ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎನ್ನುವ ಮಾತಿದೆ. ಹೀಗಾಗಿ ಹೆತ್ತವರು ಆರಂಭದಲ್ಲಿ ಯಾವ ರೀತಿ ಮಕ್ಕಳನ್ನು ಬೆಳೆಸುತ್ತಾರೆಯೋ ಅದೇ ರೀತಿ ಮಕ್ಕಳು ದೊಡ್ಡವರಾದ ಮೇಲೆ ಅವರ ಭವಿಷ್ಯವು ನಿರ್ಧಾರವಾಗುತ್ತದೆ. ಆದರೆ ಈ ಮಕ್ಕಳನ್ನು ಬೆಳೆಸುವುದೇ ಸವಾಲಿನ ಕೆಲಸವೇ ಸರಿ. ಪ್ರತಿಯೊಬ್ಬ ತಂದೆ ತಾಯಿಯೂ ತಮ್ಮ ಮಗುವನ್ನು ಹೀಗೆಯೇ ಬೆಳೆಸಬೇಕೆಂದುಕೊಂಡಿರುತ್ತಾರೆ. ತಮ್ಮ ಮಕ್ಕಳು ಉಜ್ವಲ ಭವಿಷ್ಯ ಸಿಗಬೇಕು ಎನ್ನುವ ಕಾರಣಕ್ಕೆ ಹಗಲು ರಾತ್ರಿ ಶ್ರಮಿಸುತ್ತಾರೆ. ಈ ವೇಳೆಯಲ್ಲಿ ಪೋಷಕರು ಮಾಡುವ ಈ ಕೆಲವು ತಪ್ಪುಗಳು ಮಕ್ಕಳ ಮುಂದಿನ ಭವಿಷ್ಯವನ್ನೇ ಹಾಳು ಮಾಡುತ್ತದೆ.
- ಮಕ್ಕಳಿಗೆ ಪದೇ ಪದೇ ಬಯ್ಯುವುದು : ಬಹುತೇಕ ಹೆತ್ತವರು ಮಕ್ಕಳ ಸಣ್ಣ ಪುಟ್ಟ ತಪ್ಪು ಮಾಡಿದರೂ ಕೂಡ ತಿದ್ದಿ ಹೇಳುವ ಬದಲು ಬಯ್ಯುತ್ತಾರೆ. ಯಾರದ್ದೋ ಮೇಲಿನ ಸಿಟ್ಟನ್ನು ಮಕ್ಕಳ ಮೇಲೆ ತೋರಿಸುತ್ತಾರೆ. ಇದು ಮಗುವಿನ ಮಾನಸಿಕ ಒತ್ತಡವು ಉಂಟಾಗುತ್ತದೆ..ಹೀಗಾಗಿ ನಿಮ್ಮ ಮಗುವಿಗೆ ಸಣ್ಣ ಪುಟ್ಟ ವಿಚಾರಕ್ಕೆ ಬಯ್ಯುವುದು ರೇಗಾಡುವುದು ಮಾಡುವುದನ್ನು ಆದಷ್ಟು ತಪ್ಪಿಸಿ.
- ದುಡ್ಡಿನ ಬೆಲೆ ಕಲಿಸದೇ ಇರುವುದು : ಈಗಿನ ಕಾಲದಲ್ಲಿ ಹೆಚ್ಚಿನವರಿಗೆ ಒಂದೋ ಎರಡೋ ಮಕ್ಕಳಿರುತ್ತಾರೆ. ಹೀಗಾಗಿ ಮಗು ಕೇಳಿದ್ದನ್ನೆಲ್ಲಾ ಕೊಡಿಸುತ್ತಾರೆ. ತಮಗೆ ಕಷ್ಟ ಆದರೂ ಕೂಡ ಮಗುವಿನ ಯಾವುದೇ ಕೊರತೆ ಮಾಡುವುದಿಲ್ಲ. ಇದರಿಂದಾಗಿ ಮಕ್ಕಳಿಗೆ ಹಣದ ಬೆಲೆಯೇ ತಿಳಿಯುವುದಿಲ್ಲ. ಇದು ಎಲ್ಲಾ ಪೋಷಕರು ಮಾಡುವ ತಪ್ಪಾಗಿದ್ದು, ಸಣ್ಣ ವಯಸ್ಸಿನಲ್ಲಿಯೇ ದುಡ್ಡಿನ ಬೆಲೆ ಏನೆಂಬುದನ್ನು ತಿಳಿಸಬೇಕು.
- ಮಕ್ಕಳ ಮಾತನ್ನು ನಿರ್ಲಕ್ಷ್ಯ ವಹಿಸುವುದು : ಕೆಲ ತಂದೆ ತಾಯಿಯರಿಗೆ ತಾವು ಹೇಳಿದ್ದ ಆಗಬೇಕು ಎನ್ನುವುದಿರುತ್ತದೆ. ಹೀಗಾಗಿ ಮಕ್ಕಳ ಮಾತಿಗೆ ಬೆಲೆ ಕಡಿಮೆ ಎನ್ನುವ ಕಾರಣಕ್ಕೆ ಅವರ ಮಾತನ್ನು ನಿರ್ಲಕ್ಷ್ಯ ವಹಿಸುವುದಿದೆ. ಇದರಿಂದ ತಾವು ಏನು ಹೇಳಿದರೂ ಅದು ಲೆಕ್ಕಕ್ಕೆ ಇಲ್ಲ ಎಂಬ ಭಾವನೆ ಮಕ್ಕಳಲ್ಲಿ ಹುಟ್ಟುತ್ತದೆ. ನಮ್ಮನ್ನು ನೆಗ್ಲೆಕ್ಟ್ ಮಾಡುತ್ತಿದ್ದಾರೆ ಎಂದುಕೊಳ್ಳುತ್ತಾರೆ. ಇದು ಮಗುವಿನ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ತಪ್ಪನ್ನು ಯಾವ ತಂದೆ ತಾಯಿಯೂ ಮಾಡಲೇ ಬಾರದು.
- ಮಕ್ಕಳೊಂದಿಗೆ ಕಳೆಯಲು ಸಮಯವಿಲ್ಲದಿರುವುದು : ಈಗಿನ ಕಾಲದಲ್ಲಿ ಪೋಷಕರಿಗೆ ಮಕ್ಕಳೊಂದಿಗೆ ಕಳೆಯಲು ಸಮಯವೇ ಇಲ್ಲದಂತಾಗಿದೆ. ಇದರಿಂದ ಮಕ್ಕಳು ಕೆಲಸದವರ ಕೈಯಲ್ಲಿ, ಪ್ಲೇ ಸ್ಕೂಲ್ ನಲ್ಲಿ ಇರುವುದೇ ಹೆಚ್ಚು. ಪೋಷಕರು ಹಾಗೂ ಮಗುವಿನ ನಡುವಿನ ಸಂಬಂಧವು ಗಟ್ಟಿಯಾಗಿರುವುದಿಲ್ಲ. ಮಗುವು ಕೂಡ ಒಂಟಿತನವನ್ನು ಅನುಭವಿಸುವುದರಿಂದ ಮಗುವಿನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.
- ಅತಿಯಾಗಿ ನಿರೀಕ್ಷೆ ಹೊಂದಿರುವುದು: ಹೆಚ್ಚಿನ ಪೋಷಕರಿಗೆ ತಮ್ಮ ಮಕ್ಕಳ ಮೇಲೆ ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ. ಆದರೆ, ಮಗುವಿನ ಸಾಮರ್ಥ್ಯಕ್ಕೂ ಮೀರಿ ನಿರೀಕ್ಷಿಸುವುದು ಮಕ್ಕಳ ನಿರಾಸೆಯಾಗುತ್ತದೆ. ಇದರಿಂದ ಸಹಜವಾಗಿ ಪೋಷಕರಿಗೂ ಮಗುವಿನಿಂದ ನೋವಾಗುತ್ತದೆ. ಇದನ್ನು ಸಿಟ್ಟಿನ ಮುಖಾಂತರ ತೋರಿಸಲಾಗುತ್ತದೆ.
- ಮಕ್ಕಳೊಂದಿಗೆ ಮಾತುಕತೆ ನಡೆಸದಿರುವುದು: ಈಗಿನ ಕಾಲದಲ್ಲಿ ಮಕ್ಕಳಿಗೆ ಮಾತನಾಡಲು ಟೈಮ್ ಎಲ್ಲಿದೆ ಹೇಳಿ. ಮಕ್ಕಳಿಗೆ ಏನೋ ಹೇಳಿಕೊಳ್ಳಬೇಕು ಎನ್ನಿಸಿದಾಗ ಪೋಷಕರು ಬಾಯಿ ಮುಚ್ಚಿಸುತ್ತಾರೆ. ಮಕ್ಕಳ ಜೊತೆಗೆ ಸರಿಯಾಗಿ ಸಂವಹನ ನಡೆಸದೆ ಇರುವುದು ಕೂಡ ಮಗುವಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇದರಿಂದ ತಂದೆ ತಾಯಿಯರಿಬ್ಬರೂ ಮಕ್ಕಳೊಂದಿಗೆ ಸಂವಹನ ನಡೆಸಿ ಮಕ್ಕಳ ಸಮಸ್ಯೆಗಳನ್ನು ಆಲಿಸುವುದು ಮುಖ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ