ಗಂಟಲಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡರೆ ಆತಂಕ ಬೇಡ, ತಕ್ಷಣ ಹೀಗೆ ಮಾಡಿ ಸಾಕು
ಆಹಾರ ಸೇವನೆ ಮಾಡುವಾಗ ಗಂಟಲಿನಲ್ಲಿ ಆ ಆಹಾರ ಸಿಕ್ಕಿಹಾಕಿಕೊಳ್ಳುವಂತೆ ಕೆಲವೊಂದು ಬಾರಿ ಮೀನಿನ ಮುಳ್ಳು ಸಹ ಗಂಟಲಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಎಷ್ಟೇ ಜಾಗರೂಕತೆಯಿಂದ ಮೀನು ಸೇವನೆ ಮಾಡಿದ್ರೂ ಕೆಲವೊಮ್ಮ ಮುಳ್ಳು ಗಂಟಲಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ರೀತಿ ಆದಾಗ ಭಯ ಪಡುವ ಅವಶ್ಯಕತೆಯಿಲ್ಲ, ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ನೀವು ಗಂಟಲಲ್ಲಿ ಸಿಲುಕಿದ ಮೀನಿನ ಮುಳ್ಳನ್ನು ಸುಲಭವಾಗಿ ತೆಗೆದುಹಾಕಬಹುದು.

ಮೀನಿನಲ್ಲಿ (fish) ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಡಿ, ವಿಟಮಿನ್ ಬಿ2, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸತು, ಅಯೋಡಿನ್, ಪ್ರೋಟೀನ್ ಇದ್ದು, ಇವು ಮೆದುಳು, ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸಲು ತುಂಬಾನೇ ಸಹಕಾರಿ. ಇದೇ ಕಾರಣಕ್ಕೆ ನಾನ್‌ವೆಜ್ ಪ್ರಿಯರು ಹೆಚ್ಚು ಮೀನು ಸೇವನೆ ಮಾಡುತ್ತಾರೆ. ಆದ್ರೆ ಕೆಲವೊಂದು ಬಾರಿ ಮೀನು ತಿನ್ನುವಾಗ ಅದರ ಮುಳ್ಳು ಗಂಟಲಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ಹೌದು ಈ ಸಣ್ಣ ಮುಳ್ಳುಗಳು ಗಂಟಲಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಹೆಚ್ಚು. ಇಂತಹ ಸಂದರ್ಭದಲ್ಲಿ ಆತಂಕ ಪಡುವ ಬದಲು, ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಗಂಟಲಲ್ಲಿ ಸಿಕ್ಕಿಹಾಕಿಕೊಂಡ ಮೀನಿನ ಮುಳ್ಳನ್ನು ಬಲು ಸುಲಭವಾಗಿ ತೆಗೆದುಹಾಕಬಹುದು.
ಗಂಟಲಲ್ಲಿ ಸಿಲುಕಿದ ಮೀನಿನ ಮುಳ್ಳನ್ನು ತೆಗೆದು ಹಾಕಲು ಸರಳ ಪರಿಹಾರ:
ಜೋರಾಗಿ ಕೆಮ್ಮಲು ಪ್ರಯತ್ನಿಸಿ: ಕೆಲವೊಮ್ಮೆ ಮೀನಿನ ಮುಳ್ಳು ಗಂಟಲಿನ ಹಿಂಭಾಗದಲ್ಲಿ ಅಥವಾ ಟಾನ್ಸಿಲ್‌ಗಳ ಬಳಿ ಸಿಲುಕಿಕೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಲಘುವಾಗಿ ಅಲ್ಲ, ಜೋರಾಗಿ ಕೆಮ್ಮಲು ಪ್ರಯತ್ನಿಸಿ. ಕೆಮ್ಮುವ ಬಲವು ಮುಳ್ಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
ಒಂದು ತುಂಡು ಬ್ರೆಡ್ ಅಥವಾ ಅನ್ನವನ್ನು ನುಂಗಿ: ಇದನ್ನು ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಪರಿಗಣಿಸಲಾಗಿದೆ. ಗಂಟಲಲ್ಲಿ ಮೀನಿನ ಮುಳ್ಳು ಸಿಕ್ಕಿಹಾಕಿಕೊಂಡ ಸಂದರ್ಭದಲ್ಲಿ ಒಂದು ಸಣ್ಣ ತುಂಡು ಬ್ರೆಡ್ ಅಥವಾ ಒಂದು ತುತ್ತು ಅನ್ನವನ್ನು ಹೆಚ್ಚು ಅಗಿಯದೆ ನುಂಗಿ. ಹೀಗೆ ಮಾಡುವುದರಿಂದ ಅನ್ನದೊಂದಿಗೆ ಗಂಟಲಲ್ಲಿ ಸಿಲುಕಿದ ಮುಳ್ಳು ಸಹ ಜಾರಿ ಹೋಗುತ್ತದೆ.
ಮಾಗಿದ ಬಾಳೆಹಣ್ಣುಗಳನ್ನು ತಿನ್ನಿರಿ: ನಿಮ್ಮ ಗಂಟಲಿನಲ್ಲಿ ಮೀನಿನ ಮೂಳೆ ಸಿಲುಕಿಕೊಂಡರೆ, ಮಾಗಿದ ಬಾಳೆಹಣ್ಣನ್ನು ತಿನ್ನಲು ಪ್ರಯತ್ನಿಸಿ. ಬಾಳೆಹಣ್ಣಿನ ದೊಡ್ಡ ತುಂಡನ್ನು ಕೆಲವು ಸೆಕೆಂಡುಗಳ ಕಾಲ ಬಾಯಿಯಲ್ಲಿ ಹಿಡಿದುಕೊಳ್ಳಿ, ಇದು ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ನೀವು ಬಾಳೆಹಣ್ಣನ್ನು ನುಂಗಿದಾಗ, ಮುಳ್ಳು ಬಾಳೆಹಣ್ಣಿನೊಂದಿಗೆ ಜಾರಿ ಹೋಗುತ್ತದೆ.
ಬೆಚ್ಚಗಿನ ನೀರು ಕುಡಿಯಿರಿ: ಉಗುರು ಬೆಚ್ಚಗಿನ ನೀರು ಕುಡಿಯಿರಿ. ಸ್ನಾಯುಗಳಲ್ಲಿ ಆಳವಾಗಿ ಸಿಲುಕಿಕೊಂಡಿರುವ ಸಣ್ಣ ಮುಳ್ಳನ್ನು ಸಹ ಸುಲಭವಾಗಿ ತೆಗೆಯಲು ಸಾಧ್ಯವಾಗುತ್ತದೆ, ಏಕೆಂದರೆ ಬೆಚ್ಚಗಿನ ಅಥವಾ ಉಗುರು ಬೆಚ್ಚಗಿನ ನೀರು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಇದು ಮುಳ್ಳು ಕೆಳಕ್ಕೆ ಜಾರಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ನೆಲ ಒರೆಸುವ ನೀರಿಗೆ ಈ ಎರಡು ವಸ್ತುಗಳನ್ನು ಸೇರಿಸಿ
ಜೇನುತುಪ್ಪ ಸೇವಿಸಿ: ಜೇನುತುಪ್ಪವು ನೈಸರ್ಗಿಕ ಲೂಬ್ರಿಕಂಟ್ ಅಂಶವನ್ನು ಹೊಂದಿದೆ. ಒಂದು ಅಥವಾ ಎರಡು ಟೀ ಚಮಚ ಜೇನುತುಪ್ಪವನ್ನು ನುಂಗುವುದರಿಂದ ಗಂಟಲಲ್ಲಿ ಸಿಲುಕಿದ ಮುಳ್ಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಲ್ಲದೆ, ಜೇನುತುಪ್ಪದ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಗಂಟಲು ನೋವು, ನೋವು ಮತ್ತು ಸೋಂಕುಗಳಿಂದ ಪರಿಹಾರವನ್ನು ನೀಡುತ್ತದೆ.
ಕಾರ್ಬೊನೇಟೆಡ್ ಪಾನೀಯಗಳನ್ನು ಪ್ರಯತ್ನಿಸಿ: ಕೆಲವೊಮ್ಮೆ ಕೋಕ್ ಅಥವಾ ಪೆಪ್ಸಿಯಂತಹ ತಂಪು ಪಾನೀಯಗಳು ಸಹ ಸಹಾಯ ಮಾಡಬಹುದು. ಈ ಪಾನೀಯಗಳ ಇಂಗಾಲದ ಡೈಆಕ್ಸೈಡ್ ಮತ್ತು ಆಮ್ಲೀಯ ಸ್ವಭಾವವು ಗಂಟಲಲ್ಲಿ ಸಿಲುಕಿದ ಮುಳ್ಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?
ಈ ಎಲ್ಲಾ ಸಲಹೆಗಳನ್ನು ಪಾಲಿಸಿದ ಹೊರತಾಗಿಯೂ ಮುಳ್ಳು ಗಂಟಲಲ್ಲಿ ಹಾಗೆಯೇ ಅಂಟಿಕೊಂಡಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಇಲ್ಲದಿದ್ದರೆ ನಿಮಗೆ ಸೋಂಕು ತಗುಲಬಹುದು. ಮತ್ತು ಗಂಟಲು ನೋವು, ಊತ, ಸೋಂಕು ನಿಮ್ಮ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




