ಶೀಗೆ ಹುಣ್ಣಿಮೆ ಉತ್ತರ ಕರ್ನಾಟಕದಲ್ಲಿ ಬಹಳ ವಿಶೇಷವಾಗಿ ಆಚರಿಸುವ ಹಬ್ಬವಾಗೇತಿ. ಶೀಗೆ ಹುಣ್ಣಿಮೆಯನ್ನು ಗೌರಿ ಹುಣ್ಣಿಮೆಯಂತಲು ಕರೆಯುತ್ತಾರೆ. ಅಶ್ವಿನಿ ಶುಕ್ಲ ಪಕ್ಷದ ಹುಣ್ಣಿಮೆಯನ್ನು ಶರದ್ ಪೂರ್ಣಿಮಾ, ಶೀಗೆ ಹುಣ್ಣಿಮೆ, ಭೂಮಿ ಹುಣ್ಣಿಮೆ, ಕೊಜಾಗಿರಿ ಹುಣ್ಣಿಮೆ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಉತ್ತರ ಕರ್ನಾಟಕದ ಮಂದಿಗ ವರ್ಷದಲ್ಲಿ ಬರುವ ಒಟ್ಟು 12 ಹುಣ್ಣಿಮೆಗಳಲ್ಲಿ ಈ ಹುಣ್ಣಿಮೆ ಬಾಳ ವಿಶೇಷ ಹುಣ್ಣಿಮೆಯಾಗೇತಿ.
ಹುಣ್ಣಿಮೆಯಂದು ರೈತನ ಮಿತ್ರ ಎತ್ತುಗಳ ಮೈತೊಳೆದು, ವಿವಿಧ ಬಣ್ಣಗಳನ್ನು ಹಚ್ಚಿ, ಗೆಜ್ಜೆಕಟ್ಟಿ, ಜುಲಾಗಳನ್ನು ಹಾಕಿ ಶೃಂಗರಿಸುತ್ತಾರ. ಸಂಬಂಧಿಕರು, ಬೀಗ-ಬಿಜ್ಜರು, ಅಡ್ಡ ಬೀಗರು ಎಲ್ಲರನ್ನ ಹಬ್ಬಕ್ಕ ಕರದ ಎತ್ತಿನ ಬಂಡಿ, ಚಕ್ಕಡಿಗಳನ್ನು ಕಟ್ಟಿಕೊಂಡು ಹೊಲಕ್ಕ ಹೋಗತಾರ.
ಶೀಗೆ ಹುಣ್ಣಿಮೆ ದಿವ ಹೊಲದಾಗ ಬಂದ ಫಸಲಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ನೆರವೇರಿಸಿ ಉತ್ತಮ ಬೆಳೆಗಾಗಿ ಪ್ರಾರ್ಥನೆ ಮಾಡುತ್ತಾರೆ. ಈ ದಿವಸ ತುಂಬು ಗರ್ಭಿಣಿಗೆ ಸೀಮಂತ ಶಾಸ್ತ್ರ ಮಾಡುವ ಹಾಗೂ ಭೂಮಿ ತಾಯಿಗೆ ಪೂಜೆ ಸಲ್ಲಿಸ್ತಾರ. ವಿಶೇಷವಾಗಿ ಈ ದಿನ ಹೊಲಕ್ಕ “ಚರಗ” ಚಲ್ಲತಾರ. ಏನಪ್ಪ ಈ ಚರಗ ಚಲ್ಲುದ ಅಂದ್ರ ಕೃಷಿ ಕುಟುಂಬದ ಮಹಿಳೆಯರು ಶೀಗೆ ಹುಣ್ಣಿಮೆ ಹಿಂದಿನ 101 ಜಾತಿಯ ಬೆರಕೆ ಸೊಪ್ಪು, ತರಕಾರಿ ಬೇಯಿಸಿ ಚರಗ ಸಿದ್ಧ ಮಾಡತಾರ.
ಮರುದಿನ ನಸುಕಿನಲ್ಲೇ ರೈತು ಹೊಲಕ್ಕ ಹೋಗಿ ರೈತರು ತಮ್ಮ ಜಮೀನುಗಳಲ್ಲಿ ಬನ್ನಿ ಮರ ಅಥವಾ ಬೆಳೆದ ಪೈರುಗಳ ಮಧ್ಯೆ 5 ಜೋಳದ ದಂಟನ್ನು ತಂದು ನಿಲ್ಲಿಸಿ, ಅದರೊಳಗಡೆ ಚಿಕ್ಕದಾದ 5 ಕಲ್ಲುಗಳನ್ನು (ಪಂಚಪಾಂಡವರು) ಇಟ್ಟು ಪೂಜಸ್ತಾರ. ನಂತರ ಮಹಿಳೆಯರು ಮಕ್ಕಳೆಲ್ಲರೂ ಸೇರಿ ಭೂತಾಯಿಗೆ ಉಡಿ ತುಂಬುತಾರ. ನಂತರ ಹೊಲದ ತುಂಬಾ ‘ಹೋಲಿಗೆ, ಹೋಲಿಗೆ’ ಎನ್ನುತ್ತಾ ಚರಗ ಚೆಲ್ಲುತ್ತಾರೆ.
ಈ ಶೀಗೆ ಹುಣ್ಣಿಮೆ ದಿನ ಊಟ ಮಾತ್ರ ಬಾಳ ಚೊಲೊ ಇರತದ. ನೆನಸ್ಕೊಂಡರ ಬಾಯಾಗ ನೀರ ಬರತೇತಿ. ಈ ಮನೆಗಳಲ್ಲಿ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ಪ್ರಮುಖವಾಗಿ ಖಡಕ್ ಜೋಳದ ರೊಟ್ಟಿ, ಶೇಂಗಾ ಚಟ್ನಿ, ಗುರೇಳ್ಳ ಚಟ್ನಿ, ಎಣ್ಣೆ ಹೋಳಿಗೆ, ಶೇಂಗಾ ಹೋಳಿಗೆ, ಖಡಬು, ಖರ್ಚಿಕಾಯಿ, ಸೆಂಡಿಗೆ, ಹಪ್ಪಳ, ಕೊಡಬಳಿ, ಚಕ್ಕಲಿ, ಒಡೆ, ಮಿರ್ಚಿ, ಕರದ ಮೆಣಸಿನಕಾಯಿ, ಎಣ್ಣುಗಾಯಿ ಪಲ್ಯ, ಕಡಲೆಕಾಳು ಪಲ್ಯ, ಹಿಟ್ಟಿನಪಲ್ಯ, ಪುಂಡಿಪಲ್ಯೆ, ಡೊಣ್ಣಗಾಯಿ ಪಲ್ಯ, ಅಕ್ಕಿಹುಗ್ಗಿ, ಮೊಸರು ಬುತ್ತಿ, ಅನ್ನ-ಸಾಂಬಾರು ಹೇಳಕೋಂತ ಹೋದ್ರ ಮುಗಿಯುದಿಲ್ಲ ಅವ. ಬಾಯಾಗ ನೀರ ಬರುದು ನಿಲ್ಲಾಂಗಿಲ್ಲಾ.