ಹೆಚ್ಚಾಗಿ ತಮ್ಮ ವಿನಾಶಕಾರಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿರುವ ಇಲಿಗಳನ್ನು ಕಂಡರೆ ಮಾನವರಿಗೆ ಆಗುವುದಿಲ್ಲ. ಮನೆಗಳಲ್ಲಿ ಕಂಡರೆ ಸಾಕು ಅವುಗಳನ್ನು ಬೆನ್ನತ್ತಿ ಕೊಂದೇ ಬಿಡುತ್ತಾರೆ. ಸಸ್ತನಿ ವರ್ಗಕ್ಕೆ ಸೇರಿದ ಇಂತಹ ಇಲಿಗಳು ಮಾನವರಿಗೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ರೋಗನಿರ್ಣಯ, ನೆಲಬಾಂಬ್ ಪತ್ತೆ, ರಕ್ಷಣಾ ಕಾರ್ಯಾಚರಣೆಗಳು ಮತ್ತು ಕಳ್ಳಸಾಗಣೆಯನ್ನು ತಡೆಯುವುದು ಇದರಲ್ಲಿ ಒಳಗೊಂಡಿದೆ. ಆದರೆ ಇದಕ್ಕೆ ಸೂಕ್ತವಾದ ತರಬೇತಿ ನೀಡಿದರಷ್ಟೇ ಸಾಧ್ಯ. ಇಂತಹ ತರಬೇತಿ ಪಡೆದ ಇಲಿಗಳು ಬರೋಬ್ಬರಿ 17ಸಾವಿರ ಜನರ ಜೀವಗಳನ್ನು ಉಳಿಸಿದೆ ಎಂದು ಹೇಳಿದರೆ ನೀವು ನಂಬಲೇ ಬೇಕು. ಬೆಲ್ಜಿಯಂ ಸರ್ಕಾರೇತರ ಸಂಸ್ಥೆ ಅಪೊಪೊ ಮತ್ತು ಸೊಕೊಯಿನ್ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ (SUA) ಸಹಭಾಗಿತ್ವದಲ್ಲಿ ತರಬೇತಿ ಪಡೆದ ‘ಆಫ್ರಿಕನ್ ಪೌಚ್ಡ್ ಇಲಿಗಳು’ ತಾಂಜಾನಿಯಾದಲ್ಲಿ ಕ್ಷಯರೋಗದಿಂದ ಕಳೆದುಹೋಗಬಹುದಾದ 17,000 ಜೀವಗಳನ್ನು ಉಳಿಸಿವೆ ಎಂದು ಸಂಸ್ಥೆಗಳು ಬಹಿರಂಗಪಡಿಸಿವೆ.
ಟಿಬಿ ಪರೀಕ್ಷೆಗೆ ಜನರಿಂದ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆ ನಡೆಸಿದ ಆಸ್ಪತ್ರೆಯ ಪ್ರಯೋಗಾಲಯಗಳು ನೆಗೆಟಿವ್ ವರದಿ ನೀಡಿದೆ. ಆದರೆ ತರಬೇತಿ ಪಡೆದ ಆಫ್ರಿಕನ್ ಪೌಚ್ಡ್ ಇಲಿಗಳ ಮೂಲಕ ಮರು ಪರೀಕ್ಷೆ ನಡೆಸಿದಾಗ ಅದೇ ಮಾದರಿಗಳು ಟಿಬಿಗೆ ಕಾರಣವಾಗುವ ರೋಗಕಾರಕಗಳನ್ನು ಪತ್ತೆ ಹಚ್ಚಿವೆ. ನಂತರ ರೋಗಿಗಳನ್ನು ಟಿಬಿ ಚಿಕಿತ್ಸೆಗೆ ಒಳಪಡಿಸಲಾಯಿತು. ಆ ಮೂಲಕ ಕ್ಷಯರೋಗದ ಸಾವಿನ ಪ್ರಮಾಣವನ್ನು ತಗ್ಗಿಸಿದೆ.
ದಿ ಸಿಟಿಜನ್ ಜೊತೆ ಮಾತನಾಡಿದ ತಾಂಜಾನಿಯಾದ ಟಿಬಿ ಅಪೊಪೊ ಪ್ರೋಗ್ರಾಂ ಮ್ಯಾನೇಜರ್ ಡಾ.ಜೋಸೆಫ್ ಸೋಕಾ, ಈ ಸಂಖ್ಯೆಯು ತಾಂಜಾನಿಯಾದಲ್ಲಿ 2007 ರಿಂದ ಇಲ್ಲಿಯವರೆಗೆ ಪರೀಕ್ಷಿಸಲ್ಪಟ್ಟ ರೋಗಿಗಳನ್ನು ಒಳಗೊಂಡಿದೆ ಎಂದು ಹೇಳಿದರು. ಪ್ರಯೋಗಾಲಯಗಳಲ್ಲಿ ಟಿಬಿ ಋಣಾತ್ಮಕ ಎಂದು ಕಂಡುಬಂದ ನಂತರ ಆಸ್ಪತ್ರೆಗಳಿಂದ ತರಲಾದ 6,00,000 ಮಾದರಿಗಳನ್ನು ತರಬೇತಿ ಪಡೆದ ಇಲಿಗಳ ಮೂಲಕ ಪರೀಕ್ಷಿಸಿದಾಗ ರೋಗ ಸೂಕ್ಷ್ಮಾಣುಜೀವಿಗಳನ್ನು ಹೊಂದಿರುವ 17ಸಾವಿರ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ” ಎಂದರು.
ಆದರೆ, ಆರೋಗ್ಯ ಸಚಿವಾಲಯದ ಖಾಯಂ ಕಾರ್ಯದರ್ಶಿ ಅಬೆಲ್ ಮಕುಬಿ ಅವರು ಆಸ್ಪತ್ರೆಯ ಪ್ರಯೋಗಾಲಯಗಳಲ್ಲಿ ಪತ್ತೆ ಮಾಡಲಾಗದ ಮಾದರಿಗಳಿಂದ ಇಲಿಗಳು ಟಿಬಿ ಪತ್ತೆ ಹಚ್ಚುವುದು ವಿಚಿತ್ರವೇನೂ ಅಲ್ಲ ಎಂದು ಹೇಳಿದರು. “ವಿಜ್ಞಾನವು ಹೀಗೆಯೇ ಕಾರ್ಯನಿರ್ವಹಿಸುತ್ತದೆ. ಟಿಬಿ ಮತ್ತು ಇತರ ರೋಗಗಳ ಪತ್ತೆಯು ತಂತ್ರಜ್ಞಾನದ ಸಿಂಧುತ್ವವನ್ನು ಅವಲಂಬಿಸಿರುತ್ತದೆ. ಆದಾಗ್ಯೂ ಜಾಗತಿಕವಾಗಿ 100 ಪ್ರತಿಶತ ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿರುವ ಯಾವುದೇ ಸಲಕರಣೆಗಳಿಲ್ಲ” ಎಂದು ಹೇಳಿದರು.
ಇಲಿಗಳಿಗೆ ಹೇಗೆ ತರಬೇತಿ ನೀಡಲಾಗುತ್ತದೆ?
ಇಲಿಗಳಿಗೆ ಒಟ್ಟು ಒಂಬತ್ತು ತಿಂಗಳು ತರಬೇತಿ ನೀಡಲಾಗುತ್ತದೆ. ಈ ಅವಧಿಯಲ್ಲಿ ಇಲಿಗಳಿಗೆ ಉತ್ತಮ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ವೈಯಕ್ತಿಕ ಗಮನ, ನಿಗದಿತ ಆಟದ ಸಮಯ, ಪಶುವೈದ್ಯರು ಮತ್ತು ಸ್ಥಳದಲ್ಲಿರುವ ಪ್ರಾಣಿ ಕಲ್ಯಾಣ ಅಧಿಕಾರಿಯಿಂದ ನಿಯಮಿತ ಆರೈಕೆಯನ್ನು ಒದಗಿಸುವ ಮೂಲಕ ಅವುಗಳನ್ನು ಉತ್ತಮವಾಗಿ ನೋಡಿಕೊಳ್ಳಲಾಗುತ್ತದೆ.
ನಾಲ್ಕು ವಾರಗಳ ವಯಸ್ಸಿನ ಇಲಿಗಳನ್ನು ಇದಕ್ಕಾಗಿ ತೆಗೆದುಕೊಳ್ಳಲಾಗುತ್ತದೆ. ಈ ವಯಸ್ಸಿನಲ್ಲಿ ಅವುಗಳು ಕಣ್ಣುಗಳನ್ನು ತೆರೆಯಲು ಪ್ರಾರಂಭಿಸುವ ಮೂಲಕ ಜನರೊಂದಿಗೆ ಪರಿಚಿತವಾಗುತ್ತವೆ. ಇವುಗಳಿಗೆ ತರಬೇತಿ ಪಡೆದ ಸಿಬ್ಬಂದಿಗಳಿಂದ ತರಬೇತಿ ನೀಡಲಾಗುತ್ತದೆ. ದೈನಂದಿನ ಮಾನವ ಶಬ್ದಗಳು ಮತ್ತು ವಾಸನೆಗಳನ್ನು ಪರಿಚಯಿಸುತ್ತಾರೆ.
ಇಲಿಗಳಿಗೆ ಟಿಬಿ-ಪಾಸಿಟಿವ್ ಮಾದರಿಗಳನ್ನು ನಕಾರಾತ್ಮಕ ಮಾದರಿಗಳಿಂದ ಪ್ರತ್ಯೇಕಿಸಲು ತರಬೇತಿ ನೀಡಲಾಗುತ್ತದೆ. ಅವುಗಳು ಧನಾತ್ಮಕ ಮಾದರಿಗಳನ್ನು ಗುರುತಿಸಿದ ನಂತರವೇ ಅವುಗಳಿಗೆ ಬಹುಮಾನ ನೀಡಲಾಗುತ್ತದೆ. ಅವುಗಳ ದಕ್ಷತೆಯು 100 ಪ್ರತಿಶತದಷ್ಟು ಇರಬೇಕು. ಎಲ್ಲಾ ಸಕಾರಾತ್ಮಕ ಮಾದರಿಗಳನ್ನು ಗುರುತಿಸಲು ವಿಫಲವಾದರೆ ಇಡೀ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಡಾ.ಜೋಸೆಫ್ ಹೇಳುತ್ತಾರೆ.
ಬಹು ಮಾದರಿ ಮೌಲ್ಯಮಾಪನ ದೊಡ್ಡ ಪರೀಕ್ಷಾ ಕೊಠಡಿಯಲ್ಲಿ 10 ಮಾದರಿಗಳ ಸಾಲುಗಳನ್ನು ಸ್ನಿಫಿಂಗ್ ರಂಧ್ರಗಳ ಕೆಳಗೆ ಇರಿಸಲಾಗುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ಮಾದರಿಗಳನ್ನು ಮೌಲ್ಯಮಾಪನ ಮಾಡಲು ಇಲಿಗಳಿಗೆ ತರಬೇತಿ ನೀಡಲಾಗುತ್ತದೆ. ಈ ಹಂತದಲ್ಲಿ ಇಲಿಗಳಿಗೆ ಟಿಬಿ ಪಾಸಿಟಿವ್ ಮಾದರಿಗಳ ಮೇಲೆ ಕನಿಷ್ಠ ಮೂರು ಸೆಕೆಂಡುಗಳ ಕಾಲ ಮೂಗು ಹಿಡಿದಿಡಲು ತರಬೇತಿ ನೀಡಲಾಗುತ್ತದೆ ಎಂದರು.
ಇಲಿಗಳ ಪರೀಕ್ಷಾ ಪ್ರಕ್ರಿಯೆ
ಇಲಿಗಳನ್ನು ಕಟ್ಟುನಿಟ್ಟಾದ ಪರೀಕ್ಷಾ ಪ್ರಕ್ರಿಯೆಯ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಅವುಗಳು ಎಲ್ಲಾ ಟಿಬಿ ಪಾಸಿಟಿವ್ ಮಾದರಿಗಳನ್ನು ಕಂಡುಹಿಡಿಯಬೇಕು. “ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮತ್ತು ಪದವೀಧರರಾಗಲು ಒಂದಕ್ಕಿಂತ ಹೆಚ್ಚು ಪಾಸಿಟಿವ್ ಹಾಗೂ ಎರಡು ಅಥವಾ ಕಡಿಮೆ ನೆಗೆಟಿವ್ ಸೂಚಿಸಲು ಅವುಗಳಿಗೆ ಅನುಮತಿಸಲಾಗುತ್ತದೆ” ಎಂದು ಡಾ.ಜೋಸೆಫ್ ಸೋಕಾ ಹೇಳಿದರು.
ಟಿಬಿ ಪತ್ತೆಹಚ್ಚುವಿಕೆ
ಇಲಿಗಳು ಎಲ್ಲಾ ಮಾದರಿಗಳನ್ನು ವಾಸನೆ ಮಾಡುತ್ತವೆ ಮತ್ತು ತಿಳಿದಿರುವ ಟಿಬಿ-ಪಾಸಿಟಿವ್ ಮಾದರಿಯ ಮೇಲೆ ಮೂಗನ್ನು ಸುಮಾರು ಮೂರು ಸೆಕೆಂಡುಗಳ ಕಾಲ ಹಿಡಿದಿದ್ದಕ್ಕಾಗಿ ಬಹುಮಾನಗಳನ್ನು ಪಡೆಯುತ್ತವೆ, ಇದು ಹೆಚ್ಚಿನ ಮಾದರಿಗಳನ್ನು ಕಂಡುಹಿಡಿಯಲು ನಿಖರತೆ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತವೆ ಎಂದು ಜೋಸೆಫ್ ಹೇಳುತ್ತಾರೆ. ಅದಾಗ್ಯೂ ನೆಗೆಟಿವ್ ಎಂದು ಗುರುತಿಸಲಾದ ಮಾದರಿಯ ಮೇಲೆ ಇಲಿ ಮೂರು ಸೆಕೆಂಡುಗಳ ಕಾಲ ಮೂಗು ತೂರಿಸಿದರೆ ಸದರಿ ಮಾದರಿಯನ್ನು ಶಂಕಿತ ಎಂದು ಲೇಬಲ್ ಮಾಡಲಾಗುತ್ತದೆ. ಒಂದು ಇಲಿ 100 ಮಾದರಿಗಳನ್ನು 20 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಪರಿಶೀಲಿಸಬಹುದು ಎಂದರು.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ