
ಸ್ವಾಮಿ ವಿವೇಕಾನಂದರ (Swami Vivekananda) ತತ್ವಗಳು ಮತ್ತು ಅವರ ಬದುಕಿನ ಹಾದಿ, ಆದರ್ಶಗಳು ನಮಗೆಲ್ಲರಿಗೂ ಸ್ಪೂರ್ತಿ. ದೇಶದ ಅಭಿವೃದ್ಧಿಯು ಯುವಕರಿಂದ ಮಾತ್ರ ಸಾಧ್ಯ ಎಂದು ನಂಬಿದ್ದ ಅವರು ತಮ್ಮ ಅಮೂಲ್ಯವಾದ ಆಲೋಚನೆಗಳು ಮತ್ತು ಸ್ಫೂರ್ತಿದಾಯಕ ಮಾತುಗಳೊಂದಿಗೆ ಯುವಕರನ್ನು ಮುಂದುವರೆಯಲು ಪ್ರೋತ್ಸಾಹಿಸುತ್ತಿದ್ದರು. ಆಧ್ಯಾತ್ಮಿಕ ಲೋಕದ ಮಹಾನ್ ಚೇತನ, ಭವ್ಯ ಭಾರತದ ಹೆಮ್ಮೆಯ ಪುತ್ರ, ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆ ಸ್ವಾಮಿ ವಿವೇಕಾನಂದರ ಈ ತತ್ವಾದರ್ಶಗಳು ಇಂದಿಗೂ ಎಂದೆಂದಿಗೂ ಜೀವಂತ. ಇಂದಿಗೂ ಅದೆಷ್ಟೋ ಜನ ವಿವೇಕಾನಂದರ ಮಾತುಗಳ ಸ್ಪೂರ್ತಿಯ ನೆರಳಲ್ಲಿ ಸಾಗುತ್ತಿದ್ದಾರೆ. ಹೀಗೆ ದೇಶದ ಯುವಕರಿಗೆ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ತಿಳಿಸುವ ಮೂಲಕ ಸರಿಯಾದ ದಾರಿಯಲ್ಲಿ ಸಾಗುವಂತೆ ದಾರಿ ತೋರಿಸುವ ಉದ್ದೇಶದಿಂದ ಈ ಮಹಾನ್ ವ್ಯಕ್ತಿಯ ಜನ್ಮ ದಿನವಾದ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ.
ಒಂದು ದೇಶದ ಅಭಿವೃದ್ಧಿಯು ಆ ದೇಶದ ಯುವ ಜನತೆಯ ಮೇಲೆ ಅವಲಂಬಿತವಾಗಿದೆ. ಹೀಗಿರುವಾಗ ಸರಿಯಾದ ದಾರಿಯಲ್ಲಿ ಸಾಗಲು ಯುವ ಜನತೆಯನ್ನು ಪ್ರೇರೇಪಿಸಲು ಸರಿಯಾದ ಮಾರ್ಗದರ್ಶನ ನೀಡುವುದು ಬಹಳ ಮುಖ್ಯವಾಗಿದೆ. ಈ ಉದ್ದೇಶದಿಂದ ಭಾರತ ಸರ್ಕಾರವು 1984 ರಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಈ ಬಳಿಕ 1985 ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಯುವಕರನ್ನು ದೇಶದ ಭವಿಷ್ಯ ಎಂದು ಕರೆಯಲಾಗುತ್ತದೆ. ಯಾವುದೇ ರಾಷ್ಟ್ರದ ಪ್ರಗತಿಯು ಅಲ್ಲಿನ ಯುವಕರ ಚಿಂತನೆ ಮತ್ತು ದಕ್ಷತೆಯನ್ನು ಅವಲಂಬಿಸಿರುತ್ತದೆ. ಆದ್ದರಿಂದ, ಯುವಜನರು ಸರಿಯಾದ ಮಾರ್ಗದರ್ಶನ ಪಡೆಯುವುದು ಬಹಳ ಮುಖ್ಯವಾಗುತ್ತದೆ. ಈ ಉದ್ದೇಶಕ್ಕಾಗಿ ಪ್ರತಿ ವರ್ಷ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ವಿಶ್ವ ಹಿಂದಿ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ