AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Watermelon Day 2026: ಮಾವು ಮಾತ್ರವಲ್ಲ ಕಲ್ಲಂಗಡಿ ಹಣ್ಣಿನಲ್ಲೂ ಅನೇಕ ವಿಧಗಳಿವೆ; ಅವು ಯಾವುವು ಗೊತ್ತೇ?

ಕಲ್ಲಂಗಡಿ ಹಣ್ಣು ಬಹುತೇಕ ಎಲ್ಲರಿಗೂ ಇಷ್ಟ. ಈ ಹಣ್ಣು ಎಷ್ಟು ರುಚಿಕರವೋ ಆರೋಗ್ಯಕ್ಕೂ ಅಷ್ಟೇ ಪ್ರಯೋಜನಕಾರಿಯಾಗಿದೆ. ಸುಮಾರು 92 ಪ್ರತಿಶತ ನೀರು, ಇದರಲ್ಲಿ ವಿಟಮಿನ್ ಎ, ಬಿ6, ಸಿ, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇದರ ನಾರಿನ ಅಂಶವು ಜೀರ್ಣಾಂಗ ವ್ಯವಸ್ಥೆಗೂ ಪ್ರಯೋಜನಕಾರಿಯಾಗಿದೆ. ಬೇಸಿಗೆಯ ಸೂಪರ್‌ ಫ್ರೂಟ್‌ ಆಗಿರುವ ಈ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಸಾರಲು ಪ್ರತಿ ವರ್ಷ ಆಗಸ್ಟ್ 3 ರಂದು ರಾಷ್ಟ್ರೀಯ ಕಲ್ಲಂಗಡಿ ದಿನವನ್ನು ಆಚರಿಸಲಾಗುತ್ತದೆ. ಈ ಶುಭ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣಿನಲ್ಲಿ ಎಷ್ಟೆಲ್ಲಾ ವಿಧಗಳಿವೆ ಎಂಬುದನ್ನು ತಿಳಿದುಕೊಳ್ಳೋಣ.

National Watermelon Day 2026: ಮಾವು ಮಾತ್ರವಲ್ಲ ಕಲ್ಲಂಗಡಿ ಹಣ್ಣಿನಲ್ಲೂ ಅನೇಕ ವಿಧಗಳಿವೆ; ಅವು ಯಾವುವು ಗೊತ್ತೇ?
ಕಲ್ಲಂಗಡಿ Image Credit source: Getty Images
ಮಾಲಾಶ್ರೀ ಅಂಚನ್​
|

Updated on:Aug 02, 2026 | 5:50 PM

Share

ಮುಖ್ಯಾಂಶಗಳು

  • ಕಲ್ಲಂಗಡಿ ಹಣ್ಣಿನ ಪ್ರಯೋಜನಗಳ ಬಗ್ಗೆ ತಿಳಿಸಲು ಪ್ರತಿವರ್ಷ ಆಗಸ್ಟ್‌ 3 ರಂದು ರಾಷ್ಟ್ರೀಯ ಕಲ್ಲಂಗಡಿ ದಿನವನ್ನು ಆಚರಿಸಲಾಗುತ್ತದೆ.
  • ಮಾವಿನ ಹಣ್ಣಿನಂತೆ ಕಲ್ಲಂಗಡಿ ಹಣ್ಣಿನಲ್ಲೂ ಅನೇಕ ವಿಧಗಳಿವೆ
  • ಬೇಸಿಗೆಯ ನೆಚ್ಚಿನ ಹಣ್ಣಾಗಿರುವ ಕಲ್ಲಂಗಡಿ ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ

ಕಲ್ಲಂಗಡಿ (Watermelon)  ಬೇಸಿಗೆಯ ಅತ್ಯಂತ ಜನಪ್ರಿಯ ಹಣ್ಣುಗಳಲ್ಲಿ ಒಂದಾಗಿದೆ. ವಿಶ್ವಾದ್ಯಂತ ಜನ ಬೇಸಿಗೆಯ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸಲು ಇಷ್ಟಪಡುತ್ತಾರೆ. ಸುಮಾರು 92 ಪ್ರತಿಶತ ನೀರು, ವಿಟಮಿನ್ ಎ, ಬಿ6, ಸಿ, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುವ ಈ ಹಣ್ಣು ಶಾಖದಿಂದ ಪರಿಹಾರ ನೀಡಿ ದೇಹಕ್ಕೆ ತಾಜಾತನವನ್ನು ಒದಗಿಸುತ್ತದೆ. ಇದರಲ್ಲಿರುವ ಹೆಚ್ಚಿನ ನೀರಿನ ಅಂಶವು ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಕಲ್ಲಂಗಡಿ ಸೇವನೆಯಿಂದ ರಕ್ತದೊತ್ತಡವನ್ನು ಸಹ ನಿಯಂತ್ರಿಸಬಹುದು. ಹೀಗೆ ಈ ರುಚಿಕರ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸಲು ಪ್ರತಿವರ್ಷ ಆಗಸ್ಟ್‌ 3 ರಂದು ರಾಷ್ಟ್ರೀಯ ಕಲ್ಲಂಗಡಿ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ ಕಲ್ಲಂಗಡಿ ದಿನದ ಈ ಶುಭ ಸಂದರ್ಭದಲ್ಲಿ ಮಾವಿನಹಣ್ಣಿನಂತೆ ಕಲ್ಲಂಗಡಿ ಹಣ್ಣಿನಲ್ಲಿ ಎಷ್ಟೆಲ್ಲಾ ವಿಧಗಳಿವೆ, ಈ ಹಣ್ಣಿನ ಪ್ರಯೋಜನಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

ರಾಷ್ಟ್ರೀಯ ಕಲ್ಲಂಗಡಿ ದಿನದ ಇತಿಹಾಸವೇನು?

ರಾಷ್ಟ್ರೀಯ ಕಲ್ಲಂಗಡಿ ದಿನವನ್ನು ಪ್ರಪಂಚದ ವಿವಿಧ ಭಾಗಗಳಲ್ಲಿ, ಮುಖ್ಯವಾಗಿ ಅಮೆರಿಕದಲ್ಲಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಕಲ್ಲಂಗಡಿ ದಿನವನ್ನು 1980 ರ ದಶಕದ ಆರಂಭದಲ್ಲಿ ಯುನೈಟೆಡ್‌ ಸ್ಟೇಟ್‌ನ ರಾಷ್ಟ್ರೀಯ ಕಲ್ಲಂಗಡಿ ಬೆಳೆಗಾರರು ಮತ್ತು ವಿತರಕರ ಸಂಘವು ಕೃಷಿ ಪ್ರಚಾರ ಕಾರ್ಯಕ್ರಮವಾಗಿ ರಾಷ್ಟ್ರೀಯ ಕಲ್ಲಂಗಡಿ ದಿನವನ್ನು ಪ್ರಾರಂಭಿಸಿತು. ಇಂದು ಪ್ರಪಂಚದ ಅನೇಕ ಕಡೆ ಈ ದಿನವನ್ನು ಆಚರಿಸಲಾಗುತ್ತದೆ.

ಕಲ್ಲಂಗಡಿ ಹಣ್ಣಿನಲ್ಲಿ ಎಷ್ಟೆಲ್ಲಾ ವಿಧಗಳಿವೆ:

ಮಾವಿನಹಣ್ಣಿನಲ್ಲಿ ಅಲ್ಫೋನ್ಸೋ, ಮಲ್ಲಿಕಾ, ತೋತಾಪುರಿ ಇತ್ಯಾದಿ ವಿಧಗಳಿರುವಂತೆ ಕಲ್ಲಂಗಡಿ ಹಣ್ಣಿನಲ್ಲೂ ಸಾಕಷ್ಟು ವಿಧಗಳಿವೆ ಅವುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಶುಗರ್ ಬೇಬಿ: ಇದು ಅತ್ಯಂತ ಜನಪ್ರಿಯ ಕಲ್ಲಂಗಡಿ ವಿಧಗಳಲ್ಲಿ ಒಂದಾಗಿದೆ, ಇದು 2-3 ಕೆಜಿ ತೂಕವಿರುತ್ತದೆ. ಇದರ ಬೀಜಗಳು ಚಿಕ್ಕದಾಗಿರುತ್ತವೆ ಮತ್ತು ಕಂದು ಬಣ್ಣದ್ದಾಗಿರುತ್ತವೆ. ಇದನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ಅರ್ಕ ಜ್ಯೋತಿ: ಅರ್ಕ ಜ್ಯೋತಿ ವಿಧದ ಕಲ್ಲಂಗಡಿ ಹಣ್ಣುಗಳು ದುಂಡಗಿನ ಆಕಾರದಲ್ಲಿದ್ದು, ಇವು ಹಸಿರು ಪಟ್ಟೆಗಳನ್ನು ಹೊಂದಿರುತ್ತವೆ. ಇದರ ತೂಕ ಸುಮಾರು 4 ರಿಂದ 6 ಕೆಜಿ. ಇದು ಸ್ಥಳೀಯ ವಿಧವಾಗಿದ್ದು, ಪ್ರಕಾಶಮಾನವಾದ ಕೆಂಪು ತಿರುಳನ್ನು ಹೊಂದಿರುತ್ತದೆ.

ದುರ್ಗಾಪುರ ಕೇಸರ್:  ಈ ಬಗೆಯ ಕಲ್ಲಂಗಡಿ ಹಣ್ಣು, 6 ರಿಂದ 8 ಕಿಲೋಗ್ರಾಂಗಳಷ್ಟು ತೂಗುತ್ತವೆ. ಈ ಹಣ್ಣು ಹಸಿರು ಬಣ್ಣದಲ್ಲಿ ಪಟ್ಟೆಗಳೊಂದಿಗೆ ಇರುತ್ತದೆ ಮತ್ತು ಇದರ ತಿರುಳು ಸ್ವಲ್ಪ ಕೇಸರಿ ಬಣ್ಣದಲ್ಲಿರುತ್ತವೆ.

ಅರ್ಕಾ ಮಾಣಿಕ್: ಈ ಪ್ರಕಾರದ ಕಲ್ಲಂಗಡಿ ಹಣ್ಣು ದುಂಡಗಿನ ಮತ್ತು ಅಂಡಾಕಾರದಲ್ಲಿರುತ್ತವೆ. ಇವು ಸುಮಾರು 5 ರಿಂದ 6 ಕೆಜಿ ತೂಗುತ್ತವೆ. ಅಲ್ಲದೆ ಈ ಹಣ್ಣು ಸಖತ್‌ ಸಿಹಿಯಾಗಿರುತ್ತದೆ.

ಅಸಾಹಿ ಯಾಮೊಟೊ: ಇದು ಜಪಾನಿನಲ್ಲಿ ಬೆಳೆಯುವ ಕಲ್ಲಂಗಡಿ ಹಣ್ಣಿನ ವಿಧವಾಗಿದೆ. ಈ ಕಲ್ಲಂಗಡಿ 6 ರಿಂದ 8 ಕಿಲೋಗ್ರಾಂಗಳಷ್ಟು ತೂಗುತ್ತದೆ. ಇದರ ಸಿಪ್ಪೆ ಹಸಿರು ಬಣ್ಣದ್ದಾಗಿದ್ದು,  ಸೌಮು ಸಿಹಿಯನ್ನು ಹೊಂದಿರುತ್ತದೆ ಮತ್ತು ಈ ಕಲ್ಲಂಗಡಿ  ಆಳವಾದ ಗುಲಾಬಿ ಬಣ್ಣದ ತಿರುಳನ್ನು ಹೊಂದಿರುತ್ತದೆ.

ಕಾಶಿ ಪಿತಾಂಬರ್:‌ ಈ ಕಾಶಿ ಪಿತಾಂಬರ್ ಕಲ್ಲಂಗಡಿ ವಿಧವು ಹಳದಿ ಸಿಪ್ಪೆ ಮತ್ತು ಗುಲಾಬಿ ಬಣ್ಣದ ತಿರುಳನ್ನು ಹೊಂದಿದೆ. ಈ ಹಣ್ಣಿನ ಸರಾಸರಿ ತೂಕ 2.5 ರಿಂದ 3.5 ಕಿಲೋಗ್ರಾಂಗಳು.

ಕಾಶಿ ಮೋಹಿನಿ: ಈ ಬಗೆಯ ಕಲ್ಲಂಗಡಿ ಹಣ್ಣಿನ ತಿರುಳು ಗಾಢ ಕೆಂಪು ಬಣ್ಣವನ್ನು ಹೊಂದಿದ್ದು, ತುಂಬಾ ಸಿಹಿಯಾಗಿರುತ್ತದೆ. ಈ ವಿಧವು ಅತ್ಯುತ್ತಮ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.

ಇದನ್ನೂ ಓದಿ: ಕೊರಿಯನ್ನರಂತೆ ಹೊಳೆಯುವ ತ್ವಚೆ ನಿಮ್ಮದಾಗಲು ಪ್ರತಿನಿತ್ಯ ಆಹಾರಗಳನ್ನು ಸೇವಿಸಿ

ಕಲ್ಲಂಗಡಿ ಹಣ್ಣಿನ ಆರೋಗ್ಯ ಪ್ರಯೋಜನಗಳೇನು?

  • ಕಲ್ಲಂಗಡಿ ಹಣ್ಣಿನಲ್ಲಿ 92% ನೀರಿನಾಂಶವಿದ್ದು, ಇದು ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ.
  • ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪೀನ್ ಎಂಬ ಪದಾರ್ಥವಿದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
  • ನೀರಿನಂಶದಿಂದ ಸಮೃದ್ಧವಾಗಿರುವ ಈ ಹಣ್ಣು ತ್ವರಿತ ತೂಕ ನಷ್ಟವನ್ನು ಉತ್ತೇಜಿಸುತ್ತದೆ. ಇದನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆ ಬೇಗನೆ ತುಂಬುತ್ತದೆ.
  • ಕಲ್ಲಂಗಡಿ ವಿಟಮಿನ್ ಎ ಮತ್ತು ಸಿ ಯ ಉತ್ತಮ ಮೂಲವಾಗಿದೆ. ಇದು ಆಸ್ತಮಾದ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ.
  • ಕಲ್ಲಂಗಡಿ ವಿಟಮಿನ್ ಎ, ವಿಟಮಿನ್ ಸಿ, ಬಿ6, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ವಿವಿಧ ಪೋಷಕಾಂಶಗಳ ಉಗ್ರಾಣವಾಗಿದೆ. ಅವು ಜೀವಕೋಶದ ಹಾನಿಯನ್ನು ತಡೆಗಟ್ಟಲು ಮತ್ತು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ.
  • ಈ ಹಣ್ಣಿನಲ್ಲಿ ನೀರಿನ ಅಂಶ ಮತ್ತು ಜೀವಸತ್ವಗಳು ಅಧಿಕವಾಗಿವೆ. ಇದು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ, ಕಲ್ಲಂಗಡಿಯಲ್ಲಿರುವ ಲೈಕೋಪೀನ್ ಸೂರ್ಯನ ನೇರಳಾತೀತ ಕಿರಣಗಳ ಹಾನಿಕಾರಕ ಪರಿಣಾಮಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಹೀಗೆ ಈ ಹಣ್ಣು ಚರ್ಮದ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:47 pm, Sun, 2 August 26

Follow Us