಬೆಳ್ಳಿ ಖರೀದಿ:
ಚಿನ್ನ ಮಾತ್ರವಲ್ಲ ಅಕ್ಷಯ ತೃತೀಯ ದಿನದಂದು ಬೆಳ್ಳಿ ವಸ್ತುಗಳನ್ನು ಸಹ ಖರೀದಿಸುವುದು ಕೂಡ ಒಳ್ಳೆಯದು. ಬೆಳ್ಳಿ ಲಕ್ಷ್ಮೀ ದೇವಿಯ ಸಂಕೇತವಾಗಿರುವುದರಿಂದ, ಈ ಶುಭ ದಿನದಂದು ಬೆಳ್ಳಿ ಖರೀದಿಸುವುದರಿಂದ ಜೀವನದಲ್ಲಿ ಸಮತೋಲನ ಮತ್ತು ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ ಎಂದು ನಂಬಲಾಗಿದೆ.
ಆಸ್ತಿ ಖರೀದಿ:
ಅಕ್ಷಯ ತೃತೀಯ ದಿನದಂದು ಭೂಮಿ ಅಥವಾ ಯಾವುದೇ ಆಸ್ತಿಯನ್ನು ಖರೀದಿಸುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಇದು ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದಲ್ಲದೆ, ಭವಿಷ್ಯದಲ್ಲಿ ಪ್ರಗತಿ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ.
ಮಣ್ಣಿನ ಮಡಕೆ:
ಈ ದಿನದಂದು ಮಣ್ಣಿನ ಮಡಕೆ ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ. ಇದು ಸಂಪತ್ತು ಮತ್ತು ಆಸ್ತಿಯ ಸಂಕೇತವಾಗಿದೆ. ಅಕ್ಷಯ ತೃತೀಯ ದಿನ ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ಖರೀದಿಸಲು ಸಾಧ್ಯವಾಗದಿದ್ದರೆ ನೀವು ಮಣ್ಣಿನ ಪಾತ್ರೆ ಖರೀದಿಸಬಹುದು. ಮತ್ತು ಖರೀದಿಸಿದ ಈ ಪಾತ್ರೆಯನ್ನು ಪೂಜಿಸಿ, ಅದರಲ್ಲಿ ಅಕ್ಕಿ ಮತ್ತು ಅರಿಶಿನವನ್ನು ಹಾಕಿ ಒಂದು ವರ್ಷ ಮನೆಯಲ್ಲಿ ಇಟ್ಟರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯೂ ಇದೆ. ಅಲ್ಲದೆ ಈ ದಿನ ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳನ್ನು ಖರೀದಿಸುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಬಿಳಿ ಚಾಕೊಲೇಟ್ ನಿಜವಾದ ಚಾಕೊಲೇಟಾ? ಸತ್ಯಾಂಶ ಇಲ್ಲಿದೆ
ಹೊಸ ಬಟ್ಟೆಗಳು:
ಚಿನ್ನ ಬೆಳ್ಳಿ ಮಾತ್ರವಲ್ಲದೆ ಅಕ್ಷಯ ತೃತೀಯ ಹಬ್ಬದ ದಿನ ಹೊಸ ಬಟ್ಟೆಗಳನ್ನು ಖರೀದಿಸುವುದು ಕೂಡಾ ಒಳ್ಳೆಯದು. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಎಂಬ ನಂಬಿಕೆ ಇದೆ.
ಕಲ್ಲುಪ್ಪು:
ಅಕ್ಷಯ ತೃತೀಯ ದಿನದಂದು ಕಲ್ಲುಪ್ಪನ್ನು ಖರೀದಿಸಿ ಮನೆಗೆ ತರುವುದು ಕೂಡಾ ಒಳ್ಳೆಯದು. ಇದು ನಕಾರಾತ್ಮಕತೆಯನ್ನು ತೆಗೆದು ಹಾಕುವುದರಿಂದ ಹೆಚ್ಚಿನ ಜನರು ತಮ್ಮ ಜೀವನದಿಂದ ಅಡೆತಡೆಗಳನ್ನು ತೊಡೆದು ಹಾಕುವ ಸಲುವಾಗಿ ಈ ಶುಭ ದಿನದಂದು ಕಲ್ಲುಪ್ಪನ್ನು ಖರೀದಿಸುತ್ತಾರೆ.
ತುಳಸಿ ಗಿಡ:
ಅಕ್ಷಯ ತೃತೀಯ ದಿನ ತುಳಸಿ ಗಿಡವನ್ನು ಮನೆಗೆ ತರುವುದು ಕೂಡಾ ತುಂಬಾನೇ ಒಳ್ಳೆಯದು. ತುಳಸಿ ಲಕ್ಷ್ಮಿಯ ರೂಪವಾಗಿರುವುದರಿಂದ ಆರೋಗ್ಯ, ಸಮೃದ್ಧಿಗಾಗಿ, ಉತ್ತಮ ಜೀನವಕ್ಕಾಗಿ ಈ ಶುಭ ದಿನ ತುಳಸಿ ಗಿಡವನ್ನು ಮನೆಗೆ ತರುವುದು ಒಳ್ಳೆಯದು ಎಂದು ನಂಬಲಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ